ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಜಪಾನ್‌ ಸಂಬಂಧ ವೃದ್ಧಿಗೆ ಸಮ್ಮತಿ

ಮೋದಿ– ಅಬೆ ಮಾತುಕತೆ, ಇಂದು ಆಸಿಯಾನ್‌–ಭಾರತ ಶೃಂಗಸಭೆ
Last Updated 7 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ವಿಯೆಂಟಿಯಾನ್‌, ಲಾವೊಸ್‌ (ಪಿಟಿಐ): ಭಯೋತ್ಪಾದನೆ ವಿರುದ್ದದ ಹೋರಾಟ, ನಾಗರಿಕ ಪರಮಾಣು ಸಹಕಾರ, ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಕ್ಷೇತ್ರಗಳಲ್ಲಿ ಪರಸ್ಪರ ಸಂಬಂಧ ವೃದ್ಧಿಗೆ ಭಾರತ ಮತ್ತು ಜಪಾನ್‌ ನಿರ್ಧರಿಸಿವೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

14ನೇ ಆಸಿಯಾನ್‌–ಭಾರತ ಮತ್ತು 11ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬುಧವಾರ ಇಲ್ಲಿಗೆ ಬಂದ ಮೋದಿ ಅವರು ಜಪಾನ್‌ ಪ್ರಧಾನಿ ಜತೆ 45 ನಿಮಿಷ ಚರ್ಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ವಿಕಾಸ್‌ ಸ್ವರೂಪ್‌ ಹೇಳಿದರು.

ಈ ಇಬ್ಬರು ನಾಯಕರು ಆರು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಭೇಟಿಯಾಗಿದ್ದಾರೆ. ಏಪ್ರಿಲ್‌ನಲ್ಲಿ ವಾಷಿಂಗ್ಟನ್‌ನಲ್ಲಿ ನಡೆದಿದ್ದ ಪರಮಾಣು ಭದ್ರತಾ ಶೃಂಗಸಭೆಯ ವೇಳೆಯೂ ಇವರಿಬ್ಬರು ಮಾತುಕತೆ ನಡೆಸಿದ್ದರು.

ಭಾರತದಲ್ಲಿ ತಲೆಎತ್ತಲಿರುವ ಜಪಾನ್‌ ಕೈಗಾರಿಕಾ ಪಾರ್ಕ್‌ಗಳು ಮತ್ತು ಅತಿವೇಗದ ರೈಲು ಯೋಜನೆಗಳ ಬಗ್ಗೆಯೂ ಉಭಯ ದೇಶಗಳ ನಾಯಕರು ಚರ್ಚಿಸಿದ್ದಾರೆ.

ಆಗ್ನೇಯ ಏಷ್ಯಾ ವಲಯದ ದೇಶಗಳ ಜತೆಗಿನ ಸಂಬಂಧವನ್ನು ಬಲಪಡಿಸುವ ಗುರಿಯೊಂದಿಗೆ ಪ್ರಧಾನಿ ಇಲ್ಲಿಗೆ ಬಂದಿದ್ದಾರೆ. ಗುರುವಾರ ಮೋದಿ ಅವರು ಅಮೆರಿಕ ಅಧ್ಯಕ್ಷ ಒಬಾಮ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಮ್ಯಾನ್ಮಾರ್‌ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಇತರ ಕೆಲವು ದೇಶಗಳ ನಾಯಕರ ಜತೆಯೂ ಪ್ರಧಾನಿ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಯಿದೆ.

ಮೋದಿ ಅವರು ಲಾವೊಸ್‌ ಪ್ರಧಾನಿ ತಾಂಗ್ಲೊನ್‌ ಸಿಸೌ ಲಿತ್‌ ಜತೆ ಭಯೋತ್ಪಾದನೆ, ಸಾಗರ ಸುರಕ್ಷೆ, ವಿಕೋಪ ನಿರ್ವಹಣೆ, ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ  (ಆರ್‌ಸಿಇಪಿ) ಮತ್ತು ಏಷ್ಯಾ ಪೆಸಿಫಿಕ್‌ ಆರ್ಥಿಕ ಸಹಕಾರ (ಅಪೆಕ್‌) ಕುರಿತು ಚರ್ಚೆ ನಡೆಸಲಿದ್ದಾರೆ. 21 ಸದಸ್ಯರ ಅಪೆಕ್‌ ಗುಂಪು ಸೇರಬೇಕೆಂಬುದು ಭಾರತದ ಬಯಕೆಯಾಗಿದೆ.

ಆಸಿಯಾನ್‌–ಭಾರತ  ಶೃಂಗಸಭೆಯಲ್ಲಿ ರಾಜಕೀಯ, ಭದ್ರತೆ, ಆರ್ಥಿಕ,  ಸಾಮಾಜಿಕ ಮತ್ತು ಸಾಂಸ್ಕೃತಿಕ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆಯಾಗಲಿವೆ. ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ವಿವಿಧ ದೇಶಗಳ ನಾಯಕರು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಮೋದಿ ಅವರು ಮೂರನೇ ಬಾರಿ ಈ ಎರಡು ಶೃಂಗಸಭೆಗಳಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT