ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 17 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನಾನು ಕಲಬುರ್ಗಿ (ಡಾ. ಎಂ.ಎಂ. ಕಲಬುರ್ಗಿ ಬರಹಗಳ ವಾಚಿಕೆ)
ಆಯ್ಕೆ ಮತ್ತು ಸಂಪಾದನೆ:
ರಾಜೇಂದ್ರ ಚೆನ್ನಿ, ರಹಮತ್‌ ತರೀಕೆರೆ, ಮೀನಾಕ್ಷಿ ಬಾಳಿ
ಪ್ರ: ಲಡಾಯಿ ಪ್ರಕಾಶನ, ನಂ. 21, ಪ್ರಸಾದ ಹಾಸ್ಟೇಲ್‌, ಗದಗ–582101

ಹತ್ಯೆಗೀಡಾದ ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಬರಹಗಳ ವಾಚಿಕೆಯೊಂದನ್ನು ರಾಜೇಂದ್ರ ಚೆನ್ನಿ, ರಹಮತ್‌ ತರೀಕೆರೆ ಹಾಗೂ ಮೀನಾಕ್ಷಿ ಬಾಳಿ ರೂಪಿಸಿದ್ದಾರೆ.

‘ಕಲಬುರ್ಗಿಯವರ ಬರಹವನ್ನು ಈವರೆಗೆ ಓದದೇ ಇರುವ, ವಿಶೇಷವಾಗಿ ವಿದ್ಯಾರ್ಥಿಗಳಿಗೆ, ಯುವ ಬರಹಗಾರರಿಗೆ ಹಾಗೂ ಸಂಶೋಧಕರಿಗೆ ಅವರ ಬರಹದ ಕೆಲವು ಮುಖಗಳನ್ನು ಪರಿಚಯಿಸುವುದು ಹಾಗೂ ಆ ಮೂಲಕ ಅವರ ಸಂಶೋಧನಾ ಮಾದರಿಯನ್ನು, ಈ ಬಗೆಯ ಸಂಶೋಧನೆಯಿಂದ ಅವರು ಕಂಡುಕೊಂಡ ಸಂಗತಿಗಳನ್ನು ಪರಿಚಯಿಸುವುದು’ ಈ ವಾಚಿಕೆಯನ್ನು ಸಿದ್ಧಪಡಿಸುವುದರ ಹಿಂದಿನ ಉದ್ದೇಶವಾಗಿರುವುದನ್ನು ಸಂಪಾದಕರು ಹೇಳಿಕೊಂಡಿದ್ದಾರೆ.

ಸಂಶೋಧನೆ, ಶಾಸನ, ಸಂಪಾದನೆ, ಶಾಸ್ತ್ರಸಾಹಿತ್ಯ ಮತ್ತಿತರ ಕ್ಷೇತ್ರಗಳಲ್ಲಿ ಹರಡಿರುವ ಕಲಬುರ್ಗಿ ಅವರ ಬರಹಗಳಲ್ಲಿ ಪ್ರಾತಿನಿಧಿಕ ಹಾಗೂ ಮುಖ್ಯವಾದುದನ್ನು ಒಂದೆಡೆ ಕೊಡುವುದು ಕಷ್ಟಸಾಧ್ಯವೇ ಹೌದು. ಸಂಪಾದಕರು, ಕಲಬುರ್ಗಿ ಅವರ ವಿಚಾರಗಳನ್ನು ಪ್ರಖರವಾಗಿ ಮುಂದಿಡುವ ಅವರ 18 ಲೇಖನಗಳನ್ನು ಇಲ್ಲಿ ಕೊಟ್ಟಿದ್ದಾರೆ.

‘ಸಾಹಿತ್ಯ: ಸಮೂಹ ಆಸ್ತಿ–ಅರೆಖಾಸಗಿ ಆಸ್ತಿ–ಖಾಸಗಿ ಆಸ್ತಿ’, ‘ಕನ್ನಡ ಮಾತೃಭಾಷಾಪ್ರಜ್ಞೆಯ ಇತಿಹಾಸ’, ‘ಜಂಗಮ’, ‘ಅಸ್ಪೃಶ್ಯತೆಯ ನಿರ್ಮೂಲನ: ಶರಣರ ಕಾರ್ಯ ವಿಧಾನ’, ‘ಕೃಷ್ಣದೇವರಾಯ: ತೆಲುಗು ಸಂಸ್ಕೃತಿಯ ಆಕ್ರಮಣ’ದಂತಹ ಅವರ ಪ್ರಮುಖ ಲೇಖನಗಳು ಇಲ್ಲಿ ಸೇರಿವೆ. 

ಸುಮಾರು 50 ವರ್ಷಗಳ ಕಾಲ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ಕಲಬುರ್ಗಿ ಅವರ ಬರವಣಿಗೆ ಅಗಾಧವಾಗಿದೆ. ಅವರ ಸಂಶೋಧನೆಯ ಬರಹಗಳ ರುಚಿಯನ್ನು ಹೊಸ ಓದುಗರ ನಾಲಿಗೆಗೆ ತಾಕಿಸುವಲ್ಲಿ ಈ ವಾಚಿಕೆ ಸಫಲವಾಗಿವೆ. ಜೊತೆಗೆ ಈ ಲೇಖನಗಳೊಂದಿಗೆ ಕೊಡಲಾಗಿರುವ ಕಲಬುರ್ಗಿಯವರ ಕೆಲವು ಹೇಳಿಕೆಗಳು ಅವರನ್ನು, ಅವರ ಬರಹಗಳನ್ನು ಅರಿಯುವಲ್ಲಿ ನೆರವಾಗಬಹುದು.

***
ಟೂರಿಂಗ್‌ ಟಾಕೀಸ್‌
ಲೇ
: ಮನೋಹರ ಯಡವಟ್ಟಿ
ಪ್ರ: ನಮ್ಮ ಮೀಡಿಯಾ ಸ್ಕ್ವೇರ್‌ ಪಬ್ಲಿಕೇಷನ್‌, ನಂ.79, ‘ಲಕ್ಷ್ಮಿತನಯಾ’,  ಕರಿಯಮ್ಮದೇವಿ ದೇವಾಲಯದ ಹತ್ತಿರ, ಶಾಂತಿನಿಕೇತನನಗರ, ಧಾರವಾಡ

ಪತ್ರಕರ್ತ ಮನೋಹರ ಯಡವಟ್ಟಿ ತಮ್ಮ ಸಿನಿಮಾ, ರಂಗಭೂಮಿ ಸಂಬಂಧಿ ಬರಹಗಳನ್ನು ಒಂದೆಡೆ ಕೊಟ್ಟಿದ್ದಾರೆ. ಸಿನಿಮಾ ತಂತ್ರಜ್ಞರು, ನಾಯಕರ ಸಂದರ್ಶನಗಳ ಮೂಲಕ ಅವರ ವೃತ್ತಿಬದುಕನ್ನು ಓದುಗರಿಗೆ ಪರಿಚಯ ಮಾಡಿಕೊಡುವ ಬರಹಗಳೇ ಹೆಚ್ಚಾಗಿ ಇಲ್ಲಿವೆ.

ಇವು ಒಂದು ರೀತಿಯಲ್ಲಿ ಸಿನಿಮಾ ವರ್ತಮಾನವನ್ನು ವರ್ಣರಂಜಿತವಾಗಿ ದಾಖಲಿಸುವ ಬರಹಗಳು. ಇವುಗಳಿಗೆ ವ್ಯಕ್ತಿಯ ಅಂತರಂಗ, ಕಸುಬುದಾರಿಕೆ, ಕಲೆಯ ಆಳ–ಅಗಲವನ್ನು ತೋರುವ ಉದ್ದೇಶವಾಗಲಿ, ಹಂಗಾಗಲಿ ಇರುವುದಿಲ್ಲ.

ಓದುಗರ ಕುತೂಹಲವನ್ನು ತಣಿಸುವುದಷ್ಟೆ ಅವುಗಳ ತುರ್ತು ಅಗತ್ಯವಾಗಿರುತ್ತದೆ. ಇವಲ್ಲದೇ ಕನ್ನಡ ಸಿನಿಮಾರಂಗದ ಬೇರೆಬೇರೆ ಆಯಾಮಗಳ ಬಗ್ಗೆಯೂ ಮನೋಹರ ಯಡವಟ್ಟಿ ಇಲ್ಲಿ ಬರೆದಿದ್ದಾರೆ.

ಕಾಲಕ್ಕೆ ತಕ್ಕಂತೆ ಮೂಡಿಬಂದಿರುವ ಇಲ್ಲಿನ ಬರಹಗಳು ಚಿತ್ರರಸಿಕರಿಗೆ ಸುಮಾರು ಎರಡು–ಮೂರು ದಶಕದ ಹಿಂದಿನ ಕನ್ನಡ ಸಿನಿಮಾರಂಗದ ನೆನಪುಗಳನ್ನು ಕೊಡಬಹುದು. ಇನ್ನು, ರಂಗಭೂಮಿಗೆ ಸಂಬಂಧಿಸಿದ ಕೆಲವು ಲೇಖನಗಳು ಪತ್ರಿಕೆ ಅಗತ್ಯಕ್ಕೆ ತಕ್ಕಂತೆ ಮೂಡಿಬಂದ ಪತ್ರಕರ್ತೀಯ ಬರಹಗಳಾಗಿವೆ.

ಇಲ್ಲಿ ನಟರಾದ ಟೈಗರ್‌ ಪ್ರಭಾಕರ್‌,  ಅಂಬರೀಷ್‌, ರಮೇಶ್‌, ಕಾಶಿನಾಥ್‌, ಜಗ್ಗೇಶ್‌ ಮತ್ತಿತರರ ಸಂದರ್ಶನಗಳು ಇವೆ. ಅವು ಆ ಕಾಲದ ಆ ನಟರ ಬೆಳವಣಿಗೆಯನ್ನು ತೋರುವಂತೆಯೇ ಅವರ ವ್ಯಕ್ತಿತ್ವವನ್ನು ಕೊಂಚ ತೆರೆದಿಡುತ್ತವೆ.

ಎಂದಿನಂತೆ ಉಡಾಫೆಯ ಮಾತುಗಳಿಂದಾಗಿ ನಟ ಅಂಬರೀಷ್‌ ಅವರ ಅವರ ಮಾತುಗಳು ಆಸಕ್ತಿ ಹುಟ್ಟಿಸುತ್ತವೆ. ಕನ್ನಡದ ನಟ, ನಟಿ, ನಿರ್ದೇಶಕರ ಜೊತೆಗೆ ಲೇಖಕರು ಬೇರೆ ಭಾಷೆಯ ಸಂಗೀತ ನಿರ್ದೇಶಕರು, ನಟಿಯರನ್ನೂ ಮಾತನಾಡಿಸಿ ಇಲ್ಲಿ ಬರೆದಿದ್ದಾರೆ.

ಆಗಿನ ಚಲಾವಣೆಯಲ್ಲಿರುವ ಸಿನಿತಾರೆಯರು ಇಲ್ಲಿದ್ದಾರೆ. ಹಾಗಾಗಿ ಆ ತಾರೆಗಳ ಹೊಳಪು, ಪ್ರಭಾವಳಿಗಳು ಈ ಬರಹಗಳ ಒಟ್ಟೂ ಸ್ವರೂಪವನ್ನು ನಿರ್ದೇಶಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT