ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರವು ಮರೆತ ವಿಶೇಷ ಜಿಲ್ಲಾಧಿಕಾರಿಗಳು

ನಗರ ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ: ಮೇಲ್ಮನವಿ ಸ್ವೀಕಾರಕ್ಕಷ್ಟೇ ಹೊಣೆ ಸೀಮಿತ
Last Updated 8 ಸೆಪ್ಟೆಂಬರ್ 2016, 20:16 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆಂದೇ ನೇಮಕಗೊಂಡ ವಿಶೇಷ ಜಿಲ್ಲಾಧಿಕಾರಿಗಳು ತಮ್ಮ ಹೊಣೆ ಮರೆತು ಮೇಲ್ಮನವಿ ಪ್ರಾಧಿಕಾರಿಗಳಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸರ್ಕಾರಿ ಜಮೀನು ಕಬಳಿಕೆಗೆ ಸಂಬಂಧಿಸಿ ಎ.ಟಿ. ರಾಮಸ್ವಾಮಿ ನೇತೃತ್ವದ ಸಮಿತಿಯು 2007ರಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಗರ ಜಿಲ್ಲೆಯಲ್ಲಿರುವ 1,22,918 ಸರ್ಕಾರಿ ಜಮೀನಿನ ಪೈಕಿ 34,111 ಎಕರೆ ಒತ್ತು ವರಿದಾರರ ಪಾಲಾಗಿದೆ ಎಂದು ವರದಿಯಲ್ಲಿ ತಿಳಿಸಿತ್ತು.

ಒತ್ತುವರಿದಾರರು ಕೆರೆ ಯನ್ನೇ ಮಾಯ ಮಾಡಿ ಅಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಿದ್ದರು. ಹಲವು ಮಂದಿ ಬಡಾವಣೆಗಳನ್ನು ನಿರ್ಮಿಸಿ ಮಾರಾಟ ಮಾಡಿದ್ದರು. ಸಾವಿರಾರು ಎಕರೆ ಸರ್ಕಾರಿ ಜಮೀನು ಕೃಷಿ ಉದ್ದೇ ಶಕ್ಕೂ ಬಳಕೆಯಾಗಿತ್ತು.

ಒತ್ತುವರಿ ತೆರವಿಗೆ ಆಗ್ರಹಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಹಾಗೂ ಎ.ಟಿ. ರಾಮ ಸ್ವಾಮಿ ನೇತೃತ್ವದಲ್ಲಿ 2014ರ ಸೆಪ್ಟೆಂಬರ್‌ನಲ್ಲಿ ಧರಣಿ ನಡೆದಿತ್ತು. ಒತ್ತುವರಿ ತೆರವು ಕಾರ್ಯಾಚರಣೆಗೆಂದೇ ಇಬ್ಬರು ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸುತ್ತೇವೆ ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದರು. ಆ ಬಳಿಕ ಅವರು 39 ದಿನಗಳ ಧರಣಿ ಕೈಬಿಟ್ಟಿದ್ದರು. ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಇಬ್ಬರು ವಿಶೇಷ ಜಿಲ್ಲಾಧಿಕಾರಿ ಗಳನ್ನು ನೇಮಕ ಮಾಡಿತ್ತು.

ಅವರಿಗೆ ಅಧಿಕಾರ ಹಂಚಿಕೆ ಮಾಡಿ  ಎರಡು ಉಪವಿಭಾಗಗಳ (ದಕ್ಷಿಣ ಹಾಗೂ ಉತ್ತರ) ಒತ್ತುವರಿ ತೆರವು ಹೊಣೆಯನ್ನು ವಹಿಸಲಾಗಿತ್ತು. ಒತ್ತುವರಿ ತೆರವಿನ ಕಡತಕ್ಕೆ ಸಹಿ ಹಾಕಲು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳನ್ನೇ ವಿಶೇಷ ಜಿಲ್ಲಾಧಿಕಾರಿಗಳನ್ನಾಗಿ ನೇಮಕ ಮಾಡಲಾಗುತ್ತಿದೆ. ಹೀಗಾಗಿ ಅವರು ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂಬ ಮಾತು ಜಿಲ್ಲಾಧಿಕಾರಿ ಕಚೇರಿ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ವಿಶೇಷ ಜಿಲ್ಲಾಧಿಕಾರಿ ಎನ್‌.ಎಂ. ಪನಾಲಿ ಅವರು ಇತ್ತೀಚಿನ ದಿನಗಳಲ್ಲಿ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿ ಕೊಡುತ್ತಿದ್ದಾರೆ ಎಂಬ ಆರೋಪ ಇದೆ. ಯಲಹಂಕ ತಾಲ್ಲೂಕಿನ ಕೃಷ್ಣರಾಜಪುರದಲ್ಲಿ ಜಿಲ್ಲಾ ಅರಣ್ಯಕ್ಕೆ ಸೇರಿದ 72 ಎಕರೆಯನ್ನು ಐವರು ಖಾಸಗಿ ವ್ಯಕ್ತಿಗಳಿಗೆ ಆರ್‌ಟಿಸಿ ಮಾಡಿಕೊಡುವಂತೆ ಅವರು ಆದೇಶ ಹೊರಡಿಸಿದ್ದರು. ವಿಶೇಷ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಕಳೆದ ನಾಲ್ಕೈದು ತಿಂಗಳಲ್ಲಿ 10 ಪ್ರಕರಣಗಳಲ್ಲಿ ಇಂತಹ ಆದೇಶಗಳು ಹೊರಬಿದ್ದಿವೆ ಎಂದು ಮೂಲಗಳು ತಿಳಿಸಿವೆ.

‘ಕಳೆದ ಎರಡು ವರ್ಷಗಳಲ್ಲಿ 5 ಸಾವಿರ ಎಕರೆಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ವಿಶೇಷ ಜಿಲ್ಲಾಧಿಕಾರಿಗಳ ‘ವಿಶೇಷ’ ಪಾತ್ರ ಇಲ್ಲ. ಅವರು ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿದ್ದೇ ಅಪರೂಪ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

‘ಜಿಲ್ಲಾಧಿಕಾರಿ ಅವರು ಜಿಲ್ಲೆಯ ಮುಖ್ಯಸ್ಥರು. ಜನರ ಸಮಸ್ಯೆಗೆ ಹಾಗೂ ನೋವಿಗೆ ಸ್ಪಂದಿಸುವ ಸಾಕಷ್ಟು ಕೆಲಸಗಳು ಅವರಿಗೆ ಇವೆ. ವಾಸ್ತವವಾಗಿ ಅವರಿಗೂ ತೆರವು ಕಾರ್ಯಾಚರಣೆಗೂ ಸಂಬಂಧ ಇಲ್ಲ. ಆದರೆ, ಎರಡು ವರ್ಷಗಳಿಂದ ಅವರೇ ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಭೂ ವಿವಾದಗಳಿಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ನ್ಯಾಯಾಲಯ ಹೊರಡಿಸಿದ ಅರ್ಜಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಪ್ರಸ್ತುತ ವಿಶೇಷ ಜಿಲ್ಲಾಧಿಕಾರಿಗಳು ಇಂತಹ ಮೇಲ್ಮನವಿ ಅರ್ಜಿಗಳ ವಿಚಾರಣೆಗಳನ್ನಷ್ಟೇ ಮಾಡುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಬಿ.ಎಂ. ಕಾವಲ್‌ನಲ್ಲಿ ಉದ್ಯಮಿಯೊಬ್ಬರಿಗೆ 280 ಎಕರೆ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿತ್ತು. ಇದನ್ನು ಅಧಿಕಾರಿಗಳ ತಂಡ ಪತ್ತೆ ಹಚ್ಚಿತ್ತು. ಅದನ್ನು ಸರ್ಕಾರದ ವಶಕ್ಕೆ ಪಡೆಯಲು ಕಡತ ಸಿದ್ಧಪಡಿಸಿತ್ತು. ಇದಕ್ಕೆ ಒಪ್ಪಿಗೆ ನೀಡಲು ವಿಶೇಷ ಜಿಲ್ಲಾಧಿಕಾರಿ ಅವರಿಗೆ ಮೂರು ತಿಂಗಳ ಹಿಂದೆ ಸಲ್ಲಿಸಲಾಗಿತ್ತು. ಆ ಕಡತ ಇನ್ನೂ ವಿಶೇಷ ಜಿಲ್ಲಾಧಿಕಾರಿ ಅವರಲ್ಲೇ ಇದೆ. ಹೀಗಾದರೆ ಕೆಲಸ ಮಾಡುವುದು ಹೇಗೆ’ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ರಾಜರಾಜೇಶ್ವರಿನಗರದ ಶಕ್ತಿಹಿಲ್‌ ರೆಸಾರ್ಟ್‌ ಪ್ರಕರಣದಲ್ಲೂ ಇದೇ ರೀತಿ ಆಗಿದೆ ಎನ್ನುತ್ತಾರೆ ಅವರು. ‘ರೆಸಾರ್ಟ್‌ ಎಂಟು ಎಕರೆ ಒತ್ತುವರಿ ಮಾಡಿತ್ತು. ಅದನ್ನು ವರ್ಷದ ಹಿಂದೆ ವಶಕ್ಕೆ ಪಡೆದಿದ್ದೆವು. ಇದರ ವಿರುದ್ಧ ರೆಸಾರ್ಟ್‌ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು.

ಒತ್ತುವರಿದಾರರಿಗೆ ಅಹವಾಲು ಹೇಳಿಕೊಳ್ಳಲು ಸಹಜ ನ್ಯಾಯದಡಿ ಅವಕಾಶ ಕಲ್ಪಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಕಡತವನ್ನು ವಿಶೇಷ ಜಿಲ್ಲಾಧಿಕಾರಿ ಅವರಿಗೆ ಆರು ತಿಂಗಳ ಹಿಂದೆ ಕಳುಹಿಸಲಾಗಿತ್ತು. ತೆರವು ಕಾರ್ಯಾಚರಣೆಗೆ ಅವರು ಇನ್ನೂ ಒಪ್ಪಿಗೆ ಸೂಚಿಸಿಲ್ಲ’ ಎಂದು ಅವರು ನೋವಿನಿಂದ ಹೇಳಿದರು.

‘ಸರ್ಕಾರಿ ಭೂಮಿಯ ಒತ್ತುವರಿ ತೆರವು ಮಾಡುವುದು ನಮ್ಮ ಕೆಲಸ. ಈ ಕೆಲಸ ಯಾರು ಮಾಡಿದ್ದಾರೆ ಎಂಬುದು ಪ್ರಮುಖ ಸಂಗತಿಯಲ್ಲ. ತೆರವು ಕೆಲಸ ಆಗುವುದು ಮುಖ್ಯ’ ಎಂದು ಜಿಲ್ಲಾಧಿಕಾರಿ ವಿ.ಶಂಕರ್‌ ಸ್ಪಷ್ಟಪಡಿಸಿದರು.

‘ಜಿಲ್ಲೆಯಲ್ಲಿ 34,111 ಎಕರೆ ಜಾಗ ಒತ್ತುವರಿಯಾಗಿದೆ ಎಂದು ಎ.ಟಿ. ರಾಮಸ್ವಾಮಿ ಸಮಿತಿ ತಿಳಿಸಿತ್ತು. ಇದರಲ್ಲಿ ಉದ್ಯಾನ, ರಸ್ತೆ, ಆಟದ ಮೈದಾನ, ನಮೂನೆ 50, 53, 94 ಸಿ, 136 (3) ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಲಾಗಿದೆ. ಈ ಒತ್ತುವರಿ ತೆರವುಗೊಳಿಸಲು ಸಾಧ್ಯವಿಲ್ಲ.

ಒತ್ತುವರಿಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 17,515 ಎಕರೆ ಒತ್ತುವರಿ ತೆರವು ಮಾಡಬೇಕಿತ್ತು. ಈವರೆಗೆ 15,641 ಎಕರೆ ಒತ್ತುವರಿ ತೆರವು ಮಾಡಿದ್ದೇವೆ. ಇನ್ನು ತೆರವಿಗೆ ಉಳಿದಿರುವುದು 2 ಸಾವಿರ ಎಕರೆ ಮಾತ್ರ’ ಎಂದು  ಮಾಹಿತಿ ನೀಡಿದರು.

ಪನಾಲಿ ಕೊನೆಗೂ ವರ್ಗ
ಬೆಂಗಳೂರು:
ವಿವಿಧ ಆರೋ ಪಗಳಿಗೆ ಗುರಿಯಾಗಿದ್ದ ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಎನ್‌.ಎಂ. ಪನಾಲಿ ಅವರನ್ನು ಸರ್ಕಾರ ಕೊನೆಗೂ ಎತ್ತಂಗಡಿ ಮಾಡಿದೆ.

ಗುರುವಾರ ಹೊರಡಿಸಿದ ಆದೇಶದಲ್ಲಿ, ಪನಾಲಿ ಅವರನ್ನು ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.  ಸರ್ಕಾರಿ ಮತ್ತು ಅರಣ್ಯ ಇಲಾಖೆಗೆ ಸೇರಿದ್ದ ಭೂಮಿಯನ್ನು ಖಾಸಗಿಯವರ ಹೆಸರಿಗೆ ಖಾತೆ ಮಾಡಿಕೊಟ್ಟ ಆರೋಪಕ್ಕೆ ಪನಾಲಿ ಗುರಿಯಾಗಿ ದ್ದರು. ಇಂತಹ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅವರು  ಭಾಗಿಯಾಗಿ ದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಭೂಮಾಪನಾ ಇಲಾಖೆಯ ಸರ್ವೇಯಿಂದ ಬಹಿರಂಗ
ರಾಜಕಾಲುವೆಯಲ್ಲಿ ದರ್ಶನ್‌ ಮನೆ

ಬೆಂಗಳೂರು:  ರಾಜರಾಜೇಶ್ವರಿ ನಗರ ವಲಯದ ಐಡಿಯಲ್‌ ಹೋಮ್‌ ಟೌನ್‌ಶಿಪ್‌ನಲ್ಲಿರುವ ಚಿತ್ರನಟ ದರ್ಶನ್‌ ಮನೆ ರಾಜಕಾಲುವೆಯಲ್ಲಿರುವುದು ಸರ್ವೇಯಿಂದ ಬಹಿರಂಗಗೊಂಡಿದೆ.

ಸರ್ವೇ ನಡೆಸಿದ್ದ ಭೂಮಾಪನಾ ಹಾಗೂ ಭೂದಾಖಲೆಗಳ ಇಲಾಖೆಯ ಭೂಮಾಪಕರು ಜಂಟಿ ನಿರ್ದೇಶಕ ಕೆ.ಜಯಪ್ರಕಾಶ್‌ ಅವರಿಗೆ ವರದಿ ಸಲ್ಲಿಸಿದ್ದಾರೆ. ‘ದರ್ಶನ್‌ ಮನೆ ಸೇರಿದಂತೆ 20 ಮನೆಗಳು ರಾಜಕಾಲುವೆಯಲ್ಲಿ ನಿರ್ಮಾಣಗೊಂಡಿವೆ’ ಎಂದು ವರದಿ ಯಲ್ಲಿ ಉಲ್ಲೇಖಿಸಲಾಗಿದೆ. ಬಿಬಿಎಂಪಿಗೆ ಸರ್ವೇ ನಕ್ಷೆ ಇನ್ನಷ್ಟೇ ಹಸ್ತಾಂ ತರ ವಾಗ ಬೇಕಿದೆ. ಬಳಿಕ ಬಿಬಿಎಂಪಿ ಅಧಿ ಕಾರಿಗಳು ಕಟ್ಟಡ ಗಳಿಗೆ ಗುರುತು ಮಾಡಲಿದ್ದಾರೆ.

‘ಜಂಟಿ ನಿರ್ದೇಶಕರಿಗೆ ನಾವು ಈಗಾಗಲೇ ವರದಿ ಸಲ್ಲಿಸಿದ್ದೇವೆ. ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು  ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. ಗೂಗಲ್‌ ಅರ್ಥ್‌ ಜತೆಗೆ ಗ್ರಾಮ ನಕ್ಷೆಯನ್ನು ಸೂಪರ್‌ ಇಂಪೋಸ್‌ ಮಾಡಿ ಈ ಸರ್ವೇ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಎಸ್‌.ಎಸ್‌. ಆಸ್ಪತ್ರೆ, ದರ್ಶನ್‌ ಮನೆ ರಾಜಕಾಲುವೆ ಮೇಲೆ ನಿರ್ಮಾಣ ಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ರಾಜ ಕಾಲುವೆ ಒತ್ತುವರಿ ಆಗಿದೆಯೇ, ಇಲ್ಲವೇ ಎಂಬ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಬಿಬಿಎಂಪಿ ಅಧಿಕಾರಿಗಳು ಹಾಗೂ ಭೂಮಾಪನ ಇಲಾಖೆಯ ಸರ್ವೇಯರ್‌ಗಳಿಗೆ ಸಾಧ್ಯವಾಗಿರಲಿಲ್ಲ.

ಹೀಗಾಗಿ ಭೂಮಾಪನ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಬಿಬಿಎಂಪಿ ಎಂಜಿನಿಯರ್‌ಗಳು ಜಂಟಿಯಾಗಿ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

‘ಕಟ್ಟಡಗಳನ್ನು ಗುರುತು ಮಾಡಲು ಈವರೆಗೆ ಭೂಮಾಪಕರು ಬಂದಿಲ್ಲ. ಶುಕ್ರವಾರ ಕರ್ನಾಟಕ ಬಂದ್‌ ಇದೆ. ಆ ಬಳಿಕ ಅವರು ಬರುವ ನಿರೀಕ್ಷೆ ಇದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ರಾಜರಾಜೇಶ್ವರಿ ನಗರ ವಲಯ) ಬಿ. ವೀರಭದ್ರಪ್ಪ ತಿಳಿಸಿದರು.

ರಾಜರಾಜೇಶ್ವರಿನಗರ ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ರಾಜಕಾಲುವೆಗಳ ಮೇಲಿರುವ ಕಟ್ಟಡಗಳ ಗುರುತು ಮಾಡುವ ಕಾರ್ಯ ಗುರುವಾರ ಸಂಜೆ ಪೂರ್ಣಗೊಂಡಿದೆ. ಶನಿವಾರ ದಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT