ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ನಾಶ ತಡೆ ರಾಜಕೀಯ ನಾಯಕರ ಕರ್ತವ್ಯ

Last Updated 3 ಸೆಪ್ಟೆಂಬರ್ 2016, 20:22 IST
ಅಕ್ಷರ ಗಾತ್ರ

ಮಲೆನಾಡಿನ ತಪ್ಪಲಿನಲ್ಲಿರುವ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಅಶೀಸರ ಗ್ರಾಮದ ಅನಂತ ಹೆಗಡೆ ಅವರದು ಪರಿಸರ ಸಂರಕ್ಷಣೆ ಹೋರಾಟಗಳಲ್ಲಿ ಮೂರು ದಶಕಗಳ ಅನುಭವ.

1983ರಲ್ಲಿ ಸಾಗರದಲ್ಲಿ ನಡೆದ ವೃಕ್ಷ ಸಂರಕ್ಷಿಸಿ ಆಂದೋಲನದಿಂದ ಪ್ರೇರಿತರಾಗಿ ಹೋರಾಟಕ್ಕೆ ಧುಮುಕಿದ ಅವರು ಏಕಜಾತಿ ನೆಡುತೋಪು ನಾಟಿ, ಯಲ್ಲಾಪುರ ತಾಲ್ಲೂಕು ಬಿಸಗೋಡಿನ ಗಣಿಗಾರಿಕೆ, ಕೈಗಾ ಅಣು ವಿದ್ಯುತ್ ಸ್ಥಾವರ, ಶರಾವತಿ ಟೇಲರೇಸ್ ಜಲ ವಿದ್ಯುತ್‌ನಂಥ ಅರಣ್ಯ ನಾಶದ ಯೋಜನೆಗಳ ವಿರುದ್ಧ ದನಿ ಎತ್ತಿದವರು.

ಕೇಂದ್ರ ಸರ್ಕಾರದ ಕಪಾರ್ಟ್‌ ವಾಟರ್‌ಶೆಡ್ ಸಮಿತಿ ಸದಸ್ಯರಾಗಿ ಅಣ್ಣಾ ಹಜಾರೆ ಅವರ ಜೊತೆಗಿನ ಮೂರು ವರ್ಷಗಳ ಒಡನಾಟ ಹಾಗೂ ಪಶ್ಚಿಮಘಟ್ಟ ಉಳಿಸಿ 100 ದಿನಗಳ ಪಾದಯಾತ್ರೆ ಅವರಲ್ಲಿ ಹೋರಾಟದ ಕಿಚ್ಚನ್ನು ಇಮ್ಮಡಿಸಿದೆ.

ಹಿಂದಿನ ಸರ್ಕಾರ ರಚಿಸಿದ್ದ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರಾಗಿ, ವನ್ಯಜೀವಿ ಮಂಡಳಿ ಹಾಗೂ ಜೀವವೈವಿಧ್ಯ ಮಂಡಳಿ ಉಪಾಧ್ಯಕ್ಷರಾಗಿ ಮಲೆನಾಡಿನ ಹಳ್ಳಿಹಳ್ಳಿ ಸುತ್ತಿರುವ ಅಶೀಸರ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಕುರಿತಂತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

* ಜಾರ್ಖಂಡ್‌, ಒಡಿಶಾ ಇನ್ನಿತರ ಗುಡ್ಡಗಾಡು ಪ್ರದೇಶ ಹೊಂದಿರುವ ರಾಜ್ಯಗಳ ಮೂಲ ನಿವಾಸಿಗಳಿಗೆ ಆಶ್ರಯ ನೀಡಲು ಜಾರಿಗೊಂಡ ಅರಣ್ಯ ಹಕ್ಕು ಕಾಯ್ದೆ 2006, ಪ್ರಾಕೃತಿಕ ವೈವಿಧ್ಯ ಹೊಂದಿರುವ ಕರ್ನಾಟಕಕ್ಕೆ ಅಗತ್ಯವಿತ್ತೇ?
ಖಂಡಿತವಾಗಿ ಗಿರಿವಾಸಿಗಳ ಪರವಾದ ಇಂತಹದ್ದೊಂದು ಕಾಯ್ದೆ ಬೇಕಿತ್ತು. ಮೂಲ ಕಾಯ್ದೆಯಲ್ಲಿ ಕಾಡಿನಂಚಿನ ಬುಡಕಟ್ಟು ಜನರಿಗೆ ಮಾತ್ರ ಅರಣ್ಯ ಹಕ್ಕು ನೀಡುವ ಉದ್ದೇಶವಿತ್ತು. ನಂತರ ತಂದ ತಿದ್ದುಪಡಿಯಲ್ಲಿ ಇತರ ಪಾರಂಪರಿಕ ಅರಣ್ಯವಾಸಿಗಳಿಗೂ ಹಕ್ಕು ನೀಡಬೇಕೆಂಬ ಅಂಶ ಸೇರಿತು. ಇದು ಹಲವಾರು ಗೊಂದಲಗಳಿಗೆ ಕಾರಣವಾಯಿತೇ ವಿನಾ ಕಾಯ್ದೆಯ ಮೂಲ ಆಶಯ ಈಡೇರಿದಂತೆ ಕಾಣುತ್ತಿಲ್ಲ.

ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಒಟ್ಟು 3.11 ಲಕ್ಷ ಅರ್ಜಿಗಳಲ್ಲಿ ಬುಡಕಟ್ಟು ಜನರದ್ದು ಕೇವಲ 46 ಸಾವಿರ ಅರ್ಜಿಗಳು. ಅವರಲ್ಲೂ ಹಕ್ಕುಪತ್ರ ಪಡೆದವರು 11 ಸಾವಿರ ಮಂದಿಯಷ್ಟೆ.

ಉದಾಹರಣೆಗೆ, ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ 15–20 ವರ್ಷಗಳ ಈಚೆಗೆ ಬಂದು ನೆಲೆಸಿರುವ ಆಂಧ್ರ ಪ್ರದೇಶ, ಬಯಲುಸೀಮೆಯ ಜನರು ಹಕ್ಕುಪತ್ರ ಪಡೆದುಕೊಂಡರು. ಆದರೆ ಅಲ್ಲಿನ ಮೂಲ ನಿವಾಸಿಗಳಾಗಿರುವ ಅರಣ್ಯ ಅವಲಂಬಿತ ಕುಣಬಿಗರು, ಗೌಳಿಗರಲ್ಲಿ ಹಲವರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಕಾರಣ ಅವರಿಗೆ  ದಾಖಲೆ ಸಿದ್ಧಪಡಿಸುವ ಶಕ್ತಿಯಿಲ್ಲ.

* ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದ ಬಗ್ಗೆ ಪರಿಸರವಾದಿಗಳ ಅಭಿಪ್ರಾಯ?
ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಆಕ್ಷೇಪವಿಲ್ಲ. ಆದರೆ ಹಿಂಬಾಗಿಲಿನ ಮೂಲಕ ಅನುಷ್ಠಾನಗೊಳಿಸುವ ಕ್ರಮಕ್ಕೆ ನಮ್ಮ ಆಕ್ಷೇಪವಿದೆ. ಕಂದಾಯ ಮತ್ತು ಅರಣ್ಯ ಇಲಾಖೆ ದಾಖಲೆಗಳಲ್ಲಿ ಸ್ಪಷ್ಟತೆಯಿಲ್ಲ.

ಡೀಮ್ಡ್ ಅರಣ್ಯ ವ್ಯಾಪ್ತಿಯ ಬಗ್ಗೆ ಇಲಾಖೆಯಲ್ಲೇ ಗೊಂದಲ. ಕಂದಾಯ ಇಲಾಖೆ ಅಡಿಯಲ್ಲಿರುವ ಭೂಮಿಗಳನ್ನೇ ಡೀಮ್ಡ್ ಪಟ್ಟಿಗೆ ಸೇರಿಸಲಾಗಿದೆ. ಅಮೃತ್‌ಮಹಲ್ ಕಾವಲ್, ಗೋಮಾಳ, ಬೆಟ್ಟ, ಕುಮ್ಕಿ, ಹಾಡಿ ಇವೆಲ್ಲ ಸಮಷ್ಟಿಯ ಹಿತಕ್ಕಾಗಿ ನೀಡಿರುವ ಗ್ರಾಮಗಳ ಸಾಮೂಹಿಕ ಭೂಮಿ. ಇವನ್ನೆಲ್ಲ ಕಾಯ್ದೆಗೆ ಒಳಪಡಿಸಿ ಹಕ್ಕುಪತ್ರ ನೀಡಲು ಪ್ರಸ್ತಾಪಿಸಿರುವುದನ್ನು ಹೇಗೆ ಒಪ್ಪಿಕೊಳ್ಳುವುದು?

* ಕಳೆದ 4–6 ತಿಂಗಳುಗಳಿಂದ ಅರಣ್ಯ ಅತಿಕ್ರಮಣಕ್ಕೆ ಪ್ರೋತ್ಸಾಹ ಹೆಚ್ಚಾದಂತೆ ಅನ್ನಿಸುತ್ತಿದೆಯೇ?
ಇತ್ತೀಚೆಗಲ್ಲ, ಮೂರು ವರ್ಷಗಳಿಂದ ಅರಣ್ಯ ಅತಿಕ್ರಮಣ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ. ಹೀಗಾಗಿಯೇ ಇದರ ವಿರುದ್ಧ ಗಟ್ಟಿಧ್ವನಿ ಎತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಿನ ಬೆಂಕಿ, ಜೆಸಿಬಿ ಸದ್ದು, ಕೇರಳಿಗರು ರಾಸಾಯನಿಕ ಸುರಿದು ಬೆಳೆಸುವ ಶುಂಠಿ ಬೆಳೆ ಮಲೆನಾಡಿನ ಭೂಮಿಯನ್ನು ನಲುಗಿಸಿವೆ.

ಕಾಡೇ ಜೀವಾಳವಾಗಿದ್ದ ಮಲೆನಾಡು ಬರಡಾಗುತ್ತಿದೆ. ಜಲಮೂಲಗಳು ಖಾಲಿಯಾಗುತ್ತಿವೆ. ನೀರಾವರಿ, ಜಲವಿದ್ಯುತ್, ಕುಡಿಯುವ ನೀರಿನ ಯೋಜನೆಗಳಿಗೆ ನೀರಿಲ್ಲದಾಗಿದೆ. ವರ್ಷಪೂರ್ತಿ ನದಿಯಲ್ಲಿ ನೀರು ಹರಿಯಲು ನಳನಳಿಸುವ ಕಾಡಿರಬೇಕು. ಮಳೆನೀರು ಇಂಗಿಸುವಿಕೆ ಎಷ್ಟೇ ನಡೆದರೂ ಈ ಪ್ರಕ್ರಿಯೆ ನೈಸರ್ಗಿಕ ಕಾಡಿನಿಂದ ಆದಾಗ ಅಂತರ್ಜಲ ಏರಿಕೆಗೆ ಸಹಕಾರಿ.

* ಅತಿಕ್ರಮಣ ಒಂದು ನಿರಂತರ ಮಾನಸಿಕ ಪ್ರಕ್ರಿಯೆ. ಸಕ್ರಮದಿಂದ ಇದಕ್ಕೆ ಪೂರ್ಣವಿರಾಮ ಇಡಲು ಸಾಧ್ಯವೇ?
ಕಾಡಿನ ರಕ್ಷಣೆಗೆ ಅತಿ ಮುಖ್ಯವಾಗಿರುವ ಅರಣ್ಯ ಸಂರಕ್ಷಣೆ ಕಾಯ್ದೆ ಪಾಲನೆ ಆಗುತ್ತಿಲ್ಲ. 90ರ ದಶಕದಲ್ಲಿ ಅರಣ್ಯ ಅತಿಕ್ರಮಣ, ಬಗರ್‌ಹುಕುಂ ಸಕ್ರಮಕ್ಕೆ ದೊಡ್ಡ ಹೋರಾಟ ನಡೆಯಿತು.

ಆಗಲೇ ಪೂರ್ಣಗೊಳಿಸಿದ್ದರೆ ಇನ್ನಷ್ಟು ಅರಣ್ಯ ಉಳಿಸಿಕೊಳ್ಳಬಹುದಿತ್ತೇನೊ. 2006ರ ಅರಣ್ಯ ಹಕ್ಕು ಕಾಯ್ದೆ ಬಂದ ಮೇಲೆ ಅತಿಕ್ರಮಣ ಹೆಚ್ಚಾಗಿದೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳುವ ಸಂಗತಿ.

ಈ ನಡುವೆ ಹೊಸ ಅತಿಕ್ರಮಣಕ್ಕೆ 2003ರ ಕಟ್‌ ಆಫ್ ಡೇಟ್ ವಿಸ್ತರಣೆಯಾಗಿ ಈಗ 2005ಕ್ಕೆ ಬಂದು ನಿಂತಿದೆ. ಇನ್ನೂ ಅರ್ಜಿ ಸ್ವೀಕಾರಕ್ಕೆ ಸರ್ಕಾರ ಅವಕಾಶ ಕೊಡುತ್ತಿದೆ. ಇದರಿಂದ ಮಲೆನಾಡಿನ ಜಿಲ್ಲೆಗಳಲ್ಲಿ ಅರಣ್ಯದಂಚಿನ 10–20 ಎಕರೆ ವಿಸ್ತಾರ ಪ್ರದೇಶಗಳನ್ನು ಭದ್ರ ಬೇಲಿಗಳು ಬಾಚಿಕೊಳ್ಳುತ್ತಿವೆ.

ಗಿರಿಜನರು ಅತಿಕ್ರಮಣ ಮಾಡಿಕೊಂಡಿದ್ದು ಅರ್ಧ ಎಕರೆ, ಒಂದು ಎಕರೆ, ಹೆಚ್ಚೆಂದರೆ ಎರಡು ಎಕರೆ. ಇದಕ್ಕಿಂತ ಹೆಚ್ಚು ಅತಿಕ್ರಮಣ ಮಾಡಲು ಅವರಲ್ಲಿ ಶಕ್ತಿಯಿಲ್ಲ. ಜಮೀನು ಇದ್ದವರಿಗೆ ಕೊಡಬೇಕೇ ಬೇಡವೇ ಎಂಬ ಬಗ್ಗೆಯೇ ಕಾಯ್ದೆಯಲ್ಲಿ ಗೊಂದಲವಿದೆ.

ಸ್ವಹಿತಾಸಕ್ತಿ, ಕಾಯ್ದೆ ದುರ್ಬಳಕೆ ಮುಂದುವರಿಯುತ್ತಲೇ ಇದೆ. ಹತ್ತಾರು ಸಮಿತಿಗಳ ನಿರ್ಮಾಣ, ದಿಢೀರ್ ಹುಟ್ಟಿಕೊಳ್ಳುವ ಏಜೆಂಟರ ಕೈವಾಡದಿಂದ ಕಾಯ್ದೆ ಅನುಷ್ಠಾನ ಗೊಂದಲದ ಗೂಡಾಗಿದೆ.

ಮೊದಲು ಕಟ್‌ ಆಫ್ ಡೇಟ್ ನಿಗದಿಯಾಗಲಿ. ಉಪಗ್ರಹ ಆಧಾರಿತ ಚಿತ್ರ ಬಳಸಿ ಹಳೆ, ಹೊಸ ಅತಿಕ್ರಮಣಗಳನ್ನು ಗುರುತಿಸಬಹುದು. ಇದಕ್ಕೆ ಅರಣ್ಯ ಇಲಾಖೆ ಯಾಕೋ ಮನಸ್ಸು ಮಾಡುತ್ತಿಲ್ಲ. ಅರಣ್ಯ ಸಚಿವರು ಒಳ್ಳೆಯವರಿದ್ದಾರೆ. ಆದರೆ ಅವರು ಇದರ ಬಗ್ಗೆ ಏನೂ ಮಾತನಾಡುವುದಿಲ್ಲ.

* ನೀವು ಹೀಗೆನ್ನುತ್ತೀರಿ. ಕಂದಾಯ ಸಚಿವರು ಭೂಮಿ ಇರುವುದೇ ಮನುಷ್ಯರಿಗಾಗಿ, ಮೊದಲು ಮನುಷ್ಯನ ಬದುಕು ಮುಖ್ಯ, ನಂತರ ಪ್ರಾಣಿ, ಪಕ್ಷಿಗಳದ್ದು ಎಂದಿದ್ದಾರಲ್ಲ...
ರೈತರ ಬದುಕು, ಕುಡಿಯುವ ನೀರು, ನಾಡಿನ ಸಮೃದ್ಧಿ ನಿಂತಿರುವುದೇ ಪಶ್ಚಿಮಘಟ್ಟದ ಅರಣ್ಯ ಆಧರಿಸಿ. ಇಲ್ಲಿನ ನದಿ, ಕಣಿವೆಗಳೇ ಮನುಷ್ಯನ ಜೀವನಾಡಿಗಳು. ಈ ವಾಸ್ತವವನ್ನು ರಾಜಕೀಯ ನೇತಾರರು ಗಮನಿಸಬೇಕು. 

ಕಾವೇರಿ, ಮಹಾದಾಯಿಗಾಗಿ ಸರ್ಕಾರಗಳು ಸರ್ವಪಕ್ಷಗಳ ಸಭೆ ನಡೆಸುತ್ತವೆ. ಪಶ್ಚಿಮಘಟ್ಟದ ಅರಣ್ಯ ಸಂರಕ್ಷಣೆಗೆ ಎದುರಾಗಿರುವ ಸವಾಲುಗಳನ್ನು ನಿರ್ವಹಿಸಲು ಸರ್ಕಾರ ಸರ್ವಪಕ್ಷಗಳ ಸಭೆ ಕರೆಯಬೇಕು. ನೀರಿಗಾಗಿ ಅಂತರರಾಜ್ಯ ಹೋರಾಟ ಮಾಡುತ್ತಿದ್ದೇವೆ.

ನೀರು ನೀಡುವ ಪ್ರದೇಶವನ್ನೇ ಆಹುತಿ ಪಡೆದು ಅಕ್ಷಯ ಪಾತ್ರೆಯನ್ನೇ ನಾವು ನಾಶ ಮಾಡಲು ಹೊರಟಿದ್ದೇವೆ. ಪಶ್ಚಿಮಘಟ್ಟದ ರಕ್ಷಣೆ ಎಲ್ಲ ರಾಜಕೀಯ ಪಕ್ಷಗಳ ಹೊಣೆಗಾರಿಕೆಯಾಗಿದೆ. ಸಾಹಿತಿಗಳು, ಧಾರ್ಮಿಕ ಮುಖಂಡರು ಸಹ ಅರಣ್ಯ ನಾಶ ತಡೆಗೆ ಧ್ವನಿ ಎತ್ತಬೇಕಾದ ಸಂದರ್ಭ ಇದೆ.

* ಚುನಾವಣಾ ರಾಜಕೀಯಕ್ಕಾಗಿ ಅರಣ್ಯ ಹಕ್ಕು ಕಾಯ್ದೆ ಬಳಕೆಯಾಗುತ್ತಿದೆ ಎನಿಸುವುದೇ?
ಹೌದು, ಪಶ್ಚಿಮಘಟ್ಟ ವ್ಯಾಪ್ತಿಯ ಜಿಲ್ಲೆಗಳಲ್ಲಿ ಚುನಾವಣಾ ರಾಜಕೀಯಕ್ಕೆ ಅರಣ್ಯ ಅತಿಕ್ರಮಣ ಬಲಿಯಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆಯ ಲಾಭ ಬಡವರು, ವನವಾಸಿಗರು, ಭೂರಹಿತರಿಗೆ ಸಿಗಬೇಕು. ಹೊಸ ಅತಿಕ್ರಮಣಕ್ಕೆ ಅವಕಾಶ ಆಗದಂತೆ ಅರಣ್ಯ ಇಲಾಖೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಬೇಕು.

ಅಂಕಿಸಂಖ್ಯೆ ಪ್ರಕಾರ ರಾಜ್ಯದಲ್ಲಿ 1.5 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿವೆ. ಮತ್ತೆ ಮತ್ತೆ ಅರ್ಜಿ ಪುನರ್ ಪರಿಶೀಲನೆ ಮಾಡಿ ಇವರೆಲ್ಲರಿಗೂ ಹಕ್ಕುಪತ್ರ ನೀಡಿದರೆ 4.5 ಲಕ್ಷ ಎಕರೆ ಅರಣ್ಯ ಭೂಮಿ ಹೋಗುತ್ತದೆ.

* ಅರಣ್ಯ ರಕ್ಷಣೆಯಲ್ಲಿ ಇಲಾಖೆಯ ಪಾತ್ರವೇನು?
ಅರಣ್ಯ ಇಲಾಖೆಯೇ ಅರಣ್ಯ ನಾಶ ಮಾಡಲು ಹೊರಟಿದೆ. ಉನ್ನತ ಅಧಿಕಾರಿಗಳು ಮಲೆನಾಡಿಗೆ ಭೇಟಿ ನೀಡದೆ ಅರಣ್ಯ ಭವನದಲ್ಲಿಯೇ ಕುಳಿತು ಎಲ್ಲವನ್ನೂ ನಿಭಾಯಿಸುತ್ತಾರೆ. ಸ್ಥಾನಿಕವಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗೆ ನೈತಿಕ ಬೆಂಬಲ ಸಿಗುತ್ತಿಲ್ಲ.

ಒಂದೆಡೆ ಕಾಯ್ದೆಯ ತ್ವರಿತ ಅನುಷ್ಠಾನಕ್ಕೆ ರಾಜಕೀಯ ಮುಖಂಡರ ಒತ್ತಡ, ಇನ್ನೊಂದೆಡೆ ಅರಣ್ಯ ಕಾಯ್ದೆ ಪಾಲನೆ ಆಗುತ್ತಿಲ್ಲ ಎಂಬ ಹಿರಿಯ ಅಧಿಕಾರಿಗಳ ಆಕ್ರೋಶ ಇಬ್ಬಗೆಯ ದಬ್ಬಾಳಿಕೆಗೆ ಆರ್‌ಎಫ್ಒ, ಕೆಳಗಿನ ಹಂತದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿ ಬಂದಿರುವ ಅಸಹಾಯಕ ಸ್ಥಿತಿ ಹೇಳಿಕೊಳ್ಳುತ್ತಾರೆ. ಹೊಸ ಅತಿಕ್ರಮಣ ತೆರವುಗೊಳಿಸಿದರೂ ಅವರಿಗೆ ಸ್ಥಳೀಯ ಮುಖಂಡರಿಂದ ಧಮಕಿ ಕರೆಗಳು ಬರುತ್ತವೆ.

* ಕಾಡು ಉಳಿಸುವ ಕಾಯಕದಲ್ಲಿ ಫಲ ದೊರೆತಿದೆಯೇ?
ಕಾನು ಉಳಿಸಿ ಅಭಿಯಾನದಲ್ಲಿ ಕಳೆದ 10 ವರ್ಷಗಳಲ್ಲಿ 200 ಹಳ್ಳಿಗಳನ್ನು ಒಳಗೊಂಡು 20 ಸಾವಿರ ಹೆಕ್ಟೇರ್ ಕಾನು ಪ್ರದೇಶ ರಕ್ಷಣೆಯಾಗಿದೆ. ಒತ್ತಡ ತಂದ ಪರಿಣಾಮ ಮೂರು ವರ್ಷಗಳಲ್ಲಿ ₹50 ಲಕ್ಷ ವೆಚ್ಚ ಮಾಡಿ ಅರಣ್ಯ ಇಲಾಖೆ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಕಾನುಗಳಿಗೆ ಟ್ರೆಂಚ್ ನಿರ್ಮಾಣ ಮಾಡಿದೆ. ರೈತರು, ಸ್ಥಳೀಯರ ಸಹಕಾರದಲ್ಲಿ ಅರಣ್ಯದಲ್ಲಿ ಉಳಿದಿರುವ ಕಾಡು ಉಳಿಸಿದ ಸಮಾಧಾನ ಇದೆ.

* ಪರಿಸರಕ್ಕಾಗಿ ಬೃಹತ್ ಕೈಗಾರಿಕೆಗಳನ್ನು ವಿರೋಧಿಸಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣವನ್ನು ಹೇಗೆ ಅರ್ಥೈಸುತ್ತೀರಿ?
ಇದಕ್ಕೆ ನಿಖರ ಉತ್ತರ ಕೊಡುವುದು ಕಷ್ಟ. 1973ರಲ್ಲಿ ಜಿಲ್ಲೆಯಲ್ಲಿ ಒಟ್ಟು ಶೇ 87.5 ಅರಣ್ಯ ಪ್ರದೇಶವಿತ್ತು. ಭಾರತೀಯ ವಿಜ್ಞಾನ ಸಂಸ್ಥೆ ವರದಿ ಪ್ರಕಾರ 2013ರಲ್ಲಿ ಜಿಲ್ಲೆಯಲ್ಲಿ ಇದ್ದದ್ದು ಶೇ 48.6 ಅರಣ್ಯ ಮಾತ್ರ. ಇದು ನಮಗೆ ನಾವೇ ತಂದುಕೊಂಡ ಕಂಟಕ. ಇದರ ದುಷ್ಪರಿಣಾಮವನ್ನು ಈಗಾಗಲೇ ಎದುರಿಸಿದ್ದೇವೆ.

ಅಕ್ರಮ ಮರಳು ದಂಧೆ ರಾಜ್ಯದಲ್ಲಿ ವ್ಯಾಪಿಸಿದಂತೆ ಕಾಯ್ದೆ ಮಾನ್ಯತೆಯ ನೆರಳಿನಲ್ಲಿ ಅತಿಕ್ರಮಣ ಮಾಡಬೇಕೆನ್ನುವ ಮಾನಸಿಕತೆ ಅರಿವಿಲ್ಲದೇ ಬೆಳೆಯುತ್ತಿದೆ. ಕಟ್ಟುನಿಟ್ಟಿನ ಕ್ರಮ ಬೇಡ ಎಂಬ ಮೌಖಿಕ ಆದೇಶಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಕಾಯ್ದೆ ಹೆಸರಿನಲ್ಲಿ ಆಗುತ್ತಿರುವ ದುರುಪಯೋಗ ತಡೆಯುವಲ್ಲಿ ನಿರ್ದಿಷ್ಟ ಕ್ರಮ ಇಲ್ಲದ ಪರಿಣಾಮ ಇದಾಗಿದೆ.

ದಕ್ಷಿಣ ಭಾರತದ ಆಹಾರ ಸುರಕ್ಷತೆಗೆ ಇಡೀ ಪಶ್ಚಿಮಘಟ್ಟ ರಕ್ಷಣೆಯಾಗಬೇಕು. ಮಲೆನಾಡಿನ ಉಳಿವಿಗಾಗಿ ಪಶ್ಚಿಮಘಟ್ಟ ಉಳಿಸುವುದಕ್ಕಿಂತ ಮುಖ್ಯವಾಗಿ ಇಡೀ ದೇಶಕ್ಕೆ, ಮಹಾನಗರಗಳಿಗೆ ನೀರು ಕೊಡಲು ಅಕ್ಷಯ ಪಾತ್ರೆಗಳಂತಿರುವ ಇಲ್ಲಿನ ನದಿ, ಕಣಿವೆಗಳು, ಜೀವವೈವಿಧ್ಯವನ್ನು ಉಳಿಸಬೇಕಾಗಿದೆ.

* ಪರಿಸರ ಹೋರಾಟಗಳು ಪ್ರಚಾರಕ್ಕೆ ಸೀಮಿತ ಆಗುತ್ತಿವೆ ಎನ್ನುವ ಗಂಭೀರ ಆರೋಪವಿದೆಯಲ್ಲ?
80ರ ದಶಕದಲ್ಲಿ ಪರಿಸರ ಚಳವಳಿಗೆ ದೊರಕಿದ ಸ್ಪಂದನೆ 21ನೇ ಶತಮಾನದಲ್ಲಿ ಸಿಗುತ್ತಿಲ್ಲ. ಸಾಮೂಹಿಕ ಚಳವಳಿಗಳು ನಗರ ಕೇಂದ್ರಿತ ಆಗುತ್ತಿವೆ. ಅನೇಕ ಸಂಗತಿಗಳು ರಾಜಕೀಕರಣಗೊಳ್ಳುತ್ತಿವೆ. ಮಾಫಿಯಾಗಳು ಜೋರಾಗಿವೆ.

ಪರಿಸರ ಹೋರಾಟ ಪಟ್ಟಣಗಳಲ್ಲಿ ಫ್ಯಾಷನ್‌ಗೆ ಸೀಮಿತವಾಗುವ ಹಂತಕ್ಕೆ ಬಂದಿದೆ. ಪ್ರಜ್ಞಾವಂತರು, ಬುದ್ಧಿಜೀವಿಗಳು, ವಿಜ್ಞಾನಿಗಳು ಇದಕ್ಕೆ ಧ್ವನಿ ಎತ್ತುತ್ತಿಲ್ಲ. ಬೇರೆ ಹೋರಾಟಕ್ಕೆ ಸಿಕ್ಕಷ್ಟು ಬೆಂಬಲ ಪರಿಸರ ಹೋರಾಟಕ್ಕೆ ಸಿಗುತ್ತಿಲ್ಲ.

* ಯುವಜನರಲ್ಲಿ ಪರಿಸರ ಕಾಳಜಿಯ ತುಡಿತ ಯಾವ ಮಟ್ಟದಲ್ಲಿದೆ?
ಯುವಜನರು ಸ್ವಯಂ ಕೇಂದ್ರಿತರಾಗುತ್ತಿದ್ದಾರೆ. ಸಾಮಾಜಿಕ ಜವಾಬ್ದಾರಿ, ಪರಿಸರ ಪ್ರಜ್ಞೆ ಮೂಡಿಸುವ ಕೆಲಸ ಇನ್ನಷ್ಟು ಹೆಚ್ಚಬೇಕು. ಇದು ಆಗಿಲ್ಲವೆಂದರೆ ನಾವೇ ಸಿನಿಕರಾಗಿ ಮಾತನಾಡಿದಂತಾಗುತ್ತದೆ.

* ಕೊನೆಯಲ್ಲಿ ಏನೋ ಹೇಳಬೇಕೆಂದಿರಲ್ಲ ಏನದು?
ಅತಿಕ್ರಮಣ ಸಾಂಕ್ರಾಮಿಕ ರೋಗ ಇದ್ದಂತೆ. ಶುಂಠಿಗೆ ಬೆಲೆ ಬಂದರೆ ಕಾಡನ್ನು ಅತಿಕ್ರಮಿಸಿ ಶುಂಠಿ ಬೆಳೆಯುತ್ತಾರೆ. ಮುಂಡಗೋಡ, ಹೊಸನಗರ, ಕೊಪ್ಪ, ಸೊರಬ, ಸಾಗರದಲ್ಲಿ ಕಾಡನ್ನು ಶುಂಠಿ ಕಬಳಿಸಿದೆ. ಇದನ್ನು ಆರಂಭಿಕ ಹಂತದಲ್ಲೇ ನಿಯಂತ್ರಿಸಿದ್ದರೆ ಅತಿಕ್ರಮಣ ತಡೆಯ ಜೊತೆಗೆ ಭೂಮಿ ಬರಡಾಗುವುದನ್ನು ತಪ್ಪಿಸಬಹುದಿತ್ತು.


ಮಲೆನಾಡಿನಲ್ಲಿ ಕೃಷಿ ಕಾರ್ಮಿಕರ ಕೊರತೆ ಗಂಭೀರ ಸಮಸ್ಯೆಯಾಗಿದೆ. ಯುವಜನ ನಗರಕ್ಕೆ ವಲಸೆ ಹೋಗಿದ್ದಾರೆ. ಇರುವ ಕೃಷಿಭೂಮಿ ನಿರ್ವಹಣೆಗೇ ಕಾರ್ಮಿಕರು ಸಿಗುತ್ತಿಲ್ಲ. ಅತಿಕ್ರಮಣದ ಭೂಮಿಯೂ ಹಾಳು ಬಿದ್ದಿದೆ. ಆದರೂ ಇದರ ಹಕ್ಕುಪತ್ರಕ್ಕಾಗಿ ಅರ್ಜಿ ಹಾಕಿಕೊಂಡವರು ಹಲವರು!


ಕೊನೆಯಲ್ಲಿ ಒಂದು ಮಾತು, ಅನೇಕ ಮುಗ್ಧ ರೈತರು ಅತಿಕ್ರಮಣ ಭೂಮಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಕಾಯ್ದೆ ನಿಷೇಧಿಸಿ ಎನ್ನುವುದು ಅಮಾನವೀಯವಾಗುತ್ತದೆ. ಕಾಯ್ದೆಯ ಲಾಭ ನೈಜ ಫಲಾನುಭವಿಗಳಿಗೆ ಸಿಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT