ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು, ಸಾಕ್ಷಿ, ದೀಪಾಗೆ ಖೇಲ್‌ ರತ್ನ

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭ; ಕರ್ನಾಟಕದ ವಿ.ಆರ್‌. ರಘುನಾಥ್‌ಗೆ ಅರ್ಜುನ ಪ್ರಶಸ್ತಿ
Last Updated 29 ಆಗಸ್ಟ್ 2016, 20:09 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಒಲಿಂಪಿಕ್ಸ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ್ದ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು, ಕುಸ್ತಿಪಟು  ಸಾಕ್ಷಿ ಮಲಿಕ್‌, ಜಿಮ್ನಾಸ್ಟ್‌ ದೀಪಾ ಕರ್ಮಾಕರ್‌ ಮತ್ತು ಶೂಟರ್‌ ಜಿತು ರಾಯ್‌ ಅವರು ಕ್ರೀಡಾ ಲೋಕದ ಅತ್ಯುನ್ನತ ಗೌರವ ರಾಜೀವ್‌ ಗಾಂಧಿ ಖೇಲ್‌ ರತ್ನ ಪುರಸ್ಕಾರಕ್ಕೆ ಭಾಜನರಾದರು.

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಒಂದು ವರ್ಷದಲ್ಲಿ ನಾಲ್ಕು ಮಂದಿಗೆ ಖೇಲ್‌ ರತ್ನ  ನೀಡಿದ್ದು ಭಾರತದ ಕ್ರೀಡಾ ಇತಿಹಾಸದಲ್ಲೇ ಮೊದಲು. ಈ ಬಾರಿ ಮೂರು ಮಂದಿ ಮಹಿಳೆಯರು ಈ ಗೌರವಕ್ಕೆ ಭಾಜನರಾಗಿದ್ದು ವಿಶೇಷ.

2009ರಲ್ಲಿ ಮೂರು ಮಂದಿಗೆ ಖೇಲ್‌ ರತ್ನ ನೀಡಲಾಗಿತ್ತು. ಬಾಕ್ಸರ್‌ ವಿಜೇಂದರ್‌ ಸಿಂಗ್‌ ಮತ್ತು ಎಂ.ಸಿ. ಮೇರಿ ಕೋಮ್‌ ಹಾಗೂ ಕುಸ್ತಿಪಟು ಸುಶೀಲ್‌ ಕುಮಾರ್‌ ಅವರು ಈ ಪುರಸ್ಕಾರಕ್ಕೆ ಪಾತ್ರರಾಗಿದ್ದರು.

ಈ ಬಾರಿ ಕ್ರೀಡಾ ಸಚಿವಾಲಯ ಪ್ರಶಸ್ತಿ ಆಯ್ಕೆಯ ನಿಯಮದಲ್ಲಿ ಬದಲಾವಣೆ ಮಾಡಿತ್ತು. ನೂತನ ನಿಯಮದ ಅನ್ವಯ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರು  ಖೇಲ್‌ ರತ್ನ ಗೌರವಕ್ಕೆ ನೇರ ಅರ್ಹತೆ ಗಳಿಸಿದ್ದರು.

ಪ್ರಣವ್‌ ಮುಖರ್ಜಿ ಅವರು ಇವರಿಗೆ  ಪದಕ ಹಾಗೂ ಪ್ರಶಸ್ತಿ ಫಲಕದ ಜೊತೆಗೆ ₹ 7.5 ಲಕ್ಷ ನಗದು ಬಹು ಮಾನ ನೀಡಿ ಗೌರವಿಸಿದರು.

ಸಮಾರಂಭಕ್ಕೆ ರಹಾನೆ ಗೈರು
ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರು ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ವೆಸ್ಟ್‌ ಇಂಡೀಸ್‌ ವಿರುದ್ಧದ ಟ್ವೆಂಟಿ–20 ಕ್ರಿಕೆಟ್‌ ಸರಣಿಯಲ್ಲಿ ಭಾಗವಹಿಸಲು ಅಮೆರಿಕದಲ್ಲಿರುವ ಕಾರಣ ರಹಾನೆ ಸಮಾರಂಭಕ್ಕೆ ಬಂದಿರಲಿಲ್ಲ. ರಹಾನೆ ತವರಿಗೆ ವಾಪಸಾದ ಬಳಿಕ  ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ರಘುನಾಥ್‌ಗೆ ಅರ್ಜುನ
ಕರ್ನಾಟಕದ ಒಲಿಂಪಿಯನ್‌ ಹಾಕಿ ಆಟಗಾರ ವಿ.ಆರ್‌. ರಘುನಾಥ್‌ ಅವರು ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಡ್ರ್ಯಾಗ್‌ಫ್ಲಿಕ್‌ ಪರಿಣತ ಆಟಗಾರ ರಘುನಾಥ್‌ 2005ರಿಂದ ಭಾರತ ಸೀನಿಯರ್‌ ತಂಡದಲ್ಲಿ ಆಡುತ್ತಿದ್ದಾರೆ. ರಘುನಾಥ್‌ ಅವರು 2014ರ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿದ್ದರು.

ಭಾರತ 2014ರ ಗ್ಲಾಸ್ಗೊ ಕಾಮನ್‌ ವೆಲ್ತ್‌ ಕ್ರೀಡಾಕೂಟ, 2015ರ ಹಾಕಿ ವಿಶ್ವ ಲೀಗ್‌ ಮತ್ತು ಏಷ್ಯಾಕಪ್‌ ಗಳಲ್ಲಿ ಪ್ರಶಸ್ತಿ ಗೆದ್ದಾಗ ರಘುನಾಥ್‌ ತಂಡದ ಭಾಗವಾಗಿದ್ದರು.  ಇದುವರೆಗೂ 203 ಪಂದ್ಯಗಳನ್ನು ಆಡಿರುವ ಅವರು 127 ಗೋಲುಗಳನ್ನು ಗಳಿಸಿದ್ದಾರೆ.

ಪ್ರದೀಪ್‌ಗೆ ಜೀವಮಾನ ಸಾಧನೆ ಗೌರವ:
ಕರ್ನಾಟಕದ ಈಜು ಕೋಚ್ ಎಸ್‌. ಪ್ರದೀಪ್‌ ಕುಮಾರ್‌ ಅವರಿಗೆ ಜೀವ ಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿ ಸಲಾಯಿತು. ಅಥ್ಲೆಟಿಕ್ಸ್‌ ಕೋಚ್‌ ನಾಗಪುರಿ ರಮೇಶ್‌, ಬಾಕ್ಸಿಂಗ್‌ ತರ ಬೇತುದಾರ ಸಾಗರ್‌ ಮಲ್‌ ದಯಾಳ್‌, ಕ್ರಿಕೆಟ್‌ ಕೋಚ್‌ ರಾಜಕುಮಾರ್‌ ಶರ್ಮಾ, ಜಿಮ್ನಾಸ್ಟಿಕ್ಸ್‌ ತರಬೇತುದಾರ ವಿಶ್ವೇಶ್ವರ ನಂದಿ ಅವರಿಗೆ ದ್ರೋಣಾ ಚಾರ್ಯ ಗೌರವ ಪ್ರದಾನ ಮಾಡ ಲಾಯಿತು. ಕುಸ್ತಿ ಕೋಚ್‌  ಮಹಬೀರ್‌ ಸಿಂಗ್‌  ಅವರು ಜೀವಮಾನ ಸಾಧನೆ ಪುರಸ್ಕಾರ ಪಡೆದರು.

*
‘ನಿಮ್ಮ ಪ್ರಶ್ನೆಗೆ ಉತ್ತರಿಸಲು ಸಮಯವಿಲ್ಲ’
ನವದೆಹಲಿ (ಪಿಟಿಐ): 
‘ನೀವು ನನ್ನ ಸಂದರ್ಶನ ಮಾಡುತ್ತೀರಾ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಈಗ ನನಗೆ ಸಮಯವಾದರೂ ಎಲ್ಲಿದೆ’.. ತಮ್ಮನ್ನು ಸಂದರ್ಶಿಸಲು ಮುಗಿ ಬೀಳುತ್ತಿದ್ದ ಮಾಧ್ಯಮದವರಿಗೆ ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್‌ ಪ್ರತಿಕ್ರಿಯಿಸಿದ್ದು ಹೀಗೆ.

ರಾಷ್ಟ್ರಪತಿ ಭವನದಲ್ಲಿ ಸೋಮ ವಾರ ನಡೆದ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಸಾಕ್ಷಿ  ಅಭಿಮಾನಿಗಳೊಂದಿಗೆ ಖುಷಿ ಖುಷಿ ಯಿಂದಲೇ ಸೆಲ್ಫಿ ತೆಗೆದುಕೊಂಡರು.

ಇನ್ನೊಂದೆಡೆ ಜಿಮ್ನಾಸ್ಟಿಕ್ಸ್‌ ತಾರೆ ದೀಪಾ ಕರ್ಮಾಕರ್‌ ಅವರು ಸಾವ ಧಾನದಿಂದ ಕೆಲವರಿಗೆ ತಮ್ಮ ಹೆಸರನ್ನು ಸರಿಯಾಗಿ ಉಚ್ಛಾರಣೆ ಮಾಡುವುದು ಹೇಗೆ ಎಂಬುದನ್ನು ವಿವರಿಸುತ್ತಿದ್ದರು.

‘ಬೆಳ್ಳಿಯ ಬೆಡಗಿ’ ಸಿಂಧು ತಮ್ಮ ಫೋಟೊ ಕ್ಲಿಕ್ಕಿಸಲು ಮುಂದಾದ ಛಾಯಾಗ್ರಾಹಕರ ಮುಂದೆ ಖುಷಿ ಯಿಂದಲೇ ನಿಂತಿದ್ದ ದೃಶ್ಯ ಸಾಮಾನ್ಯ ವಾಗಿತ್ತು. ಆದರೆ ದರ್ಬಾರ್‌ ಹಾಲ್‌ನ ಇನ್ನೊಂದು ಬದಿಯಲ್ಲಿ ಗಾಲಿ ಕುರ್ಚಿಯಲ್ಲಿ ಕುಳಿತಿದ್ದ ವಿನೇಶ ಪೋಗಟ್‌ ಚಿಂತಾಕ್ರಾಂತರಾಗಿದ್ದಂತೆ ಕಂಡುಬಂತು.

ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅವರು ಎರಡನೇ ಸುತ್ತಿನ ಸ್ಪರ್ಧೆಯ ವೇಳೆ ಮಂಡಿಗೆ ಗಾಯಮಾಡಿಕೊಂಡಿದ್ದರು. ಆದ್ದರಿಂದ ಅವರಿಗೆ ಎದ್ದು ಓಡಾಡಲು ಆಗುತ್ತಿರಲಿಲ್ಲ. 

ಹೀಗಾಗಿ ಗಾಲಿ ಕುರ್ಚಿಯಲ್ಲಿ ಕುಳಿತೇ  ಅರ್ಜುನ ಪ್ರಶಸ್ತಿ ಸ್ವೀಕರಿಸಿದರು.   ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರೇ ವೇದಿಕೆಯಿಂದ ಕೆಳಗಿಳಿದು ವಿನೇಶಗೆ ಪ್ರಶಸ್ತಿ ಹಾಗೂ ಫಲಕವನ್ನು ಪ್ರದಾನ ಮಾಡಿದರು.

ವಿನೇಶ ಅವರ ಬಲಗಾಲಿಗೆ ಬ್ಯಾಂಡೇಜ್‌ ಹಾಕಲಾಗಿತ್ತು. ನೋವಿ ನಿಂದ ಅವರ ಕಣ್ಣುಗಳು ತುಂಬಿ ಬರು ತ್ತಿದ್ದರೂ ದುಃಖವನ್ನು ನುಂಗಿಕೊಂಡೇ  ತಮ್ಮನ್ನು ಅಭಿನಂದಿಸಲು ಬರುತ್ತಿದ್ದ ವರಿಗೆ  ನಗುತ್ತಲೇ ಧನ್ಯವಾದ ಹೇಳು ತ್ತಿದ್ದರು.

ಈ ವೇಳೆ ಪತ್ರಕರ್ತರೊಬ್ಬರು ಗಾಯದಿಂದ ಗುಣಮುಖರಾಗಲು ಎಷ್ಟು ಕಾಲ ಬೇಕಾಗುತ್ತದೆ ಎಂದು ಪ್ರಶ್ನಿಸಿದರು. ಆಗ ‘ನನಗಂತೂ ಗೊತ್ತಿಲ್ಲ. ಕನಿಷ್ಠ 4, 5 ಇಲ್ಲವೇ 6 ತಿಂಗಳು ಬೇಕಾಗ ಬಹುದೇನೊ’ ಎಂದು ಹೇಳುವಾಗ ದುಃಖ ಉಮ್ಮಳಿಸಿಬಂದು ಕಣ್ಣುಗಳು ತೇವಗೊಂಡವು.

ರಿಯೊ ಕೂಟದ ಮಹಿಳೆಯರ 3000 ಮೀಟರ್ಸ್‌ ಸ್ಪೀಪಲ್‌ಚೇಸ್‌ನಲ್ಲಿ 10ನೇ ಸ್ಥಾನ ಗಳಿಸಿದ್ದ ಲಲಿತಾ ಬಾಬರ್‌ ಕೂಡ ಸಮಾರಂಭದಲ್ಲಿ ಹಾಜರಿದ್ದರು.

ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಸದ್ಯ ಸ್ಟೀಪಲ್‌ ಚೇಸ್‌ನಲ್ಲಿ ನನ್ನ ಮತ್ತು ಸುಧಾ ಸಿಂಗ್‌ ನಡುವೆಯೇ ಸ್ಪರ್ಧೆ ಇದೆ. ದೇಶಿಯ ಕೂಟಗಳಲ್ಲಿ ನಮಗೆ ಸವಾಲೊಡ್ಡಬಲ್ಲ  ಓಟಗಾರ್ತಿಯರು ಹೆಚ್ಚೆಚ್ಚು ಮಂದಿ ಭಾಗವಹಿಸಬೇಕು. ಆಗ ನಾವು ಸಾಮರ್ಥ್ಯವನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳಬಹುದು’ ಎಂದರು.

‘ನಾವು ಪೂರ್ವ ಆಫ್ರಿಕಾದ ಓಟಗಾರ್ತಿಯರಿಗಿಂತಲೂ ಕಠಿಣ ತರಬೇತಿ ನಡೆಸುತ್ತೇವೆ. ಹೀಗಿದ್ದರೂ ದೂರ ಅಂತರದ ಓಟದಲ್ಲಿ ಅವರನ್ನು ಹಿಂದಿಕ್ಕಲು  ಸಾಧ್ಯವಾಗುತ್ತಿಲ್ಲ. ಲೀಲಾಜಾಲವಾಗಿ ಓಡುವ  ಕಲೆ ಅವರಿಗೆ ಹುಟ್ಟಿನಿಂದಲೇ ಸಿದ್ದಿಸಿದಂತಿದೆ. ನಮ್ಮಲ್ಲಿ ಪದಕ ಗೆದ್ದ ಬಳಿಕ ಹಣದ ಹೊಳೆಯೇ ಹರಿದುಬರುತ್ತದೆ. ಆದರೆ ಕೂಟಕ್ಕೂ ಮುನ್ನ ಯಾರೂ ಆರ್ಥಿಕ ಬೆಂಬಲ ನೀಡುವುದಿಲ್ಲ’ ಎಂದು ಮಹಾರಾಷ್ಟ್ರದ ಓಟಗಾರ್ತಿ ಅಭಿಪ್ರಾಯಪಟ್ಟರು.

*
15 ಮಂದಿಗೆ ಅರ್ಜುನ ಪ್ರಶಸ್ತಿ
ನವದೆಹಲಿ:
ಅಥ್ಲೀಟ್‌ ಲಲಿತಾ ಬಾಬರ್‌ , ಬಾಕ್ಸರ್‌ ಶಿವ ಥಾಪ, ಹಾಕಿ ಆಟಗಾರ್ತಿ ರಾಣಿ ರಾಂಪಾಲ್‌, ಜಾವೆಲಿನ್‌ ಸ್ಪರ್ಧಿ ನೀರಜ್‌ ಚೋಪ್ರಾ, ಭಾರತ ಫುಟ್‌ಬಾಲ್‌ ತಂಡದ ಗೋಲ್‌ ಕೀಪರ್‌ ಸುಬ್ರತಾ ಪಾಲ್‌, ಶೂಟರ್‌ ಅಪೂರ್ವಿ ಚಾಂಡೇ ಲ, ಕುಸ್ತಿಪಟು ವಿನೇಶ ಪೋಗಟ್‌, ಬಿಲ್ಲುಗಾರ ರಜತ್‌ ಚೌಹಾಣ್‌,

ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಆಟಗಾರ ಸೌರವ್‌ ಕೊಠಾರಿ, ಶೂಟರ್‌ ಗುರ್‌ಪ್ರೀತ್‌ ಸಿಂಗ್‌, ಟೇಬಲ್‌ ಟೆನಿಸ್‌ ಆಟಗಾರ ಸೌಮ್ಯಜಿತ್‌ ಘೋಷ್‌, ಕುಸ್ತಿಪಟು ಅಮಿತ್‌ ಕುಮಾರ್‌, ಪ್ಯಾರಾ ಅಥ್ಲೀಟ್‌ ಸಂದೀಪ್‌ ಸಿಂಗ್‌ ಮಾನ್‌ ಮತ್ತು ಕುಸ್ತಿಪಟು ವಿರೇಂದ್ರ ಸಿಂಗ್‌ ಅವರು ಅರ್ಜುನ ಪ್ರಶಸ್ತಿ ಸ್ವೀಕರಿಸಿ ದರು.

ಇವರು ಅರ್ಜುನನ ಮೂರ್ತಿಯ ಜೊತೆಗೆ ಪ್ರಶಸ್ತಿ ಪತ್ರ ಹಾಗೂ ತಲಾ ₹ 5 ಲಕ್ಷ ನಗದು ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT