ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಸಿಡಿಸ್‌: ನಿಮ್ಮ ಕಾರು, ನಿಮ್ಮ ಆಯ್ಕೆ

Last Updated 13 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮರ್ಸಿಡಿಸ್‌  ಬೆಂಜ್‌, ಭಾರತದಲ್ಲಿ ಬಹಳ ಕಾಲದಿಂದ ಐಷಾರಾಮಿ ಕಾರುಗಳನ್ನು ಒದಗಿಸುತ್ತಿರುವ ಜರ್ಮನಿಯ ಕಂಪೆನಿಯಾಗಿದೆ. ಆರಂಭದಲ್ಲಿ ಟಾಟಾ ಮೋಟಾರ್ಸ್‌ ಸಹಭಾಗಿತ್ವದಲ್ಲಿ ಕಾರು ಮತ್ತು ಟ್ರಕ್‌ಗಳ ಮಾರುಕಟ್ಟೆಯನ್ನು ಪ್ರವೇಶಿಸಿತ್ತು.

1994ರ ನಂತರ ಸಂಪೂರ್ಣ ಸ್ವತಂತ್ರ ಕಂಪೆನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಟ್ರಕ್ ಮತ್ತು ಬಸ್‌ಗಳು ಚೆನ್ನೈ ಘಟಕದಲ್ಲಿ ತಯಾರಾಗುತ್ತವೆ.  ಕಾರುಗಳ ತಯಾರಿಕೆಗೆ   ಪುಣೆಯಲ್ಲಿ 100 ಎಕರೆ ವಿಸ್ತೀರ್ಣದಲ್ಲಿ ತಯಾರಿಕಾ ಮತ್ತು ಜೋಡಣಾ ಘಟಕವನ್ನು ಸ್ಥಾಪಿಸಿದೆ.

ಭಾರತದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಕಂಪೆನಿ ಮುಂದಾಗಿದೆ. ದೇಶದಾದ್ಯಂತ ಈಗ 52 ಮಳಿಗೆ ಮತ್ತು ಸರ್ವಿಸ್ ಸೆಂಟರ್‌ಗಳನ್ನು ಹೊಂದಿದೆ. ಆಮದು ಸುಂಕವನ್ನು ತಪ್ಪಿಸುವ ಸಲುವಾಗಿ ಕಂಪೆನಿ ಹಲವು ಕಾರ್‌ಗಳನ್ನು ಭಾರತದಲ್ಲೇ ತಯಾರಿಸಲು ಜೋಡಿಸಲು ಈ ಘಟಕವನ್ನು ನಿರ್ಮಿಸಿದೆ.

ಕಂಪೆನಿಯ ಬತ್ತಳಿಕೆಯಲ್ಲಿ ಈಗ ಒಟ್ಟು 23 ಕಾರ್‌ಗಳಿವೆ. ಅವುಗಳಲ್ಲಿ ಸಾಂಪ್ರದಾಯಿಕ ಸೆಡಾನ್‌ಗಳು, ಎಸ್‌ಯುವಿಗಳು ಮತ್ತು ಎನ್‌ಜಿಸಿಗಳು (ನ್ಯೂ ಜನರೇಷನ್‌ ಕಾರ್‌) ಸೇರಿವೆ. ಮೂರೂ ವಿಭಾಗದ ಕೆಲವು ಕಾರ್‌ಗಳು ಸೇರಿದಂತೆ ಒಟ್ಟು 8 ಕಾರ್‌ಗಳು ಈ ಘಟಕದಲ್ಲಿ ತಯಾರಾಗುತ್ತವೆ.

ಈ ಎಂಟೂ ಕಾರ್‌ಗಳಿಗೆ ಭಾರತದಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಅವುಗಳನ್ನಷ್ಟೇ ಕಂಪೆನಿ ಇಲ್ಲಿ ತಯಾರಿಸುತ್ತಿದೆ. ಉಳಿದ ಕಾರ್‌ಗಳಿಗೆ ಬೇಡಿಕೆ ಹೆಚ್ಚಿದಂತೆ ಅವುಗಳನ್ನು ಇಲ್ಲೇ ತಯಾರಿಸಲು ಘಟಕವನ್ನು ವಿಸ್ತರಿಸಲು ಕಂಪೆನಿ ಸಿದ್ಧವಿದೆ.

ಈ ಘಟಕದ ವಿಶೇಷ ಏನೆಂದರೆ ಎಲ್ಲಾ ಬಗೆಯ ಕಾರ್‌ಗಳೂ ಇಲ್ಲಿ ತಯಾರಾಗುವುದು. ಕಂಪೆನಿಯ ತಾಯ್ನಾಡು ಜರ್ಮನಿಯಲ್ಲೇ ಒಂದೇ ಘಟಕದಲ್ಲಿ ಸೆಡಾನ್‌ಗಳು, ಎನ್‌ಜಿಸಿಗಳು ಮತ್ತು ಎಸ್‌ಯುವಿಗಳು ತಯಾರಾಗುವುದಿಲ್ಲ. ಜತೆಗೆ ವಿಶ್ವದ ಯಾವುದೇ ದೇಶದಲ್ಲೂ ಈ ಸೌಲಭ್ಯವನ್ನು ಕಂಪೆನಿ ಹೊಂದಿಲ್ಲ.

ಭಾರತದ ಮಾರುಕಟ್ಟೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಹೀಗಾಗಿ ಭಾರತಕ್ಕೆ ಹೆಚ್ಚಿನ ಪ್ರಾಮುಖ್ಯ  ನೀಡುತ್ತಿದ್ದೇವೆ ಎಂದು ಕಂಪೆನಿ ಹೇಳಿಕೊಂಡಿದೆ.

*
ಅಚ್ಚುಕಟ್ಟಿನ ಕೆಲಸ

ಎಲ್ಲಾ ಕಾರು ತಯಾರಿಕಾ ಘಟಕಗಳಂತೆಯೇ ಇಲ್ಲಿನ ಜೋಡಣಾ ಘಟಕ ಅರೆ ಸ್ವಯಂಚಾಲಿತ ವ್ಯವಸ್ಥೆಯದ್ದು. ಯಂತ್ರಗಳ ಜತೆಗೆ ಮನುಷ್ಯರೂ ಇಲ್ಲಿ ಕಾರುಗಳ ಜೋಡಣೆಯಲ್ಲಿ ಶ್ರಮವಹಿಸುತ್ತಾರೆ. ಬೆಂಜ್‌ನ ಬಹುತೇಕ ಎಲ್ಲಾ ಕಾರುಗಳೂ ಮೊನೊಕಾಕ್ ಮಾದರಿಯ ಅಡಿಯಚ್ಚನ್ನು ಹೊಂದಿವೆ.

ಅಂದರೆ ಕಾರಿನ ದೇಹವೇ ಕಾರಿನ ಅಡಿಯಚ್ಚೂ ಆಗಿರುತ್ತದೆ. ಇವುಗಳಿಗೆ ಎಂಜಿನ್‌ ಪ್ರತ್ಯೇಕವಾಗಿ ಬಂದು ಕೂರುತ್ತದೆ. ಇವುಗಳ ನಿರ್ವಹಣೆಗೆ ಒಬ್ಬ ಎಂಜಿನಿಯರ್‌  ಜತೆ ಹಲವು ಸಹಾಯಕರೂ ಇರುತ್ತಾರೆ. ಎಂಜಿನ್ ಕೂತಿರುವುದು ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿ ಮುಂದಿನ ಹಂತಕ್ಕೆ ಕಳುಹಿಸಲಾಗುತ್ತದೆ.

ನಂತರ ಡ್ರೈವ್‌ ಅಸೆಂಬ್ಲಿ, ಅಂದರೆ ಡಿಫರೆನ್ಷಿಯಲ್‌ಗಳು, ವ್ಹೀಲ್‌ ಹಬ್‌ಗಳು ಬಂದು ಕೂರುತ್ತವೆ. ನಂತರದ ಹಂತದಲ್ಲಿ ವೈರಿಂಗ್‌ ನಡೆಯುತ್ತದೆ. ಇದು ಹೆಚ್ಚು ಮಹತ್ವದ ಮತ್ತು ಮುಖ್ಯವಾದ ಕೆಲಸ. ಇವುಗಳ ಜೋಡಣೆಯ ನಂತರ ಪ್ರತಿ ಇಸಿಎಂಗಳನ್ನೂ ಪ್ರತ್ಯೇಕವಾಗಿ ಪರೀಕ್ಷಿಸಲಾಗುತ್ತದೆ.

ಯಾವುದೇ ವಾಹನಗಳಲ್ಲಿ ಬೇಗ ಹಾಳಾಗುವ ಬಿಡಿಭಾಗಗಳಲ್ಲಿ ಇಸಿಎಂಗಳದ್ದು ಮೊದಲ ಸ್ಥಾನ ಹಾಗೂ ಅತ್ಯಂತ ದುಬಾರಿ ಬಿಡಿಭಾಗಗಳವು. ಸಾಮಾನ್ಯ ಕಾರ್‌ಗಳಲ್ಲಿ ಹೆಚ್ಚೆಂದರೆ ಏಳೆಂಟು ಇಸಿಎಂಗಳಿರುತ್ತವೆ.

ಬಹುತೇಕ ಸ್ವಯಂಚಾಲಿತವಾಗಿ ನಡೆಯುವ, ಅತ್ಯಾಧುನಿಕ ಸೌಲಭ್ಯ ಹೊಂದಿರುವ ಪ್ರತಿ ಮರ್ಸಿಡಿಸ್‌  ಕಾರ್‌ಗಳಲ್ಲಿ ಕನಿಷ್ಠ 50 ಇಸಿಎಂಗಳು (ಎಲೆಕ್ಟ್ರಿಕಲ್ ಕಂಟ್ರೋಲ್ ಯುನಿಟ್‌) ಇರುತ್ತವೆ.

ಹೀಗೆ ವಾಹನದ ಸೌಂಡ್‌ ಪ್ರೂಫಿಂಗ್‌, ಸೀಟುಗಳು, ಕಾಕ್‌ಪಿಟ್‌ ಅರ್ಥಾತ್ ಡ್ಯಾಷ್‌ಬೋರ್ಡ್, ಸ್ಟೀರಿಂಗ್‌, ಬಾಗಿಲುಗಳು, ಗಾಜುಗಳು, ಲ್ಯಾಂಪ್‌ಗಳು ಕೊನೆಗೆ ಚಕ್ರಗಳು ಬಂದು ಕೂರುತ್ತವೆ. ಅಲ್ಲಿಗೆ ಕಾರಿನ ಜೋಡಣೆ ಮುಗಿದಂತೆ.

ಜೋಡಣೆಯ ಪ್ರತಿ ಹಂತದಲ್ಲೂ ಎಲ್ಲವನ್ನೂ ಪರೀಕ್ಷಿಸಲಾಗಿರುತ್ತದೆ. ಆದರೆ ಜೋಡಣೆ ನಂತರವೂ ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಏಳೆಂಟು ಜನ ಎಂಜಿನಿಯರ್‌ಗಳು ಪರೀಕ್ಷಿಸುತ್ತಾರೆ. ದೋಷಗಳಿದ್ದಲ್ಲಿ ಅವನ್ನು ತಕ್ಷಣವೇ ಸರಿಪಡಿಸಲಾಗುತ್ತದೆ.

ಇದರ ನಂತರ ವ್ಹೀಲ್‌ ಅಲೈನ್‌ಮೆಂಟ್‌ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಜತೆಗೆ ಇದೇ ಹಂತದಲ್ಲಿ ಹೆಡ್‌ಲ್ಯಾಂಪ್‌ಗಳ ಬೆಳಕಿನ ಪ್ರಸರಣದ ದಿಕ್ಕನ್ನು ಹೊಂದಿಸಲಾಗುತ್ತದೆ. ಇದಾದ ನಂತರ ಕಾರಿನ ರ್‍ಯಾಂಪ್‌ ಟೆಸ್ಟ್ ನಡೆಯುತ್ತದೆ.

ಇಲ್ಲಿ ರ್‍ಯಾಂಪ್‌ ಮೇಲೆ ಕಾರನ್ನು ಚಲಾಯಿಸಲಾಗುತ್ತದೆ. ಅಂದರೆ ಕಾರಿನ ಚಕ್ರಗಳು ನಿಂತಲ್ಲೇ ತಿರುಗುತ್ತವೆ. ಇಲ್ಲಿ ಕಾರಿನ ವೇಗ, ಎಂಜಿನ್‌ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಪರೀಕ್ಷಿಸಲಾಗುತ್ತದೆ. ಇಲ್ಲಿ ತೇರ್ಗಡೆಯಾದ ಕಾರ್‌ಗಳು ಶವರ್‌ ಟೆಸ್ಟ್‌ಗೆ ಹೋಗುತ್ತವೆ.

ಅಲ್ಲಿ ಭಾರಿ ಮಳೆಯಾದಂತೆ ಕಾರಿನ ಮೇಲೆ ನೀರು ಸುರಿಯುತ್ತದೆ. ಕಾರಿನ ದೇಹದಲ್ಲಿ ಎಲ್ಲಿಯಾದರೂ ನೀರು ಸೋರುತ್ತಿದೆಯೇ ಎಂಬುದನ್ನು ಪರಿಶೀಲಿಸುವುದು ಇಲ್ಲಿನ ಉದ್ದೇಶ. ಜತೆಗೆ ಇಲ್ಲೇ ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು, ಮಳೆ ಸಂವೇದಿ ವೈಫರ್‌ಗಳು, ಸ್ವಯಂಚಾಲಿತ ಹವಾನಿಯಂತ್ರಣ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲಾಗುತ್ತದೆ.

ಪ್ರತಿ ಹಂತದ ಪರೀಕ್ಷೆಯಲ್ಲೂ ದೋಷಗಳಿದ್ದಲ್ಲಿ ಅಲ್ಲೇ ಸರಿಪಡಿಸಲಾಗುತ್ತದೆ. ರ್‍ಯಾಂಪ್‌ ಮತ್ತು ರೇನ್‌ ಟೆಸ್ಟ್‌ಗಳ ನಂತರ ಕಾರುಗಳು ಅರ್ಧ ಕಿ.ಮೀ ದೂರದ ರೋಡ್‌ ಟೆಸ್ಟ್‌ಗೆ ಒಳಪಡುತ್ತವೆ. ಇಲ್ಲಿ ವಾಹನದ ರಸ್ತೆ ಹಿಡಿತ, ಬ್ರೇಕಿಂಗ್‌ ಇತ್ಯಾದಿಗಳನ್ನು ಪರೀಕ್ಷಿಸಲಾಗುತ್ತದೆ. ನಂತರ ಕಾರ್‌ ವಾಷಿಂಗ್‌ಗೆ ಹೋಗುತ್ತದೆ. ಪಾಲಿಷ್ ಆದ ನಂತರ ಅಂತಿಮ ಪರೀಕ್ಷೆ ನಡೆಯುತ್ತದೆ.

ವಾಹನದ ಪ್ರತೀ ಭಾಗವನ್ನೂ ಮತ್ತೊಮ್ಮೆ ಪರೀಕ್ಷಿಸಲಾಗುತ್ತದೆ. ಇದು ಯಂತ್ರಗಳು ನಡೆಸುವ ಪರೀಕ್ಷೆ. ತುಸುದೋಷವಿದ್ದರೂ ಕಾರು ಅಲ್ಲೇ ನಿಂತುಬಿಡುತ್ತವೆ. ದೋಷ ಸರಿಪಡಿಸಿದ ನಂತರವಷ್ಟೇ ಕಾರು ಮುಂದೆ ಹೋಗುತ್ತದೆ.

ಹೀಗೆ ಕಾರು ತಯಾರಾಗಲು ಹಲವು ದಿನಗಳು ಬೇಕಾಗುತ್ತದೆ. ದುಬಾರಿ ಐಷಾರಾಮಿ ಕಾರುಗಳ ಮಾರುಕಟ್ಟೆ ಚಿಕ್ಕದಾದ್ದರಿಂದ ಹಾಗೂ ತರಾತುರಿ ಇಲ್ಲದ್ದರಿಂದ ಮುಖ್ಯವಾಗಿ ಗುಣಮಟ್ಟಕ್ಕೆ ಪ್ರಾಮುಖ್ಯ ನೀಡುವುದರಿಂದ ಮರ್ಸಿಡಿಸ್‌ ಕಾರುಗಳ ತಯಾರಿಕಾ ಅವಧಿ ತುಸು ಹೆಚ್ಚು ಎಂದು ಕಂಪೆನಿ ಹೇಳುತ್ತದೆ. 

*
ಆಫ್‌ರೋಡ್‌ ಟ್ರಯಲ್‌

ಮರ್ಸಿಡಿಸ್‌  ಬೆಂಜ್‌ನ ಎಸ್‌ಯುವಿಗಳು ಕಚ್ಚಾರಸ್ತೆಯಲ್ಲೂ ಸೈಎನಿಸಿಕೊಳ್ಳುತ್ತವೆ. ಈ ಎಸ್‌ಯುವಿಗಳನ್ನು ಕೊಳ್ಳುವವರಲ್ಲಿ ಬಹುತೇಕ ಜನ ಅವುಗಳ ಶಕ್ತಿ ಸಾಮರ್ಥ್ಯವನ್ನು ಪರೀಕ್ಷಿಸುವುದೇ ಇಲ್ಲ. ಹೀಗಾಗಿ ತಮ್ಮ ವಾಹನ ಎಲ್ಲೆಲ್ಲಾ ಓಡಾಡಬಲ್ಲದು ಎಂಬುದನ್ನು ಗ್ರಾಹಕರಿಗೆ ಮನವರಿಕೆ ಮಾಡಿಕೊಡಲು ಕಂಪೆನಿ ತನ್ನ ಘಟಕದಲ್ಲಿ ಕಚ್ಚಾ ರಸ್ತೆಯೊಂದನ್ನು ರೂಪಿಸಿದೆ. ಇದು ಪಕ್ಕಾ ಆಫ್‌ರೋಡ್‌ ಟ್ರಯಲ್. ಅದರ ಅನುಭವ ಹೀಗಿದೆ.

ಚಾಲಕ ಮೊದಲು ಕಚ್ಚಾ ರಸ್ತೆಗೆ ಕಾರನ್ನು ತಂದರು. ಸಪಾಟಾದ ಆ ನೆಲದಿಂದ ಒಂದಡಿ ಮುಂದಿನಿಂದ 45 ಡಿಗ್ರಿಯಷ್ಟು ಇಳಿಜಾರು. ಕಾರನ್ನು ಅರ್ಧ ಇಳಿಸಿರುವಾಗಲೇ ಹಿಲ್‌ ಡಿಸೆಂಟ್‌ ಕಂಟ್ರೋಲ್‌ ಅನ್ನು ಆಯ್ಕೆ ಮಾಡಿದರು. ಈ ಆಯ್ಕೆಯಲ್ಲಿ ಚಾಲಕ ಬ್ರೇಕ್‌ ಅನ್ನು ಒತ್ತಿ ಹಿಡಿಯುವ ಅವಶ್ಯಕತೆಯಿಲ್ಲ.

ಕಾರಿನ ವೇಗವನ್ನು ನಿಗದಿಪಡಿಸಿದರೆ ಸಾಕು. ಹಳ್ಳ ಇಳಿಯುವವರೆಗೂ ಕಾರು ಅದೇ ವೇಗದಲ್ಲಿ ಹೋಗುತ್ತದೆ. ನಾವು ಕೂತಿದ್ದ ಜಿಎಲ್‌ಎ ಎಸ್‌ಯುವಿಯಲ್ಲಿ ವೇಗವನ್ನು 2ಕಿ.ಮೀನಿಂದ 18 ಕಿ.ಮೀವರೆಗೂ ಆಯ್ಕೆ ಮಾಡಿಕೊಳ್ಳಬಹುದಿತ್ತು. ನಿಗದಿಪಡಿಸಿದ ವೇಗದಲ್ಲೇ ಕಾರು ಇಳಿಯಿತು.

ಮುಂದೆ ಇನ್ನೂ ಕಡಿದಾದ ಇಳಿಜಾರು. ಅದು 47 ಡಿಗ್ರಿಯಷ್ಟು ಕಡಿದಾಗಿತ್ತು. ಕಾರು ಅಲ್ಲಿ ಇಳಿಯಬಹುದು ಎಂದು ನೋಡುತ್ತಿದ್ದೆವು. ಇಳಿಜಾರಿನ ಅಂಚಿನಲ್ಲಿದ್ದ ನೆಲಬಿಟ್ಟರೆ ಬೇರೇನೋ ಕಾಣುತ್ತಿರಲಿಲ್ಲ. ಕಾರು ಈಗ ಇಳಿಯಬಹುದು, ಆಗ ಇಳಿಯಬಹುದು ಎಂದು ಯೋಚಿಸುತ್ತಿದ್ದೆ. ಅಷ್ಟರಲ್ಲೇ ಕಾರು ಮೊದಲು ಇಳಿದಿದ್ದ ಇಳಿಜಾರನ್ನು, ಪ್ರಚಂಡ ವೇಗದಲ್ಲಿ ಹಿಮ್ಮುಖವಾಗಿ ಏರಿತು. ಅನಿರೀಕ್ಷಿತವಾಗಿ ನಡೆದ ಈ ಚಲನೆ ಹೆಚ್ಚು ರೋಮಾಂಚನಕಾರಿಯಾಗಿತ್ತು.

ನಂತರ 47 ಡಿಗ್ರಿಯಷ್ಟು ಕಡಿದಾದ ಏರನ್ನು ಏರಬೇಕು. ಕಾರು ಈ ಗುಡ್ಡ ಏರಲು ಆರಂಭಿಸಿದಾಗ ಆಕಾಶಬಿಟ್ಟರೆ ಬೇರೇನೂ ಕಾಣುತ್ತಿರಲಿಲ್ಲ. ಕಾರು ಒಂದಡಿ ಅಕ್ಕಪಕ್ಕ ಸರಿದರೂ ಪಕ್ಕದ ಕೃತಕ ಪ್ರಪಾತಕ್ಕೆ ಬೀಳುತ್ತದೆ.

ಇಲ್ಲಿ ಅರ್ಧದಲ್ಲೇ ಚಾಲಕ ಕಾರನ್ನು ನಿಲ್ಲಿಸಿದ. ಅದು ಹಿಲ್‌ ಸ್ಟಾರ್ಟ್‌ ಅಸಿಸ್ಟ್‌ ಸೌಲಭ್ಯವನ್ನು ಪರೀಕ್ಷಿಸುವ ಹಂತ. ಅಷ್ಟು ಕಡಿದಾದ ಏರಿನಲ್ಲೂ ಕಾರು ಬ್ರೇಕ್‌ ಹಾಕದೆಯೇ (ಬ್ರೇಕ್‌ ಒತ್ತಿದ ತಕ್ಷಣ ಹಿಲ್‌ ಸ್ಟಾರ್ಟ್ ಅಸಿಸ್ಟ್‌ ಕೆಲಸ ಮಾಡಲು ಆಂಭಿಸುತ್ತದೆ. ಅದು ಚಾಲ್ತಿಯಲ್ಲಿರುವವರೆಗೂ ಬ್ರೇಕ್‌ ಒತ್ತಿಹಿಡಿಯುವ ಅವಶ್ಯಕತೆ ಇಲ್ಲ) ನಿಲ್ಲುತ್ತದೆ. ನಂತರ ಮತ್ತೆ ಕಾರನ್ನು ಮೇಲಕ್ಕೆ ಏರಿಸಿದರು. ಇದರ ನಂತರ 45 ಡಿಗ್ರಿ ಕಡಿದಾದ ಏರನ್ನೂ ಏರಿಸಲಾಯಿತು.

ಇದಾದ ನಂತರ 35 ಡಿಗ್ರಿ ಕಡಿದಾಗಿರುವ ಸಣ್ಣ ದಿಬ್ಬದ ಮೇಲೆ ಕಾರಿನ ಒಂಬದಿಯ ಚಕ್ರಗಳ ಮೂಲಕ ಹತ್ತಿಸುವುದು, ಹಾಗೇ ಗುಡ್ಡವನ್ನು ಸುತ್ತಿಬರುವುದು. ಕಾರಿನ ಬಲಬದಿಯ ಚಕ್ರಗಳು ದಿಬ್ಬ ಏರುತ್ತಿದ್ದಂತೆಯೇ ಎಡಬದಿ ನೆಲಕ್ಕೆ ಉರುಳುವಷ್ಟು ಬಾಗಿತು.

ಅದೇ ರೀತಿ ಸ್ವಲ್ಪ ದೂರ ಕ್ರಮಿಸಿದ ನಂತರ, ಅದೇ ಸ್ವರೂಪದಲ್ಲೇ ಕಾರನ್ನು ಯು ಟರ್ನ್‌ ಪಡೆಯಬೇಕು. ಇದು ಸ್ವಲ್ಪ ಕ್ಲಿಷ್ಟವಾದ ಕೆಲಸ. ಏಕೆಂದರೆ ಈ ಹಂತದಲ್ಲಿ ಕಾರಿನ ಒಂದು ಚಕ್ರ ಗುಡ್ಡದ ಮೇಲೂ, ಮತ್ತೊಂದು ನೆಲದ ಮೇಲೂ ಇರುತ್ತವೆ.

ಉಳಿದೆರೆಡು ಚಕ್ರಗಳು ಗಾಳಿಯಲ್ಲಿ ತೇಲುತ್ತಿರುತ್ತವೆ. ಒಳಗೆ ಕುಳಿತಿರುವವರು ತುಸು ಅಲುಗಿದರೂ ಗಾಳಿಯಲ್ಲಿರುವ ಚಕ್ರ ನೆಲಕ್ಕೆ ಬಡಿದು, ಮೇಲಕ್ಕೇಳುತ್ತದೆ. ಕಾರು ಎರಡೇ ಚಕ್ರದಲ್ಲಿ ಓಲಾಡುತ್ತಿರುತ್ತದೆ. ಟ್ರಾಕ್ಷನ್‌ ಕಂಟ್ರೋಲ್‌ ಇಲ್ಲಿ ಉಪಯೋಗಕ್ಕೆ ಬರುತ್ತದೆ. ಈ ರೀತಿ ಎರಡು ಯೂ ಟರ್ನ್‌ಗಳನ್ನು ಮಾಡಿದ ನಂತರ ಆಫ್‌ರೋಡ್‌ ಟ್ರಯಲ್ ಮುಗಿಯುತ್ತದೆ.

ಚಾಲಕ ಓಡಿಸಿ ತೋರಿಸಿದ ನಂತರ ಪತ್ರಕರ್ತರಿಗೂ ಓಡಿಸಲು ಅವಕಾಶ ನೀಡಲಾಯಿತು. ನಾನು ಎಲ್ಲಾ ಸಾಹಸಗಳನ್ನು ತುಸು ನಿಧಾನವಾಗಿಯೇ ಪೂರೈಸಿದೆ. ಆದರೆ, 47 ಡಿಗ್ರಿ ಕಡಿದಾದ ಏರನ್ನು ಹಿಮ್ಮುಖವಾಗಿ ಏರಿಸುವ ಸಾಹಸಕ್ಕೆ ಧೈರ್ಯ ಸಾಲಲಿಲ್ಲ. (ಇಲ್ಲಿ ಎಸ್‌ಯುವಿಯನ್ನು ಕಾರ್‌ ಎಂದೇ ಬರೆಯಲಾಗಿದೆ. ಆದರೆ ಕಾರ್‌ಗಳಿಂದ ಈ ಸಾಹಸ ಸಾಧ್ಯವಿಲ್ಲ. ಹೀಗಾಗಿ ಕಾರ್‌ ಎಂಬುದನ್ನು ಎಸ್‌ಯುವಿ ಎಂದೇ ಪರಿಗಣಿಸಬೇಕು).

*
ಬೆಲ್ಟ್‌ ಬ್ಯಾಗ್‌...

2017ರ ನಂತರ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಕಾರ್‌ಗಳಲ್ಲೂ ಚಾಲಕನ ಏರ್‌ಬ್ಯಾಗ್‌ ಇರಬೇಕಾದದ್ದು ಕಡ್ಡಾಯವಾಗುತ್ತದೆ. ಆದರೆ ಏರ್‌ಬ್ಯಾಗ್‌ ಎನ್ನುವ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ ಶ್ರೇಯಸ್ಸು ಮರ್ಸಿಡಿಸ್‌ ಕಂಪೆನಿಗೆ ಸಲ್ಲುತ್ತದೆ.

ಐಷಾರಾಮಿ ಕಾರುಗಳಲ್ಲಿ ಈಗ ಎಂಟರಿಂದ 12 ಏರ್‌ ಬ್ಯಾಗ್‌ಗಳಿರುತ್ತವೆ. ಹಿಂಬದಿ ಕೂತವರಿಗೆ ಕರ್ಟನ್‌ ಏರ್‌ಬ್ಯಾಗ್‌ ನೆರವು ಸಿಗುತ್ತದೆಯಾದರೂ ಮುಂಬದಿಯ ಏರ್‌ಬ್ಯಾಗ್‌ಗಳು ಇರುವುದಿಲ್ಲ. ಈ ಕೊರತೆ ನೀಗಿಸಲು ಕಂಪೆನಿ ಸೀಟ್‌ಬೆಲ್ಟ್‌ನಲ್ಲಿ ಏರ್‌ಬ್ಯಾಗ್‌ ಅನ್ನು ಅಳವಡಿಸಿದೆ.

ಹೀಗಾಗಿ ಇದಕ್ಕೆ ಬೆಲ್ಟ್‌ಬ್ಯಾಗ್‌ ಎಂದು ಹೆಸರಿಟ್ಟಿದೆ. ಸದ್ಯ ಕಂಪೆನಿಯ ದುಬಾರಿ ಸೆಡಾನ್‌ಗಳಾದ  ಮೇಬ್ಯಾಕ್‌ ಎಸ್‌500 ಮತ್ತು ಎಸ್‌600ಗಳಲ್ಲಿ ಮಾತ್ರ ಈ ಸೌಕರ್ಯ ಇದೆ. ಮುಂದಿನ ದಿನಗಳಲ್ಲಿ ಅದು ಇತರ ಮಾದರಿಯ ಕಾರ್‌ಗಳಿಗೂ ಬರುತ್ತದೆ ಎಂದು ಕಂಪೆನಿ ಹೇಳಿದೆ.
(ಕಂಪೆನಿಯ ಆಹ್ವಾನದ ಮೇರೆಗೆ ಲೇಖಕ ಪುಣೆ ಘಟಕಕ್ಕೆ ಭೇಟಿ ನೀಡಿದ್ದರು)

***
ಹೆಲಿಕಾಪ್ಟರ್‌ ಸೇವೆಯೂ ಲಭ್ಯ!

ಮರ್ಸಿಡಿಸ್‌  ಕಾರು ಕೊಳ್ಳುವವರು, ತಮ್ಮ ಕಾರಿನ ದೇಹದ ಬಣ್ಣ, ಒಳಾಂಗಣದ ಬಣ್ಣ ಹಾಗೂ ಸೀಟ್‌ಗಳ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳುವ ಸೌಲಭ್ಯವನ್ನು ಕಂಪೆನಿ ಗ್ರಾಹಕರಿಗೆ ಒದಗಿಸಿದೆ. ಪ್ರತಿ ಮಳಿಗೆಯಲ್ಲಿ ಇದಕ್ಕೆಂದೇ 'ಐ ಕಾನ್ಫಿಗರ್' ಎಂಬ ಯಂತ್ರವನ್ನು ಕಂಪೆನಿ ಅಳವಡಿಸಿದೆ.

ಅದರಲ್ಲಿ ಕಾರಿನಲ್ಲಿ ಲಭ್ಯವಿರುವ ಬಣ್ಣಗಳನ್ನು ಪರೀಕ್ಷಿಸಿ ಗ್ರಾಹಕ ಆರಿಸಿಕೊಳ್ಳಬಹುದು. ಅದು ಭಾರತದಲ್ಲಿ ತಯಾರಾಗುವ ಕಾರಿರಬಹುದು ಅಥವಾ ಜರ್ಮನಿಯಲ್ಲಿ ತಯಾರಾಗುವ ಕಾರಿರಬಹುದು, ಬುಕ್ಕಿಂಗ್ ಆದ ನಂತರವೇ ಅದರ ತಯಾರಿ ಕೆಲಸ ಆರಂಭವಾಗುತ್ತದೆ.

ಗ್ರಾಹಕರು ತಮ್ಮ ಕಾರು ಹೇಗೆ ತಯಾರಾಗುತ್ತದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುವ ಅಥವಾ ನೋಡುವ ಸೌಲಭ್ಯವನ್ನೂ ಕಂಪೆನಿ ಒದಗಿಸಿದೆ. ಗ್ರಾಹಕ ಬುಕ್ಕಿಂಗ್ ಮಾಡಿದ ನಂತರ, ಅವರ ಕಾರ್‌ ತಯಾರಾಗುವ ದಿನಾಂಕವನ್ನು ಅವರಿಗೆ ತಿಳಿಸಲಾಗುತ್ತದೆ. ಅಂದು ಗ್ರಾಹಕರು ಪುಣೆಯ ಘಟಕಕ್ಕೆ ಭೇಟಿ ನೀಡಬಹುದು. ದೂರದಿಂದ ಬರುವವರಿಗೆ ಹೆಲಿಕಾಪ್ಟರ್‌ ಸೇವೆಯನ್ನೂ ಒದಗಿಸಲು ಕಂಪೆನಿ ಸಿದ್ಧವಿದೆ.

ಗ್ರಾಹಕರಿಗೆ ಎಂಜಿನಿಯರ್‌ಗಳು ಅವರ ಕಾರಿನ ಬಿಡಿಭಾಗಗಳು, ಜೋಡಣೆ, ಕಾರ್ಯನಿರ್ಹಣೆ ಬಗ್ಗೆ ವಿವರಣೆ ನೀಡುತ್ತಾರೆ. ಕಾರು ಪರೀಕ್ಷೆಗೆ ಒಳಪಡುವುದನ್ನೂ ಗ್ರಾಹಕರು ನೋಡಬಹುದು. ಗ್ರಾಹಕರಲ್ಲಿ ಕಾರಿನ ಗುಣಮಟ್ಟದ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಮೂಡಿಸಲು ಈ ಸೌಲಭ್ಯ ಒದಗಿಸಲಾಗಿದೆ ಎಂದ ಕಂಪೆನಿ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT