ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

“ನೋವಿನ ಬಹುತ್ವದ ಬಗ್ಗೆ ಯೋಚಿಸಬೇಕಿದೆ...

Last Updated 10 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

* ಎಡಪಂಥೀಯ ಮತ್ತು ಬಲಪಂಥೀಯರಲ್ಲಿ ‘ತೀವ್ರವಾದ’ವೊಂದು ಬಲವಾಗಿ ಗೋಚರಿಸುತ್ತಿದೆ. ಈ ತೀವ್ರವಾದದ ನಡುವೆ ಮಧ್ಯಮದಾರಿಯೊಂದನ್ನು ಇರಗೊಡದಂತಹ ಅಸ್ವಸ್ಥತೆ ಸೃಷ್ಟಿ ಆಗುತ್ತಿದೆಯೇ?
ನೀವು ಹೇಳುವಂತಹ ಅಸ್ವಸ್ಥತೆ ಖಂಡಿತಾ ಸೃಷ್ಟಿಯಾಗಿದೆ. ಜಗತ್ತೇ ಅಕರಾಳ ವಿಕರಾಳವಾಗಿದೆ. ಅದು ತೀವ್ರವಾದದೆಡೆಗೆ ದೂಡುತ್ತಿದೆ. ಒಂದು ಸರಿಯಾದ ನಿಲುವಿಗೆ ನಾನು ಬಾರದೇ ಇದ್ದರೆ ನಾನು ನ್ಯಾಯದ ಪರ ನಿಂತಹಾಗೆ ಆಗುವುದಿಲ್ಲ ಎಂಬ ಆತಂಕ ಎಲ್ಲರಿಗೂ ಬಂದಿದೆ.

ಒಂದು ಕೊಲೆಯನ್ನು ಮಾನವೀಯವಾಗಿ ಖಂಡಿಸುವ ಸ್ಥಿತಿ ಇಲ್ಲ. ಅವನ ಜಾತಿ, ಮತ, ನಿಲುವು, ಕೆಲಸ ಧರ್ಮವನ್ನು ಕಂಡು ಆಮೇಲೆ ವಿರೋಧಿಸುವ ಸನ್ನಿವೇಶ ಇದು. ಇದಕ್ಕೆ ಅತಿವಾದಿಗಳನ್ನು ಮಾತ್ರ ದೂರುವುದು ಸರಿಯಲ್ಲ. ಸನ್ನಿವೇಶವು ಅತಿಯತ್ತಲೇ ದೂಡುತ್ತಿದೆ. ಅತಿಯಲ್ಲಿ ಸಂಯಮಿ ಆಗಿರಬೇಕು. ಆದರೆ ಸಂಯಮ ಅನ್ನೋದು ಎಲ್ಲರಿಗೂ ಎಲ್ಲಕಾಲಕ್ಕೂ ತೆರೆದುಕೊಂಡಿರುವ ದಾರಿಯೋ ಎಂಬ ಪ್ರಶ್ನೆ ಎದುರಾಗುತ್ತದೆ. ಇರೋಮ್‌ ಶರ್ಮಿಳಾ ‘ತನ್ನ ರಾಜ್ಯಕ್ಕೆ ಸವಲತ್ತು ಕೊಡಿ’ ಎಂದು ಉಪವಾಸ ಮಾಡಲಿಲ್ಲ.

ಸೈನಿಕರಿಗೆ ಇರುವ ವಿಶೇಷ ಅಧಿಕಾರವನ್ನು ತೆಗೆದುಹಾಕುವಂತೆ ಕೋರಿದರು. 16 ವರ್ಷಗಳಲ್ಲಿ ಆಗಿಹೋದ ಮೂವರು ಪ್ರಧಾನಿಗಳಲ್ಲಿ ಒಬ್ಬರಾದರೂ ಆಕೆಯನ್ನು ಸೌಜನ್ಯಕ್ಕಾದರೂ ಮಾತನಾಡಿಸಲಿಲ್ಲ. ಆಕೆ ನಡೆಸಿದ ಪ್ರತಿಭಟನೆಯಷ್ಟು ಶಾಂತಿಯುತವಾದ ಪ್ರತಿಭಟನೆ ಮತ್ತೊಂದಿಲ್ಲ. ಹಾಗಿದ್ದಮೇಲೆ ಅನ್ಯಾಯಕ್ಕೊಳಗಾದವರೆಲ್ಲರೂ ಇರೋಮ್‌ ಶರ್ಮಿಳಾ ಅವರಷ್ಟು ಸಂಯಮದಿಂಲೇ  ಹೋರಾಡಬೇಕು ಎಂಬ ನಿರೀಕ್ಷೆ ಸರಿಯಲ್ಲ.

ಅಂಥ ನಿರೀಕ್ಷೆಯೈ ಕ್ರೌರ್ಯ, ಅತಿರೇಕದ ವಾದ ಅಲ್ಲವೇ? ಶಾಂತಿ, ಸಂಯಮ ಮತ್ತು ಪ್ರಜಾಸತ್ತಾತ್ಮಕ ಹೋರಾಟವನ್ನು ಪ್ರತಿಪಾದಿಸುತ್ತಿರುವ ನಾನು ಮತ್ತು ನನ್ನಂತಹವರು ಈಗ ಯಾವ ಧೈರ್ಯದಲ್ಲಿ ಈ ಮಾರ್ಗವನ್ನು ಬೋಧಿಸಬಹುದು? ಲಕ್ಷಾಂತರ ಜನ ಆದಿವಾಸಿಗಳು ನಿರ್ಗತಿಕರಾಗುತ್ತಿರುವ ಈ ಸಂದರ್ಭದಲ್ಲಿ ತರ್ಕಕ್ಕೆ ಮಿತಿ ಇದೆ. ನಿಜವಾದ ಪರಿಸ್ಥಿತಿ ಎಂದರೆ ನಾವು ದಾರಿ ಕಾಣದ ಬಿಕ್ಕಟ್ಟಿನಲ್ಲಿದ್ದೇವೆ.

ಕಪ್ಪು–ಬಿಳಿ, ನ್ಯಾಯ–ಅನ್ಯಾಯ, ಸರಿ–ತಪ್ಪು ಎಂಬ ಬೈನರಿಗಳ ನಡುವೆ ನೂರು ನೇಸರಗಳಿದ್ದಾವೆ. ನಾವು ಅವುಗಳನ್ನು ಗುರುತಿಸಬೇಕು. ಹಿಂಸೆ ಎದುರಿಸುವವರು ಅದನ್ನು ಹೇಗೆ ವಿರೋಧಿಸಬೇಕು, ಕಾರಣವಿಲ್ಲದೇ ತಮ್ಮ ಆಸ್ತಿಪಾಸ್ತಿ ಕಳೆದುಕೊಳ್ಳುವವರು ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ಸುಲಭವಾದ ಉತ್ತರ ಇದೆ ಅನಿಸುವುದಿಲ್ಲ.

* ಬದುಕಿನುದ್ದಕ್ಕೂ ನೀವು ಎಡಪಂಥೀಯ ಚಿಂತನೆಯೊಂದಿಗೆ ಬೆಳೆದುಬಂದವರು. ಎಪ್ಪತ್ತರ ಈ ಹೊತ್ತಿನಲ್ಲಿ ಏನನಿಸುತ್ತದೆ?
ನಾನು ಚಳವಳಿಗೆ ನನ್ನನ್ನು ಅರ್ಪಿಸಿಕೊಂಡಿಲ್ಲ. ನಾನು ಎಲ್ಲರಂತೆ ಸಂಸಾರವಂದಿಗನಾಗಿ ಎಲ್ಲ ಗೊಂದಲಗಳನ್ನು ಎದುರಿಸಿ ಭಾಗವಹಿಸಿದ್ದೇನೆಯೇ ಹೊರತು ನಾಯಕತ್ವ ಬಯಸಲಿಲ್ಲ, ವಹಿಸಿಕೊಳ್ಳಲಿಲ್ಲ.

ತ್ಯಾಗವನ್ನೂ ಮಾಡಿಲ್ಲ. ಕಮ್ಯುನಿಸ್ಟ್‌ ಚಳವಳಿಯ ಜೊತೆ ಗುರುತಿಸಿಕೊಂಡರೂ ಸಹಯಾತ್ರಿಕನಂತೆ ಈ ಹೋರಾಟದಲ್ಲಿ ಭಾಗವಹಿಸಿದೆ. ‘ಈ ಚಳವಳಿ ಬೇಡ’ ಎಂದು ನಾಲ್ಕೈದು ವರ್ಷ ಎಲ್ಲದರಿಂದ ದೂರವಾಗಿ ಸಂಸಾರಕ್ಕೆ ಸೀಮಿತವಾಗಿದ್ದೆ. ಆದರೆ ರಾಮಜನ್ಮಭೂಮಿ ಚಳವಳಿ ಮುನ್ನೆಲೆಗೆ ಬಂದು ಮತೀಯ ದ್ವೇಷದ ಉನ್ಮಾದ ಎದುರಾದಾಗ ಸುಮ್ಮನೇ ಇರುವುದು ಅಶಕ್ಯವಾಯಿತು. ಹುಟ್ಟಿನಿಂದ ನಾನು ಹಿಂದೂ. ಹಿಂದೂಗಳ ಧ್ವನಿ ಎಂಬಂತೆ ಆ ಚಳವಳಿಯನ್ನು ಬಿಂಬಿಸಿದಾಗ, ‘ಅದರಲ್ಲಿ ನನ್ನ ಧ್ವನಿ ಇಲ್ಲ’ ಎಂದು ಹೇಳಲು ನಾನು ಮತ್ತೆ ಚಳವಳಿಯತ್ತ ಬರಬೇಕಾಯಿತು.

* ಕರಾವಳಿಯ ಕುದ್ಮುಲ್‌ ರಂಗರಾವ್‌, ಕಾರ್ನಾಡ್‌ ಸದಾಶಿವರಾಯ ಹಾಗೂ ಶಿವರಾಮ ಕಾರಂತರು ದೇಶಕ್ಕೇ ಮಾದರಿಯಾದಂತಹ ಚಿಂತನೆಗಳನ್ನು ಕಟ್ಟಿ ಬೆಳೆಸಿದ್ದರು. ಆದರೆ ಇತ್ತೀಚೆಗಿನ ಎರಡು ದಶಕಗಳಲ್ಲಿ ಕರಾವಳಿಯ ಅಭಿವ್ಯಕ್ತಿಯೇ ಬದಲಾಗಿದೆ. ಹಲವು ಬಾರಿ ಋಣಾತ್ಮಕವಾಗಿದೆ. ಈ ಬದಲಾವಣೆಗೆ ಕಾರಣಗಳನ್ನು ಹೇಗೆ ಗುರ್ತಿಸಬಹುದು?
ಸೆಕ್ಯುಲರ್‌ ರಾಜಕಾರಣಿಗಳು, ಸೆಕ್ಯುಲರ್‌ ಉದ್ಯಮಿಗಳು ಇಲ್ಲಿದ್ದರು. ಬರಹಗಾರರಿದ್ದರು. ಮತೀಯ ವಾತಾವರಣದಿಂದ ದೂರ ಇರುವ ವಾತಾವರಣ ಇಲ್ಲಿತ್ತು. ಧರ್ಮನಿಷ್ಠರಾಗಿಯೂ ಧರ್ಮವನ್ನು ಮೀರಿ ಚಿಂತನೆ ಮಾಡಬಲ್ಲ ಮಂಜೇಶ್ವರ ಗೋವಿಂದ ಪೈ ಅವರಿದ್ದರು. ಅವರ ‘ಗೋಲ್ಗೊಥಾ’ ಓದಿಯೇ ನಾವು ದೊಡ್ಡವರಾಗಿದ್ದುದು.

ಮತೀಯ ಚಿಂತನೆಯನ್ನು ಮೀರಿದ ವಾತಾವರಣ ಇಲ್ಲಿತ್ತು. ಆದರೆ ಇದೇ ವಾತಾವರಣ ದೇಶದ ಇತರ ಕಡೆಗಳಲ್ಲಿಯೂ ಇತ್ತು. ಗಾಂಧಿನಾಡು ಗುಜರಾತ್‌ನಲ್ಲಿಯೂ ಇತ್ತಲ್ಲ? ಇದು ಬದಲಾಗಲು ಕಾರಣ ರಾಮಜನ್ಮಭೂಮಿ ಚಳವಳಿಯ ಜನಪ್ರಿಯತೆ. ಈ ಚಳವಳಿಯ ಬಳಿಕ ಬಿಜೆಪಿ ಜಾತಿ, ವರ್ಗ, ಲಿಂಗಭೇದಗಳನ್ನು ಮೀರಿ ಜನಪ್ರಿಯವಾಯಿತು. ಈ ಚಳವಳಿಯ ಪಾಸಿಟಿವ್‌ ಸೈಡ್‌ ಕೂಡ ಗುರುತಿಸಬೇಕು. ಬೃಹತ್‌ ಪ್ರಮಾಣದಲ್ಲಿ ಮಹಿಳೆಯರನ್ನು ರಾಜಕೀಯಕ್ಕೆ ಇಳಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ.

ದಲಿತರು ಮತ್ತು ಎಲ್ಲ ವರ್ಗಗಳ ಜನರನ್ನೂ ರಾಜಕೀಯಕ್ಕೆ ಇಳಿಸಿತು. ಆದರೆ ಕಾಲಕ್ರಮೇಣ ಅವರೆಲ್ಲರೂ ಪ್ರಶ್ನೆ ಮಾಡಲಾರಂಭಿಸಿದರು ಎಂಬುದು ಸುಳ್ಳಲ್ಲ. ನಮಗೆ ಇಷ್ಟವಿರಲಿ, ಇಲ್ಲದಿರಲಿ, ರಾಮಜನ್ಮಭೂಮಿ ಚಳವಳಿ, ಜನರು ಭಾಗವಹಿಸಿದ ಚಳವಳಿ ಎನ್ನುವುದೂ ಸುಳ್ಳಲ್ಲ. ಈಗ ಆಗಿರುವ ಬದಲಾವಣೆಗೆ ಪರಿಹಾರ ರೂಪದಲ್ಲಿ ನಾನೇನೂ ಯೋಚನೆ ಮಾಡಿಲ್ಲ.

* ಎಡಪಂಥೀಯತೆಯನ್ನು ನೆಚ್ಚಿಕೊಂಡ ಹೊಸ ತಲೆಮಾರಿನ ಒಂದು ವರ್ಗ ಸಾಮಾಜಿಕವಾಗಿ ಒಂದು ಮುಖ, ವೈಯಕ್ತಿಕವಾಗಿ ಮತ್ತೊಂದು ಮುಖವನ್ನು ಹೊಂದಿರುವುದು ಕಾಣಿಸುತ್ತದೆ. ಈ ಇಬ್ಬಂದಿತನಕ್ಕೇನು ಕಾರಣ? ಇದರಿಂದ ಎಡಪಂಥೀಯ ಚಳವಳಿಯ ಒಟ್ಟು ಹಿತಾಸಕ್ತಿಗೆ ಧಕ್ಕೆ ಆಗುತ್ತಿಲ್ಲವೇ ?
ಮನೆಯಲ್ಲಿ ಕರ್ಮಠವಾದ ಮೂಲಭೂತ ಧೋರಣೆ ಮತ್ತು ಹೊರಗೆ ಅದೇ ಧೋರಣೆ ಅನುಸರಿಸುವುದಕ್ಕಿಂತ, ಸಮಾಜ ಮುಖಿಯಾದರೂ ಉದಾರವಾದಿ ಆಗಿರುವುದು ಲೇಸಲ್ಲವೆ? ಹೊಸತಲೆಮಾರಿಗೆ ಇಬ್ಬಂದಿತನದ ಸಮಸ್ಯೆ ಇದೆ. ಆದರೆ ಇದು ಭಾರತಕ್ಕೆ ಸೀಮಿತವಲ್ಲ. ಇಬ್ಬರು ಕಮ್ಯುನಿಸ್ಟರಿದ್ದರೆ ಅಲ್ಲಿ ಮೂರು ಪಾರ್ಟಿ ಇರುತ್ತದೆ ಎಂಬ ಜೋಕ್‌ ಇದೆ. ಎಡಪಂಥೀಯರು ಒಟ್ಟಾದರೆ ಭಾರೀ ಬದಲಾವಣೆ ಆಗುತ್ತೆ ಅಂತ ಅನಿಸಲ್ಲ. ಈಗ ಕಮ್ಯುನಿಸ್ಟ್‌ ಪಾರ್ಟಿ ಎರಡಾಗಿದ್ದ ಮಾತ್ರಕ್ಕೆ ಒಟ್ಟು ಚಳವಳಿಗೆ ತೊಂದರೆ ಆಯಿತೆಂದೂ ನನಗನಿಸಲ್ಲ. ಜನರ ಹೋರಾಟ ಬೆಳೆದು ವಿಕಾಸ ಆಗಬೇಕು ಎಂಬುದೇ ಒಟ್ಟು ಚಳವಳಿಯ ಆಶಯ.

ಇನ್ನು ಕುಟುಂಬ–ಸಮುದಾಯದಲ್ಲಿ ಇರುವ ಮನುಷ್ಯ ಅನಿವಾರ್ಯವಾಗಿ ಇಂತಹ ಇಬ್ಬಂದಿತನವನ್ನು ಅನುಭವಿಸಬೇಕಾಗುತ್ತದೆ.  ಆದರ್ಶವನ್ನು ಅಂಟಿಕೊಂಡು ಏಕಾಂಗಿಯಾಗಿ ಬಾಳುವೆ ಸಾಧ್ಯವಿಲ್ಲ. ಇದು ನವೋದಯ, ನವ್ಯ ಸಾಹಿತ್ಯದಲ್ಲಿಯೂ ಗೋಚರಿಸಿದೆ. ಇನ್ನು ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗಿಗೆ ಮಾರುಹೋಗುತ್ತಾರೆ ಎಂಬ ಆರೋಪವೂ ಅಷ್ಟೆ. ಇಂತಹ ಆರೋಪಗಳು ವರ್ಗ, ಪ್ರದೇಶಕ್ಕೆ ಸೀಮಿತವಾದವುಗಳಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮಿತಿಯೂ ಹೌದು. ಇದನ್ನು ಎದುರಿಸಬೇಕು ಅಷ್ಟೆ.

ಬಹುತ್ವ ಎಂದರೆ – ನಮ್ಮ ಮತಧರ್ಮ, ಆಚರಣೆ, ನಂಬಿಕೆಗಳ ಬಗ್ಗೆ ಮಾತ್ರ ಯೋಚನೆ ಮಾಡುವುದಲ್ಲ. ನೋವಿನ ಬಹುತ್ವದ ಬಗ್ಗೆಯೂ ಯೋಚನೆ ಮಾಡಬೇಕು. ಅಮೆರಿಕದ ವಾಣಿಜ್ಯ ಸಂಕೀರ್ಣದ ಮೇಲೆ ನಡೆದ ದಾಳಿ ಖಂಡನಾರ್ಹ. ಅದಾಗಿ ವರ್ಷಗಳೇ ಸಂದವು. ಅದನ್ನು ಹಿಡಕೊಂಡು ಆಪ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿ ಜನರ ಮಾರಣಹೋಮ ನಡೆಯುತ್ತಿರುವಾಗ ಆ ನೋವನ್ನು ಪರಿಗಣಿಸಬೇಕಲ್ಲವೆ? ವಿಯೆಟ್ನಾಂನಲ್ಲಿಯೂ 20 ಲಕ್ಷ ನಾಗರಿಕರು ಬಲಿಯಾಗಿದ್ದಾರೆ.

ಅಮೆರಿಕ, ಪಶ್ಚಿಮ ಯುರೋಪ್‌ನ ಸಾಮ್ರಾಜ್ಯಶಾಹಿ ಧೋರಣೆಗಳು ಇರುವಾಗ ಅಲ್ಲಿನವರು ಈ ಪ್ರಶ್ನೆ ಕೇಳಲಾರರು. ಆದರೆ ಸಾವುನೋವಿನ ವೈವಿಧ್ಯವನ್ನು ನಾವು ಗುರುತಿಸಬೇಕು ಎಂದು ನಾನು ಭಾವಿಸಿದ್ದೇನೆ. ಅಷ್ಟೇ ಅಲ್ಲ, ಸಾಮ್ರಾಜ್ಯಶಾಹಿ ಮತ್ತು ನವ ವಸಾತುಶಾಹಿ ಧೋರಣೆಯ ವಿರುದ್ಧ ನಡೆದ ಹೋರಾಟದ ಬಹುಮುಖಗಳನ್ನು ಗುರುತಿಸುವುದು ಅಗತ್ಯ.

ಎರಡು ಶತಮಾನಗಳಲ್ಲಿ ಆಫ್ರಿಕಾ, ಏಷ್ಯಾ, ದಕ್ಷಿಣ ಅಮೆರಿಕದಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆದಿದೆ. ಚೆಗುವೆರಾ, ಕ್ಯಾಸ್ಟ್ರೋನಂತಹವರು, ಎಡಪಂಥೀಯರೆಂದು ಹೇಳಲಾರದ ಆದರೆ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿದ ಗಾಂಧೀಜಿ, ನೆಹರು ಅಂತಹವರೂ ಇದ್ದಾರೆ. ನೋವಿನ ಬಹುತ್ವ, ಶೋಷಣೆಯ ಬಹುತ್ವವನ್ನು ಗುರುತಿಸಿಬೇಕಾಗಿದೆ.

* ನಿಮ್ಮ ‘ಬಹುವಚನ ಭಾರತ’ ಕೃತಿಯಲ್ಲಿ ಕೆ.ವಿ. ಸುಬ್ಬಣ್ಣ ಅವರೊಂದಿನ ಸಂವಾದದ ಕುರಿತು ಬರೆದಿರುವಿರಿ. ಅವರ ನಿಲುವನ್ನು ವಿರೋಧಿಸಿಯೂ ಗೌರವದಿಂದ ಚರ್ಚೆ ನಡೆಸಿದ್ದೀರಿ. ಈ ರೀತಿಯ ಸಂವಾದ ಇಂದಿನ ಸನ್ನಿವೇಶದಲ್ಲಿ ಸಾಧ್ಯವೆನಿಸುತ್ತದೆಯೇ?
ಇದಕ್ಕೆ ಸುಬ್ಬಣ್ಣನವರ ವ್ಯಕ್ತಿತ್ವವೇ ಕಾರಣ. ಅವರೊಡನೆ ಎಲ್ಲ ಜಾತಿ, ವರ್ಗ, ವೃತ್ತಿಯವರು ಮಾತನಾಡುವುದು ಸಾಧ್ಯವಿತ್ತು. ಆ ಥರದ ಸುಬ್ಬಣ್ಣನಿಗೆ ವಿಶೇಷವಾದ ರಾಜಕೀಯ ಅರಿವಿತ್ತು. ಸೂಕ್ಷ್ಮತೆ ಇತ್ತು. ಅವರು ‘ಗುಜರಾತ್‌ನ ಸ್ವಗತ’ ಅಂತ ಒಂದು ದೀರ್ಘ ಲೇಖನ ಬರೆದರು.

ಈ ಶೀರ್ಷಿಕೆಯೇ ಅಚ್ಚರಿ ಮೂಡಿಸುವಂತಹುದು. ಅಲ್ಲಿನ ಹಿಂಸೆಯನ್ನು ನಾನು ‘ಸ್ವಗತ’ ಎಂದೇ ಹೇಳಬೇಕು. ಹಿಂಸೆಗೆ ನಾನು ಅನ್ಯನಲ್ಲ. ನಾನು ನೋಡುಗನಷ್ಟೇ ಅಲ್ಲ.ಗುಜರಾತ್‌ನಲ್ಲಿ ಹಿಂಸೆ ಮಾಡಿದವರು ನಮ್ಮಂತಹುದೇ ಸೀದಾ ಸಾದಾ ಜನರು. ಶ್ರೀಮಂತರು. ಅಂತಹ ವಾತಾವರಣದಲ್ಲಿ ನಾನೂ ಅದನ್ನು ಮಾಡುತ್ತಿದ್ದೆನಲ್ಲವೇ ಎಂದುಕೊಂಡು ಬರೆಯುವುದು ಬಹಳ ಮಹತ್ವದ್ದು. ‘ನಾವು ತೀರ್ಮಾನ ಕೊಡುವ ಥರ್ಡ್‌ ಅಂಪೈರ್‌ ಎನ್ನುವುದು ಸರಿಯಾದ ನಿಲುವಲ್ಲ’ ಎಂದು ಅವರು ಮಾತ್ರ ಯೋಚನೆ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದರು. ಒಟ್ಟಿನಲ್ಲಿ ಅಂತಹ ಸಂವಾದ ಸಾಧ್ಯ ಮಾಡುವ ಸನ್ನಿವೇಶವೂ ಇಲ್ಲ, ಅಂತಹ ವ್ಯಕ್ತಿಗಳೂ ಇಲ್ಲ ಎನಿಸುತ್ತದೆ.

* ಕೋಮುವಾದ ಸಂಘಟನೆ ಎಂದು ಸಂಘಪರಿವಾರವನ್ನು ‘ಕೋಮು ಸೌಹಾರ್ದ ವೇದಿಕೆ’ ದೂರ ಇಡುತ್ತದೆ. ಆದರೆ, ಸಂಘ ಪರಿವಾರದ ಚಟುವಟಿಕೆಗಳನ್ನೇ ಹೋಲುವ ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ದಿಂದ ಸಮಾನ ಅಂತರ ಕಾಯ್ದುಕೊಂಡಿಲ್ಲ ಎನ್ನುವ ಮಾತಿದೆ.
ಹೌದು. ‘ಪಿಎಫ್‌ಐ’ ಕೂಡ ಹಿಂದುತ್ವವಾದಿಗಳ ಅತಿರೇಕವನ್ನು ಹೋಲುವ ಕೆಲಸಗಳನ್ನು ಮಾಡುತ್ತಿರುವುದು ಗಮನಕ್ಕೆ ಬಂದ ಮೇಲೆ ನಾವು ಅವರಿಂದ ದೂರ ಉಳಿದಿದ್ದೇವೆ. ನಿರ್ಣಯ ತೆಗೆದುಕೊಂಡು ಅವರಿಗೆ ತಿಳಿಸಿದ್ದೇವೆ. ಅವರು ನಡೆಸುವ ಅನೈತಿಕ ಪೊಲೀಸ್‌ಗಿರಿಯನ್ನಷ್ಟೇ ನಾವು ವಿರೋಧಿಸುವುದಲ್ಲ – ಅನೈತಿಕ ಪೊಲೀಸ್‌ಗಿರಿ ಪರಿಕಲ್ಪನೆಯ ಹಿಂದೆ ಇರುವ ‘ಹೆಣ್ಣಿನ ದೇಹ ಮತ್ತು ಮಾನ ಕಾಪಾಡುವ’ ಪುರುಷ ಪ್ರಾಧಾನ್ಯ ಮತ್ತು ಯಜಮಾನಿಕೆಯನ್ನು ವೇದಿಕೆ ವಿರೋಧಿಸುತ್ತದೆ.

* ‘ಡಿಜಿಟಲ್‌ ಇಂಡಿಯಾ’ ಪ್ರಸ್ತುತ ಮಾಧ್ಯಮಗಳಲ್ಲಿ ಕಂಗೊಳಿಸುತ್ತಿರುವ ಪ್ರಕಾಶಮಾನವಾದ ಹೇಳಿಕೆ. ಈ ಪರಿಕಲ್ಪನೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ದೊರೆಯುತ್ತಿರುವ ಮಹತ್ವದ ಬಗ್ಗೆ ನಿಮಗೆ ಏನನ್ನಿಸುತ್ತದೆ?
ನಾನಂತೂ ಈ ರೀತಿಯ ತಂತ್ರಜ್ಞಾನದಿಂದ ದೂರವೇ ಇದ್ದೇನೆ. ಅದರಿಂದ ನನಗೆ ವೈಯಕ್ತಿಕವಾಗಿ ಒಳ್ಳೆಯದೇ ಆಗಿದೆ ಅನಿಸುತ್ತದೆ.  ಆದರೆ ‘ಫೇಸ್‌ಬುಕ್‌’ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಆಗುವ ರಾದ್ಧಾಂತಗಳ ಬಗ್ಗೆ ಕೇಳಿ ಬಲ್ಲೆ. ಅಲ್ಲಿ ಕಂಡುಬರುವ ರಾದ್ಧಾಂತಗಳೆಲ್ಲ ಕ್ಷಣಿಕ ಉದ್ರೇಕಗಳು. ಅವು ಹುಟ್ಟಿಕೊಂಡಷ್ಟೇ ಬೇಗನೇ ತಣ್ಣಗಾಗುತ್ತವೆ. ಆದರೆ ನೈಜವಾದ ಸಮಸ್ಯೆಗೆ ಅವು ಯಾವುದೇ ಪರಿಹಾರವನ್ನು ಕೊಡುವುದಿಲ್ಲ.

ಅದೇವೇಳೆಗೆ ಈ ಮಾಧ್ಯಮಗಳು ಜನಸಾಮಾನ್ಯರ ಕೈವಶವಾದ್ದರಿಂದ ಅವರ ಅಭಿಪ್ರಾಯಕ್ಕೆ ವೇದಿಕೆಯೂ ಆಗಿವೆ. ತಮ್ಮ ಅಭಿಪ್ರಾಯವನ್ನು ಹೇಳಬಹುದು ಎನ್ನುವ ಆತ್ಮವಿಶ್ವಾಸವನ್ನು ಅವರಿಗೆ ಕೊಟ್ಟಿವೆ. ಈ ಮಾಧ್ಯಮವನ್ನು ಸರ್ಕಾರ ನಿಯಂತ್ರಿಸಬೇಕು ಎನ್ನುವ ಬಿಡುಬೀಸು ಹೇಳಿಕೆಯನ್ನು ಕೊಡುವುದು ಸಾಧುವಲ್ಲ. ಸರ್ಕಾರ ಯಾವಾಗಲೂ ವಿವೇಕಯುತ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವಂತಿಲ್ಲ. ಯಾಕೆಂದರೆ ಈ ಮಾಧ್ಯಮಗಳು ಸೃಷ್ಟಿಸುವ ಕೊಳಕು ವಾತಾವರಣಕ್ಕಿಂತಲೂ ಕೊಳಕಾದ ವಾತಾವರಣವನ್ನು ಬಂಡವಾಳಶಾಹಿ ಕಂಪೆನಿಗಳು ಸೃಷ್ಟಿಸಿವೆ. ಸರ್ಕಾರ ಅವುಗಳನ್ನು ನಿಯಂತ್ರಿಸಿದರೆ ಸಾಕಾಗಿದೆ. ‘ಡಿಜಿಟಲ್‌ ಇಂಡಿಯಾ’ ಮೂಲಕ ಈ ಕೊಳಕನ್ನೇ ಜಗತ್ತಿಗೆ ಪ್ರಸ್ತುತಪಡಿಸಲು ಸರ್ಕಾರ ಹೊರಟ್ಟಿದ್ದರೆ ಅದು ಮೂರ್ಖತನವಷ್ಟೆ.

* ಎಡಪಂಥೀಯ ಚಳವಳಿ ಬಗ್ಗೆ ನಿಮಗೆ ಒಲವು ಮೂಡಿದ್ದು ಹೇಗೆ?
ನಾನು ಬಡತನದಲ್ಲಿ ಬೆಳೆದು ಬಂದವನು. ಬಡ ಬ್ರಾಹ್ಮಣ ಕುಟುಂಬದವನು. ಸಾಮಾಜಿಕ ಅವಕಾಶಗಳು ನಮಗೆ ತೆರೆದುಕೊಂಡಿವೆ ಎಂಬ ಭ್ರಮೆಯಲ್ಲಿರುತ್ತೇವೆ. ಸಾಮಾಜಿಕ ಸಮಾನತೆ, ಶಿಕ್ಷಣವನ್ನು ಬಯಸಿದವ. ಸಾಮಾನ್ಯವಾಗಿ ಓದು–ಬರಹ ಪ್ರವೃತ್ತಿ ಇರುವ ಬಡ ಬ್ರಾಹ್ಮಣರಿಗೆ ‘ಸಮಾನತೆಯ ಭರವಸೆ’ ನೀಡುವ ಎರಡು ಆಯ್ಕೆ ಇರುತ್ತದೆ.

ಒಂದು ಆರ್‌ಎಸ್‌ಎಸ್‌, ಮತ್ತೊಂದು ಎಡಪಂಥೀಯ ಚಳವಳಿ. ನಾನೂ ಎರಡು ಮೂರು ವರ್ಷ ಆರ್‌ಎಸ್‌ಎಸ್‌ ಶಾಖೆಗೆ ಹೋಗಿ ಭ್ರಮನಿರಸನವಾಗಿ ವಾಪಸ್‌ ಬಂದೆ. ನನ್ನ ಓರಗೆಯವರಲ್ಲಿ ಶಾಖೆಗೆ ಹೋದ ಯಾರೂ ಈಗ ಆರ್‌ಎಸ್‌ಎಸ್‌ನಲ್ಲಿ ಇಲ್ಲ. ಕೆಲವರಂತೂ ಅದರ ಕಡು ವಿರೋಧಿಗಳು. ಆರ್‌ಎಸ್‌ಎಸ್‌ ಆಕರ್ಷಣೆಗೆ ಒಳಗಾಗುವವರಂತೆಯೇ ಅದನ್ನು ಬಿಟ್ಟುಬಿಡುವವರ ಸಂಖ್ಯೆಯೂ ದೊಡ್ಡದಿದೆ.

* ಕಮ್ಯುನಿಸಂಗೆ ಬಂದ ಮೇಲೆ ನಿಮಗೆ ಅಲ್ಲಿಯೂ ಮಿತಿಗಳು ಕಾಣಿಸಿರಬಹುದು...
ಓ, ಅದೊಂದು ದೊಡ್ಡ ಚರ್ಚೆ. ಕಮ್ಯುನಿಸಂ ಆದರ್ಶ ಮತ್ತು ಕಮ್ಯುನಿಸ್ಟ್‌ ಪಕ್ಷಗಳ ಆಚರಣೆಯ ನಡುವೆ ದೊಡ್ಡ ಕಂದಕ ಇದೆ. ಮಾರ್ಕ್ಸ್‌ ವಾದಕ್ಕೂ ಸೋವಿಯೆಟ್‌ ರಷ್ಯಾದಲ್ಲಿ ಸ್ಟಾಲಿನ್‌ ಆಡಳಿತಕ್ಕೂ ನಡುವೆ ದೊಡ್ಡ ಬಿರುಕಿದೆ. ಈ ಕಂದಕದ ಬಗ್ಗೆ ಸರಿಯಾದ ವಿವರಣೆ ಕೊಡಲು ಕಮ್ಯುನಿಸ್ಟರು ವಿಫಲರಾಗಿದ್ದಾರೆ ಎನ್ನುವ ಅಭಿಪ್ರಾಯವನ್ನು ಕಮ್ಯೂನಿಸ್ಟ್‌ ಆದರ್ಶ ಇಟ್ಟುಕೊಂಡವರೂ ಹೇಳುತ್ತಾರೆ.

ಈ ಪಕ್ಷದ, ಸ್ಪಷ್ಟವಾಗಿ ಹೇಳುವುದಾದರೆ ಸಿಪಿಎಂ ನಾಯಕರು ಕೂಡ, ಸ್ಟಾಲಿನ್‌ ಕಾಲದ ನರಮೇಧ, ಚೀನಾದಲ್ಲಿ ಮಾವೋ ಮಾಡಿದ ನರಮೇಧ, ಕಾಂಬೋಡಿಯಾದಲ್ಲಿ ಪೋಲ್‌ಪಾಟ್‌ ಮಾಡಿದ ನರಮೇಧದ ಪ್ರಮಾಣ ಅಂದಾಜಿಸಲು ತಯಾರಿಲ್ಲ. ‘ಪ್ರಮಾದ ಆಗಿದೆ’ ಎಂದು ಲಘುವಾಗಿ ಹೇಳಿಬಿಡುವುದು ಸರಿಯಲ್ಲ. ಇನ್ನು ಮಿತಿಗಳ ಬಗ್ಗೆ – ಮತ್ತಷ್ಟು ವಿಚಾರಗಳಿವೆ. ಅದು ವಿಸ್ತಾರವಾದ ವಿಷಯ. ಆದರೆ ಮಿತಿಗಳೆಂಬುದು ಇತರೆ ಪಕ್ಷ, ಧರ್ಮಕ್ಕೂ ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT