ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರಂತಾಗುವ ಆಸೆ!

Last Updated 6 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಇದೊಂದು ಬಹಳ ವಿಚಿತ್ರವಾದ ಆಸೆ. ಬಹುತೇಕ ಎಲ್ಲರಿಗೂ ಆದರ್ಶವ್ಯಕ್ತಿ ಇರುತ್ತಾರೆ; ಕನಿಷ್ಠ ಒಬ್ಬರಾದರೂ ಆದರ್ಶವ್ಯಕ್ತಿ ಇರುತ್ತಾರೆ. ತಾನೂ ಸಹ ತನ್ನ ಆದರ್ಶವ್ಯಕ್ತಿಯ ಹಾಗೆ ಆಗಬೇಕೆನ್ನುವ ಮಹದಾಸೆಯನ್ನು ಹೊಂದಿರುತ್ತಾರೆ.

ಅದಕ್ಕಾಗಿ ಸಾಕಷ್ಟು ಪ್ರಯತ್ನವನ್ನೂ ಮಾಡುತ್ತಿರುತ್ತಾರೆ. ಎಷ್ಟು ಜನರ ಪ್ರಯತ್ನ ಫಲಕಾರಿಯಾಗುತ್ತದೆ? ಆದರೆ ತಮ್ಮ ಆದರ್ಶವ್ಯಕ್ತಿಯಂತೆಯೇ ಆಗಬೇಕೆನ್ನುವ ಎಲ್ಲರ ಬಯಕೆಯಲ್ಲಿಯೇ ಸಮಸ್ಯೆ ಇದೆ! ಜಗತ್ತಿನಲ್ಲಿ ಯಾರೂ ಮತ್ತೊಬ್ಬರಂತೆ ಆಗಲಿಕ್ಕೆ ಆಗುವುದಿಲ್ಲ. ಬಹಳ ಸರಳವಾಗಿ ಹೇಳಬೇಕೆಂದರೆ, ಹಾಗೆ ಆಗಲಿಕ್ಕೆ ಪ್ರಕೃತಿಯಲ್ಲಿಯೇ ಅವಕಾಶ ಇಲ್ಲ!

ಇದೊಂದು ಬಹಳ ವಿಚಿತ್ರವಾದ ಸತ್ಯ. ಬರಿ ಕಣ್ಣಿನಿಂದ ನೋಡಲಿಕ್ಕೆ ಎಲ್ಲವೂ ಸಾಮಾನ್ಯವಾಗಿ ಒಂದರ ಹಾಗೆ ಮತ್ತೊಂದು ಕಂಡರೂ ಒಂದರಂತೆ ಮತ್ತೊಂದಿಲ್ಲ. ಎಲ್ಲವೂ ಬೇರೆ ಬೇರೆಯಾಗಿದೆ. ಅವಳಿ ಮಕ್ಕಳಲ್ಲಿಯೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಹೀಗೆ ಎಲ್ಲದರಲ್ಲಿರುವ ಅಲ್ಪ ಸ್ವಲ್ಪ ವ್ಯತ್ಯಾಸವೇ ಜಗತ್ತನ್ನು ಇನ್ನೂ ಸಹನೀಯವನ್ನಾಗಿ ಇರಿಸಿದೆ.

ಇದಕ್ಕೊಂದು ಉದಾಹರಣೆ ಎಂದರೆ, ನಮ್ಮ ಮನೆಯ ಮುಂದಿನ ತೋಟದಲ್ಲಿ ಇರುವುದೆಲ್ಲವೂ ಒಂದೇ ಜಾತಿಯ ಗಿಡಗಳಾದರೆ, ಒಂದೇ ಬಣ್ಣದ ಹೂವಾದರೆ ಅದನ್ನೇ ಪ್ರತಿದಿನ ನೋಡಿ ನೋಡಿ ಕೆಲವೇ ದಿನಗಳಲ್ಲಿ ನಮಗೆ ಬೇಸರವಾಗಿ ಹೋಗುತ್ತದೆ. ತೋಟದಲ್ಲಿ ಬೇರೆ ಬೇರೆ ಆಕಾರದ ಬೇರೆ ಬೇರೆ ಬಣ್ಣಗಳ ಬೇರೆ ಬೇರೆ ಪರಿಮಳದ ಬೇರೆ ಬೇರೆ ಹೆಸರಿನ ಹೂವುಗಳಿದ್ದರೆ ಚೆಂದ. ಆಗ ತೋಟದ ಬೆಲೆಯೂ ಹೆಚ್ಚು. ಅದರ ಬಗ್ಗೆ ಆಕರ್ಷಣೆಯೂ ಹೆಚ್ಚು. ಅದರ ಮಹತ್ವವೂ ಹೆಚ್ಚು. ಇದು ಪ್ರಕೃತಿಯ ಸಡಗರ.

ಹಾಗೆಯೇ, ಜೀವನದಲ್ಲಿಯೂ ಸಹ ವೈವಿಧ್ಯ ಮಹತ್ವದ್ದಾಗಿದೆ. ಒಬ್ಬರಂತೆ ಇನ್ನೊಬ್ಬರಿಲ್ಲದಿರುವುದು ಸೋಜಿಗವಾಗಿದೆ. ಒಬ್ಬರು ಇನ್ನೊಬ್ಬರಂತೆ ಆಗಲಿಕ್ಕೆ ಆಗದಿರುವುದೂ ಮತ್ತಷ್ಟು ಸೋಜಿಗವಾಗಿದೆ. ಈಗ ಭೂಮಿಯ ಮೇಲೆ ಸುಮಾರು ಏಳುನೂರು ಕೋಟಿ ಜನರು ಬದುಕಿದ್ದಾರೆ. ಅವರಲ್ಲಿ ಒಬ್ಬರ ಹೆಬ್ಬೆರಳಿನ ಗುರುತು ಇನ್ನೊಬ್ಬರ ಹೆಬ್ಬೆರಳಿನ ಗುರುತಿಗೆ ಸರಿಹೊಂದಲಾರದು. ಕಣ್ಣಿನ ರೆಟೀನಾ ಇನ್ನೊಬ್ಬರ ಕಣ್ಣಿನ ರೆಟೀನಾಗಿಂತ ಭಿನ್ನವಾಗಿರುತ್ತದೆ.

ಎಲ್ಲರ ಬೆರಳಚ್ಚು ಬೇರೆ ಬೇರೆಯಾಗಿದೆ. ಅಷ್ಟೊಂದು ಸೂಕ್ಷ್ಮವಾಗಿ ಪ್ರಕೃತಿ ಎಲ್ಲರನ್ನೂ ಸೃಷ್ಠಿಸಿದೆ. ಸೂಕ್ಷ್ಮವಾಗಿ ಹೇಳಬೇಕೆಂದರೆ, ಪ್ರಕೃತಿ ಸೃಷ್ಟಿಸುವುದು ಪ್ರತಿಯೊಂದೂ ಸಹ ಮಾಸ್ಟರ್ ಪೀಸ್‌ಗಳೇ ಆಗಿವೆ! ನೀವೂ ಸಹ ಪ್ರಕೃತಿಯು ಪ್ರೀತಿಯಿಂದ ಸೃಷ್ಟಿಸಿದ ಮತ್ತೊಂದು ಮಾಸ್ಟರ್ ಪೀಸ್ ಆಗಿದ್ದೀರಿ!

ಹಾಗಾಗಿ ಒಬ್ಬರಂತೆ ಇಬ್ಬರು ಇರಲಿಕ್ಕಾಗದು. ಹಾಗೆಯೇ ಜಗತ್ತಿನಲ್ಲಿ ಒಬ್ಬನೇ ಅರಿಸ್ಟಾಟಲ್, ಒಬ್ಬನೇ ಅರ್ಜುನ, ಒಬ್ಬನೇ ಬ್ರೂಸ್ಲೀ, ಒಬ್ಬನೇ ಜೆಟ್ ಲೀ, ಒಬ್ಬನೇ ರಜನಿಕಾಂತ್, ಒಬ್ಬನೇ ಅಮಿತಾಭ್, ಒಬ್ಬನೇ ರಾಜಕುಮಾರ್ ...  ಹೀಗೇ ಲಕ್ಷಾಂತರ ಯಶಸ್ವೀ ವ್ಯಕ್ತಿಗಳ ಪಟ್ಟಿಯನ್ನು ಮಾಡಿದರೂ ಎಲ್ಲಿಯೂ ಒಬ್ಬರಂತೆಯೇ ಇರುವ ಇನ್ನೊಬ್ಬ ವ್ಯಕ್ತಿ ಸಿಗಲಾರ. ಇಲ್ಲಿ ಪ್ರತಿಯೊಬ್ಬರೂ ಅವರವರ ದಾರಿಯಲ್ಲಿ ಅವರಿಷ್ಟದಂತೆ ನಡೆದವರು. ಅವರವರ ಗಮ್ಯವನ್ನು ಸೇರಿದವರು. ಉಳಿದವರ ದೃಷ್ಟಿಯಲ್ಲಿ ಇವರೆಲ್ಲರೂ ’ಜೀವನದಲ್ಲಿ ಯಶಸ್ವಿಯಾದವರು’ ಎಂದು ಅನ್ನಿಸಿಕೊಂಡವರು.

ಯಶಸ್ವೀ ವ್ಯಕ್ತಿಗಳಂತೆ ತಾನೂ ಸಹ ತನ್ನ ಜೀವನದಲ್ಲಿ ಯಶಸ್ವೀ ವ್ಯಕ್ತಿ ಆಗಬೇಕು ಎಂದು ಆಸೆ ಪಡುವುದು ಅಸಹಜವೇನಲ್ಲ. ಆದರೆ ಅವರ ಪ್ರತಿಕೃತಿಯಾಗಲಿಕ್ಕೆ ಪ್ರಯತ್ನಿಸುವುದು ಸರಿಯಲ್ಲ. ಆದು ಸಾಧ್ಯವಾಗುವುದಿಲ್ಲ. ಅವರ ಜೀವನದಿಂದ ಸ್ಫೂರ್ತಿಯನ್ನು ಪಡೆದುಕೊಳ್ಳಬಹುದು. ಅದರಿಂದ ತಮ್ಮ ಜೀವನವನ್ನು ತಾವೇ ನಿರ್ಮಿಸಿಕೊಳ್ಳಬೇಕು. ಒಳ್ಳೆಯ ನಟರಿಂದ ಸ್ಫೂರ್ತಿಯನ್ನು ಪಡೆದುಕೊಂಡು ಮತ್ತೂ ಒಳ್ಳೆಯ ನಟನಾಗಲಿಕ್ಕೆ ಪ್ರಯತ್ನಿಸಿ ಯಶಸ್ವಿಯಾಗಬಹುದು. ಆದರೆ ತನ್ನ ಆದರ್ಶ ನಟನಂತೆಯೇ ನಟನೆಯನ್ನು ಕಾಪಿ ಮಾಡುವುದರಿಂದ, ಯಶಸ್ವಿಯಾಗಲಿಕ್ಕೆ ಸಾಧ್ಯವಾಗುವುದಿಲ್ಲ.

ಈ ಜೀವನದ ಸೊಗಸು ಮತ್ತು ಸತ್ಯವೇನೆಂದರೆ ಪ್ರತಿಯೊಬ್ಬರೂ ತಮ್ಮ ಜೀವನದ ಗಮ್ಯವನ್ನು ತಾವೇ ಕಂಡುಕೊಳ್ಳಬೇಕು. ಅದನ್ನು ತಲುಪಲಿಕ್ಕಾಗಿ ತಾವೇ ಪ್ರಯತ್ನಿಸಬೇಕು. ಹೀಗೆ ನಡೆದವರು ಖಂಡಿತವಾಗಿಯೂ ಅವರ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ.

ಬೇರೆಯವರ ಒತ್ತಾಯಕ್ಕೆ ಮಣಿದು ತಮಗೆ ಇಷ್ಟವಿರದ ಮತ್ತು ತಮಗೆ ಸ್ಪಷ್ಟತೆ ಇರದ ಕ್ಷೇತ್ರದಲ್ಲಿ ಎಷ್ಟೇ ಪ್ರಯತ್ನಿಸಿದರೂ ಯಶಸ್ಸನ್ನು ಗಳಿಸಲಿಕ್ಕೆ ಸಾಧ್ಯವಾಗದು.  ಯಾರು ಏನು ಆಗಬೇಕೋ ಅವರು ಅದೇ ಆಗುವಂತೆ ಪ್ರಕೃತಿ ವ್ಯವಸ್ಥೆ ಮಾಡಿರುತ್ತದೆ. ಹಾಗಾಗಿ ನಾವೆಲ್ಲರೂ ಸೃಷ್ಟಿಗೆ ಋಣಿಯಾಗಿರಬೇಕು. ನಮ್ಮನ್ನು ನಮ್ಮನ್ನಾಗಿರಿಸುವುದಕ್ಕಾಗಿಯೂ ಮತ್ತು ನಾವು ನಮ್ಮ ದಾರಿಯಲ್ಲಿ ಮುಂದುವರೆಯುವ ಶಕ್ತಿಯನ್ನು ಕರುಣಿಸಿರುವುದಕ್ಕಾಗಿಯೂ ನಾವು ನಿತ್ಯವೂ ಪ್ರಕೃತಿಗೆ ಋಣಿಯಾಗಿರಬೇಕು. 

ಅವರಂತೆ ಆಗುವ ಆಸೆ ತಪ್ಪಲ್ಲ. ಆದರೆ ಅವರಂತೆ ಆಗಲಿಕ್ಕೆ ಅಗುವುದಿಲ್ಲ ಎನ್ನುವುದು ಮಾತ್ರ ಸತ್ಯ. ಹಾಗಾಗಿ ಇಲ್ಲಿ ಪ್ರತಿಯೊಬ್ಬರಿಗೂ ಅವರಾಗಿಯೇ ಎಷ್ಟು ಎತ್ತರಕ್ಕೆ ಬೇಕೋ ಅಷ್ಟು ಎತ್ರಕ್ಕೆ ಬೆಳೆಯುವ ಅವಕಾಶ ಇದೆ. ಎಷ್ಟೇ ಜನ ನಟರಿದ್ದರೂ , ಎಷ್ಟೇ ಜನ ಹಾಡುವವರಿದ್ದರೂ ಜಗತ್ತಿನಲ್ಲಿ ನಿಮ್ಮದೇ ಆದ ಅವಕಾಶ ಇದ್ದೇ ಇದೆ.

ನಿಮ್ಮಂತೆ ನಟಿಸುವವರಾಗಲೀ, ನಿಮ್ಮಂತೆ ಹಾಡುವವರಾಗಲೀ ಮತ್ತೊಬ್ಬರಿಲ್ಲ. ನಿಮ್ಮ ಪ್ರತಿಕೃತಿ ಯಾರೂ ಇಲ್ಲ. ನೀವು ಬೇರೊಬ್ಬರ ಪ್ರತಿಕೃತಿಯಾಗಿಲ್ಲ. ನೀವು ನೀವೇ ಆಗಿದ್ದೀರಿ. ಅದು ವಿಶೇಷ. ಇಲ್ಲಿ ನೀವಾಗಿಯೇ ಉಳಿಯಲಿಕ್ಕೆ ಮತ್ತು ಬೆಳೆಯಲಿಕ್ಕೆ ಸಾಕಷ್ಟು ಅವಕಾಶ ಯಾವಾಗಲೂ ಇದ್ದೇ ಇದೆ. ಇದೇ ಪ್ರಕೃತಿಯ ಸೋಜಿಗ ಮತ್ತು ಸೊಬಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT