ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯದ ಮಡಿಲಲ್ಲಿ ಸಂತನಾದ ಮೈಕ್ರೋಸಾಫ್ಟಿಗ

Last Updated 3 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘‘ಮೈಕ್ರೋಸಾಫ್ಟ್ ಬಿಡುವ ನನ್ನ ನಿರ್ಧಾರ ಗಟ್ಟಿಯಾಗಿತ್ತು, ಅದನ್ನು ಎಲ್ಲರಿಗೂ ಹೇಳಿಯಾಗಿತ್ತು. ಇನ್ನು ಯಾವುದೇ ಕಾರಣಕ್ಕೆ ಜೀವನದಲ್ಲಿ ಹಿಂತಿರುಗಿ ನೋಡುವ ಹಾಗಿರಲಿಲ್ಲ. ಮುಂದಿನ ಐದು ನಿಮಿಷಗಳ ಅವಧಿಯಲ್ಲಿ ವಿಮಾನದ ಕಿಟಕಿಯ ಮೂಲಕ ಬೀಜಿಂಗ್ ನಗರದ ಮೇಲೆ ನಾನು ದೃಷ್ಟಿ ನೆಟ್ಟೆ.
ಅದು ಚಿಕ್ಕದಾಗಿ, ಇನ್ನೂ ಚಿಕ್ಕದಾಗಿ, ಕೊನೆಗೆ ಚುಕ್ಕಿಯಾಗಿ ದಿಗಂತದೊಳಗೆ ಮರೆಯಾಯಿತು. ಅದರೊಂದಿಗೆ ನನ್ನೆದೆಯೊಳಗೆ ದಟ್ಟವಾಗಿ ಕವಿದಿದ್ದ ಎಲ್ಲ ನಕಾರಾತ್ಮಕ ಅಂಶಗಳು ಮತ್ತು ಭಯಂಕರ ಒತ್ತಡಗಳು ಕೂಡ ಮರೆಯಾಗಲಾರಂಭಿಸಿದವು.

ಸುಮಾರು ಒಂದು ತಿಂಗಳಷ್ಟು ದೀರ್ಘ ಕಾಲದ, ‘ಬಿಡಬೇಕೆ? ಬಿಡಬೇಡವೇ?’ ಎಂಬ ಆತಂಕದ ಜೀವನಕ್ಕೆ ಪೂರ್ಣ ವಿರಾಮ ಬಿದ್ದಿತ್ತು. ಭವಿಷ್ಯದ ಕನಸುಗಳನ್ನು ನೆನೆದು ಮನಸು ಹಗುರ ಹಾಗೂ ಸಂತೋಷದಿಂದ ಅರಳಲಾರಂಭಿಸಿತು. ವಿಮಾನ ಗುರುತ್ವಾಕರ್ಷಣಕ್ಕೆ ವಿರುದ್ಧವಾಗಿ ಮೇಲಕ್ಕೇರುತ್ತಿತ್ತು. ನನ್ನ ಮನಸ್ಸು ಕೂಡ ಮುಂದಿನ ಜೀವನದ ಬಗ್ಗೆ ಸಕಾರಾತ್ಮಕವಾಗಿ ತುಡಿಯುತ್ತಾ ನೀಲಾಗಸದಲ್ಲಿ ತೇಲಲಾರಂಭಿಸಿತು’’.

–ಬೆಂಗಳೂರಿನ ವಿಮಾನ ನಿಲ್ದಾಣದ ಪುಸ್ತಕದಂಗಡಿಯಲ್ಲಿ ಕೈಗೆತ್ತಿಕೊಂಡಿದ್ದ ಜಾನ್ ವೂಡ್ ಅವರ ‘ಲೀವಿಂಗ್ ಮೈಕ್ರೋಸಾಫ್ಟ್ ಟು ಚೇಂಜ್ ದಿ ವರ್ಲ್ಡ್’ ಕೃತಿಯ ‘ವಾಕಿಂಗ್ ಅವೇ’ ಅಧ್ಯಾಯದ ಕೊನೆಯ ಪ್ಯಾರಾ ಓದಿ ಮುಗಿಸುವಷ್ಟರಲ್ಲಿ ನಾನು ಕೂತಿದ್ದ ವಿಮಾನ ನವದೆಹಲಿಯ ‘ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ದಲ್ಲಿ ಭೂಸ್ಪರ್ಶ ಮಾಡಿತು.

ಇದೆಂತಹ ಆಕಸ್ಮಿಕ! ಒಬ್ಬರಿಗೊಬ್ಬರಿಗೆ ಪರಿಚಯವೇ ಇಲ್ಲದ ಇಬ್ಬರು ಮನುಷ್ಯರ ಜೀವನದಲ್ಲಿ ಒಂದೇ ತರಹದ ವಿಚಿತ್ರ ಘಟ್ಟವೊಂದು ಸೃಷ್ಟಿಯಾಗುವುದು. ವ್ಯತ್ಯಾಸವೆಂದರೆ ಜಾನ್ ವೂಡ್ 1999ರಲ್ಲಿ ತನ್ನ ಸಾಮಾಜಿಕ ಸೇವಾ ಯೋಜನೆ ‘ರೂಂ ಟು ರೀಡ್’ ಸ್ಥಾಪಿಸಲು, ಗೆಲುವಿನ ಹಾದಿಯಲ್ಲಿಯೇ ‘ಮೈಕ್ರೋಸಾಫ್ಟ್‌’ಗೆ ವಿದಾಯ ಹೇಳಿದ್ದರು. 2012ರಲ್ಲಿ ದಿಗ್ವಿಜಯದ ನಂತರ ಕಾರ್ಮೋಡ ಕವಿದಿತ್ತು. ಆ ಸೋಲಿನಿಂದಾಗಿ ಬದುಕಿನ ಉಸಿರಾಗಿದ್ದ ಪತ್ರಿಕಾ ವ್ಯವಸಾಯಕ್ಕೆ ಕೊನೆ ಹಾಡುವ ದೃಢ ನಿರ್ಧಾರ ಮಾಡಿಯಾಗಿತ್ತು. ಅದೆಂತಹ ಕ್ಷಣ! ಮುಕ್ತಿ! ನಿರಾಳ!

ಅಮೆರಿಕದ ಪ್ರಜೆ ಜಾನ್ ವೂಡ್, 1991ರಲ್ಲಿ ಸಂಸ್ಥಾಪಕ ಬಿಲ್ ಗೇಟ್ಸ್ ಗೆಳತಿಯಾಗಿದ್ದ ಮೆಲಿಂಡಾ ಅವರಿಂದಲೇ ಆಯ್ಕೆಯಾಗಿ ‘ಮೈಕ್ರೋಸಾಫ್ಟ್’ ಕಂಪೆನಿ ಸೇರಿ ಉನ್ನತ ಹುದ್ದೆ ಅಲಂಕರಿಸಿದ್ದ ಪ್ರತಿಭಾವಂತ, ಯುವ ಮಾರ್ಕೆಟಿಂಗ್ ತಜ್ಞ. ಆಗಿನ್ನೂ 29ರ ಹರೆಯ. ಏಷ್ಯಾ–ಪೆಸಿಫಿಕ್ ವಿಭಾಗದ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾಗಿ ‘ಮೈಕ್ರೋಸಾಫ್ಟ್’ ಸಾಮ್ರಾಜ್ಯವನ್ನು ವಿಸ್ತರಿಸುವ ಹೊಣೆ ಹೊತ್ತಿದ್ದ ಜಾನ್, ಒಂದರ್ಥದಲ್ಲಿ ಕನಸಿನ ಕಸುಬು ಮತ್ತು ಬದುಕನ್ನು ನಡೆಸುತ್ತಿದ್ದರು.

ರೆಡ್ಮಂಡ್‌ನಲ್ಲಿ ಬೆಳಗಿನ ಉಪಹಾರ ಸೇವಿಸಿ, ಲಂಡನ್‌ನಲ್ಲಿ ಮಧ್ಯಾಹ್ನದ ಊಟ ಮಾಡಿ, ಹಾಂಗ್‌ಕಾಂಗ್‌ನಲ್ಲಿ ರಾತ್ರಿಯೂಟ ಮಾಡುತ್ತಿದ್ದ ಜಾನ್ ತನ್ನ ಗ್ಲೋಬಲ್ ಬದುಕನ್ನು ಆಸ್ವಾದಿಸುತ್ತಿದ್ದರು. ಭರ್ಜರಿ ಸಂಬಳ, ‘ಮೈಕ್ರೋಸಾಫ್ಟ್‌’ನ ಸ್ಟಾರ್ ಪರ್‌ಫಾರ್ಮರ್, ಕಂಪೆನಿಯೇ ಕೊಟ್ಟಿದ್ದ ಮನೆ, ಭಾವಿ ಪತ್ನಿಯಾಗಲಿದ್ದ ಹಾಲಿ ಗೆಳತಿ ಸೋಫಿ ಜೊತೆಯಲ್ಲಿ, ಸೆವೆನ್ ಸ್ಟಾರ್ ಬದುಕು.

ಇದಕ್ಕಿಂತ ಇನ್ನೇನು ಬೇಕು ಎನ್ನುತ್ತಿರುವಾಗಲೇ ದಕ್ಕಿದ ಪ್ರಮೋಷನ್. ಇಂಟರ್‌ನೆಟ್ ಕಸ್ಟಮರ್ ಯೂನಿಟ್ ಆಫ್ ಮೈಕ್ರೋಸಾಫ್ಟ್ ಆಸ್ಟ್ರೇಲಿಯಾ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾಗಿ ಆಯ್ಕೆಯಾದ ಜಾನ್ ಸಿಡ್ನಿಯಲ್ಲಿ ಸೋಫಿ ಜೊತೆ ನೆಲೆ ನಿಂತಿದ್ದರು.

ಜಾನ್ ವೃತ್ತಿ ಬದುಕು ಎಷ್ಟು ವೇಗವಾಗಿ ಓಡುತ್ತಿತ್ತೆಂದರೆ 1998ರ ಹೊತ್ತಿಗೆ ಅವರು ಚೀನಾದಲ್ಲಿ ‘ಮೈಕ್ರೋಸಾಫ್ಟ್’ ಸಾಮ್ರಾಜ್ಯದ ವಿಸ್ತರಣೆಯ ನೇತೃತ್ವ ವಹಿಸಿಕೊಳ್ಳುವುದು ಖಚಿತವಾಗಿ ಹೋಗಿತ್ತು. ಏಷ್ಯಾ–ಪೆಸಿಫಿಕ್ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗೆ ಹೋಲಿಸಿದರೆ ಮುಂದಿನ ಜವಾಬ್ದಾರಿ ಭಾರಿ ಸವಾಲಿನದು. ಆಗ ಚೀನಾ ಮಾರುಕಟ್ಟೆಯಲ್ಲಿ ‘ಮೈಕ್ರೋಸಾಫ್ಟ್‌’ಗೆ ಭದ್ರ ನೆಲೆ ಇರಲಿಲ್ಲ. ಇನ್ನೇನು ಆ ಭಾರೀ ಜವಾಬ್ದಾರಿ ಹೆಗಲ ಮೇಲೆ ಬೀಳುತ್ತದೆ ಎನ್ನುವಾಗಲೇ ಜಾನ್ ಒಂದು ತಿಂಗಳ ರಜೆ ತೆಗೆದುಕೊಂಡು ನೇಪಾಳಕ್ಕೆ ಬಂದಿಳಿದರು. ಕಾರಣ, ಬಹಳ ವರ್ಷಗಳಿಂದ ಇದ್ದ ಒಂದು ಕನಸನ್ನು ನನಸಾಗಿಸಲು.

ನೇಪಾಳದ ಅನ್ನಪೂರ್ಣ ಪರ್ವತ ಶ್ರೇಣಿಯ ತಪ್ಪಲಲ್ಲಿ ಇರುವ ಟ್ರೆಕ್ಕಿಂಗ್ ಪಥ, ‘ಅನ್ನಪೂರ್ಣ ಸರ್ಕೀಟ್’ ಜಗತ್ತಿನ ಅತ್ಯಂತ ರಮಣೀಯ ಮತ್ತು ಸವಾಲಿನ ಹಾದಿ. ಸುಮಾರು 18-22 ದಿನಗಳ ಅವಧಿಯಲ್ಲಿ 230 ಕಿಲೋಮೀಟರ್ ಕಾಲು ನಡಿಗೆಯಲ್ಲಿ ಸಾಗುವ ಈ ಪಥ, ಮಾನಂಗ್ ಮತ್ತು ಮಸ್ತಂಗ್ ಕಣಿವೆಗಳ ನಡುವೆ, ಸಮುದ್ರ ಮಟ್ಟದಿಂದ 5416 ಮೀಟರ್ ಎತ್ತರದ ತೋರಂಗ್ ಲಾ ಪಾಸ್ ಏರಿಳಿಯುತ್ತದೆ.

ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಆರು ಗಂಟೆಗಳ ಕಾಲ ಖಾಸಗಿ ವಾಹನದಲ್ಲಿ ಪ್ರಯಾಣ ಮಾಡಿ ಬೆಸಿಸಾಹಾರ್ ತಲುಪಬೇಕು. ಅಲ್ಲಿಂದ ಮುಂದೆ ಕಾಲ್ನಡಿಗೆ ಆರಂಭ. ಜಗತ್ತಿನ ಅತ್ಯಂತ ಮನಮೋಹಕ ಟ್ರೆಕ್ಕಿಂಗ್ ಹಾದಿಯಲ್ಲಿ ಮೊದಲ ಹೆಜ್ಜೆ ಹಾಕುವವರೆಗೆ ಜಾನ್ ಬದುಕು ಎಲ್ಲರಂತಿತ್ತು. ಅದಕ್ಕೆ ಇದ್ದಕ್ಕಿದ್ದಂತೆ ತಿರುವು ಮೂಡಿದ್ದು ‘ಅನ್ನಪೂರ್ಣ ಸರ್ಕೀಟ್’ ಟ್ರೆಕ್ಕಿಂಗ್‌ನ ಮೂರನೇ ದಿನ.

ಎರಡನೇ ದಿನ ರಾತ್ರಿ ಬೆಸಿಸಾಹಾರ್‌ನಿಂದ ಖುಡಿ ತಲುಪಿದ್ದ ಜಾನ್ ಮರುದಿನ ರಾತ್ರಿ ಬಹುಂದಾಂದಾ ತಲುಪಿ ಅಲ್ಲಿನ ಟೀ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಸ್ಥಳೀಯರು ನಿರ್ವಹಣೆ ಮಾಡುವ ಟೀ ಹೌಸ್‌ಗಳೇ ‘ಅನ್ನಪೂರ್ಣ ಸರ್ಕೀಟ್‌’ನುದ್ದಕ್ಕೂ ಟ್ರೆಕ್ಕರ್‌ಗಳ ನೆಲೆಯಾಗಿರುವುದು.

ಸ್ಥಳೀಯ ಗೈಡ್‌ಗಳ ಜೊತೆಯಲ್ಲಿ ಪ್ರತಿದಿನವೂ ನಿಗದಿಯಾದಷ್ಟು ದೂರವನ್ನು ಕ್ರಮಿಸಿ ಅಲ್ಲಿರುವ ಪುಟ್ಟ ಪುಟ್ಟ ಟೀ ಹೌಸ್‌ಗಳಲ್ಲಿ ನೆಲೆನಿಂತು ರಾತ್ರಿ ಕಳೆಯಬೇಕು. ಟ್ರೆಕ್ಕಿಂಗ್‌ಗೆ ಬರುವ ಪ್ರವಾಸಿಗರಿಗೆ ಆಹಾರ ಮತ್ತು ನೆಲೆ ಒದಗಿಸುವ, ಯಾವುದೇ ಆಧುನಿಕ ಸೌಲಭ್ಯಗಳಿಲ್ಲದ ಟೀ ಹೌಸ್‌ಗಳು ಅಲ್ಲಿನ ಮಟ್ಟಿಗೆ ಜೀವರಕ್ಷಕ ಸ್ವರ್ಗಸದೃಶ ನೆಲೆಗಳು.

ಮೂರನೇ ದಿನ ಸಂಜೆ ಬಹುಂದಾಂದಾದ ಟೀ ಹೌಸ್‌ನಲ್ಲಿ ನೆಲೆ ನಿಂತಿದ್ದ ಜಾನ್, ಅಲ್ಲಿನ ಲಾಮ್ಜಂಗ್ ಪ್ರಾಂತ್ಯದ ಜಿಲ್ಲಾ ಸಂಪನ್ಮೂಲ ಅಧಿಕಾರಿ ಪಶುಪತಿ ಜೊತೆ ಮಾತಿಗಿಳಿಯುತ್ತಾರೆ. ಮಾತಿಗೆ ಮಾತು ಬೆಳೆದು ಅದು ನೇಪಾಳದ ಸಾಕ್ಷರತೆಯತ್ತ ಹೊರಳಿಕೊಳ್ಳುತ್ತದೆ. ‘‘ಲಾಮ್ಜಂಗ್ ಪ್ರಾಂತ್ಯದ 17 ಶಾಲೆಗಳ ಸಂಪನ್ಮೂಲ ನಿರ್ವಹಣೆ ನನ್ನ ಜವಾಬ್ದಾರಿ. ಆ ಪೈಕಿ ಬಹುಂದಾಂದಾ ಶಾಲೆ ಕೂಡ ಒಂದು. ನೀವೇಕೆ ನನ್ನ ಜೊತೆ ನಾಳೆ ಬೆಳಿಗ್ಗೆ ಶಾಲೆಗೆ ಭೇಟಿ ನೀಡಬಾರದು?’’ ಎಂಬ ಪಶುಪತಿ ಆಹ್ವಾನವನ್ನು ಜಾನ್ ಸ್ವೀಕರಿಸುತ್ತಾರೆ.

ಮರುದಿನ ಬೆಳಿಗ್ಗೆ ಏಳು ಗಂಟೆಗೆ ಪಶುಪತಿ ಮುಂದೆ, ಜಾನ್ ಅವರ ಹಿಂದೆ – ಮಾರ್ಸಿಯೆಂಡಿ ನದಿಯ ಪಕ್ಕದ ಕಣಿವೆಯಲ್ಲಿ ಹೆಜ್ಜೆ ಹಾಕುತ್ತಾರೆ. ಎರಡು ಗಂಟೆಗಳ ನಂತರ ಎದುರಿದ್ದ ಪರ್ವತವನ್ನೇರಿ ಪಶುಪತಿ–ಜಾನ್ ಶಾಲೆಯ ಆವರಣ ಪ್ರವೇಶಿಸಿದಾಗ ನಮಸ್ಕಾರಗಳ ಪ್ರತಿಧ್ವನಿ. ಶಾಲೆಯ ಮುಖ್ಯೋಪಾಧ್ಯಾಯರಿಗೆ ಜಾನ್ ಅವರನ್ನು ಪರಿಚಯಿಸಿದ ಪಶುಪತಿ ತೆರೆಮರೆಗೆ ಸರಿದುಬಿಡುತ್ತಾರೆ.

ತಗಡಿನ ಶೀಟುಗಳನ್ನು ಹೊದ್ದಿದ್ದ ಆ ಶಾಲೆಯ ಮಣ್ಣಿನ ನೆಲದ ಎಂಟು ಕೊಠಡಿಗಳಲ್ಲಿ 450ಕ್ಕೂ ಹೆಚ್ಚು ಮಕ್ಕಳು ತುಂಬಿ ತುಳುಕುತ್ತಿದ್ದರು. ಶಾಲೆಯ ಹೆಡ್‌ಮಾಸ್ಟರ್ ಜೊತೆ ಒಂದೊಂದೇ ಕೊಠಡಿಗಳಿಗೆ ಹೋಗಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಂಡ ಜಾನ್ ಒಂಬತ್ತನೇ ಖಾಲಿ ಕೊಠಡಿಯ ಮುಂದೆ ನಿಂತರು. ‘ಸ್ಕೂಲ್ ಲೈಬ್ರರಿ’ ಎಂಬ ನಾಮಫಲಕ ಹೊತ್ತಿದ್ದ ಆ ಕೋಣೆ ಖಾಲಿ ಖಾಲಿ. ಜೊತೆಯಲ್ಲಿದ್ದ ಹೆಡ್‌ಮಾಸ್ಟರ್ ಅವರ ಬಳಿ ಜಾನ್, ‘‘ಇದು ಅತ್ಯಂತ ಸುಂದರವಾದ ಲೈಬ್ರರಿ. ಆ ಬಗ್ಗೆ ಮಾತೇ ಇಲ್ಲ. ಆದರೆ, ಎಲ್ಲೂ ಪುಸ್ತಕಗಳು ಕಾಣುತ್ತಿಲ್ಲವಲ್ಲ?’’ ಎಂದು ಪ್ರಶ್ನಿಸಿದರು. ತಕ್ಷಣ ಹೊರಹೋದ ಹೆಡ್‌ಮಾಸ್ಟರ್ ಯಾರನ್ನೋ ಕೂಗಿ, ಬೀಗದ ಕೈಗಳನ್ನು ತರಲು ಹೇಳಿದರು. ಆ ಲೈಬ್ರರಿಯ ಮೂಲೆಯಲ್ಲಿದ್ದ ಕಪಾಟಿನಲ್ಲಿದ್ದ ಪುಸ್ತಕಗಳು ಕೊನೆಗೂ ಹೊರಬಂದವು.

‘‘ನಮ್ಮಲ್ಲಿ ಕೆಲವೇ ಕೆಲವು ಪುಸ್ತಕಗಳು ಇವೆ. ಅದನ್ನು ಮಕ್ಕಳ ಕೈಗೆ ಕೊಟ್ಟು ಹಾಳು ಮಾಡುವುದು ಸರಿಯಲ್ಲ ಎಂದು ಕಪಾಟಿನಲ್ಲಿ ಭದ್ರವಾಗಿ ಇಟ್ಟಿದ್ದೇವೆ’’ ಎಂಬ ವಿವರಣೆ. ಮುಖ್ಯೋಪಾಧ್ಯಯರ ಕೈಯಿಂದ ಕಪಾಟಿನಲ್ಲಿದ್ದ ಕೆಲವು ಪುಸ್ತಕಗಳನ್ನು ತೆಗೆದು ತೋರಿಸುವಂತೆ ಜಾನ್ ಕೇಳಿಕೊಂಡರು. ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಮತ್ತು ಆ ಪುಸ್ತಕಗಳಿಗೂ ಯಾವುದೇ ಸಂಬಂಧ ಇರಲಿಲ್ಲ. ಪುಸ್ತಕಗಳೇ ಇಲ್ಲದ ಆ 450 ಪುಟಾಣಿಗಳ ಬದುಕು! ಜಾನ್‌ಗೆ ಊಹಿಸಲು ಸಾಧ್ಯವಾಗಲಿಲ್ಲ.

ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡ ಮುಖ್ಯೋಪಾಧ್ಯಾಯರು, ‘‘ನಮಗೂ ಪುಸ್ತಕಗಳ ಮೂಲಕ ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಮಹದಾಸೆಯಿದೆ. ಆದರೆ, ಅಗತ್ಯವಾದ ಪುಸ್ತಕಗಳನ್ನು ಖರೀದಿಸುವ ಆರ್ಥಿಕ ಸ್ವಾತಂತ್ರ್ಯ ಇಲ್ಲ’’ ಎಂದು ನೋವು ತೋಡಿಕೊಂಡರು. ‘ಈ ಶಾಲೆಗೆ ನಾನು ಯಾವ ರೀತಿ ಸಹಾಯ ಮಾಡಬಹುದು?’ ಎಂಬ ಜಾನ್ ಮನದಲ್ಲಿದ್ದ ಪ್ರಶ್ನೆಗೆ, ಅವರೇ ‘‘ಹೆಚ್ಚಿನ ಪಕ್ಷ ಮುಂದೊಮ್ಮೆ ನೀವು ಒಂದಿಷ್ಟು ಪುಸ್ತಕಗಳನ್ನು ತಂದು ನಮ್ಮ ಶಾಲೆಗೆ ನೀಡಬಹುದು’’ ಎಂದರು.

ಅದು ಸಾಧ್ಯ ಎಂದೆನಿಸಿದ ಮೇಲೆ ಜಾನ್ ಮನದಲ್ಲಿ – ನನ್ನ ಹುಟ್ಟೂರು ಅಮೆರಿಕ, ನೆಲಸಿರುವುದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ. ಇಂಗ್ಲಿಷ್ ಪುಸ್ತಕ ಇಲ್ಲಿ ಉಪಯೋಗಕ್ಕೆ ಬರಹುದೇ? ಎಂತಹ ಪುಸ್ತಕಗಳು ಈ ಶಾಲೆಗೆ ಉಪಯೋಗವಾಗುತ್ತದೆ? ಹುಟ್ಟಿದ ಪ್ರಶ್ನೆಗಳಿಗೆ ಅಲ್ಲಿನ ಶಿಕ್ಷಕರ ಬಳಿ ಉತ್ತರವಿದ್ದವು. ಏನೇ ಆಗಲಿ ಪುಸ್ತಕಗಳನ್ನು ಸಂಗ್ರಹಿಸಿ ಈ ಶಾಲೆಗೆ ತಂದು ಕೊಡಬೇಕು ಎಂಬ ನಿರ್ಧಾರಕ್ಕೆ ಬಂದ ಜಾನ್, ‘‘ನಿಮ್ಮನ್ನು ಮತ್ತೆ ಬಂದು ಖಂಡಿತ ಭೇಡಿ ಮಾಡುತ್ತೇನೆ’’ ಎಂದು ಪಶುಪತಿ, ಮುಖ್ಯೋಪಾಧ್ಯಾಯರು ಮತ್ತು ಅಲ್ಲಿದ್ದ ಎಲ್ಲರಿಗೂ ಮಾತು ನೀಡಿ ಟ್ರೆಕ್ಕಿಂಗ್ ಮುಂದುವರಿಸಿದರು.

ಮುಂದಿನ ಮೂರು ವಾರ ಬಹುಂದಾಂದಾ ಶಾಲೆಯ ಲೈಬ್ರರಿಯ ಕನಸಿನ ಮೇಲೆಯೇ ಅನ್ನಪೂರ್ಣೆಯ ಮಡಿಲಲ್ಲಿ ಹೆಜ್ಜೆ ಹಾಕಿದ ಜಾನ್ ಪೋಖ್ರಾ ತಲುಪಿದಾಗ ದೈಹಿಕವಾಗಿ ಬಳಲಿಹೋಗಿದ್ದರು. ಸುಮಾರು ಮೂರು ವಾರಗಳ ಅವಧಿಯಲ್ಲಿ 250 ಕಿಲೋ ಮೀಟರ್ ಟ್ರೆಕ್ಕಿಂಗ್. ಅದೂ ಅನ್ನಪೂರ್ಣ ಶಿಖರಗಳ ತಪ್ಪಲಲ್ಲಿ, ಸುಲಭದ ಮಾತಲ್ಲ. ಅದೂ ಹೊರ ಜಗತ್ತಿನ ನಡುವೆ ಯಾವುದೇ ಸಂಪರ್ಕ ಇಲ್ಲದೇ! ಫೋನಿಲ್ಲ. ಮೊಬೈಲ್ ಇಲ್ಲ. ಇಂಟರ್‌ನೆಟ್ ಇಲ್ಲ. ದಿನಪತ್ರಿಕೆ ಕೂಡ ಇಲ್ಲ! ಆ ಬಳಲಿಕೆಯ ನಡುವೆಯೇ ಮರಳಿ ಪೋಖ್ರಾದಿಂದ ಬಸ್‌ನಲ್ಲಿ ಕಠ್ಮಂಡು ತಲುಪಿದ ಜಾನ್ ಮಾಡಿದ ಮೊದಲ ಕೆಲಸ ಸೈಬರ್ ಕೆಫೆ ಹುಡುಕಿದ್ದು.

ಹಾಟ್‌ಮೇಲ್ ತೆರೆದು ಅದರಲ್ಲಿ ನೂರು ಸ್ನೇಹಿತರನ್ನು ಹುಡುಕಿ, ಎಲ್ಲರನ್ನೂ ಉದ್ದೇಶಿಸಿ ಪುಸ್ತಕಗಳ ದಾನ ಮತ್ತು ಅದರಿಂದ ನೇಪಾಳದ ಹಳ್ಳಿಯೊಂದರ ಶಾಲಾ ವಿದ್ಯಾರ್ಥಿಗಳಿಗೆ ಆಗುವ ಅನುಕೂಲದ ಬಗ್ಗೆ ದೀರ್ಘ ಈ–ಅಂಚೆ ಸಿದ್ಧ ಮಾಡಿದರು. ಆ ಪತ್ರದ ಕೊನೆಯಲ್ಲಿ ಅಮೆರಿಕ (ತಂದೆ–ತಾಯಿ ಇದ್ದ ವಿಳಾಸ) ಮತ್ತು ಆಸ್ಟ್ರೇಲಿಯಾ ವಿಳಾಸ ನೀಡಿ ಪುಸ್ತಕಗಳನ್ನು ಕಳುಹಿಸಲು ಮನವಿ ಮಾಡಿಕೊಂಡು ಸೆಂಡ್ ಬಟನ್ ಒತ್ತಿದರು.

ಮರುದಿನ ನೇಪಾಳದಿಂದ ಸಿಡ್ನಿಯತ್ತ ಪಯಣ. ಮರಳಿ ‘ಮೈಕ್ರೋಸಾಫ್ಟ್’ ಮಡಿಲು ಸೇರಿದ ಮೇಲೆ ಬ್ಯುಸಿನೆಸ್ ಜಂಜಡದಲ್ಲಿ ಮುಳುಗಿಹೋದ ಜಾನ್ ಅವರನ್ನು ಎಚ್ಚರಿಸಿದ್ದು ತಂದೆ ವೂಡಿ ಕೊಲರಾಡೊದಿಂದ ‘ಈ ಕೂಡಲೇ ಮರಳಿ ಮನೆಗೆ ಬಾ!’ ಎಂದು ಕಳುಹಿಸಿದ ಈ–ಅಂಚೆ. ಜಾನ್ ಅವರ ಪುಸ್ತಕ ದಾನದ ಈ–ಅಂಚೆಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿತ್ತು. ಕೇವಲ ಎರಡು ವಾರಗಳ ಅವಧಿಯಲ್ಲಿ ಅಮೆರಿಕದ ವಿಳಾಸಕ್ಕೆ ಬಂದು ತಲುಪಿದ ಪುಸ್ತಕಗಳ ಸಂಖ್ಯೆ 3000 ದಾಟಿ, ಮನೆಯಲ್ಲಿ ಜಾಗ ಕೂಡ ಇಲ್ಲದಂತಾಗಿತ್ತು!

ಆರು ವಾರಗಳ ನಂತರ ಜಾನ್ ಕೊಲರಾಡೊ ತಲುಪಿದ ಮೇಲೆ, ಈ ಪುಸ್ತಕಗಳನ್ನು ನೇಪಾಳಕ್ಕೆ ತಲುಪಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಯಿತು. ವೂಡಿ, ನೇಪಾಳದ ಲಯನ್ಸ್ ಕ್ಲಬ್ ಸಂಪರ್ಕಿಸಿದಾಗ ಅಲ್ಲಿನ ಪದಾಧಿಕಾರಿ ದಿನೇಶ್ ಶ್ರೇಷ್ಠ ‘‘ಆ ಜವಾಬ್ದಾರಿ ನಮ್ಮದು’’ ಎಂಬ ಭರವಸೆ ನೀಡಿದರು. 1999ರ ಮಾರ್ಚ್‌ನಲ್ಲಿ ಪುಸ್ತಕಗಳು ಕಠ್ಮಂಡು ತಲುಪಿದವು. ಬೆನ್ನಹಿಂದೆಯೇ ವೂಡಿ ಮತ್ತು ಜಾನ್!

ನಾಲ್ಕು ಸಾವಿರ ಪುಸ್ತಕಗಳನ್ನು ಬಹುಂದಾಂದಾ ಶಾಲೆಗೆ ತಲುಪಿಸುವುದು ಹೇಗೆ? ಕೊನೆಗೆ ಹತ್ತು ಹೇಸರಗತ್ತೆಗಳ ಬೆನ್ನಮೇಲೆ ಪುಸ್ತಕಗಳಿದ್ದ ಬಾಕ್ಸ್‌ಗಳನ್ನು ಹೇರಿ ಬಹುಂದಾಂದಾ ತಲುಪಿದ ತಂದೆ–ಮಗ ಅಲ್ಲಿ ನೆರೆದಿದ್ದವರ ಸಮ್ಮುಖದಲ್ಲಿ ಶಾಲೆಯ ಲೈಬ್ರರಿಯಲ್ಲಿ ಜ್ಞಾನದ ಬೆಳಕು ತುಂಬಿಸಿದರು. ಆ ಸಂದರ್ಭದಲ್ಲಿ ಬಹುಂದಾಂದಾ ಹಳ್ಳಿ ಸಂಭ್ರಮಿಸಿದ ರೀತಿ ಜಾನ್ ಬದುಕಿಗೆ ತಿರುವು ನೀಡಿತು.

ಎರಡು ದಿನಗಳ ನಂತರ ಕಠ್ಮಂಡು ತಲುಪಿದ ಜಾನ್, ತಂದೆ ವೂಡ್ ಬಳಿ, ‘‘ಪುಸ್ತಕಗಳನ್ನೇ ಕಾಣದ ಜಗತ್ತಿನಲ್ಲಿರುವ ಎಲ್ಲ ಮಕ್ಕಳ ಕೈಗೆ ಪುಸ್ತಕ ಸಿಗುವಂತೆ ಮಾಡಿದರೆ!?’’ ಎಂಬ ಪ್ರಶ್ನೆ ಕೇಳಿದರು. ‘‘ನೀನು ಅದೇ ಕೆಲಸ ಮಾಡಬಹುದಲ್ಲಾ?’’ ಎಂಬ ಉತ್ಸಾಹದ ಬೆಂಬಲ ಸಿಕ್ಕಿತು. ಮರುದಿನ ಮುಂಜಾನೆ ಜಾನ್, ಅಲ್ಲಿನ ಬೌದ್ಧ ದೇಗುಲದಲ್ಲಿ ಧ್ಯಾನ ಮಾಡುತ್ತಾ ಕುಳಿತಿದ್ದಾಗ, ‘ನೀನು ಉದ್ಯೋಗ ಮಾಡುತ್ತಿರುವುದರಿಂದ ಸಮಾಜಕ್ಕೆ ಆಗುತ್ತಿರುವ ಲಾಭವೇನು? ಈಗಾಗಲೇ ಶ್ರೀಮಂತಿಕೆಯಿಂದ ತುಂಬಿ ತುಳುಕುತ್ತಿರುವ ಮೈಕ್ರೋಸಾಫ್ಟ್ ಕಂಪೆನಿಯನ್ನು ನೀನು ಇನ್ನಷ್ಟು ಶ್ರೀಮಂತವಾಗಿಸುತ್ತಿದ್ದೀಯ. ಜೊತೆಗೆ ನೀನು ಸಿರಿವಂತ ಜೀವನ ಸಾಗಿಸುತ್ತಿದ್ದೀಯ. ನೀನು ಈ ಕೆಲಸ ಬಿಟ್ಟರೆ ಆ ಜಾಗಕ್ಕೆ ಬರಲು ಸಾವಿರ ಮಂದಿ ಕಾದಿರುತ್ತಾರೆ.

ಅಕಸ್ಮಾತ್ ನಿನ್ನ ಅಂತರಂಗದಲ್ಲಿರುವಂತೆ ಜಗತ್ತಿನ ಪ್ರತಿಯೊಂದು ಮಗುವಿಗೆ ಕೂಡ ಪುಸ್ತಕ ಸಿಗುವಂತೆ ಮಾಡಲು ಯಾರೂ ಸಾಲಿನಲ್ಲಿ ನಿಂತಿಲ್ಲ’. ಆ ಭಾವನೆಗಳು ಪ್ರತಿಧ್ವನಿಸಿದ ಮರುಕ್ಷಣ ಜಾನ್ ಮಾನಸಿಕವಾಗಿ ‘ಮೈಕ್ರೋಸಾಫ್ಟ್‌’ಗೆ ವಿದಾಯ ಹೇಳಿಯಾಗಿತ್ತು!

ಸಿಡ್ನಿಗೆ ಮರಳಿದ ಮೇಲೆ ಅನಿವಾರ್ಯವಾಗಿ ಚೀನಾದ ಬೀಜಿಂಗ್‌ಗೆ ತೆರಳಿ ಅಲ್ಲಿ ಕಂಪೆನಿಯ ಆರಂಭದ ಹೆಜ್ಜೆಗಳನ್ನು ಮೂಡಿಸಿದ ಜಾನ್ ಕೆಲವು ತಿಂಗಳು ಗೊಂದಲದ ‘ಬಿಡಬೇಕೆ? ಬೇಡವೇ?’ ನಡುವೆ ಬದುಕಿದರು. ಆ ನಡುವೆ ‘ಮೈಕ್ರೋಸಾಫ್ಟ್’ ಸಿಇಒ ಬಿಲ್ ಗೇಟ್ಸ್ ಕೂಡ ಚೀನಾಗೆ ಬಂದುಹೋದರು. ಜಾನ್ ಪಾಲಿಗೆ ಇದು ಕೇವಲ ‘ಮೈಕ್ರೋಸಾಫ್ಟ್‌’ನಿಂದ ಬಿಡುಗಡೆಯಾಗಿರಲಿಲ್ಲ. ಆರು ವರ್ಷಗಳಿಂದ ಜೊತೆಗೆ ಜೀವನ ಸಾಗಿಸುತ್ತಿದ್ದ, ಭಾವಿ ಪತ್ನಿಯಾಗಬೇಕಿದ್ದ ಸೋಫಿ ಜೊತೆಗಿನ ಸಂಬಂಧ ಕೂಡ ಅಂತ್ಯವಾಗಿತ್ತು.

ಆ ಎಲ್ಲ ಬಂಧಗಳಿಂದ ಬಿಡುಗಡೆ ಪಡೆದ ಜಾನ್, ನೇಪಾಳದ ಗೆಳೆಯ ದಿನೇಶ್ ಶ್ರೇಷ್ಠ ಮತ್ತು ಎರಿನ್ ಗಂಜು ಜೊತೆ ಸೇರಿ 2001ರಲ್ಲಿ ಸ್ಥಾಪಿಸಿದ ‘ರೂಂ ಟು ರೀಡ್’ ಕಳೆದ ಹದಿನೈದು ವರ್ಷಗಳಲ್ಲಿ 1 ಕೋಟಿ 60 ಲಕ್ಷ ಪುಸ್ತಕಗಳನ್ನು ಮಕ್ಕಳ ಕೈತಲುಪಿಸಿದೆ. 18,000 ಲೈಬ್ರರಿಗಳನ್ನು ಸ್ಥಾಪಿಸಿದೆ. 2,400 ಶಾಲಾ ಕಟ್ಟಡಗಳ ಪುನರುಜ್ಜೀವನ ಮಾಡಿದೆ. ನೇಪಾಳದ ಬಹುಂದಾಂದಾದಲ್ಲಿ ಹೊತ್ತಿದ ಆ ಹಣತೆ ಇಂದು ಭಾರತ, ಬಾಂಗ್ಲಾದೇಶ, ಕಾಂಬೋಡಿಯ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ತಾಂಜಾನಿಯ, ವಿಯಟ್ನಾಂ, ಜಾಂಬಿಯ ಮತ್ತು ಲಾವೊಸ್‌ನಲ್ಲಿ ಜ್ಞಾನದ ಬೆಳಕನ್ನು ಪಸರಿಸುತ್ತಿದೆ.

ಸುಮಾರು ಆರು ವರ್ಷಗಳಿಂದ ಸಂಪರ್ಕದಲ್ಲಿರುವ ಜಾನ್ ನನ್ನ ಬಳಿ ಸದಾ ಹೇಳುವುದು, ‘‘ಸ್ಯಾಟ್, ಮನುಷ್ಯ ತನ್ನ ಹೃದಯದ ಮಾತನ್ನು ಕೇಳಬೇಕು. ಸಾಮಾನ್ಯವಾಗಿ ಎಲ್ಲರೂ ಮನಸ್ಸಿನ ಮಾತನ್ನು ಕೇಳಿ ಸಂದರ್ಭಕ್ಕೆ ತಕ್ಕಂತೆ ಬದುಕು ರೂಪಿಸಿಕೊಂಡು ಮುಂದೆ ಹೋಗುತ್ತಾರೆ. ಆದರೆ, ಹೃದಯದ ಮಾತು ಕೇಳುವ ಕೆಲವೇ ಕೆಲವರು ತಮ್ಮದೇ ಹಾದಿಯನ್ನು ರೂಢಿಸಿಕೊಂಡು ಈ ಜಗತ್ತಿನ ಮೇಲೆ ಯಾರೂ ಬೀರದ ಪ್ರಭಾವ ಬೀರುವಲ್ಲಿ ಯಶಸ್ವಿಯಾಗುತ್ತಾರೆ. ನೀನು ಏನಾಗಬಹುದು ಮತ್ತು ಏನಾಗಬೇಕು ಎನ್ನುವುದು ನಿನ್ನ ಕೈಯಲ್ಲಿದೆ’’.

ಈ ಬರವಣಿಗೆ ಮುಗಿಸುವ ಮೊದಲು ಈ–ಅಂಚೆ ಪೆಟ್ಟಿಗೆ ತಲುಪಿದ ಜಾನ್ ವೂಡ್ ಕೊನೆಯ ಸಂದೇಶದಲ್ಲಿ, “2020ರೊಳಗೆ 1 ಕೋಟಿ 50 ಲಕ್ಷ ಮಕ್ಕಳ ಬದುಕಿನ ಮೇಲೆ ಪ್ರಭಾವ ಬೀರುವುದು ನಮ್ಮ ಗುರಿ’’ ಎಂಬ ಸಂದೇಶವಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT