ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಇನ್ನೂ ಅಬಲೆಯೆ?

Last Updated 16 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಹೆಣ್ಣು ಎಂದರೆ ಅಬಲೆ – ಬಲ ಇಲ್ಲದವಳು – ಎಂದೇ ಸಮೀಕರಿಸಲ್ಪಡುವವಳು; ಮಾನಸಿಕವಾಗಿಯೂ ದೈಹಿಕವಾಗಿಯೂ ಬಲ ಇಲ್ಲದವಳು ಅವಳು ಎಂಬ ಗ್ರಹಿಕೆಯಲ್ಲೇ ಸಮಾಜ ಓಡುತ್ತಿರುತ್ತದೆ.

ಹೀಗಾಗಿ ಬಲಕ್ಕೆ ಸೇರಿದ ಎಲ್ಲ ಚಟುವಟಿಕೆಗಳಿಗೆ ಗಂಡು ಮಾತ್ರವೇ ವಾರಸುದಾರ ಎಂಬ ಪುರುಷಾಹಂಕಾರದಲ್ಲಿಯೇ ಸಮಾಜನಿರ್ಮಾಣದ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ.

ಕಾಲ ಸಾಕಷ್ಟು ಬದಲಾಗಿದೆ ಎಂದು ಎಷ್ಟು ಹೇಳಿದರೂ ಇನ್ನೂ ಇಂಥ ಮಾನಸಿಕತೆಯಿಂದ ಸಮಾಜವಾಗಲೀ ಕುಟುಂಬಗಳಾಗಲೀ ಹೊರಬಂದಿಲ್ಲ ಎನ್ನುವುದೇ ವಾಸ್ತವ.

ಹೆಣ್ಣನ್ನು ಮನೆಯ ಅಂಕಣಕ್ಕೆ ಸೀಮಿತವನ್ನಾಗಿಸಿ ನೋಡುವ ಸಂಕುಚಿತ ದೃಷ್ಟಿಯಿರುವಾಗ ಅವಳನ್ನು ಕ್ರೀಡಾಂಗಣದಲ್ಲಿ ಕಲ್ಪಿಸಿಕೊಳ್ಳುವುದು ಸಾಧ್ಯವಾಗದ ಕಲ್ಪನೆಯಾಗಿತ್ತು. ಆದರೆ ಹಂತ ಹಂತವಾಗಿಯಾದರೂ ಹೆಣ್ಣಿಗೂ ‘ವ್ಯಕ್ತಿತ್ವ’ವನ್ನು ಒದಗಿಸುವಂಥ ಬದಲಾವಣೆಗಳು ಜಗತ್ತಿನಾದ್ಯಂತ ಕಾಣಿಸಿಕೊಳ್ಳತೊಡಗಿದವು.

ಇಂದು ಹೆಣ್ಣು ಸಮಾಜದ ಎಲ್ಲ ರಂಗಗಳಲ್ಲೂ ಕಾಣಿಸಿಕೊಳ್ಳತೊಡಗಿದ್ದಾಳೆ; ಗಂಡಿಗೆ ಸಮಾನವಾಗಿ ಸಾಧನೆಯನ್ನೂ ಮಾಡುತ್ತಿದ್ದಾಳೆ. ಅವಳಿಗೆ ಸಿಕ್ಕ ಕನಿಷ್ಠ ಮಾತ್ರದ ಸ್ವಾತಂತ್ರ್ಯದ ಪರಿಧಿಯಲ್ಲಿಯೇ ಅವಳು ಸಾಧಿಸಿರುವ ಯಶಸ್ಸು ಅಪೂರ್ವವಾದುದು.

ಈ ಮಾತುಗಳೆಲ್ಲವೂ ನಮ್ಮ ದೇಶಕ್ಕೂ ಸಲ್ಲುತ್ತವೆ. ಪ್ರಾಚೀನ ಕಾಲದಿಂದಲೂ ಹೆಣ್ಣನ್ನು ಶಕ್ತಿಯಾಗಿ ಕಂಡು ಆರಾಧಿಸಿದ ದೇಶ ಭಾರತ. ಆದರೆ ಇಲ್ಲೂ ಅವಳಿಗೆ ಸಂಕೋಲೆಗಳು ತಪ್ಪಲಿಲ್ಲ. 

ಎಲ್ಲ ಕ್ಷೇತ್ರದಲ್ಲೂ ಹೆಣ್ಣು ಸಾಧಿಸಿರುವ ಯಶಸ್ಸು ಸಮಾಜದ ಮುಂದೆ ಇದ್ದರೂ ಸ್ತ್ರೀಭ್ರೂಣಹತ್ಯೆಯಂಥ ‘ಸ್ತ್ರೀದ್ವೇಷ’ದ ರೋಗ  ನಮ್ಮ ದೇಶದಲ್ಲಿ ಇನ್ನೂ ವಾಸಿಯಾಗಿಲ್ಲ. ನಮ್ಮ ಮನದ, ಮನೆಯ, ಸಮಾಜದ ಸ್ವಾಸ್ಥ್ಯಕ್ಕೂ ರಾಷ್ಟ್ರದ ಏಳಿಗೆಗೂ ಅವಳ ಕೊಡುಗೆ ಅಗಾಧ.

ಇತ್ತೀಚೆಗಷ್ಟೆ ಮುಗಿದ ಒಲಂಪಿಕ್ಸ್‌ನಲ್ಲಿ ಭಾರತದ ಕ್ರೀಡಾರಂಗದ ಮುಜುಗರವನ್ನು ಸ್ವಲ್ಪವಾದರೂ ತಪ್ಪಿಸಿದವಕರು ನಮ್ಮ ಮಹಿಳಾ ಕ್ರೀಡಾಪಟುಗಳೇ. ಇನ್ನಾದರೂ ಹೆಣ್ಣು ಎಂದರೆ ಅಬಲೆ ಎನ್ನುವ ಸಮೀಕರಣ ತಪ್ಪುವುದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT