ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಗೋರ್ ಎಂಬ ಸಂಪತ್ತು

ಮಿನುಗು ಮಿಂಚು
Last Updated 3 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಏಷ್ಯಾದಲ್ಲಿಯೇ ಮೊದಲು ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದವರು ರವೀಂದ್ರನಾಥ್ ಟ್ಯಾಗೋರ್. ಅವರು ಸಮೃದ್ಧ ಸಂಪತ್ತನ್ನು ನಮಗೆಲ್ಲಾ ಉಳಿಸಿಹೋದರು. ಅತಿ ಸೂಕ್ಷ್ಮಗಳನ್ನು ಒಳಗೊಂಡ, ಸುಂದರ ಎನ್ನಬಹುದಾದ ಗೀತಾಂಜಲಿಯನ್ನು ಕೊಟ್ಟ ಅವರು, ಭಾರತ ಹಾಗೂ ಬಾಂಗ್ಲಾದೇಶಗಳಿಗೆ ರಾಷ್ಟ್ರಗೀತೆಗಳನ್ನೂ ಒದಗಿಸಿದವರು. ಅವರ ಅನೇಕ ಕೃತಿಗಳಿಗೆ ಜಾಗತಿಕ ಮನ್ನಣೆ ದೊರೆತಿದೆ.

‘ರವೀಂದ್ರ ಸಂಗೀತ್’ (ಟ್ಯಾಗೋರರ ಗೀತೆಗಳು) 2230 ಹಾಡುಗಳನ್ನು ಒಳಗೊಂಡಿದ್ದು, ಬಂಗಾಳದ ಹಲವು ಕ್ಷೇತ್ರಗಳ ಮೇಲೆ ಅದು ಬೆಳಕು ಚೆಲ್ಲಿದೆ. ಪ್ರತಿದಿನದ ಬದುಕಿನ ಚಿತ್ರಗಳನ್ನೂ ಅದು ಕಟ್ಟಿಕೊಟ್ಟಿದೆ. ಅವರ ಬಂಗಾಳಿ ದೇಶಭಕ್ತಿ ಗೀತೆ ‘ಏಕ್ಲಾ ಚಲೋ ರೇ’ ಬಂಗಾಳದಾಚೆಗೂ ಜನಪ್ರಿಯವಾಗಿರುವುದು ವಿಶೇಷ.

ನಾಟಕದ ಕಲಾಪ್ರಕಾರದತ್ತ ಒಲವು ತೋರಿಸಿದಾಗ ಟ್ಯಾಗೋರ್ ಅವರಿಗಿನ್ನೂ 16 ವರ್ಷ ವಯಸ್ಸು. ‘ವಾಲ್ಮೀಕಿ ಪ್ರತಿಭಾ’, ‘ಡಾಕ್ ಘರ್’ (ಅಂಚೆ ಕಚೇರಿ) ನಾಟಕಗಳಲ್ಲಿ ಬಂಗಾಳದ ಸಂಸ್ಕೃತಿ, ಜೀವನಶೈಲಿ ಹಾಗೂ ಮನೋವ್ಯಾಪಾರಗಳು ಇದ್ದವು. ‘ಚಿತ್ರಾಂಗದ’, ‘ಚಂದ್ರಿಕಾ’ ಹಾಗೂ ‘ಶ್ಯಾಮಾ’ ನೃತ್ಯರೂಪಕಗಳಾಗಿ ಜನಮನದಲ್ಲಿ ಮನೆಮಾಡಿದಂಥವು.

‘ಗುರುದೇವ’ ಎಂದೇ ಅನೇಕರು ಗೌರವದಿಂದ ಟ್ಯಾಗೋರ್ ಅವರನ್ನು ಕರೆದರು. ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ ಅವರು ಎಂಟು ಕಾದಂಬರಿಗಳು ಹಾಗೂ ನಾಲ್ಕು ಉದ್ಗ್ರಂಥಗಳ ಮೂಲಕ ಹೆಸರು ಮಾಡಿದರು. ‘ಘರೆ ಬೈರೆ’ (ಮನೆ ಹಾಗೂ ಜಗತ್ತು) ಆತ್ಮಗೌರವ, ವ್ಯಕ್ತಿ ಸ್ವಾತಂತ್ರ್ಯ, ಧರ್ಮ, ಕುಟುಂಬ ಹಾಗೂ ಸರಸಗಳನ್ನು ಒಳಗೊಂಡಿತ್ತು. ಟ್ಯಾಗೋರರ ‘ಚೋಕರ್ ಬಾಲಿ’ ಚಲನಚಿತ್ರವಾಗಿ ರೂಪಿತವಾಯಿತು. ವಿಧವೆಯೊಬ್ಬಳ ಪಾತ್ರದ ಮೂಲಕ ಬಂಗಾಳದ ಸಮಾಜದ ಮೇಲೆ ಕನ್ನಡಿ ಹಿಡಿಯುವ ಯತ್ನ ಅದಾಗಿತ್ತು.

ಅವರ ಕಥೆಗಳಲ್ಲಿ ಮಕ್ಕಳು ಹೆಚ್ಚಾಗಿ ಓದಿರುವುದು ‘ಕಾಬೂಲಿವಾಲಾ’. ‘ಗಲ್ಪಗುಚ್ಛ’ ಅವರ ೮೪ ಸಣ್ಣಕಥೆಗಳ ಕೃತಿ. ಅವರ ಪ್ರತಿಮಾತ್ಮಕ ಕಾವ್ಯಗಳಿಗೂ ಹಲವು ಉದಾಹರಣೆಗಳಿವೆ. ಅವುಗಳಲ್ಲಿ ‘ಸೋನಾರ್ ತೋರಿ’ (ಚಿನ್ನದ ದೋಣಿ) ಅನೇಕರ ಮನ ಗೆದ್ದಿತು.

ಸಾಹಿತ್ಯವಷ್ಟೇ ಅಲ್ಲದೆ ಚಿತ್ರಕಲೆಯಲ್ಲೂ ಆಸಕ್ತಿ ತಳೆದು, ಟ್ಯಾಗೋರರು ಕಲಾಕೃತಿಗಳನ್ನು ರಚಿಸಿದ್ದು ವಿಶೇಷ. ಆಗಸ್ಟ್ 7ರಂದು ಅವರ ಪುಣ್ಯಸ್ಮರಣೆ ನಡೆಯಿತು. ಈ ಸಂದರ್ಭದಲ್ಲಿ ಅನೇಕರು ಅವರನ್ನು, ಅವರ ಕೊಡುಗೆಯನ್ನು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT