ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಾಜ್–ಎ–ಪಂಜಾಬ್‌ಗೆ ಚಾಲನೆ

ಕಾಂಗ್ರೆಸ್‌, ಕೇಜ್ರಿವಾಲ್, ಬಾದಲ್‌ಗಳ ವಿರುದ್ಧ ಸಿಧು ವಾಗ್ದಾಳಿ
Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಚಂಡೀಗಡ: ಚುನಾವಣೆಯ ಹೊಸ್ತಿಲಲ್ಲಿರುವ ಪಂಜಾಬ್‌ನಲ್ಲಿ ತಮ್ಮ ಹೊಸ ಆವಾಜ್–ಎ–ಪಂಜಾಬ್‌ ಪಕ್ಷಕ್ಕೆ ಗುರುವಾರ ಚಾಲನೆ ನೀಡಿದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಅಕಾಲಿದಳ–ಬಿಜೆಪಿ ಮೈತ್ರಿಕೂಟ, ಎಎಪಿ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಎಎಪಿಯನ್ನು ‘ಪ್ರಜಾಪ್ರಭುತ್ವದ ವೇಷದಲ್ಲಿರುವ ಅರಾಜಕತೆ’ ಎಂದು ಟೀಕಿಸಿರುವ ಅವರು, ಕೇಜ್ರಿವಾಲ್ ಅವರಿಗೆ ಕೇವಲ ‘ಎಸ್ ಮ್ಯಾನ್’ಗಳು (ಹೌದಪ್ಪಗಳು) ಮಾತ್ರ ಬೇಕು ಎಂದರು. 

ಪಕ್ಷಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ವಂಶಪಾರಂಪರ್ಯ ಆಡಳಿತವನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವದ ಅಧಿಕಾರವನ್ನು ಜನರಿಗೆ ಹಸ್ತಾಂತರಿಸುವುದು ನಮ್ಮ ಪಕ್ಷದ ಗುರಿ’ ಎಂದರು.

ಮುಂದಿನ 15–20 ದಿನಗಳಲ್ಲಿ ತಮ್ಮ ಪಕ್ಷದ ಮುಂದಿನ ಯೋಜನೆಗಳನ್ನು ಪ್ರಕಟಿಸುವುದಾಗಿ ಸಿಧು ಹೇಳಿದರು. ಪಂಜಾಬ್‌ನಲ್ಲಿ ದಶಕಗಳಿಂದ ಅಧಿಕಾರದಲ್ಲಿರುವ ಬಾದಲ್ ಕುಟುಂಬದ ವಿರುದ್ಧ ನೇರ ವಾಗ್ದಾಳಿ ನಡೆಸಿದ ಸಿಧು, ‘ಪಂಜಾಬಿನ ಮೇಲೆ ಕಪ್ಪು ಮೋಡಗಳು ಆವರಿಸಿದ್ದು (ಕಾಲೇ ಬಾದಲ್‌), ಜನರು ಸೂರ್ಯನ ಕಿರಣಗಳನ್ನು ನೋಡಲು ಹಾತೊರೆಯುತ್ತಿದ್ದಾರೆ’ ಎಂದರು.

‘ಜನರು ತಮಗಾಗಿ ಸರ್ಕಾರವನ್ನು ಆಯ್ಕೆ ಮಾಡುತ್ತಾರೆಯೇ ಹೊರತು ಒಂದು ಕುಟುಂಬಕ್ಕಾಗಿ ಅಲ್ಲ. ಬಾದಲ್‌ಗಳು ಪಂಜಾಬನ್ನು ತಮ್ಮ ಕುಟುಂಬದ ಹಾಗೂ ಪಕ್ಷದ ಊಳಿಗಮಾನ್ಯದ ಉಂಬಳಿ ಎಂಬಂತೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಬಾದಲ್ ಕುಟುಂಬ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಕರೆದ ಸಿಧು, ಇವರಿಬ್ಬರು ‘ಫ್ರೆಂಡ್ಲಿ ಮ್ಯಾಚ್’ ರೀತಿ (ಒಬ್ಬರಾದ ಮೇಲೆ ಇನ್ನೊಬ್ಬರು) ಅಧಿಕಾರ ನಡೆಸುತ್ತಿದ್ದಾರೆ.  ಪಂಜಾಬ್‌ನ  ಭವಿಷ್ಯದ ದೃಷ್ಟಿಯಿಂದ ಬದಲಾವಣೆ ಅತ್ಯಗತ್ಯ ಎಂದು ಒತ್ತಿ ಹೇಳಿದರು.

ಅರ್ಧಸತ್ಯ ಹೇಳುವ ಕೇಜ್ರಿವಾಲ್: ಎಎಪಿ ಸೇರುವ ಬಗ್ಗೆ ಇದ್ದ ವದಂತಿಗೆ ಸ್ಪಷ್ಟೀಕರಣ ನೀಡಿದ ಸಿಧು, ‘ಕೇಜ್ರಿವಾಲ್ ಅರ್ಧಸತ್ಯ ಮಾತ್ರ ಹೇಳುತ್ತಾರೆ. ಕೇವಲ ಪ್ರಚಾರವನ್ನಷ್ಟೇ ಮಾಡಿ, ಚುನಾವಣೆಗೆ ಸ್ಪರ್ಧಿಸಬೇಡಿ ಎಂದು ಕೇಜ್ರಿವಾಲ್ ನನಗೆ ಆಹ್ವಾನ ನೀಡಿದ್ದರು’ ಎಂದು ಹೇಳಿದರು.

‘ಎರಡು ವರ್ಷಗಳಿಂದ ನನ್ನ ಹಿಂದೆ ಬಿದ್ದಿದ್ದ ಕೇಜ್ರಿವಾಲ್ ಬೆಂಬಲಿಗರು ಹಲವು ‘ಆಫರ್’ಗಳನ್ನು ನೀಡಿದ್ದರು. ನನ್ನ ಪತ್ನಿಯನ್ನು ಸಚಿವೆಯನ್ನಾಗಿ ಮಾಡುವುದಾಗಿ ಹೇಳಿದ್ದರು. ನನ್ನನ್ನು ‘ಪ್ರದರ್ಶನ ವಸ್ತು’ವಾಗಿ ಬಳಸಿಕೊಳ್ಳಲು ಮಾತ್ರ ಕೇಜ್ರಿವಾಲ್ ಬಯಸಿದ್ದರು’ ಎಂದು ಹೇಳಿದರು.

ಸಿಧು ಅವರ ಹೊಸ ವೇದಿಕೆಯಲ್ಲಿ ಶಿರೋಮಣಿ ಅಕಾಲಿದಳದ ಬಂಡಾಯ ಶಾಸಕ ಪರ್ಗತ್ ಸಿಂಗ್ ಹಾಗೂ ಬೈನ್ಸ್‌  ಸಹೋದರರಾದ ಸಮರ್‌ಜೀತ್ ಹಾಗೂ ಬಲ್ವಿಂದರ್ ಗುರುತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT