ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆ: ಹಸ್ತಾಂತರದ ಅಪಾಯ

Last Updated 12 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಅಖಿಲಾ ವಾಸನ್‌/ ವಿಜಯ ಕುಮಾರ್‌ ಎಸ್‌.
ಉಡುಪಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಮತ್ತು ಅಲ್ಲಿನ 7 ಎಕರೆ ಭೂಮಿಯನ್ನು ಉಡುಪಿ ಮೂಲದ  ಅಬುಧಾಬಿ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ಹಸ್ತಾಂತರ ಮಾಡುವ ವಿಷಯ ಚರ್ಚೆಗೆ ಒಳಗಾಗಿದೆ.  ಕನಿಷ್ಠ ಎರಡು ದಶಕಗಳಿಂದ ಸರ್ಕಾರಗಳು ಪಾಲಿಸುತ್ತಿರುವ ಆರೋಗ್ಯ ನೀತಿಯ ಭಾಗವಾಗಿ ಈಗಾಗಲೇ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಅನೇಕ ವಿಧಗಳಲ್ಲಿ ಖಾಸಗೀಕರಣ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆಗಳ ಬದಲಾಗಿ ‘ಬಳಕೆದಾರರ ಶುಲ್ಕ’ ವಿಧಿಸುವುದು, ಸರ್ಕಾರಿ ಆಸ್ಪತ್ರೆಗಳಿಗೆ ಅನುದಾನ ಕಡಿತಗೊಳಿಸಿ ಅವುಗಳನ್ನು ‘ಸ್ವಾಯತ್ತ’ ಸಂಸ್ಥೆಗಳನ್ನಾಗಿಸುವುದು, ಸರ್ಕಾರಿ ಆಸ್ಪತ್ರೆಗಳ ಮೂಲಕ ಸಮಗ್ರ ಸೇವೆಗಳ ಬದಲು ಖಾಸಗಿ ಆಸ್ಪತ್ರೆಗಳಿಗೆ ಹಣ ಕೊಟ್ಟು ವಿಮೆ ಯೋಜನೆಗಳನ್ನು ಜಾರಿಗೊಳಿಸುವುದು, ಸರ್ಕಾರಿ ಆಸ್ಪತ್ರೆಗಳಲ್ಲಿನ ಸೇವೆಗಳನ್ನು ಹೊರಗುತ್ತಿಗೆ ನೀಡುವುದು, ಸಿಬ್ಬಂದಿಯನ್ನು ಕೇವಲ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವುದು, ಸರ್ಕಾರಿ ಆಸ್ಪತ್ರೆಗಳನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ,  ಕಾರ್ಪೊರೇಟ್ ಸಂಸ್ಥೆಗಳಿಗೆ ಹಸ್ತಾಂತರ ಮಾಡುವುದು ಇತ್ಯಾದಿ.

ಹೀಗಿದ್ದಾಗ ಉಡುಪಿ ಸರ್ಕಾರಿ ಆಸ್ಪತ್ರೆಯ ಹಸ್ತಾಂತರ ಕೂಡ ಸರ್ಕಾರದ ಇಂತಹ ನಿಲುವನ್ನೇ ಪ್ರತಿನಿಧಿಸುತ್ತದೆ. ಇದರಲ್ಲಿ ಆತಂಕಗೊಳಿಸುವ ವಿಷಯವೇನಿದೆ? ಈ ಪ್ರಕರಣದಲ್ಲಿ ಭಿನ್ನವಾದುದೇನಿದೆ ಎಂಬಂಥ ಪ್ರಶ್ನೆ ಏಳಬಹುದು. ಈವರೆಗೆ ಹಸ್ತಾಂತರ ಮಾಡಿದ್ದ ರಾಯಚೂರು ಜಿಲ್ಲೆಯ ಒಪೆಕ್ ಆಸ್ಪತ್ರೆಯಾಗಲಿ, ಆರೋಗ್ಯ ಬಂಧು ಯೋಜನೆಯಡಿಯ 53 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಿಷಯದಲ್ಲಾಗಲಿ ಎಲ್ಲಕ್ಕೂ ಸರ್ಕಾರದ ನೆಪ ಸ್ಪಷ್ಟವಿತ್ತು-  ಅದೆಂದರೆ ಈ   ಆಸ್ಪತ್ರೆ,  ಆರೋಗ್ಯ ಕೇಂದ್ರಗಳ ಪ್ರಗತಿ ಕಳಪೆ, ಇವು ರಾಜ್ಯದ ‘ಹಿಂದುಳಿದ’ ಭಾಗದಲ್ಲಿರುವ ಆಸ್ಪತ್ರೆಗಳು,  ಆರೋಗ್ಯ ಕೇಂದ್ರಗಳು, ಜೊತೆಗೆ ಸಿ ದರ್ಜೆಗೆ ಸೇರಿದ ‘ಕಳಪೆ ಗುಣಮಟ್ಟದ’ ಸೇವೆಗಳನ್ನು ನೀಡುತ್ತಿದ್ದ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಾಗಿದ್ದವು ಎಂಬುದು. 

ಆದರೆ ಉಡುಪಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಈ ಯಾವ ಕುಂಟು ನೆಪಕ್ಕೂ ಸರಿಹೊಂದುವುದಿಲ್ಲ. ಬದಲಿಗೆ ಇದು ರಾಜ್ಯದ ಅತ್ಯಂತ ‘ಮುಂದುವರಿದ’ ಜಿಲ್ಲೆಯಾಗಿದ್ದು, ಅಲ್ಲಿನ ಬಹುಪಾಲು ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳು ‘ಉತ್ತಮ’, ‘ಅತ್ಯುತ್ತಮ’ ಗುಣಮಟ್ಟದ ಸೇವೆ ನೀಡುತ್ತಿವೆ. ಜೊತೆಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳ ಉತ್ತಮ ಪ್ರಗತಿಯ  ಪರಿಣಾಮವಾಗಿ ತಾಯಿ ಮತ್ತು ಮಕ್ಕಳ ಮರಣದ ಪ್ರಮಾಣ ಇಡೀ ರಾಜ್ಯದಲ್ಲೇ ಅತ್ಯಂತ ಕಡಿಮೆಯಾಗಿದ್ದು 2015– 16ನೇ ಸಾಲಿನಲ್ಲಿ ಕೇವಲ ಎರಡೇ ತಾಯಿ ಮರಣಗಳು ಸಂಭವಿಸಿದ್ದವು. ಹೀಗಿದ್ದಾಗ, ಈ ಆಸ್ಪತ್ರೆ ಹಸ್ತಾಂತರಿಸಲು ಏನು ಕಾರಣವಿರಬಹುದು?

ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಆಸ್ಪತ್ರೆ ಯಾರಿಗೆ ಇರಿಸುಮುರಿಸು  ಉಂಟುಮಾಡುತ್ತದೆ ಎಂಬುದನ್ನು ನಾವು ಯೋಚಿಸಬೇಕಾಗಿದೆ. ರಾಯಚೂರಿನ ಸರ್ಕಾರಿ ಒಪೆಕ್ ಆಸ್ಪತ್ರೆ ನೆಲಸಮವಾದ ಮೇಲೆಯೇ ಸಾಲು ಸಾಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹುಟ್ಟಲು ಸಾಧ್ಯವಾಯಿತು ಎಂಬುದನ್ನು ಮರೆಯಬಾರದು.

ಎಲ್ಲಾ ಸೌಕರ್ಯ ಹೊಂದಿರುವ ಉಡುಪಿ ನಗರದ ಮಧ್ಯೆ ಪ್ರಮುಖ ಜಾಗದಲ್ಲಿರುವ ಸರ್ಕಾರಿ ಆಸ್ಪತ್ರೆ ಅಂತರರಾಷ್ಟ್ರೀಯ ಮಟ್ಟದ ಉದ್ಯಮಿಗಳ ಗಮನ ಸೆಳೆದಿರುವುದು ಸಹಜ. ಅದರ  ವಾಣಿಜ್ಯ ಬಳಕೆ ಸಾಧ್ಯತೆ ಅವರಿಗೆ ಅರ್ಥವಾಗಿದೆ. ದೇಶದಲ್ಲಿ ಆರೋಗ್ಯ ಸೇವಾ ಕ್ಷೇತ್ರ ಇಂದು ಸಾವಿರಾರು ಕೋಟಿ ರೂಪಾಯಿಗಳ ‘ಉದ್ದಿಮೆ’. ಈ ಪ್ರಮಾಣ 2020ನೇ ಸಾಲಿನ ಹೊತ್ತಿಗೆ 7 ಪಟ್ಟು ಹೆಚ್ಚಾಗಲಿದೆ ಎಂದೂ ಮಾರುಕಟ್ಟೆ  ತಜ್ಞರು ಹೇಳುತ್ತಾರೆ.

ಅಲ್ಲದೆ ಇದು ‘ಆರ್ಥಿಕ ಹಿಂಜರಿತ ರಹಿತ’ ಉದ್ದಿಮೆ ಕೂಡ! ದೇಶಗಳ ಆರ್ಥಿಕ ವ್ಯವಸ್ಥೆ ತಲೆಕೆಳಗಾದರೂ ರೋಗಕ್ಕೆ ತುತ್ತಾಗುವವರ ಪ್ರಮಾಣ ಹೆಚ್ಚಾಗುವುದೇ ಹೊರತು ಕಡಿಮೆ ಆಗುವುದಿಲ್ಲ. ಹೀಗಾಗಿ ಆರೋಗ್ಯ ಸೇವೆಗಳ ಮಾರುಕಟ್ಟೆ ವಿಸ್ತರಿಸುತ್ತಲೇ ಇರುತ್ತದೆ! ಇಂತಹ ‘ಉದಯೋನ್ಮುಖ ಕೈಗಾರಿಕೆ’ಯಲ್ಲಿ ತಮ್ಮ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳಲು ಅಂತರ ರಾಷ್ಟ್ರೀಯ ಮಟ್ಟದ ಉದ್ಯಮಿಗಳು ಸೇರಿದಂತೆ ಎಲ್ಲರೂ ಮುಗಿ ಬೀಳುತ್ತಿದ್ದರೆ ಅದರಲ್ಲೇನೂ ಆಶ್ಚರ್ಯವಿಲ್ಲ.  ಆದರೆ ಜನರ ಹಿತಾಸಕ್ತಿಯನ್ನು ರಕ್ಷಿಸಬೇಕಾದ ಸರ್ಕಾರಗಳು ಮತ್ತು ಚುನಾಯಿತ ಪ್ರತಿನಿಧಿಗಳು ಇಂದು ಬಂಡವಾಳ ಹೂಡಿಕೆದಾರರ  ‘ಸಕ್ರಿಯ’ ಏಜೆಂಟರಾಗಿರುವುದು ದುರಂತ.

ಕರ್ನಾಟಕ ‘ಹೂಡಿಕೆದಾರರ ಸ್ವರ್ಗ’ವೆಂದು ಬಿಂಬಿಸುತ್ತಾ, ಹೀಗೆ ವಶಕ್ಕೆ ತೆಗೆದುಕೊಳ್ಳುವವರಿಗೆ ಬೆಂಬಲ ಮತ್ತು ಕಾನೂನು ಸಮ್ಮತಿ ನೀಡಲು ಕಾರ್ಪೊರೇಟ್ ಉದ್ಯಮಿಗಳನ್ನು ಸೇರಿಸಿಕೊಂಡು ‘ಕರ್ನಾಟಕ ವಿಜನ್ ಗ್ರೂಪ್’, ‘ಕರ್ನಾಟಕ ಜ್ಞಾನ ಆಯೋಗ’ ಮುಂತಾದ ಕೂಟಗಳನ್ನು ಮಾಡಿಕೊಂಡು ಸರ್ಕಾರದ, ನಾಗರಿಕರ ಸೊತ್ತನ್ನು ಖಾಸಗಿ,  ಕಾರ್ಪೊರೇಟ್ ಸಂಸ್ಥೆಗಳಿಗೆ ಹರಾಜು ಮಾಡುವ ಪ್ರಕ್ರಿಯೆಯನ್ನು ಹಲವು ವಲಯಗಳಲ್ಲಿ ಮುಂದುವರಿಸಲಾಗಿದೆ. ಇದರಿಂದ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.

ರಾಷ್ಟ್ರೀಯ ಆರೋಗ್ಯ ನೀತಿ- 2015 ಕೂಡ ಖಾಸಗಿ ಆರೋಗ್ಯ ವಲಯದ ಪರವಿದೆ. ಸರ್ಕಾರಿ ಆರೋಗ್ಯ ವಿಮಾ ಯೋಜನೆಗಳನ್ನು ವಿಸ್ತರಿಸಿ ಜಿಲ್ಲಾ ಮಟ್ಟದಲ್ಲಿರುವ ಎರಡನೇ ದರ್ಜೆಯ ಖಾಸಗಿ ನರ್ಸಿಂಗ್‌ ಹೋಮ್ ಮತ್ತು ಆಸ್ಪತ್ರೆಗಳ ಜೊತೆ ಸೇರ್ಪಡೆಗೊಳಿಸಬೇಕು, ಇಂಥ ಖಾಸಗಿ ಆಸ್ಪತ್ರೆಗಳೊಂದಿಗೆ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳು  ಸ್ಪರ್ಧಿಸಿ, ಈ ಸಾಧನೆಯ ಆಧಾರದ ಮೇಲೆ ಜಿಲ್ಲಾ ಆಸ್ಪತ್ರೆಗಳಿಗೆ ಅನುದಾನ ನೀಡಬೇಕೆಂಬ  ಸಲಹೆಯನ್ನೂ ನೀಡಲಾಗಿದೆ. ಅಲ್ಲದೆ ಸರ್ಕಾರಿ- ಖಾಸಗಿ ಒಡಂಬಡಿಕೆ, ಕಾರ್ಪೊರೇಟ್ ಹೂಡಿಕೆಗೆ ಒತ್ತು ನೀಡಲಾಗುತ್ತಿದೆ.  ಆರೋಗ್ಯ ವಿಮೆ ಯೋಜನೆಗಳ ವಿಸ್ತರಣೆ, ಖಾಸಗಿ ಆಸ್ಪತ್ರೆಗಳ ತಜ್ಞರ ಸೇವೆ ಬಳಕೆ, ಡಯಾಗ್ನಸ್ಟಿಕ್ ಸೇವೆಯನ್ನು  ಖಾಸಗಿಗೆ ಹೊರಗುತ್ತಿಗೆ ನೀಡುವುದು ಇತ್ಯಾದಿ ವಿಧಾನ ಅನುಸರಿಸಲಾಗುತ್ತಿದೆ. ಸರ್ಕಾರ ಈಗಾಗಲೇ ಇಂತಹ ಪ್ರಕ್ರಿಯೆಯನ್ನು ರಾಯಚೂರು, ಮೈಸೂರು ಜಿಲ್ಲೆಗಳಲ್ಲಿ ‘ಪ್ರಾಯೋಗಿಕವಾಗಿ’ ಅನುಷ್ಠಾನ ಮಾಡುತ್ತಿದೆ. ಹಾಗಾಗಿ ಉಡುಪಿ ಮಾದರಿ ಇನ್ನಿತರ ಜಿಲ್ಲಾ ಮಟ್ಟದ ಆಸ್ಪತ್ರೆಗಳ ಸ್ವಾಧೀನದ ಸರಣಿಗೆ ನಾಂದಿಯಾದರೆ ಅಚ್ಚರಿಪಡಬೇಕಿಲ್ಲ.

ಇದರಿಂದ ಅಪಾಯ ಬಡವರಿಗಷ್ಟೇ ಅಲ್ಲ. ಇಂದು ಸರ್ಕಾರಿ ಆಸ್ಪತ್ರೆಗಳನ್ನು ಬಳಸುವವರಲ್ಲಿ ಬಹುಪಾಲು  ಬಡವರು, ಶ್ರಮಿಕ ವರ್ಗದವರಿರಬಹುದು. ಆದರೆ ವಿಮೆ ಮತ್ತು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿ ಸರ್ಕಾರಿ ವ್ಯವಸ್ಥೆಯನ್ನು ಕೈಬಿಟ್ಟಿರುವ ಮಧ್ಯಮ ವರ್ಗಕ್ಕೆ ಇದು ಎಚ್ಚರಿಕೆ ಗಂಟೆಯಾಗಬೇಕಾಗಿದೆ. ಯಾವುದೇ ನಿಯಂತ್ರಣವಿಲ್ಲದ ಹೈಟೆಕ್‌ ಕಾರ್ಪೊರೇಟ್ ಆಸ್ಪತ್ರೆಗಳ  ಆರೋಗ್ಯ ವಿಮೆಗಳ ಲಾಭದ ಉದ್ದೇಶ ಜನರನ್ನು ಲೂಟಿ ಮಾಡಿ ಅಪಾಯದ ಅಂಚಿಗೆ ತಳ್ಳುವುದೇ ಹೊರತು ಅವರಿಗೆ ನ್ಯಾಯಬದ್ಧ, ಸಮಂಜಸ, ಸಮಗ್ರ ಆರೋಗ್ಯ ಸೇವೆ ನೀಡುವುದಲ್ಲ. ಆದ್ದರಿಂದ ಉಡುಪಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳನ್ನು ಉಳಿಸಿಕೊಳ್ಳುವುದು ಕೇವಲ ಬಡವರ ಹೊಣೆಯಲ್ಲ. ಪ್ರಜಾಪ್ರಭುತ್ವದಲ್ಲಿ ಸರ್ಕಾರಿ  ಆರೋಗ್ಯ ವ್ಯವಸ್ಥೆಯನ್ನು ಉಳಿಸಿ ಪೋಷಿಸುವ ಹೊಣೆ ನಮ್ಮೆಲ್ಲರದಾಗಿರುತ್ತದೆ. ಇಲ್ಲವಾದಲ್ಲಿ ನಮ್ಮ ನಾಗರಿಕತ್ವ ಮತ್ತು ಆರೋಗ್ಯ ಸಾರ್ವಭೌಮತ್ವ ಕಳೆದುಕೊಳ್ಳುವ ದಿನಗಳು ದೂರವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT