ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಅಥ್ಲೀಟ್‌ ಕೃತಕ ಕಾಲು ತೆಗೆಸಿ ತಪಾಸಣೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ
Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ಯಾರಾ ಅಥ್ಲೀಟ್‌ ಆದಿತ್ಯ ಮೆಹ್ತಾ ಅವರೊಡನೆ ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯೂರಿಟಿ ಫೋರ್ಸ್‌ (ಸಿಐಎಸ್‌ಎಫ್‌) ಸಿಬ್ಬಂದಿ  ಭದ್ರತಾ ತಪಾಸಣೆಯ ವೇಳೆ ಅಮಾನವೀಯವಾಗಿ ನಡೆದು ಕೊಂಡಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಹೈದರಾಬಾದ್‌ನ ಆದಿತ್ಯ ಅವರು  ಬೆಂಗಳೂರಿನಿಂದ ಚಂಡಿಗಡಕ್ಕೆ ಹೋಗಲು ವಿಮಾನ ನಿಲ್ದಾಣಕ್ಕೆ ಬಂದಾಗ ಭದ್ರತಾ ತಪಾಸಣೆಯ ಅಧಿಕಾರಿಗಳು ಕೃತಕ ಕಾಲನ್ನು ತೆಗೆಯುವಂತೆ ಹೇಳಿದ್ದಾರೆ.

ಇದಕ್ಕೆ ಆದಿತ್ಯ ಒಪ್ಪದಿದ್ದಾಗ ಬಲವಂತವಾಗಿ  ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಪ್ಯಾಂಟು ಎಳೆದು ಬಿಚ್ಚಿ ಹಾಕಿ ಅವಮಾನ ಮಾಡಿದ್ದಾಗಿ ಅವರು ಆರೋಪಿಸಿದ್ದಾರೆ. ಘಟನೆಯ  ಕುರಿತು ಅವರು  ಫೇಸ್‌ ಬುಕ್‌ನಲ್ಲೂ ಬರೆದುಕೊಂಡಿದ್ದಾರೆ.

‘ನಾನು ವಿಮಾನ ನಿಲ್ದಾಣದ ಒಳ ಹೊಕ್ಕಾಗ ಪುಷ್ಪೇಂದ್ರ  ಪ್ರತಾಪ್‌ ಸಿಂಗ್‌ ಎಂಬ ಅಧಿಕಾರಿಯೊಬ್ಬರು  ಕೃತಕ ಕಾಲುಗಳನ್ನು ತೆಗೆಯುವಂತೆ ಸೂಚಿಸಿ ದರು.   ಇದನ್ನು ತೆಗೆದರೆ ನಿಲ್ಲಲು ಆಗು ವುದಿಲ್ಲ ಇದನ್ನು ಕಳಚಲು ಸಾಧ್ಯವಿಲ್ಲ .

ನಾನು ವಿಮಾನದಲ್ಲಿ ಈ ಹಿಂದೆ ಸಾಕಷ್ಟು ಬಾರಿ ಪ್ರಯಾಣಿಸಿದ್ದೇನೆ.  ಆಗ ಯಾರೂ  ಇದನ್ನು ತೆಗೆಯುವಂತೆ  ಹೇಳಿಲ್ಲ. ಬೇಕಿದ್ದರೆ,   ಇಟಿಡಿ ಸ್ಕ್ಯಾನರ್‌ನಿಂದ ತಪಾಸಣೆ ಮಾಡಿ ಎಂದು  ಇನ್ನೊಬ್ಬ ಭದ್ರತಾ ಸಿಬ್ಬಂದಿಗೆ ಹೇಳಿದೆ.  ಅದಕ್ಕೆ ಅವರು ನನ್ನ ಮೇಲೆ ರೇಗಿದರು’ ಎಂದು ಆದಿತ್ಯ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

‘ನೀನು  ಕೃತಕ ಕಾಲನ್ನು ತೆಗೆಯದೆ ಹೇಗೆ ಪ್ರಯಾಣ ಮಾಡುತ್ತೀಯ  ನೋಡುತ್ತೇನೆ ಎಂದು ಅವರು ದಬಾಯಿಸಿದರು.  ಬಳಿಕ  ಎಸ್‌.ಇ ಮೀನಾ ಮತ್ತು  ಠಾಕೂರ್‌ ಎಂಬ ಅಧಿಕಾರಿಗಳನ್ನು ಕರೆದು  ಬಲವಂತವಾಗಿ   ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ  ಪ್ಯಾಂಟ್‌ ಬಿಚ್ಚಿಸಿದರು’ ಎಂದು ತಿಳಿಸಿದ್ದಾರೆ.

‘ಇದು ನನ್ನ ಜೀವನದ ಎರಡನೇ ಕರಾಳ ದಿನ. ಅಪಘಾತದಲ್ಲಿ ನಾನು ಬಲಗಾಲು  ಕಳೆದುಕೊಂಡಾಗ ಎಷ್ಟು ನೊಂದಿದ್ದೆನೊ ಅದಕ್ಕಿಂತಲೂ ಹೆಚ್ಚು ನೋವು ಈ ಘಟನೆಯಿಂದ ಆಗಿದೆ. ಈ  ಬಗ್ಗೆ ಸಿಐಎಸ್‌ಎಫ್‌ ಮಹಾನಿರ್ದೇಶಕರಿಗೆ  ದೂರು ನೀಡಿದರೆ ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ನನಗೆ ನ್ಯಾಯ ಸಿಗಬೇಕು. ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು  ಸಿದ್ಧನಾಗಿದ್ದೇನೆ’ ಎಂದು ಆದಿತ್ಯ ನುಡಿದಿದ್ದಾರೆ.

*
ಹೈದರಾಬಾದ್‌ನ ಆದಿತ್ಯ ಮೆಹ್ತಾ

ಆದಿತ್ಯ ಮೆಹ್ತಾ ಅವರು ಹೈದರಾಬಾದ್‌ ನವರು. ಕೆಲ ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಅವರು ಬಲಗಾಲಿನ ಮಂಡಿಯ ಕೆಳಭಾಗ ವನ್ನು ಕಳೆದುಕೊಂಡಿದ್ದರು. ಅವರು ಪ್ಯಾರಾ ಏಷ್ಯನ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ.

ಜೊತೆಗೆ ಕೃತಕ ಕಾಲಿನ ಸಹಾಯದಿಂದ ಸೈಕಲ್‌ ತುಳಿದು ಅತ್ಯಂತ ವೇಗವಾಗಿ 100 ಕಿಲೊ ಮೀಟರ್ಸ್‌ ಗುರಿ ಮುಟ್ಟಿ ಲಿಮ್ಕಾ ದಾಖಲೆ ಬರೆದಿದ್ದಾರೆ.
31 ವರ್ಷದ ಆದಿತ್ಯ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ  ಸೈಕಲ್‌ನಲ್ಲಿ ಸಾಗಿ ಸುದ್ದಿಯಾಗಿದ್ದರು.

***
ಆದಿತ್ಯ ಅವರೊಂದಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ನಡೆದು ಕೊಂಡ ರೀತಿ ಅಮಾನವೀಯ. ಉನ್ನತ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸಿ ಅವರಿಗೆ ನ್ಯಾಯ ಒದಗಿಸಬೇಕು.
-ಎಚ್‌.ಎನ್‌. ಗಿರೀಶ್‌ , ಪ್ಯಾರಾ ಅಥ್ಲೀಟ್‌

***
ಪ್ಯಾರಾ ಅಥ್ಲೀಟ್‌ ಆಗಿರಲಿ ಅಥವಾ ಸಾಮಾನ್ಯ ನಾಗರಿಕರೇ ಆಗಲಿ. ಯಾರೊಂದಿಗೂ ಭದ್ರತಾ ಅಧಿಕಾರಿ ಗಳು ಈ ರೀತಿ ನಡೆದುಕೊಳ್ಳಬಾರದು. ಇದಕ್ಕೆ ನನ್ನ ವಿರೋಧವಿದೆ.
-ಮಾಲತಿ ಹೊಳ್ಳ, ಪ್ಯಾರಾ ಅಥ್ಲೀಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT