ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥನ ಕೌಶಲ, ತಂತ್ರಜ್ಞಾನ ದುರ್ಬಲ

Last Updated 2 ಸೆಪ್ಟೆಂಬರ್ 2016, 11:57 IST
ಅಕ್ಷರ ಗಾತ್ರ

ನಿರ್ಮಾಪಕ: ಸಿ.ವಿ.ಶಿವಶಂಕರ್
ನಿರ್ದೇಶಕ: ವೆಂಕಟ್ ಭಾರದ್ವಾಜ್
ತಾರಾಗಣ: ಹರ್ಷ್ ಅರ್ಜುನ್, ಮೃದುಲಾ ಭಾಸ್ಕರ್, ಸಿಂಚನ

‘ಕ್ರೂರಮೃಗಗಳು ಮನುಷ್ಯನನ್ನು ತಾವಾಗಿಯೇ ದಾಳಿ ಮಾಡಿ ಸಾಯಿಸುವುದಿಲ್ಲ. ಅವುಗಳ ತಂಟೆಗೆ ಹೋಗದೇ ಇದ್ದರೆ ತೊಂದರೆಯಿಲ್ಲ’ ಎಂದು ಫಾಲಾಕ್ಷ ಮಗಳಿಗೆ ಹೇಳುತ್ತಾನೆ. ಆದರೆ ಸ್ವಾರ್ಥಕ್ಕಾಗಿ ಇನ್ನೊಬ್ಬನನ್ನು ಬಲಿ ಕೊಡುವ ಮನುಷ್ಯನ ಆಸೆಗೆ ದಿಗ್ಬಂಧನ ಹಾಕುವುದು ಹೇಗೆ?

ಮಂತ್ರ–ತಂತ್ರಗಳ ಬೆನ್ನಟ್ಟಿ, ಕ್ಷುದ್ರ ವಿದ್ಯೆಯಿಂದ ಅಗಾಧ ಸಂಪತ್ತು ಗಳಿಸುವ ಆಸೆಯಿಂದ ಬಬ್ಲುಷ ಏನೇನೋ ಮಾಡುತ್ತಾನೆ. ಆದರೆ ಕೊನೆಗೆ ಗೆಲ್ಲುವುದು ಮನುಷ್ಯನ ಒಳ್ಳೆಯತನವೇ ಎಂಬುದನ್ನು ವೆಂಕಟ್ ಭಾರದ್ವಾಜ್ ‘ಬಬ್ಲುಷ’ದಲ್ಲಿ ತೋರಿಸಿದ್ದಾರೆ.

ಹದಿನೈದನೇ ಶತಮಾನದಲ್ಲಿ ನಡೆದಿತ್ತು ಎನ್ನಲಾದ ಘಟನೆಯೊಂದನ್ನು ಹಿಡಿದುಕೊಂಡು, ಕ್ಷಣಕ್ಷಣಕ್ಕೂ ಕುತೂಹಲ ಸೃಷ್ಟಿಸುವ ಚಿತ್ರಕಥೆಯನ್ನು ವೆಂಕಟ್ ಬರೆದಿದ್ದಾರೆ. ರಾಜಾಕರ್ಷಣೆ ವಿದ್ಯೆ ಗಳಿಸಲು ಗುರುವಿನ ಆದೇಶ ಪಾಲಿಸಹೊರಡುವ ಬಬ್ಲುಷ, ಬಲಿ ಕೊಡಲು ಬಾಲಕಿ ಮಧಾಳನ್ನು ಗುರುವಿನ ತಾಣಕ್ಕೆ ಕರೆತರುತ್ತಾನೆ. ಅದೂ ಒತ್ತಾಯದಿಂದಲ್ಲ; ಮನವೊಲಿಕೆಯಿಂದ. ಅದಕ್ಕೂ ಮುನ್ನ ಆತ ಮಧಾಳ ತಂದೆ ಫಾಲಾಕ್ಷನ ಮನಗೆದ್ದಿರುತ್ತಾನೆ. ಎರಡು ಪ್ರಮುಖ ಭಾಗಗಳಾಗಿ ಓಡುವ ‘ಬಬ್ಲುಷ’ದಲ್ಲಿ ಮೊದಲಾರ್ಧ ಫಾಲಾಕ್ಷನ ಬೇಸಾಯ ಹಾಗೂ ಕುಸ್ತಿ ಆಟಕ್ಕೆ ಮೀಸಲು. ಆಮೇಲಿನದು ಮಗಳಿಗಾಗಿ ಅಲೆದಾಡುವ ತಂದೆಯ ಆರ್ತನಾದ. ಈ ಕಥೆಗೆ ವಿಜಯನಗರ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ ದಸರಾ ಕುಸ್ತಿ ಸ್ಪರ್ಧೆ ಬರೀ ಮಾತಿನಲ್ಲೇ ಬಂದು ಹೋಗುತ್ತದೆ. ಆದರೆ ಆ ನೆಪದಲ್ಲಿ ಪ್ರೇಕ್ಷಕರು ಕುಸ್ತಿ ಸೆಣೆಸಾಟವನ್ನು ಸವಿಯಬಹುದು.

ಹಳ್ಳಿಯಿಂದ ದೂರವಾಗಿ ಹೊಲದ ಮಧ್ಯೆ ಕುಟೀರದಲ್ಲಿ ನಾಯಕ ಬದುಕು ಸಾಗಿಸುತ್ತಾನೆ. ಅದರಿಂದಾಗಿಯೋ ಏನೋ, ಸಿನಿಮಾದಲ್ಲಿ ಆಗಾಗ್ಗೆ ಏಕತಾನತೆ ಕಾಡುತ್ತದೆ. ಹೆಚ್ಚಿನ ಭಾಗವನ್ನೆಲ್ಲ ಗುಡ್ಡ– ಬೆಟ್ಟ ಅಥವಾ ಕಾಡುಗಳಲ್ಲೇ ಚಿತ್ರೀಕರಣ ನಡೆಸಿದ್ದರೂ ಛಾಯಾಗ್ರಾಹಕ ವಿಶ್ವಜಿತ್ ಬಿ. ರಾವ್ ಹೆಚ್ಚೇನೂ ಶ್ರಮಿಸಿಲ್ಲ. ನಾಲ್ಕು ಹಾಡುಗಳ ಪೈಕಿ ಎರಡು (ಸಂಗೀತ: ಸನ್ನಿ ಮಹದೇವನ್) ಮಧುರವಾಗಿವೆ. ಅಸಹಜ ಅನಿಸುವ ಸಂಭಾಷಣೆ ಹಾಗೂ ಅನಾಕರ್ಷಣೆಯ ವಸ್ತ್ರವಿನ್ಯಾಸ ಚಿತ್ರವನ್ನು ಪೇಲವಗೊಳಿಸುತ್ತವೆ. ಆರಡಿ ಎತ್ತರದ ಹರ್ಷ್ ಅರ್ಜುನ್ ಹಾಗೂ ಮಣಿ ಶೆಟ್ಟಿ ಪೈಪೋಟಿಯೆಂಬಂತೆ ನಟಿಸಿದ್ದಾರೆ. ಚೆಲುವೆ ನಾಯಕಿ ಮೃದುಲಾ ಭಾಸ್ಕರ್ ಅಭಿನಯ ಹೇಳಿಕೊಳ್ಳುವಂತೇನೂ ಇಲ್ಲ. ಪೋಷಕ ಪಾತ್ರಗಳಲ್ಲಿರುವ ಅವಿನಾಶ್, ಶೋಭರಾಜ್ ಮೂರ್ನಾಲ್ಕು ದೃಶ್ಯಗಳಿಗೆ ಜೀವ ತುಂಬಿದ್ದಾರೆ.

ಇತಿಹಾಸದ ಒಂದು ಎಳೆಯನ್ನು ಆಯ್ದುಕೊಂಡು ಅದನ್ನು ಚಿತ್ರರೂಪಕ್ಕೆ ಅಳವಡಿಸಲು ನಿರ್ದೇಶಕ ವೆಂಕಟ್ ಸಾಕಷ್ಟು ಪ್ರಯಾಸಪಟ್ಟಿದ್ದಾರೆ. ಆದರೆ ತಾಂತ್ರಿಕವಾಗಿ ದುರ್ಬಲವಾಗಿರುವುದೇ ಚಿತ್ರದ ‘ಮೈನಸ್’ ಅಂಶ. ಶತಮಾನದ ಹಿಂದಿನ ಕಥೆಗೆ ಪೂರಕವಾಗಿ ಆ ಅವಧಿ ನೆನಪಿಸುವಂಥ ದೃಶ್ಯಗಳ ಕೊರತೆ ಚಿತ್ರದಲ್ಲಿದೆ. ಮಗಳನ್ನು ಹುಡುಕುವ ಫಾಲಾಕ್ಷನ ಮುಖ ಹಾಗೂ ಬಬ್ಲುಷನ ನಯವಂಚಕತನ ಪ್ರೇಕ್ಷಕರನ್ನು ಕೊನೆತನಕವೂ ಕಾಡುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT