ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಪುಸ್ತಕದ ಬೆನ್ನತ್ತಿ...

Last Updated 3 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಐದು ವರ್ಷಗಳ ಹಿಂದೆ ಅಪ್ಪ ತೀರಿಕೊಂಡ ನಂತರವಷ್ಟೆ ನಮಗೆ ಅವರ ಪುಸ್ತಕದ ಸಂಗ್ರಹ ನೋಡಲು ಸಾಧ್ಯವಾದುದು. ಹಳೆಯ ಪುಸ್ತಕಗಳಲ್ಲಿ ಕೆಲವಕ್ಕೆ ಒರಲೆ ಹಿಡಿದಿತ್ತು. ಹಾಗೆ ಪುಸ್ತಕಗಳ ದೂಳು ಒರೆಸಿ, ವಿಂಗಡಿಸುತ್ತ, ಒಂದಿಷ್ಟನ್ನು ನನಗೆಂದು ಎತ್ತಿಟ್ಟುಕೊಂಡು, ಇನ್ನೊಂದಿಷ್ಟನ್ನು ಸಾಗರದ ಕಾಲೇಜಿಗೆ ಕೊಟ್ಟಿದ್ದಾಗಿತ್ತು.

ಎತ್ತಿಟ್ಟುಕೊಂಡ ಪುಸ್ತಕಗಳನ್ನು ಬೆಂಗಳೂರಿಗೆ ಹೊತ್ತುಕೊಂಡು ಬಂದಿದ್ದೂ ಆಯ್ತು, ಆದರೆ ನನ್ನ ರೈಲ್ವೆ ಬೋಗಿಯಂತಿದ್ದ ಚಿಕ್ಕ ಬಾಡಿಗೆ ಮನೆಯಲ್ಲಿ ಇಡುವುದಕ್ಕೆ ಜಾಗವಿಲ್ಲದೇ, ಅವೆಲ್ಲವೂ ಚೀಲದಲ್ಲಿಯೇ ಉಳಿದಿದ್ದವು. ಹೊಸ ಮನೆಗೆ ಬಂದ ನಂತರವೂ ನಾಲ್ಕೈದು ತಿಂಗಳು ಜೋಡಿಸಿಡಲು ಆಗದ ಸೋಮಾರಿತನಕ್ಕೆ ಏನೇನೋ ಪಿಳ್ಳೆನೆವಗಳನ್ನು ಹೇಳಿಕೊಳ್ಳುತ್ತ ಸುಮ್ಮನಾಗಿದ್ದೆ.

ಕಳೆದ ವಾರ ಜೋಡಿಸಲೆಂದು ಒಂದೊಂದೇ ಪುಸ್ತಕಗಳನ್ನು ತೆಗೆಯುತ್ತ, ಅವುಗಳ ವಾಸನೆ, ಆಪ್ತವೆನ್ನಿಸುವ ಹಳದಿ–ಕಂದುಬಣ್ಣ, ನೆಲಕ್ಕೆ ಬಿದ್ದ ಚಿಟ್ಟೆಯ ರೆಕ್ಕೆಗಳಂತಿದ್ದ ಪುಟಗಳು, ಎಲ್ಲದಕ್ಕೆ ತೆರೆದುಕೊಳ್ಳುತ್ತ ಇದ್ದ ನಾನು ಪುಸ್ತಕವೊಂದನ್ನು ಕೈಗೆತ್ತಿಕೊಂಡಿದ್ದೇ ಅಚಾನಕ್ ನೂರು ವರ್ಷ ಹಿಂದೆ ಸರಿದಿದ್ದೆ!

ನಂಬಲಿಕ್ಕಾಗದೇ ಕನ್ನಡಕ ಸರಿಪಡಿಸಿಕೊಂಡು ಮತ್ತೆ ನೋಡಿದೆ, ಹೌದು, ಆ ಪುಸ್ತಕದ ಮೇಲೆ ‘1916’ ಎಂದು ಮುದ್ರಿಸಿದೆ, ‘ಎಂ.ಎಸ್. ಪುಟ್ಟಣ್ಣ ಇವರಿಂದ ರಚಿಸಲ್ಪಟ್ಟಿತು’ ಎಂದಿದೆ. ಮತ್ತು ಅದು 9ನೇ ಆವೃತ್ತಿ, ಆಗಿನ ಕಾಲದಲ್ಲಿಯೇ 22,500 ಪ್ರತಿ ಮುದ್ರಣವಾದ ಆ ಪುಸ್ತಕ ಯಾವುದು ಎನ್ನುವಿರಿ? ಅದು ‘ಕನ್ನಡ ಒಂದನೆಯ ಪುಸ್ತಕವು’.

ಮಂಗಳೂರಿನ ‘ಬಾಸೆಲ್ ಮಿಶನ್ ಪ್ರೆಸ್’ನಲ್ಲಿ ಮುದ್ರಣಗೊಂಡ ಈ ಪುಸ್ತಕವನ್ನು ಮೈಸೂರು ಸಂಸ್ಥಾನದ ಡಿಪಾರ್ಟ್ಮೆಂಟ್ ಆಫ್ ಪಬ್ಲಿಕ್ ಇನ್ ಸ್ಟ್ರಕ್ಷನ್ (ಈಗಲೂ ನಮ್ಮ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಸರು ಬದಲಾಗಿಲ್ಲ!) ಎಂದಿದೆ. ಮೆಕ್‌ಮಿಲನ್ ಆಂಡ್ ಕೋ ಲಿ. ಬಾಂಬೆ, ಕೋಲ್ಕತ್ತ, ಮದ್ರಾಸ್ ಆಂಡ್ ಲಂಡನ್ ಎಂದಿದೆ. ಅದರ ಕೆಳಗೆ ಬೆಲೆ 3 ಆಣೆಗಳು ಎಂದಿದೆ.

ಮತ್ತು ಎಲ್ಲಕ್ಕಿಂತ ನನ್ನ ಗಮನ ಸೆಳೆದಿದ್ದು, ನನಗೆ ಆ ಕ್ಷಣಕ್ಕೆ ತೀರಾ ಕುತೂಹಲ ಹುಟ್ಟಿಸಿದ್ದು ಪುಸ್ತಕದ ಮೇಲೆ ಎಲ್ಲ ಕಡೆಗೆ ಇದ್ದ ‘ಗೋಗಡಿಗೆ ಸುಬ್ರಾಯ’ ಎಂಬ ಹೆಸರು. ಅದು ನನ್ನಜ್ಜನ ಹೆಸರಲ್ಲ, ಹಾಗಿದ್ದರೆ ಈ ಪುಸ್ತಕ ಯಾರಿದ್ದಾಗಿರಬಹುದು?
ನಾಲ್ಕಾರು ಕಡೆ ಗೋಗಡಿಗೆ ವೆಂಕಟಗಿರಿಯಪ್ಪ ಎಂದಿದ್ದರೂ, ಇದೇ ಪುಸ್ತಕವನ್ನು ವೆಂಕಟಗಿರಿಯಪ್ಪ ಹೆಸರಿನ ನನ್ನ ದೊಡ್ಡಪ್ಪನೂ ಓದಿದ್ದರು ಎನ್ನುವುದು ಅನುಮಾನ. ಏಕೆಂದರೆ ಅವರು ಹುಟ್ಟಿದ್ದು 1932ರಲ್ಲಿ. ಆಮೇಲೆ ಒಂದನೇ ತರಗತಿಗೆ ದೊಡ್ಡಪ್ಪ ಹೋಗುವಷ್ಟರಲ್ಲಿ 1938–40 ಆಗಿರಬಹುದು.

ಪುಸ್ತಕದಲ್ಲಿ ಒಂದೆರಡು ಕಡೆ 1924, 1925, 1927ನೇ ಇಸ್ವಿ ಎಂದು ಬರೆದಿದೆ. ಎಲ್ಲಿಯೂ ನನ್ನ ಅಪ್ಪನ ಹೆಸರು ಇಲ್ಲ. ಅಪ್ಪನ ಸಂಗ್ರಹದಲ್ಲಿದ್ದ ಹೆಚ್ಚಿನ ಪುಸ್ತಕಗಳಲ್ಲಿ ‘ಮಂಜು’ ಎಂದೋ ‘ಮಂಜುನಾಥ’ ಎಂದೋ ಅಪ್ಪನ ಹೆಸರು ಇತ್ತು.

ಅಪ್ಪ ಈ ಪುಸ್ತಕವನ್ನೇ ಒಂದನೇ ತರಗತಿಗೆ ಓದಿರುವ ಸಾಧ್ಯತೆ ಕಡಿಮೆ ಇತ್ತು, ಏಕೆಂದರೆ ಅಪ್ಪ ಹುಟ್ಟಿದ್ದು 1940ರಲ್ಲಿ. ಒಂದನೇ ತರಗತಿಗೆ ಹೋಗುವಷ್ಟರಲ್ಲಿ 1947 ಇರಬಹುದು. ಹೀಗೆಲ್ಲ ತರ್ಕಿಸುವಾಗ ಅಪ್ಪ ತಾನು ಪಠ್ಯಪುಸ್ತಕವಾಗಿ ಓದದೇ ಇರುವ ಈ ಪುಸ್ತಕವನ್ನು ಯಾಕೆ ಅಷ್ಟು ಜೋಪಾನವಾಗಿ ತನ್ನ ಸಂಗ್ರಹದಲ್ಲಿಟ್ಟುಕೊಂಡಿದ್ದರು ಎಂಬ ಪ್ರಶ್ನೆ ಕಾಡತೊಡಗಿತು.

ಪುಸ್ತಕದ ಮುಖಪುಟ ಇಲ್ಲ, ಹಿಂಬದಿ ಪುಟವೂ ಇಲ್ಲ, ಆದರೆ ಪಾಠಗಳು ಕೊನೆಯವರೆಗೆ ಇವೆ. ತೊಂಬತ್ತೈದನೆಯ ಪಾಠವಾಗಿ ಇರುವ ‘ಯಾರ ನಾಮವನೊಲಿದು ಪಾಡುವೆ’ ಎಂಬ ದೇವರ ಸ್ತುತಿಯೂ, ಅದರ ನಂತರ ಕೊಟ್ಟಿರುವ ಕಠಿಣ ಪದಗಳ ಕೋಶವೂ ಇದೆ. ಈ ಪುಸ್ತಕದ ಜೊತೆಯೇ ಸ್ವಲ್ಪ ಪುಟಗಳು ಹರಿದಿದ್ದ ಇನ್ನೊಂದು ಪುಸ್ತಕವಿತ್ತು. ಅದೂ ‘ಕನ್ನಡ ಒಂದನೆಯ ಪುಸ್ತಕ’, ಆದರೆ ಅದು ಮುದ್ರಣವಾಗಿದ್ದು 1932ರಲ್ಲಿ, ಅದಾಗಲೇ 24ನೇ ಆವೃತ್ತಿ, ಅದು 72 ಪುಟ ಮಾತ್ರವಿತ್ತು. ಅದರ ಮೇಲೆ ಒಂದೆರಡು ಕಡೆ ಕಂಡ ‘ಗೋಗಡಿಗೆ ಶ್ರೀನಿವಾಸ’ ಎಂಬ ಹೆಸರು ಕೂಡ ಕುತೂಹಲ ಹುಟ್ಟಿಸಿತು. 

ಸರಿ, ಹೆಸರಿನ ಹಿಂದೆ ನನ್ನ ಪಯಣ ಶುರುವಾಯಿತು. ಮೊದಲು ದೊಡ್ಡಮ್ಮನಿಗೆ ಕರೆ ಮಾಡಿದೆ. ‘ಅಜ್ಜನ ತಮ್ಮ ಒಬ್ಬರಿದ್ದರು, ಅವರು ಚಿಕ್ಕವಯಸ್ಸಿನಲ್ಲಿಯೇ ತೀರಿಕೊಂಡವರು, ಹೆಸರು ಸುಬ್ರಾಯ ಎಂದೇ ಇರಬೇಕು, ಸರೀ ನೆನಪಾಗ್ತಿಲ್ಲ’ ಎಂದರು. ಆಮೇಲೆ ಊರಲ್ಲಿದ್ದ  ಅಮ್ಮನಿಗೆ ಕರೆ ಮಾಡಿ, ಇಷ್ಟೂ ವರದಿ ಒಪ್ಪಿಸುತ್ತಿದ್ದಂತೆ ಅಮ್ಮಮ್ಮ (ಅಪ್ಪನ ಅಮ್ಮ) ಹೇಳಿದ ಸಂಗತಿ ಎಂದು ನೆನಪಿಸಿಕೊಂಡು ಅಮ್ಮ ಹೇಳತೊಡಗಿದ ಸಂಗತಿ ಮಾತ್ರ ನಾನು ಊಹೆ ಮಾಡಲೂ ಸಾಧ್ಯವಿಲ್ಲದಿದ್ದ ಬದುಕಿನ ಸತ್ಯವಾಗಿತ್ತು, ಅಲ್ಲಲ್ಲ, ಸಾವೆಂಬ ಸತ್ಯವಾಗಿತ್ತು.

ಪುಸ್ತಕದಲ್ಲಿದ್ದ ದುಂಡಾದ ಅಕ್ಷರಗಳ ಗೋಗಡಿಗೆ ಸುಬ್ರಾಯನಿಗೆ ಸುಮಾರು ಹದಿನಾರರ ಪ್ರಾಯ. ಗೋಗಡಿಗೆಯಿಂದ ಒಂದು ಗುಡ್ಡ ಹತ್ತಿಳಿದರೆ ಸಿಗುವ ಊರಿಗೆ ಮದುವೆ ಮಾಡಿಕೊಟ್ಟಿದ್ದ ಅಕ್ಕನ ಮನೆಗೆ ಹಬ್ಬಕ್ಕೆ ಕರೆಯಲೆಂದು ಕಳಿಸಿದ್ದರು. ಹಬ್ಬಕ್ಕೆ ಕರೆಯಲು ಹೋದವನು ನಾಲ್ಕಾರು ದಿನಗಳಾದರೂ ಮನೆಗೆ ವಾಪಸು ಬರಲಿಲ್ಲ. ಏನಾಯಿತು ಎಂದು ಕೇಳಲಿಕ್ಕೆ ಆಗೆಲ್ಲ ಫೋನುಗೀನು ಇಲ್ಲವಲ್ಲ, ವಾಹನಗಳೂ ಇಲ; ಹೋದರೆ ಎತ್ತಿನಗಾಡಿಯಲ್ಲಿ, ಇಲ್ಲದಿದ್ದರೆ ನಡೆದುಕೊಂಡು. ಸರಿ, ಅಜ್ಜ ಕೆಲಸದನೊಬ್ಬನನ್ನು ಆ ಅಕ್ಕನ ಮನೆಗೆ ವಿಚಾರಿಸಿಕೊಂಡು ಬರಲು ಕಳಿಸಿದರು.

ಅಕ್ಕನ ಮನೆಯವರು ‘ನಮ್ಮನೆಗೆ ಬಂದೇ ಇಲ್ಲ’ ಎಂದರು. ಅದರ ಪಕ್ಕದ ಖಂಡಿಕದಲ್ಲಿ ಇನ್ನೊಂದು ಅಕ್ಕನ ಗಂಡನ ಮನೆ. ಸರಿ ಅಲ್ಲಿಗೇನಾದರೂ ಹೋಗಿದ್ದಾನ ಎಂದು ಅಲ್ಲಿಗೂ ಜನ ಕಳಿಸಿದರು. ಅಲ್ಲಿಗೂ ಹೋಗಿಲ್ಲ ಎಂದಾಯಿತು. ಹುಡುಗ ನಾಪತ್ತೆ. ಮೆಲ್ಲನೆ ಹಬ್ಬಿದ ಸುದ್ದಿ ಎಂದರೆ ಅಕ್ಕನ ಗಂಡ ಭಾವನೂ ಸೇರಿ, ಹತ್ತಿರದ ಕಾಡಿನಲ್ಲಿದ್ದ ನಿಧಿಯ ಆಸೆಗೆ ನರಬಲಿಯಾಗಿ ಅವನನ್ನು ಕೊಲೆ ಮಾಡಿದ್ದಾರೆ ಎಂಬುದು.

ಅನುಮಾನಗಳಿದ್ದರೂ ಪುರಾವೆಗಳಿಲ್ಲ. ಅಜ್ಜ ಆ ಸಹೋದರಿಯ ಮನೆಯ ಸಂಪರ್ಕವನ್ನು ಕಡಿದುಕೊಂಡರು. ಆಕೆಗೂ ತನ್ನ ಗಂಡನೇ ಇಂಥದೊಂದು ಕೃತ್ಯದಲ್ಲಿ ಪಾಲ್ಗೊಂಡು, ಸಹೋದರನನ್ನೇ ಕೆರೆಯಲ್ಲಿ ನರಬಲಿ ಕೊಟ್ಟಿದ್ದಾನೆಂಬ ಸುಳಿವು ಇತ್ತೇನೋ, ಅದೇ ಕೊರಗಿನಲ್ಲಿಯೇ ಆಕೆ ಒಂದಿಬ್ಬರು ಮಕ್ಕಳಾಗುತ್ತಿದ್ದಂತೆ ಸ್ವಲ್ಪ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಳು. ಉದ್ದ ಕೂದಲಿದ್ದ ಅವಳು ತುಂಬ ಚಂದ ಇದ್ದಳಂತೆ. ಇದಿಷ್ಟೂ ಅಮ್ಮಮ್ಮನಿಂದ ಕೇಳಿದ್ದೆಂದು ಅಮ್ಮ ಹೇಳಿದ ಸಂಗತಿ.

ನಂತರ ಶರಾವತಿ ಹಿನ್ನೀರಿನಲ್ಲಿ ಗೋಗಡಿಗೆಯೂ ಮುಳುಗಡೆಯಾಗಿ, ಅಲ್ಲಿಂದ ಭದ್ರಾವತಿ ಬಳಿ ಜಮೀನು, ಮನೆ ಮಾಡಿಕೊಂಡು ನೆಲೆ ನಿಂತಾಗ ಈ ಒಂದನೆಯ ತರಗತಿಯ ಪುಸ್ತಕವೂ ಅಪ್ಪನ ಪುಸ್ತಕಗಳ ಜೊತೆ ಜೊತೆ ಸಾಗಿದೆ. ಅಲ್ಲಿಂದ ಮತ್ತೆ ಸುಮಾರು ನಾಲ್ಕು ದಶಕಗಳ ತರುವಾಯ ಅಪ್ಪ ಸಾಗರದ ಬಳಿ ಬೇರೊಂದು ಹಳ್ಳಿಗೆ ಮರಳಿದಾಗ ಈ ಪುಸ್ತಕ ಬೇರೆಲ್ಲ ಪುಸ್ತಕಗಳ ಜೊತೆ ಮಲೆನಾಡಿಗೆ ಮತ್ತೆ ಮರಳಿದೆ. ತಾನು ನೋಡಿಯೇ ಇರದಿದ್ದ ಆ ಚಿಕ್ಕಪ್ಪನ ಪುಸ್ತಕವನ್ನು ಅಪ್ಪ ಯಾಕೆ ಇಷ್ಟೊಂದು ಜತನವಾಗಿ ಇಟ್ಟುಕೊಂಡಿದ್ದರು? 

ಈ ಸಂಗತಿಯ ಕುರಿತು, ದುಂಡು ಅಕ್ಷರಗಳ ಈ ಹುಡುಗ ಆಗ ಕಲಿತಿದ್ದಾದರೂ ಎಲ್ಲಿ, ಹೇಗಿದ್ದಿರಬಹುದು, ಇದೆಲ್ಲ ಸ್ವಲ್ಪ ಹೆಚ್ಚು ಗೊತ್ತಿದ್ದಿದ್ದು ಬಹುಶಃ ನನ್ನ ದೊಡ್ಡಪ್ಪನಿಗೆ. ಆದರೆ ದೊಡ್ಡಪ್ಪ ಕಳೆದ ಏಪ್ರಿಲ್‌ನಲ್ಲಿ ತೀರಿಕೊಂಡರು. ಛೇ, ನಾನೆಂಥ ಕೆಲಸ ಮಾಡಿದೆ... ಕಳೆದ ವರ್ಷ ಯಾವಾಗಲಾದರೂ ಈ ಪುಸ್ತಕವನ್ನು ತೆಗೆದು ನೋಡಿದ್ದರೆ, ದೊಡ್ಡಪ್ಪನಿಂದ ಹೆಚ್ಚು ಮಾಹಿತಿ ಪಡೆಯುವ ಸಾಧ್ಯತೆ ಇತ್ತು.

ದೊಡ್ಡಪ್ಪ ಮತ್ತು ಅಪ್ಪನ ಮಧ್ಯದ ಇಬ್ಬರು, ಅಂದರೆ ನನ್ನ ಅತ್ತೆಯಂದಿರು ಕೂಡ ಅಪ್ಪ ತೀರಿಕೊಂಡ ಕೆಲವು ಸಮಯದಲ್ಲಿ ತೀರಿಕೊಂಡಿದ್ದರು. ಅವರೂ ಇಲ್ಲ. ಈ ಸಂಗತಿ ಹೆಚ್ಚು ಗೊತ್ತಿದ್ದ ಎಲ್ಲ ಕೊಂಡಿಗಳೂ ಶಾಶ್ವತವಾಗಿ ಕಳಚಿಕೊಂಡ ನಂತರ ನಾನು ಪುಸ್ತಕದ ಬೆನ್ನತ್ತಿದ್ದೆ. ಕೊನೆಗೆ, ಸರಿ ನಾಲ್ಕನೆಯ ಅತ್ತೆಗಾದರೂ ಗೊತ್ತಿರಬಹುದು ಎಂದು ಅವಳಿಗೆ ಕರೆಮಾಡಿದೆ. ಅವಳೂ ಇದೇ ಸಂಗತಿಯನ್ನು ಹೇಳಿದಳು. ಎಲ್ಲಿ ಕಲಿತಿರಬಹುದು, ಆಗ ಎಲ್ಲಿ ಶಾಲೆಯಿದ್ದಿತು ಎಂಬ ಬಗ್ಗೆ ಆಕೆಗೂ ಹೆಚ್ಚು ಮಾಹಿತಿ ಇರಲಿಲ್ಲ.

ಈ ‘ಕನ್ನಡ ಒಂದನೆಯ ಪುಸ್ತಕ’ದ ಪಾಠಗಳನ್ನು ನೋಡಿದರೆ ಈಗಿನ 5–6ನೇ ತರಗತಿಯ ಪಠ್ಯಪುಸ್ತಕಗಳಿದ್ದ ಹಾಗಿದೆ! ಅಕ್ಷರ ಕಲಿತ ನಂತರ ಈ ಪುಸ್ತಕವನ್ನು ಕಲಿಸುತ್ತಿದ್ದರು ಎಂದು ಕಾಣುತ್ತೆ, ಏಕೆಂದರೆ ಇದು ಶುರುವಾಗುವುದೇ ಇಂದಿಗೆ ಸ್ವಲ್ಪ ಕಠಿಣವೆನ್ನಿಸುವ ಪಾಠಗಳಿಂದ! ಪದ್ಯಗಳೂ ಸೇರಿದಂತೆ ಒಟ್ಟು 95 ಪಾಠಗಳಿರುವ ಈ ಪುಸ್ತಕದಲ್ಲಿ ಅಭ್ಯಾಸದ ಪ್ರಶ್ನೆಗಳಿಲ್ಲ.

ಕೆಲವು ಚಿಕ್ಕ ನೀತಿ ಕಥೆಗಳಿವೆ, ‘ಆಲದ ಮರ’, ‘ಹಲಸಿನ ಮರ’, ‘ಗಾಳಿ’, ‘ಕೆರೆ’, ‘ನೀರು’ – ಇತ್ಯಾದಿ ಪರಿಸರಕ್ಕೆ ಸಂಬಂಧಿಸಿದ ಪಾಠಗಳಿವೆ. ಹುಣಿಸೆಯ ಮರ ಮತ್ತು ಬೇವಿನ ಮರದ ಸಂಭಾಷಣೆಯ ರೂಪದಲ್ಲಿ ಎರಡೂ ಮರಗಳ ಉಪಯೋಗಗಳನ್ನು ವರ್ಣಿಸಿದ್ದಾರೆ. ಕುರಿ, ಮೇಕೆ, ಇರುವೆ, ದುಂಬಿ ಹೀಗೆ ಪ್ರಾಣಿ, ಕೀಟಗಳ ಕುರಿತ ಪಾಠಗಳಿವೆ. ನಂಬಿ–ಬಿಡಿ, ನನಗೆ ಯಾವಾಗಲೂ ಕುರಿ, ಮೇಕೆ, ಆಡು, ಇವುಗಳ ವ್ಯತ್ಯಾಸವೇ ಸರಿಯಾಗಿ ತಿಳಿಯದೇ ಗೊಂದಲವಾಗುತ್ತಿತ್ತು. ಈ ಪಾಠ ಓದಿದ ಮೇಲೆ ಈಗ ಸರಿಯಾಗಿ ಅರ್ಥವಾಗಿದೆ!

ನನಗೆ ಕುತೂಹಲ ಹುಟ್ಟಿಸಿದ ಇನ್ನೊಂದು ಪಾಠ ಎಂದರೆ ‘ಹೆಣ್ಣು ಮಕ್ಕಳ ವಿದ್ಯಾಭ್ಯಾಸ’ ಎಂದು ಎರಡು ಭಾಗಗಳಲ್ಲಿರುವ ಪಾಠ. ಆಗಿನ ಕಾಲಕ್ಕೆ ಕ್ರಾಂತಿಕಾರಕವಾಗಿದ್ದ ಈ ವಿಚಾರವನ್ನು ಎಂ.ಎಸ್. ಪುಟ್ಟಣ್ಣನವರು ಪಾಠದಲ್ಲಿ ಮಕ್ಕಳ ಮೂಲಕವೇ ಇದು ಯಾಕೆ ಅಗತ್ಯ ಎಂದು ನಿರೂಪಿಸಿದ್ದು ಅಚ್ಚರಿಯೆನ್ನಿಸುತ್ತದೆ.

ಮೊದಲ ಪಾಠದಲ್ಲಿ ಮಠಕ್ಕೆ ಓದಲು ಹೋಗುವ ಹುಡುಗ ‘ತನ್ನೊಂದಿಗೆ ತಂಗಿ ಗೌರಿಯೂ ಬರಲಿ, ದುಡ್ಡುಕಾಸಿನ ಲೆಕ್ಕ ಮಾಡಲು, ಗಂಡಸರು ಇಲ್ಲದಿದ್ದಾಗ ಬಂದ ಪತ್ರಗಳನ್ನು ಓದಲು ಹೆಂಗಸರೂ ಕಲಿಯಬೇಕು’ ಎನ್ನುತ್ತಾನೆ. ‘ಏನೋ ನಾಲ್ಕಕ್ಷರ ಬಂದರೆ ಸಾಕು, ಇಷ್ಟಕ್ಕೆ ಮಠಕ್ಕೆ ಯಾಕೆ ಹೋಗುವುದು’ ಎಂದು ಪ್ರಶ್ನೆ ಮಾಡುವ ತಾಯಿಗೆ – ‘ಹೆಂಗಸರು ಮನೆಯ ಕೆಲಸವೆಲ್ಲ ಮುಗಿದ ಮೇಲೆ ಕಾಡುಹರಟೆಯಲ್ಲಿ ಕಳೆಯುವುದಕ್ಕಿಂತ ಒಳ್ಳೆಯ ಪುಸ್ತಕಗಳನ್ನು ಓದುವುದರಲ್ಲಿ ಎಷ್ಟೋ ಪ್ರಯೋಜನವುಂಟು’ ಎಂದು ಹುಡುಗನು ಹೇಳುತ್ತಾನೆ.

ಎರಡನೆಯ ಭಾಗದಲ್ಲಿ ಅದೇ ಹುಡುಗ ‘ಪುಸ್ತಕ ಓದಿ ತಿಳಿದುಕೊಂಡರೆ ಎಷ್ಟು ಬುದ್ಧಿವಂತರಾಗಬಹುದು, ನೀವು ಹೆಂಗಸರಾದ ಮಾತ್ರಕ್ಕೆ ಕಲಿಯಬಾರದೊ’ ಎಂದು ಪ್ರಶ್ನಿಸಿ, ‘ನಮ್ಮ ಗೌರಿ ಚಿಕ್ಕವಳಲ್ಲವೇ ಅವಳಿಗಾದರೂ ಕಲಿಸಬಹುದಲ್ಲ’ ಎನ್ನುತ್ತಾನೆ. ಮೊದಲನೆಯ ಭಾಗದಲ್ಲಿ ‘ಮಕ್ಕಳನ್ನು ನೋಡಿಕೊಳ್ಳುವುದು, ಅಡಿಗೆ ಮಾಡುವುದು, ಈ ಎರಡು ಕೆಲಸವೇ ಸಾಕಾಗಿದೆ, ಓದುವುದಕ್ಕೆ ಹೊತ್ತೆಲ್ಲಿ ತರುವುದು’ ಎಂದು ಕೊನೆಯಲ್ಲಿ ಪ್ರಶ್ನಿಸಿದ್ದ ತಾಯಿ, ಎರಡನೇ ಭಾಗದಲ್ಲಿ ‘ಕಲಿಸಬಹುದು, ಅವಳನ್ನೂ ಪಾಠಶಾಲೆಗೆ ಕರೆದುಕೊಂಡು ಹೋಗು’ ಎನ್ನುತ್ತಾರೆ.

ಹೆಂಗಸರು ವಿದ್ಯೆಯನ್ನು ಕಲಿತರೆ ಮನೆಯನ್ನು ನೋಡಿಕೊಳ್ಳಲು ಇನ್ನಷ್ಟು ಸಹಾಯವಾಗುತ್ತದೆ ಎಂಬ ದೃಷ್ಟಿಕೋನವೇ ಇರಬಹುದು, ಹಿನ್ನೆಲೆ ಏನೇ ಇರಲಿ, ಹೆಣ್ಣುಮಕ್ಕಳಿಗೂ ಗಂಡುಮಕ್ಕಳಂತೆಯೇ ಕಲಿಸಬೇಕು ಎಂಬ ಮನೋಭಾವವನ್ನು ಮೂಡಿಸುವುದು ಅಂದಿನ ಕಾಲಕ್ಕೆ ಮುಖ್ಯವಾಗಿತ್ತು. ಹೀಗಾಗಿ ಈ ಎರಡೂ ಪಾಠಗಳು ಮತ್ತು ಪಾಠದ ಮೂಲಕ ಪುಟ್ಟಣ್ಣ ಕೊಡುವ ಸಂದೇಶ ಮಹತ್ವದ್ದೆನ್ನಿಸುತ್ತದೆ.

ಇಂದು ನಮ್ಮ ದಿನಬಳಕೆಯಲ್ಲಿ ಮಾಯವಾಗಿರುವ ಅದೆಷ್ಟು ಅಚ್ಚಗನ್ನಡದ ಪದಗಳು ಈ ಪುಸ್ತಕದಲ್ಲಿವೆ! ಇಪ್ಪಾರು, ಹಂಜರ, ಚೆಚ್ಚರ, ಮುಪ್ಪಾಗ ಪಾಲು, ಮೋಳೆ, ಕಾವು, ರೇಕು, ಕಲಸುಮಣ್ಣು, ವಿತಂತು,ತಿರಿಕೆಯ ಅನ್ನ, ಮುಚ್ಚೋರೆ, ನಿಳಯವ... ಪಟ್ಟಿ ಸಾಗುತ್ತದೆ. ಪುಟ್ಟಣ್ಣನವರು ಬರೆದ ಚಿಕ್ಕಪುಟ್ಟ (ನೀತಿ!) ಕಥೆಗಳೂ ಇವೆ, ಮಕ್ಕಳಿಗೆ ಕುತೂಹಲ ಹುಟ್ಟಿಸುವ ನಿರೂಪಣೆಯಲ್ಲಿವೆ. ನನಗೆ ಒಂದೇ ಕೊರತೆಯೆಂಬಂತೆ ಕಂಡಿದ್ದು ಸರಳ ಪ್ರಾಸಗಳ ಪದ್ಯಗಳೇ ಹೆಚ್ಚಿಲ್ಲ ಎನ್ನುವುದು. ‘ಗೋವಿನ ಹಾಡು’ ಅದರ ಮೂಲ ರೂಪದಲ್ಲಿ ನಾಲ್ಕಾರು ಭಾಗದಲ್ಲಿ ಪದ್ಯಗಳ ಹಾಗೆ ಇದೆ. 

ಪುಸ್ತಕವನ್ನು ತಿರುವಿಮುರುವಿ ನೋಡುತ್ತ, ನಾನು ಮತ್ತೆ ಪುಸ್ತಕದಲ್ಲಿ ಅಲ್ಲಿಇಲ್ಲಿ ನೀಲಿ ಶಾಯಿಯಲ್ಲಿರುವ ಈಗ ಮಸುಕಾಗಿರುವ ದಿನಾಂಕಗಳಿಗೆ ಹೊರಳುತ್ತಿದ್ದೆ. ಗೋಗಡಿಗೆ ಸುಬ್ರಾಯನ ಅಣ್ಣ ಗೋಗಡಿಗೆ ನಾರಣಪ್ಪನ (ನನ್ನ ಅಜ್ಜ) ಹೆಸರು ಒಂದು ಕಡೆ ಇದೆ, ಅದು ಇಂಗ್ಲಿಷ್‌ನಲ್ಲಿ ಜಿ.ಎನ್. ನಾರಣಪ್ಪ ಎಂದಿರುವ ಸಹಿ, ಜೊತೆಗೆ ಡೇಟೆಡ್ 31.3.25 ಎಂದಿದೆ.

ಮುಂದಿರುವುದು ಟಿಯು ಅಥವಾ ಟಿಎಚ್ ಸ್ಪಷ್ಟವಿಲ್ಲ. ಹಳೆಯ ಕ್ಯಾಲೆಂಡರ್ ಗೂಗಲಿಸಿ ನೋಡಿದರೆ 31.3.25 ಮಂಗಳವಾರ, ಹೀಗಾಗಿ ಅದು ಟಿಯು ಇರಬೇಕೆಂದು ತರ್ಕಿಸಿದೆ. ಅದರ ಮುಂದಿನ ಪುಟದಲ್ಲಿ 4.4. 27ನೇ ಶುಕ್ರವಾರ ಎಂದಿದೆ. ಆದರೆ, 4.4.27 ಶುಕ್ರವಾರವಾಗುವುದಿಲ್ಲ, ಆದರೆ ಈ 4.4.27ಕ್ಕೆ ಏನೋ ಮಹತ್ವವಿದೆ, ಏಕೆಂದರೆ ಪುಸ್ತಕದ ಆರಂಭದಲ್ಲಿಯೂ ಇದೇ ಇಸ್ವಿಯಿದೆ. ಇಸ್ವಿಯ ಮೇಲೆ ವೆಂಕಟಗಿರಿಯಪ್ಪ ಗೋಗಡಿಗೆ ಇದೆ.

ಇನ್ನು ಕೊನೆಯ ಪುಟದಲ್ಲಿ ‘3.8.24ರಂದು ವಾಚ್ ಸರಿ ಮಾಡಿಸಿದ್ದೇನೆ’ ಎಂದು ಮೋಡಿ ಅಕ್ಷರಗಳಲ್ಲಿದೆ. ವಾಹ್.. ಆಗಿನ ಕಾಲದಲ್ಲಿಯೇ ಅಂತಹ ಕುಗ್ರಾಮದಲ್ಲಿದ್ದುಕೊಂಡೇ ವಾಚ್ ತೆಗೆದುಕೊಂಡಿದ್ದರಲ್ಲ! ವಾಚ್ ಸರಿ ಮಾಡಿಸಿದ್ದೇನೆ ಎಂದು ಬರೆದಿರುವ ಅಕ್ಷರಗಳಿಗೆ ಹೋಲಿಕೆಯಾಗುವ ರೀತಿಯಲ್ಲಿ ‘ಸಾಗರ ತಾಲ್ಕು ಮೇಳರ್ಕಿ ಮಾಗಣಿ ನಿಟ್ಲಿ ಹಳ್ತೋಟದ ಗ್ರಾಮದ ಗೋಗಡಿಗೆ ವೆಂಕಟಗಿರಿಯಪ್ಪನ ಸಹಿ’ ಎಂದಿದೆ.

ಈ ವೆಂಕಟಗಿರಿಯಪ್ಪ ನನ್ನಜ್ಜನ ದೊಡ್ಡಣ್ಣ ವೆಂಕಟಗಿರಿಯಪ್ಪ (ಇವರ ಮಕ್ಕಳು, ಮೊಮ್ಮಕ್ಕಳು ಇನ್ನೂ ಗೋಗಡಿಗೆಯ ಸಮೀಪವೇ ಇದ್ದಾರೆ) ಎಂದು ಅಮ್ಮ ವಿವರಿಸಿದ ಮೇಲೆ ನನಗೆ ಈ ಕೊಂಡಿಗಳು ಸ್ವಲ್ಪ ಮಟ್ಟಿಗೆ ಸ್ಪಷ್ಟವಾಯಿತು. ಇನ್ನೊಂದು ಕನ್ನಡದ ಒಂದನೆಯ ಪುಸ್ತಕದಲ್ಲಿರುವ ಗೋಗಡಿಗೆ ಶ್ರೀನಿವಾಸ ನನ್ನ ಮೂರನೆಯ ಅತ್ತೆಯ ಜೊತೆ ಹುಟ್ಟಿದ ಜವಳಿ ಸಹೋದರ, ಅವನು ಚಿಕ್ಕವಯಸ್ಸಿನಲ್ಲಿಯೇ ಬಹುಶಃ ಬಾಲಗ್ರಹದಿಂದ ತೀರಿಕೊಂಡಿದ್ದು ಎಂದು ಅಮ್ಮಮ್ಮ ಅಂದರೆ ಅಜ್ಜಿ ಹೇಳುತ್ತಿದ್ದರಂತೆ.

ಅಜ್ಜನ ಅಣ್ಣ ವೆಂಕಟಗಿರಿಯಪ್ಪ ಶತಮಾನದ ಈ ಪುಸ್ತಕವನ್ನು ಖರೀದಿಸಿರಬೇಕು ಮತ್ತು ವಾಚ್ ಅನ್ನು ಅವರೇ ಸರಿ ಮಾಡಿಸಿರಬೇಕು. ಅಲ್ಲಿಗೆ ಈ ಪುಸ್ತಕವನ್ನು 1924ಕ್ಕಿಂತ ಒಂದೆರಡು ವರ್ಷ ಮುಂಚೆ ಅಥವಾ ಆ ಸುಮಾರಿಗೆ ಖರೀದಿಸಿರುವ ಸಾಧ್ಯತೆ ಇದೆ. ಆ ಕಾಲದಲ್ಲಿಯೇ ಅವರು ಖರೀದಿಸಿದ್ದ ಆ ವಾಚಾದರೂ ಹೇಗಿದ್ದಿರಬಹುದು? ಆ ವಾಚ್ ಎಲ್ಲಿ ಹೋಗಿರಬಹುದು ಎಂದು ಆಲೋಚಿಸುವಾಗ ತಟ್ಟನೆ ನೆನಪಾಯಿತು – ಅಪ್ಪನ ಸಂಗ್ರಹದಲ್ಲಿ ಹಳೆಯ ನಾಣ್ಯಗಳ ಜೊತೆಗೆ ನನಗೊಂದು ಪುಟ್ಟ ಪಾಕೆಟ್ ವಾಚ್ ಕಂಡಿತ್ತು.

‘ಅದನ್ನ ತಗಂಡು ಎಂತ ಮಾಡ್ತೆ, ಕೆಟ್ಟುಹೋಗಿರದನ್ನೆಲ್ಲ ಇವು ಸುಮ್ನೆ ಇಟ್ಕೈಂದ’ ಎಂಬ ಅಮ್ಮನ ಕಾಮೆಂಟರಿಯ ಮಧ್ಯೆ ಹೆಚ್ಚು ಚರ್ಚೆಗೆ ಆಸ್ಪದ ಕೊಡದೇ ಅದನ್ನು ಮೆತ್ತಗೆ ನನ್ನ ಸಂಗ್ರಹಕ್ಕೆ ಜಾರಿಸಿದ್ದೆ. ಜೋಪಾನವಾಗಿ ಒಳಗೆ ಎತ್ತಿಟ್ಟಿದ್ದ ಅದನ್ನು ತೆರೆದು ನೋಡಿದರೆ ಯಾವುದೋ ಕಾಲಘಟ್ಟವನ್ನು ತನ್ನೊಳಗೆ ಹುದುಗಿಸಿಕೊಂಡಿದ್ದ ಅದು ಹಗಲೋ ರಾತ್ರಿಯೋ ತಿಳಿಯದ ಎಂಟುಮುಕ್ಕಾಲಿಗೆ ನಿಂತಿತ್ತು.

ಸರಿ, ಮಗ ‘ವೆಸ್ಟ್ ಎಂಡ್ ವಾಚ್ ಕೋ ಕಂಪನಿ, ಬೆಸ್ಟ್, ಅದರ ಕೆಳಗೆ  ಬಾಂಬೆ, ಕಲ್ಕತ್ತ’ ಎಂದು ಬರೆದಿರುವ ಪಾಕೆಟ್ ವಾಚ್ ಕೈಯಲ್ಲಿ ಹಿಡಿದು, ಗೂಗಲಿಸತೊಡಗಿದ. ಆಗ ಗೊತ್ತಾಯಿತು ಈ ಸ್ವಿಸ್ ಕಂಪನಿ 1886ರಲ್ಲಿಯೇ ಶುರುವಾದ ಹಳೆಯ, ಪ್ರಸಿದ್ಧ ಕಂಪನಿ ಎಂದು. ಇದೇ ವಾಚನ್ನು ಹೋಲುವ, ಬಾಂಬೆ, ಕಲ್ಕತ್ತ ಎಂದು ಬರೆದಿರುವ ಕಾಂಪಿಟಿಶನ್ ಸರಣಿಯ ವಾಚುಗಳು 1920ರಲ್ಲಿ ಬಿಡುಗಡೆಯಾಗಿದೆ ಎಂದು ಹುಡುಕಿ ಓದಿದ ನಂತರ, ಪ್ರಾಯಃ ಬೆಸ್ಟ್ ಸರಣಿಯ ಈ ವಾಚೂ ಅದೇ ಸುಮಾರಿಗೆ ಭಾರತದಲ್ಲಿ ಬಿಡುಗಡೆಯಾಗಿರಬಹುದೆಂದು ಊಹಿಸಿದೆವು.

ನಾನು ವೆಸ್ಟ್ ಎಂಡ್ ಕೋ ಕಂಪನಿಯ ಈಗಿನ ಸಂಪರ್ಕ ವಿಳಾಸಕ್ಕೆ ಈ ಸರಣಿಯ ವಾಚುಗಳು ಭಾರತದಲ್ಲಿ ಯಾವಾಗ ಬಿಡುಗಡೆಯಾಗಿರಬಹುದು ಎಂದು ಕೇಳಿ ಒಂದು ಇಮೇಲ್ ಹಾಕಿ, ವಾರದವರೆಗೂ ಅವರಿಂದ ಉತ್ತರ ಬಾರದಿದ್ದರಿಂದ ಇಂತಹ  ಮೇಲ್‌ಗಳಿಗೆ ಅವರೇನೂ ಉತ್ತರಿಸಲಿಕ್ಕಿಲ್ಲ ಎಂದು ನಿರಾಸೆಗೊಂಡೆ. ಆದರೆ ಹತ್ತುದಿನಗಳ ನಂತರ ಒಂದು ಸಂಜೆ ‘ಆ ವಾಚಿನ ಫೋಟೋಗಳನ್ನು ಕಳಿಸಿದರೆ, ನೋಡಿ ಹೇಳಬಹುದು’ ಎಂಬ ಮೇಲ್ ಕಂಪನಿಯಿಂದ ಬಂದಿತು. ಅವರಿಗೆ ಎರಡು ಫೋಟೋ ಕಳಿಸಿದ ನಂತರ ಕ್ಷಣಕ್ಷಣಕ್ಕೆ ಇನ್ ಬಾಕ್ಸ್ ನೋಡುವುದೇ ಕೆಲಸವಾಯಿತು.

ರಾತ್ರಿಯ ವೇಳೆಗೆ ಅವರಿಂದ ಉದ್ದನೆಯ ಪತ್ರ... “ಅದು ಬೆಸ್ಟ್ (BEST) ಅಲ್ಲ, DOST, ಅಂದರೆ ಉರ್ದುವಿನಲ್ಲಿ ಕಂಪ್ಯಾನಿಯನ್ ಎಂದು ಅರ್ಥ, ಈ ಬಗ್ಗೆ 100% ಖಾತ್ರಿ ಇದೆ. ಈ ಸರಣಿಯ ವಾಚುಗಳನ್ನು ಭಾರತದಲ್ಲಿ 18ನೇ ಶತಮಾನದ ಕೊನೆಯಲ್ಲಿ ಮತ್ತು 19ನೇ ಶತಮಾನದ ಆರಂಭದಲ್ಲಿ ಬಿಡುಗಡೆ ಮಾಡಿದ್ದೆವು.

ಆ ಕಾಲಕ್ಕೆ ಸೈನಿಕರು, ರೈಲ್ವೆ ಮತ್ತು ಇನ್ನಿತರ ಅಧಿಕಾರಿ ವರ್ಗದಲ್ಲಿ ತಮ್ಮ ಕಂಪನಿಯ ವಾಚುಗಳು ತುಂಬಾ ಪ್ರಸಿದ್ಧವಾಗಿದ್ದವು, ಭಾರತದ ಸ್ವತಂತ್ರಗೊಂಡ ನಂತರ ರಫ್ತು ಮಾಡಿಕೊಳ್ಳುವುದನ್ನು ನಿಲ್ಲಿಸಿತು” ಎಂದಿದ್ದ ಪತ್ರ. ಮತ್ತೆ ನೋಡಿದೆ, ಎರಡೂ ಇ-ಮೇಲಿನ ಕೊನೆಯಲ್ಲಿ WE/J. Monnat Jr - CEO ಎಂದಿದೆ, ಕಂಪನಿಯ ಜಾಲತಾಣದಲ್ಲಿ ಮತ್ತೆ ಇಣುಕಿದೆ, ಹೌದು, ಅನುಮಾನವೇ ಇಲ್ಲ, ಈತ 2013ರಿಂದ ಕಂಪನಿಯ ಸಿಇಒ ಆಗಿದ್ದಾರೆ! “ಓಹೋ ಸಿಇಒ ಅವರಿಂದಲೇ ನಿಂಗೆ ಮೇಲ್ ಬಂದಿದೆ, ನೀನೂ ಬೇರೆಯವ್ರ ಹಂಗೆ ಫೇಸ್ಬುಕ್ಕಿನಲ್ಲಿ ಹಾಕ್ಕೋಬಹುದು” ಎಂದು ಮಗ ತಮಾಷೆ ಮಾಡಿದ.

ಶತಮಾನದ ಹಿಂದೆ ಬಸ್ಸೇ ಇಲ್ಲದಿದ್ದ ಕಾಲದಲ್ಲಿ ಈ ವಾಚನ್ನು ತರಲು ಹಿರಿಯಜ್ಜ ಗಾಡಿ ಕಟ್ಟಿಕೊಂಡು, ಸಾಗರಕ್ಕೆ ಹೋಗಿದ್ದಿರಬಹುದು, ಗಾಡಿಯಲ್ಲಿ ಒಂದೆರಡು ಗಂಟೆ ಹಿಡಿದಿರಬಹುದು. ಶತಮಾನದ ನಂತರ ಇದೇ ವಾಚಿನ ಕುರಿತ ಹೆಚ್ಚಿನ ಮಾಹಿತಿಯನ್ನು ಫೋಟೋ ಕಳಿಸಿದ ಒಂದೆರಡು ಗಂಟೆಯಲ್ಲಿಯೇ ಕಂಪನಿಯ ಸಿಇಒ ಮೇಲ್ ಐಡಿಯಿಂದ ನಾನು ಪಡೆದಿದ್ದೆ. ನನಗೆ ಇದೂ ಒಂದು ವಿಚಿತ್ರವೆನ್ನಿಸಿತು.

ವಾಚು ಕೊಂಡ ಹಿರಿಯಜ್ಜನಿಗೆ ಹೀಗೆ ಶತಮಾನದ ನಂತರ ಮೂರನೇ ತಲೆಮಾರಿನವರು ವಾಚಿನ ಕಂಪನಿಗೇ ಪತ್ರಿಸಬಹುದು ಎಂದಾಗಲೀ ಅಥವಾ ವಾಚು ಕಂಪನಿಯ ಅಂದಿನ ಸಿಇಒಗಳಿಗೆ ಹೀಗೆ ತಾವು ಬಿಡುಗಡೆ ಮಾಡಿದ DOST ಸರಣಿಯ ವಾಚಿನ ಕುರಿತು ನಂತರದ ತಲೆಮಾರಿನ ಸಿಇಒಗಳಿಗೆ ಮತ್ತಾವುದೋ ದೇಶದ ಗ್ರಾಹಕರಿಂದ ಮೇಲ್ ಬರಬಹುದು ಎಂಬ ಊಹೆಯಾದರೂ ಇರಲು ಹೇಗೆ ಸಾಧ್ಯ?

‘3.8.24ರಂದು ವೆಂಕಟಗಿರಿಯಪ್ಪನಿಂದ ಸರಿ ಮಾಡಿಸಿದ್ದೇನೆ’ ಎಂದು ಬರೆಸಿಕೊಂಡಿದ್ದ ಈ ವಾಚು ಮತ್ತೆ ಯಾವ ವರ್ಷದಲ್ಲಿ ನಿಂತುಹೋಗಿರಬಹುದು? ವಾಚು ಸರಿ ಮಾಡಿಸಿದ್ದೇನೆ ಎಂದು ಕನ್ನಡದ ಒಂದನೆಯ ಪುಸ್ತಕದ ಕೊನೆಯ ಪುಟದಲ್ಲಿ ಒಳ್ಳೆ ಡೈರಿಯಲ್ಲಿ ಬರೆಯುವಂತೆ ಬರೆದಿದ್ದು ಯಾಕೆ? ವಾಚನ್ನು ಸಾಗರದಿಂದ ವೆಂಕಟಗಿರಿಯಪ್ಪನೇ ಕೊಂಡುತಂದಿರಬಹುದೇ? ಸಾಗರದಲ್ಲಿ ಆಗಿನ ಕಾಲದಲ್ಲಿಯೇ ವಾಚು ಅಂಗಡಿ ಇದ್ದಿರಬಹುದೇ? ಈ ಅಣ್ಣ ತಮ್ಮಂದಿರು ಶಾಲೆ ಕಲಿತಿದ್ದಾದರೂ ಎಲ್ಲಿ?

ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕೊಡಬಹುದಾಗಿದ್ದ ಕೊಂಡಿಗಳು ಕಾಲದ ಪ್ರವಾಹದಲ್ಲಿ  ಕೊಚ್ಚಿಹೋಗಿವೆ. ಶತಮಾನದ ಪುಸ್ತಕ ಮತ್ತು ಶತಮಾನಕ್ಕೆ ಹತ್ತಿರವಾಗಿರುವ ಪಾಕೆಟ್ ವಾಚು ಸುಲಭಕ್ಕೆ ಪತ್ತೆ ಬಿಟ್ಟುಕೊಡದ ಹಳೆಕಾಲದ  ವಾಸ್ತವಗಳನ್ನು, ಅಣ್ಣತಮ್ಮಂದಿರ ಬಾಳಿನ ಕೆಲವು ಪುಟಗಳನ್ನು ಅಂಟಿಸಿಕೊಂಡು ನನ್ನೆದುರು ಇದೆ.

ವರ್ಷಗಳ ಹಿಂದೆ ಯಾವ್ಯಾವುವದೋ ಕ್ಷಣಗಳಿಗೆ ಸಾಕ್ಷಿಯಾಗಿ ದಿನವನ್ನು, ಗಂಟೆಯನ್ನು ಸುತ್ತಿದ, ಆ ಎಲ್ಲ ಕ್ಷಣಗಳಿಗೆ ಸಾಂಗತ್ಯ ಒದಗಿಸಿದ್ದ DOST ಪಾಕೆಟ್ ವಾಚಿನ ಮುಳ್ಳುಗಳು ಈಗ ಸ್ತಬ್ಧವಾಗಿವೆ. ಪುಸ್ತಕದ ಪಾಠಗಳನ್ನು ಮುಟ್ಟಿದ್ದ, ತಟ್ಟಿದ್ದ ಹುಡುಗನ ಸ್ಪರ್ಶವೊಂದು ನಿಷ್ಕಾರಣ, ನಿರ್ಮಾನುಷ ಕ್ರೌರ್ಯಕ್ಕೆ ಪಕ್ಕಾಗಿ, ತಣ್ಣಗಾದ ಸಂಗತಿಗೂ ಈ ಪಾಕೆಟ್ ವಾಚ್ ಸಾಕ್ಷಿಯಾಗಿದ್ದಿರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT