ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚತುರ ವ್ಯಾಪಾರಿ ಮುಕೇಶ್

Last Updated 3 ಸೆಪ್ಟೆಂಬರ್ 2016, 20:21 IST
ಅಕ್ಷರ ಗಾತ್ರ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಮುಖ್ಯಸ್ಥ ಮುಕೇಶ್ ಅಂಬಾನಿ, ರಿಲಯನ್ಸ್ ಜಿಯೊ (ಆರ್‌ಜಿಯೊ) ಎಂಬ ಹೆಸರಿನಲ್ಲಿ ಮೊಬೈಲ್ ಸೇವಾ ರಂಗ ಪ್ರವೇಶಿಸಿದ್ದಾರೆ. ಅವರು ಪ್ರಕಟಿಸಿರುವ ಹಿಂದೆಂದೂ ಕಂಡು ಕೇಳರಿಯದ ಕೊಡುಗೆಗಳು ಭಾರಿ ಮಾಧ್ಯಮ ಪ್ರಚಾರದ ನೆರವಿನೊಂದಿಗೆ ಮೊಬೈಲ್ ಗ್ರಾಹಕರಲ್ಲಿ ಸಂಚಲನ ಮೂಡಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆ ಮತ್ತು ಮೋದಿ ಅವರ ಜನಪ್ರಿಯತೆಗಳೆರಡನ್ನೂ ನಗದೀಕರಿಸಿಕೊಳ್ಳುವ ಮಹತ್ವಾಕಾಂಕ್ಷಿ ಯೋಜನೆ ಆರ್‌ಜಿಯೊ ಎಂಬುದು ಆರಂಭದಲ್ಲಿಯೇ ನಿಚ್ಚಳವಾಗಿದೆ. ಕೆಲವು ರಾಷ್ಟ್ರೀಯ ಪತ್ರಿಕೆಗಳ ಇಡೀ ಮುಖಪುಟದಲ್ಲಿ ಮೋದಿ ಅವರ ಚಿತ್ರದೊಂದಿಗೆ ಪ್ರಕಟವಾಗಿರುವ ಜಿಯೊ ಜಾಹೀರಾತಿಗೆ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿವೆ. ಆದರೆ, ಗಣೇಶ ಚತುರ್ಥಿಯಂದು ಮಾರುಕಟ್ಟೆ ಪ್ರವೇಶಿಸುವ ಜಿಯೊ ಒಂದು ವರ್ಷದೊಳಗೆ ಕನಿಷ್ಠ 10 ಕೋಟಿ ಗ್ರಾಹಕರನ್ನು ಪಡೆಯಬೇಕು ಎಂಬುದು ಮುಕೇಶ್ ಲೆಕ್ಕಾಚಾರ.

ಜಿಯೊ ಅಮಿತ ಕೊಡುಗೆಗಳ ಗಂಟು ಬಿಚ್ಚುತ್ತಾ ಸಾಗಿದರೆ ಹಲವು ಮಿತಿಗಳೂ ಕಾಣಿಸುತ್ತವೆ. ಜಿಯೊ ಉಚಿತ ಪರ್ವ ಕೊನೆಗೊಂಡ ನಂತರ ಮುಂದಿನ ಜನವರಿಯಿಂದ ರಾತ್ರಿ ಮೊಬೈಲ್ ಡಾಟಾ ಉಚಿತ ಎಂದು ಮುಕೇಶ್ ಘೋಷಿಸಿದ್ದಾರೆ. ದೊಡ್ಡ ಕಂಪೆನಿಯೊಂದರ ಹೊಸ ವಾಣಿಜ್ಯ ಉಪಕ್ರಮಕ್ಕೆ ಎಷ್ಟು ಪ್ರಚಾರ ಸಿಗಬೇಕೋ ಅದರ ಎಷ್ಟೋ ಹೆಚ್ಚು ಪಾಲು ಪ್ರಚಾರ ಈ ಉಚಿತ ಮತ್ತು ಕಡಿಮೆ ಬೆಲೆಯ ಪ್ರಕಟಣೆಗಳಿಗೆ ಸಿಕ್ಕಿದೆ. ಆದರೆ ಈಗ ಬೆಳಗಿನ ಜಾವ 2ರಿಂದ 5 ಗಂಟೆವರೆಗೆ ಮಾತ್ರ ರಾತ್ರಿ ಎಂದು ಜಿಯೊ ವ್ಯಾಖ್ಯಾನಿಸಿದೆ.

ಜಿಯೊ ಯೋಜನೆಗೆ ಒಂದೂವರೆ ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಉದ್ದೇಶಿಸಿರುವ ಮುಕೇಶ್, ಮೊಬೈಲ್ ಡೇಟಾಗಷ್ಟೇ ಹಣ ಕೊಡಿ, ದೂರವಾಣಿ ಕರೆ ಸಂಪೂರ್ಣ ಉಚಿತ ಎಂದಿದ್ದಾರೆ. 

ರಿಲಯನ್ಸ್‌ಗೆ ಸಂಬಂಧಿಸಿದಂತೆ ಡೇಟಾ ಎಂಬುದು ಹೊಸ ತೈಲ, ಚತುರ ಡೇಟಾ ಎಂಬುದು ಹೊಸ ಪೆಟ್ರೋಲ್ ಎಂದು ಮುಕೇಶ್ ಮಾರ್ಚ್‌ನಲ್ಲಿ ಹೇಳಿದ್ದರು. ಇದು ನಿಜವೂ ಹೌದು. 1981ರಲ್ಲಿ ಅಪ್ಪನಿಗೆ ಉದ್ಯಮ ವಿಸ್ತರಣೆಗೆ ನೆರವಾಗುವುದಕ್ಕಾಗಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಎಂಬಿಎ ವ್ಯಾಸಂಗವನ್ನು ಅರ್ಧದಲ್ಲಿ ಬಿಟ್ಟು ಭಾರತಕ್ಕೆ ಬಂದ ಮುಕೇಶ್ ತ್ವರಿತವಾಗಿ ಬೆಳೆಯುತ್ತಿದ್ದ ರಿಲಯನ್ಸ್‌ನ ಬೆಳವಣಿಗೆಗೆ ತೈಲದಂತೆ ಕೆಲಸ ಮಾಡಿದ್ದಾರೆ. 1999ರಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್ ಆರಂಭಿಸಿದ ರಿಲಯನ್ಸ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್‌ ಇಂದು ಜಗತ್ತಿನ ಅತ್ಯಂತ ದೊಡ್ಡ ತೈಲ ಸಂಸ್ಕರಣ ಘಟಕ. ಈ ಉದ್ಯಮವನ್ನು ಈ ಮಟ್ಟಕ್ಕೆ ಬೆಳೆಸಲು ಮುಕೇಶ್ ತಮ್ಮನ್ನೇ ಅದಕ್ಕೆ ಸಮರ್ಪಿಸಿಕೊಂಡಿದ್ದರು. ರಿಲಯನ್ಸ್ ಸಮೂಹದ ಮೂಲಕ ಮುಕೇಶ್ ಕಂಡ ನಂತರದ ಕನಸು ರಿಲಯನ್ಸ್ ಇನ್ಫೊಕಾಂ ಎಂಬ ದೂರಸಂಪರ್ಕ ಯೋಜನೆ.

2005ರಲ್ಲಿ ರಿಲಯನ್ಸ್ ಸಾಮ್ರಾಜ್ಯ ಇಬ್ಭಾಗವಾದಾಗ ಮುಕೇಶ್ ಅವರ ನೆಚ್ಚಿನ ರಿಲಯನ್ಸ್ ಇನ್ಫೊಕಾಂ ಸಹೋದರ ಅನಿಲ್ ಅಂಬಾನಿ ಪಾಲಾಯಿತು. ಯೋಚನೆಗಳು ಯಾರದೇ ಏಕಸ್ವಾಮ್ಯವಲ್ಲ- ದೊಡ್ಡದಾಗಿ ಯೋಚನೆ ಮಾಡಿ, ವೇಗವಾಗಿ ಯೋಚನೆ ಮಾಡಿ, ಕಾಲಕ್ಕಿಂತ ಮುಂದೆ ಹೋಗಿ ಯೋಜನೆ ರೂಪಿಸಿ ಎಂಬ ಅಪ್ಪ ಧೀರೂಬಾಯಿ ಅಂಬಾನಿ ಅವರ ಮಾತನ್ನು ಗಟ್ಟಿಯಾಗಿ ನಂಬಿರುವ ಮುಕೇಶ್ ಈಗ ತಮ್ಮ ನೆಚ್ಚಿನ ಕನಸನ್ನು ಇನ್ನಷ್ಟು ದೊಡ್ಡದಾಗಿಸಿ ಭಾರತದ ಮುಂದಿಟ್ಟಿದ್ದಾರೆ. ಕಾಲಕ್ಕಿಂತ ಬಹಳ ಮುಂದೆ ಹೋಗಿ ಯೋಚನೆ ಮಾಡಿ ದೂರವಾಣಿ ಕರೆಯನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ. ಡೇಟಾಕ್ಕೆ ಮಾತ್ರ ಹಣ ಕೊಟ್ಟರೆ ಸಾಕು ಎಂದಿದ್ದಾರೆ.

ಕರೆಗಳು ಅಪ್ರಸ್ತುತವಾಗುವ, ಎಲ್ಲ ವ್ಯವಹಾರಗಳೂ ಡೇಟಾ ಮೂಲಕ ನಡೆಯುವ ದಿನ ದೂರವಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ. ಹಲವು ಶ್ರೀಮಂತ ದೇಶಗಳಲ್ಲಿ ಇದು ಈಗಾಗಲೇ ಇರುವ ಪ್ರವೃತ್ತಿ. ಜತೆಗೆ ಕರೆಗಳು ಡೇಟಾ ಪ್ಲ್ಯಾನ್‌ನ ಭಾಗವಾಗಿರುವುದರಿಂದ ಅದಕ್ಕೊಂದು ದರ ಇದ್ದೇ ಇರುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಯಾರ ನಿಲುಕಿಗೂ ಸಿಗದ ಅಪಾರ ಮಾಹಿತಿ ಇದೆ. ಮಾಹಿತಿಯ ಖಾಸಗಿತನದ ಬಗ್ಗೆ ಹೆಚ್ಚೇನನ್ನೂ ಈವರೆಗೆ ಯೋಚನೆ ಮಾಡದ ಈ ದೇಶದಲ್ಲಿ ಈ ಮಾಹಿತಿಯ ಬಳಕೆ ಜಿಯೊದ ದೂರಗಾಮಿ ಚಿಂತನೆ.

ವ್ಯಾಪಾರವನ್ನೇ ಉಸಿರಾಡುವ ಮುಕೇಶ್ ಹುಟ್ಟಿದ್ದು 1957ರ ಏಪ್ರಿಲ್ 19ರಂದು ಯೆಮನ್‌ನ ಏಡನ್‌ನಲ್ಲಿ. ಅಪ್ಪ ಧೀರೂಬಾಯಿ ಅಂಬಾನಿ ಆಗ ಅಲ್ಲಿ ಷೆಲ್ ತೈಲ ಸಂಸ್ಕರಣ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಭಾರತಕ್ಕೆ ಮರಳಿದ ಧೀರೂಭಾಯಿ ಮುಂಬೈನ ಭುಲೇಶ್ವರದ ಒಂದು ಕೋಣೆಯ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಕುಟುಂಬ ಬಹಳ ಕಾಲ ಅಲ್ಲಿ ನೆಲೆಸಿತ್ತು. ಈಗ ಮುಕೇಶ್ ತಮ್ಮ ಪತ್ನಿ ನೀತಾ, ಮಕ್ಕಳಾದ ಇಷಾ, ಅನಂತ್ ಮತ್ತು ಆಕಾಶ್ ಜತೆಗೆ ವಾಸಿಸುತ್ತಿರುವ ಜಗತ್ತಿನ ಅತ್ಯಂತ ದುಬಾರಿ ಮನೆಯ ಮೌಲ್ಯ ಏಳು ಸಾವಿರ ಕೋಟಿ ರೂಪಾಯಿಗೂ ಹೆಚ್ಚು.
ಪ್ರಚಾರದಿಂದ ದೂರವೇ ಉಳಿಯಲು ಬಯಸುವ ಮತ್ತು ಸದಾ ವ್ಯಾಪಾರವನ್ನೇ ಧ್ಯಾನಿಸಲು ಬಯಸುವ ಮುಕೇಶ್ ಮನೆಯ ಬಗ್ಗೆ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆದಿದೆ.

ಅಧಿಕಾರದಲ್ಲಿರುವವರಿಗೆ ಹತ್ತಿರವಾಗುವ ಮೂಲಕ ತನಗೆ ಬೇಕಾದ್ದನ್ನು ರಿಲಯನ್ಸ್ ಸಮೂಹ ಮಾಡಿಸಿಕೊಳ್ಳುತ್ತದೆ ಎಂಬ ಆರೋಪ ಧೀರೂಭಾಯಿ ಅವರ ಕಾಲದಿಂದಲೂ ಇದೆ. 1960ರ ದಶಕದಲ್ಲಿ ಪಾಲಿಯೆಸ್ಟರ್ ತಯಾರಿಕಾ ಪರವಾನಗಿ ನೀಡಲು ಇಂದಿರಾ ಗಾಂಧಿ ಸರ್ಕಾರ ನಿರ್ಧರಿಸಿದಾಗ ಟಾಟಾ, ಬಿರ್ಲಾಗಳಂತಹ ದೊಡ್ಡ ಸಮೂಹಗಳ ಸ್ಪರ್ಧೆಯನ್ನು ಹಿಮ್ಮೆಟ್ಟಿಸಿ ಧೀರೂಭಾಯಿ ಪರವಾನಗಿ ಪಡೆದುಕೊಂಡಿದ್ದರು. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ, ರಿಲಯನ್ಸ್ ರಿಫೈನರಿಯಿಂದ ಪೂರೈಸಲಾಗುವ ಅನಿಲದ ಬೆಲೆ ನಿಗದಿಯಲ್ಲಿ ಭ್ರಷ್ಟಾಚಾರ ನಡೆದಿದೆ, ರಿಲಯನ್ಸ್ ಕಂಪೆನಿಗೆ ಭಾರಿ ಲಾಭ ಮಾಡಿಕೊಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿರಂತರವಾಗಿ ಆರೋಪಿಸುತ್ತಲೇ ಬಂದಿದ್ದಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಅಣ್ಣ ತಮ್ಮಂದಿರಾದ ಮುಕೇಶ್ ಮತ್ತು ಅನಿಲ್ ಬಡಿದಾಡುತ್ತಿದ್ದ ಸಂದರ್ಭದಲ್ಲಿ, ಸರ್ಕಾರ ಮುಕೇಶ್ ಪರವಾಗಿ ನಿಂತಿದೆ ಎಂದು ಅನಿಲ್ ಕೂಡ ಆರೋಪಿಸಿದ್ದರು.

ಇಂತಹ ಯಾವುದೇ ಆರೋಪ ಮುಕೇಶ್ ಅವರನ್ನು ವಿಚಲಿತರನ್ನಾಗಿಸಿಲ್ಲ. ಸತತ ಆರನೇ ವರ್ಷ ಅವರು ಭಾರತದ ಅತ್ಯಂತ ಸಿರಿವಂತ ವ್ಯಕ್ತಿಯಾಗಿ ಮುಂದುವರಿದಿದ್ದಾರೆ. ಅವರ ಈಗಿನ ಆಸ್ತಿಯ ಮೌಲ್ಯ 1.8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು. ಅವರ ನೇತೃತ್ವದ ರಿಲಯನ್ಸ್ ಸಮೂಹ ದೇಶದ ಎರಡನೇ ಅತ್ಯಂತ ದೊಡ್ಡ ಕಂಪೆನಿ. ಹೊಸ ಮತ್ತು ದೊಡ್ಡ ಕನಸುಗಳ ಮೂಲಕ ಇದು ಇನ್ನಷ್ಟು ಬೆಳೆಯುತ್ತಲೇ ಹೋಗಬಹುದು. ಯಾಕೆಂದರೆ ಭಾರತದ ಉದ್ಯಮ ರಂಗದ ದಂತಕತೆ ಧೀರಜ್‌ಲಾಲ್ ಹೀರಾಚಂದ್ ಅಂಬಾನಿ ಅವರಂತೆಯೇ ಮಗ ಮುಕೇಶ್ ಕೂಡ ಚತುರ ವ್ಯಾಪಾರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT