ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಲಲಿತಾ, ಎಂ.ಬಿ. ಪಾಟೀಲ ಅಣಕು ತಿಥಿ

ಸುಪ್ರೀಂಕೋರ್ಟ್‌ ಆದೇಶ ಖಂಡಿಸಿ ಮುಂದುವರಿದ ಪ್ರತಿಭಟನೆ
Last Updated 8 ಸೆಪ್ಟೆಂಬರ್ 2016, 20:13 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್‌ ನೀಡಿರುವ ಆದೇಶ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಮುಂದುವರಿದಿದ್ದು, ಕನ್ನಡಪರ ಸಂಘಟನೆಗಳು ನಗರದ ಹಲವೆಡೆ   ಗುರವಾರವೂ ಪ್ರತಿಭಟನೆ ನಡೆಸಿದವು.

ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರದಲ್ಲಿ ಬೆಳಿಗ್ಗೆ 6ರ ಸುಮಾರಿಗೆ ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ. ನಾರಾಯಣಗೌಡ ಬಣದ ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ತಮಿಳುನಾಡು ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಕೆಲ ಕಾರ್ಯಕರ್ತರು ರಸ್ತೆಯಲ್ಲೇ ಟೈರ್‌ ಇಟ್ಟು, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದರು. ಬೆಂಕಿಯ ಕೆನ್ನಾಲಗೆ ಹೆಚ್ಚಾಗಿ ರಸ್ತೆಯಲ್ಲೆಲ್ಲ ಹೊಗೆ ಆವರಿಸಿತು.

ಸ್ಥಳದಲ್ಲಿದ್ದ ಪೊಲೀಸರು, ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಗಂಟೆಗಳವರೆಗೆ ಪ್ರತಿಭಟನೆ ಮುಂದುವರಿಯಿತು.  ಇದರಿಂದಾಗಿ ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ  ವಾಹನಗಳು ಸಾಲಾಗಿ ನಿಂತುಕೊಂಡಿದ್ದವು.

ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬಂದು, ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು. ಬಳಿಕ ಸಂಚಾರ  ಸಹಜ ಸ್ಥಿತಿಗೆ ಮರಳಿತು. ರಸ್ತೆಯಲ್ಲಿ ಉರಿಯುತ್ತಿದ್ದ ಟೈರ್‌ಗಳಿಗೆ ಪೊಲೀಸರೇ ನೀರು ಸುರಿದು ನಂದಿಸಿದರು.

ತಿಥಿ ಮಾಡಿ ಆಕ್ರೋಶ: ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ಕಸ್ತೂರಿ ಜನಪರ ವೇದಿಕೆಯ ಕಾರ್ಯಕರ್ತರು, ತಮಿಳುನಾಡು ಸಿಎಂ ಜಯಲಲಿತಾ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರ ಅಣಕು ತಿಥಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆಯ ರಮೇಶ್‌ ಗೌಡ, ‘ತಮಿಳುನಾಡು ಪರ ಬಂದಿರುವ ಸುಪ್ರೀಂಕೋರ್ಟ್‌ ಆದೇಶಕ್ಕೆ ನಮ್ಮ ವಿರೋಧವಿದೆ. ಸುಪ್ರೀಂಕೋರ್ಟ್‌ ಎದುರು ಸೂಕ್ತ ವಾದ ಮಂಡಿಸುವ ಪ್ರಕ್ರಿಯೆಯಲ್ಲಿ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ದೂರಿದರು.

ಉರುಳು ಸೇವೆ: ಕನ್ನಡ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದರು. ಮೈಸೂರು ಬ್ಯಾಂಕ್‌ ವೃತ್ತದಲ್ಲಿ  ಸೇರಿದ್ದ ಕಾರ್ಯಕರ್ತರು, ತಮಿಳುನಾಡು ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್‌ ನಾಗರಾಜ್‌, ‘ಸುಪ್ರೀಂಕೋರ್ಟ್‌್ ಆದೇಶ ಖಂಡಿಸಿ ಸೆ. 9ರಂದು ಬಂದ್‌ಗೆ ಕರೆ ನೀಡಲಾಗಿದೆ. ಆ ಮೂಲಕ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡು ಹಾಗೂ ಸುಪ್ರೀಂಕೋರ್ಟ್‌ಗೆ ಎಚ್ಚರಿಕೆ ಸಂದೇಶ ರವಾನಿಸಲಾಗುವುದು’ ಎಂದು ಹೇಳಿದರು.

ಪುರಭವನ ಎದುರು ಪ್ರತಿಭಟನೆ: ಸುಪ್ರೀಂಕೋರ್ಟ್‌ ಆದೇಶ ಖಂಡಿಸಿ ಪುರಭವನ ಎದುರು ಅಂಬೇಡ್ಕರ್‌ ಸೇನೆ, ಟಿಪ್ಪು ಸುಲ್ತಾನ್‌ ಸಂಯುಕ್ತ ರಂಗ ಹಾಗೂ ಕರ್ನಾಟಕ ಹೋರಾಟಗಾರರ ಸಮಿತಿ ಕಾರ್ಯಕರ್ತರು, ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಬಹಿರಂಗ ಸಭೆ ನಡೆಸಿದ ಸಂಘಟನೆಗಳ ಕಾರ್ಯಕರ್ತರು,  ಸುಪ್ರೀಂಕೋರ್ಟ್‌್ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸಭೆ ಬಳಿಕ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಟಿಪ್ಪು ಸುಲ್ತಾನ್‌ ಸಂಯುಕ್ತ ರಂಗದ ರಾಜ್ಯ ಘಟಕದ ಅಧ್ಯಕ್ಷ ಸರ್ದಾರ್‌್ ಅಹಮದ್‌ ಖುರೇಷಿ, ಅಂಬೇಡ್ಕರ್‌ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಪಿ. ಮೂರ್ತಿ ಅವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರತಿಭಟನೆಯಿಂದಾಗಿ ಪುರಭವನ ಸುತ್ತಮುತ್ತ ರಸ್ತೆಗಳಲ್ಲಿ ಗಂಟೆಗಳವರೆಗೆ ಸಂಚಾರ ದಟ್ಟಣೆ ಉಂಟಾಯಿತು.

ಬಿಜೆಪಿ ಪ್ರತಿಭಟನೆ: ಬಿಬಿಎಂಪಿ ಕಚೇರಿ ಎದುರು ಬಿಜೆಪಿ ಪಕ್ಷದ ನಗರ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶಾಸಕ ಆರ್‌.ಅಶೋಕ ನೇತೃತ್ವದಲ್ಲಿ  ನಡೆದ ಪ್ರತಿಭಟನೆಯಲ್ಲಿ ಬಿಬಿಎಂಪಿಯ ಬಿಜೆಪಿ ಸದಸ್ಯರು, ಪಕ್ಷದ ಮುಖಂಡರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಆರ್‌. ಅಶೋಕ, ‘ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈ ರೀತಿ ಆದೇಶ ಬಂದಿದೆ. ಅದನ್ನು ಖಂಡಿಸಿ ರಾಜ್ಯದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಪಕ್ಷದ ಬೆಂಬಲವಿದೆ.  ತಮಿಳುನಾಡಿಗೆ ನೀರು ಬಿಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಒಕ್ಕಲಿಗರ ಸಂಘ: ವಿವಿ ಪುರದ ಕೆ.ಆರ್‌. ರಸ್ತೆಯಿಂದ ಬಸಪ್ಪ ವೃತ್ತದವರೆಗೆ ರಾಜ್ಯ ಒಕ್ಕಲಿಗರ ಸಂಘದ ಸದಸ್ಯರು, ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನಾಕಾರರು ಬಸಪ್ಪ ವೃತ್ತದಲ್ಲಿ ಅರ್ಧ ಗಂಟೆ  ಮಾನವ ಸರಪಳಿ ನಿರ್ಮಿಸಿ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ: ಆನಂದರಾವ್‌ ವೃತ್ತದ ಗಾಂಧಿ ಪುತ್ಥಳಿ ಬಳಿ ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಸದಸ್ಯರು, ಪ್ರತಿಭಟನೆ ನಡೆಸಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಲೇಖಕಿ ಬಿ.ಟಿ.ಲಲಿತಾ ನಾಯಕ್‌ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT