ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಬದಲಾವಣೆಗೆ ಒತ್ತಾಯ

Last Updated 8 ಸೆಪ್ಟೆಂಬರ್ 2016, 20:08 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರ ವಾದ ಮಂಡಿಸುತ್ತಿರುವ ವಕೀಲರ ತಂಡವನ್ನು ರಾಜ್ಯ ಸರ್ಕಾರ ಕೂಡಲೇ ಬದಲಾಯಿಸಬೇಕು ಎಂದು ಬೆಂಗಳೂರು ವಕೀಲರ ಸಂಘ ಒತ್ತಾಯಿಸಿದೆ.

ಈ ಸಂಬಂಧ ನಗರದ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಬುಧವಾರ ಕರೆಯಲಾಗಿದ್ದ ಸಂಘದ ಸರ್ವ ಸದಸ್ಯರ ವಿಶೇಷ ತುರ್ತು ಸಭೆ ನಾಲ್ಕು ಪ್ರಮುಖ ನಿರ್ಣಯಗಳನ್ನು ಸ್ವೀಕರಿಸಿದೆ.

ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರನ್ನೂ ಸಚಿವ ಸ್ಥಾನದಿಂದ ಬದಲಾಯಿಸಬೇಕು. ಅವರ ಸ್ಥಾನಕ್ಕೆ ನೀರಾವರಿ ವಿಷಯಗಳಲ್ಲಿ ಹೆಚ್ಚಿನ ಜ್ಞಾನ ಹೊಂದಿದ ಅನುಭವಿಗಳನ್ನು ನೇಮಕ ಮಾಡಬೇಕು. ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಹಿರಿಯ ವಕೀಲರ ಸಭೆ ನಡೆಸಿ ಅವರ ಸಲಹೆ ಪಡೆಯಬೇಕು. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ವಕೀಲರ ಸಂಘಗಳೂ ಬೆಂಬಲ ವ್ಯಕ್ತಪಡಿಸಬೇಕು.
ಇದೇ 9ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಗಳೂರು ವಕೀಲರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ.

ಅಂದು ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮ್ಯಾಜಿಸ್ಟ್ರೇಟ್ ಕೋರ್ಟ್‌ ಹಾಗೂ ಮೆಯೊ ಹಾಲ್‌ ಕೋರ್ಟ್‌ಗಳಲ್ಲಿ ವಕೀಲರು ಕಲಾಪಗಳಿಂದ ಹೊರಗುಳಿಯಬೇಕು ಎಂಬ ನಿರ್ಣಯಗಳನ್ನು ಸ್ವೀಕರಿಸಲಾಗಿದೆ.

ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿ: ಕೆಆರ್‌ಎಸ್‌ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಒತ್ತಾಯಿಸಿದೆ. 

ಮಂಡ್ಯ, ಮೈಸೂರು, ಬೆಂಗಳೂರು,  ಸೇರಿದಂತೆ ಎಂಟು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಯ ಅಗತ್ಯವನ್ನು ರಾಜ್ಯ ಸರ್ಕಾರ ಮನವರಿಕೆ ಮಾಡಬೇಕು. ನ್ಯಾಯಾಲಯದ ಎದುರು ಸಮರ್ಥವಾಗಿ ವಾದ ಮಂಡಿಸಬೇಕು ಎಂದು ಕೆಪಿಆರ್‌ಎಸ್‌ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆದು ಎರಡೂ ರಾಜ್ಯಗಳ ರೈತರ ನಡುವೆ ಒಡುಕು ಮೂಡಿಸುವ ಹುನ್ನಾರು ನಡೆಸುತ್ತಿವೆ. ಜನರನ್ನು ರೊಚ್ಚಿಗೆಬ್ಬಿಸುತ್ತಿವೆ  ಎಂದು  ಅವರು ಆರೋಪಿಸಿದರು.

ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ರೈತರು ಮತ್ತು ಜನರು ಭಾವುಕರಾಗದೆ ವಿವೇಚನೆಯಿಂದ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ದಶಕಗಳಷ್ಟು ಹಳೆಯದಾದ  ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ಎಲ್ಲ ರಾಜ್ಯಗಳ ಜತೆ ಚರ್ಚಿಸಿ ಹೊಸ ಕಾನೂನು ರೂಪಿಸಬೇಕು ಎಂದು ಮಾನ್ಪಡೆ ಅಭಿಪ್ರಾಯಪಟ್ಟರು.

ಅಲ್ಲಿಯವರೆಗೆ ಎಲ್ಲ ರಾಜ್ಯಗಳಿಗೂ ಒಪ್ಪಿಗೆಯಾಗುವಂತೆ ನದಿ ನೀರು ಹಂಚಿಕೆಗೆ ಹೊಸ ಸಂಧಾನ ಸೂತ್ರ ರಚಿಸಬೇಕು ಎಂದರು.

ವಿವಿಧ ಸಂಘಟನೆಗಳ ಬೆಂಬಲ
ಬಂದ್‌ಗೆ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಬೆಂಬಲ ವ್ಯಕ್ತಪಡಿಸಿವೆ.

‘ಬಂದ್‌ನಿಂದಾಗಿ ರಾಜ್ಯದ ಕೈಗಾರಿಕಾ ವಲಯಕ್ಕೆ ಭಾರಿ ನಷ್ಟವಾಗುವುದು ನಿಜವಾದರೂ, ನಾಡಿನ ಜನರ ಭಾವನೆಗಳಿಗೆ ಸ್ಪಂದಿಸುವ  ಕಾರಣಕ್ಕೆ ವಾಣಿಜ್ಯೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ’ ಎಂದು ‘ಎಫ್‌ಕೆಸಿಸಿಐ’ ನ ಹಿರಿಯ ಉಪಾಧ್ಯಕ್ಷ ಕೆ. ರವಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಜಲಸಂಪನ್ಮೂಲ ಕೈತಪ್ಪದಂತೆ ತಡೆಯಲು ಬೆಂಬಲ: ಕಾಸಿಯಾ
‘ರಾಜ್ಯದ ಜಲ ಸಂಪನ್ಮೂಲ ನಮ್ಮ ಕೈತಪ್ಪದಂತೆ ಒತ್ತಡ ತರಲು ಬಂದ್‌ನಲ್ಲಿ ಭಾಗವಹಿಸುತ್ತಿದ್ದೇವೆ.  ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಾಳೆ ಬಾಗಿಲು ಹಾಕಿ ಬಂದ್‌ ಬೆಂಬಲಿಸಲಿವೆ’ ಎಂದು  ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ  ಎ. ಪದ್ಮನಾಭ ಅವರು ಪ್ರತಿಕ್ರಿಯಿಸಿದ್ದಾರೆ.

ಮುಸ್ಲಿಂ ಎನ್‌ಜಿಒಗಳ ಒಕ್ಕೂಟದ ಬೆಂಬಲ
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆದೇಶ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ಮುಸ್ಲಿಂ ಎನ್‌ಜಿಒಗಳ ಒಕ್ಕೂಟ ಬೆಂಬಲ ಸೂಚಿಸಿದೆ.

ಮುಸ್ಲಿಂ ಎನ್‌ಜಿಒಗಳ ಒಕ್ಕೂಟದ ಸಂಚಾಲಕ ಮಸೂದ್‌ ಅಬ್ದುಲ್‌ ಖಾದರ್‌ ಮಾತನಾಡಿ, ‘ರಾಜ್ಯದಲ್ಲೇ ಕುಡಿಯುವ ನೀರಿನ ಅಭಾವ ಇರುವುದರಿಂದ ತಮಿಳುನಾಡಿಗೆ ಸಾಂಬಾ ಬೆಳೆಗೆ ನೀರು ಬಿಡುವುದು ತರವಲ್ಲ. ರಾಜ್ಯ ಸರ್ಕಾರವೂ ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಬೇಕು. ಟೌನ್‌ಹಾಲ್‌ನಲ್ಲಿ ಕನ್ನಡಪರ ಸಂಘಟನೆಗಳೊಂದಿಗೆ ಸೇರಿ ಶಾಂತಿಯುತವಾಗಿ ಬಂದ್‌ಗೆ ಬೆಂಬಲ ಸೂಚಿಸುವುದಾಗಿ’  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT