ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಧನಾ ಕೌಶಲಕ್ಕೊಂದು ಕೋರ್ಸ್

Last Updated 18 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂಬ ಮಾತನ್ನು ಪದೇ ಪದೇ ಕೇಳುತ್ತಲೇ ಇರುತ್ತೇವೆ. ಮಕ್ಕಳಿಗೆ ಭದ್ರ ಬುನಾದಿ ನೀಡುವ ಪ್ರಾಥಮಿಕ ಮತ್ತು ಮಾಧ್ಯಮಿಕ ಬೋಧನೆಯಲ್ಲಿ ಬದಲಾವಣೆಯಾಗಬೇಕು, ಉತ್ತಮ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ಕೂಗು ಹಳೆಯದು.
ಆದರೆ ಬೋಧನೆಯ ಗುಣಮಟ್ಟವನ್ನು ಸುಧಾರಿಸುವ ಪ್ರಯತ್ನ ಮಾತ್ರ ನಡೆಯುವುದು ಕಡಿಮೆ.

ಇದೇ ಹಿನ್ನಲೆಯಲ್ಲಿ, ಶಿಕ್ಷಕರ ಸಾಮಾನ್ಯಜ್ಞಾನವನ್ನು ವಿಸ್ತರಿಸುವ ಜೊತೆಯಲ್ಲಿ ಅವರ ಬೋಧನಾ ಕೌಶಲವನ್ನು ಉತ್ತಮಪಡಿಸಲು ಅಕಾಡೆಮಿ ಫಾರ್‌ ಕ್ರಿಯೇಟಿವ್‌ ಟೀಚಿಂಗ್‌ ಸನ್ನದ್ಧವಾಗಿದೆ.

ಈ ಪ್ರಯತ್ನವಾಗಿಯೇ ರೂಪುಗೊಂಡಿರುವುದು ಎಫ್‌ಎಸ್‌ಟಿ (ಫಿನಿಶಿಂಗ್‌ ಸ್ಕೂಲ್‌ ಫಾರ್‌ ಟೀಚರ್ಸ್‌). ಹಾಂಕಾಂಗ್‌ನ ಸುಪ್ರಜಾ ಫೌಂಡೇಶನ್‌  ಬೆಂಬಲದೊಂದಿದೆ ಈ ಕೋರ್ಸ್‌ ಪ್ರಾರಂಭಿಸಲಾಗಿದೆ. 

ಬಿ.ಎಡ್‌, ಡಿ.ಎಡ್‌ ಮುಗಿಸಿದರೂ, ಭಾಷಾ ಜ್ಞಾನದ ಕೊರತೆಯ ಕಾರಣಕ್ಕೆ ಕೆಲಸ ಸಿಗದೆ ಪರದಾಡುವವರು ಅನೇಕ ಮಂದಿ. ಅಲ್ಲದೆ ಕೆಲಸ ದೊರಕಿದರೂ, ಮಕ್ಕಳಿಗೆ ಸರಿಯಾಗಿ ಬೋಧನೆ ಮಾಡದಿರುವವರು ಹಲವರಿದ್ದಾರೆ. ಇಂಥವರಿಗಾಗಿಯೇ ಇಲ್ಲಿ ಈ ಕೋರ್ಸ್‌ ಆರಂಭಿಸಲಾಗಿದೆ. ಪರಿಣತಿ ಪಡೆದ ಅಧ್ಯಾಪಕರು ಇವರಿಗೆ ತರಬೇತಿ ನೀಡುತ್ತಾರೆ.

ಆಧುನಿಕತೆಗೆ ತಕ್ಕಂತೆ ಮಕ್ಕಳಿಗೆ ಯಾವ ರೀತಿ ಕಲಿಸಬೇಕು. ಸೃಜನಾತ್ಮಕವಾಗಿ ಮಕ್ಕಳನ್ನು ತಯಾರಿ ಮಾಡುವುದು ಹೇಗೆ ಎಂಬುದರ ಜೊತೆಗೆ ಮಕ್ಕಳ ಜ್ಞಾನವನ್ನು ವಿಸ್ತರಿಸಲು ಅಗತ್ಯವಾದ ಕಲೆಯನ್ನು ಇಲ್ಲಿ ತಿಳಿಸಿಕೊಡುತ್ತಾರೆ.

ಮೂರು ತಿಂಗಳ ಈ ಕೋರ್ಸ್‌ ಪ್ರಾರಂಭವಾಗಿ ಹತ್ತು ವರ್ಷವಾಗಿದೆ. ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಮಾತ್ರವೇ ತರಬೇತಿ ನೀಡಲಾಗುತ್ತಿತ್ತು.  ಉತ್ತರ ಕರ್ನಾಟಕದಿಂದ ತರಬೇತಿಗೆ ಸೇರುವ ಮಂದಿಯ ಸಂಖ್ಯೆ ಅಧಿಕವಾಗಿರುವುದರಿಂದ  ವಿಜಾಪುರ, ಚಿತ್ರದುರ್ಗ, ಬೈಲಹೊಂಗಲದಲ್ಲಿಯೂ ಶಾಖೆಯನ್ನು ತೆರೆಯಲಾಗಿದೆ. ಮುಂದೆ ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಶಾಖೆ ತೆರೆಯುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಈ ಕೋರ್ಸ್‌ಗೆ ಗ್ರಾಮೀಣ ಪ್ರದೇಶಗಳಿಂದ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಗ್ರಾಮೀಣ ಭಾಗದ ಮಂದಿಗೆ ಇಂಗ್ಲಿಷ್‌ ಸಂವಹನದ ಸಮಸ್ಯೆ ಬಹುವಾಗಿ ಕಾಡುವ ಕಾರಣ ಆ ಕೊರತೆಯನ್ನು ನೀಗುವ ಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತದೆ.

ಮೊದಲ ಎರಡು ತಿಂಗಳು ಇಲ್ಲಿ ಇಂಗ್ಲಿಷ್‌ ಸಂವಹನ ಕಲಿಕೆ ಜೊತೆಗೆ ಮಕ್ಕಳಿಗೆ ಹೇಗೆ  ಪಾಠ ಮಾಡಬೇಕು ಎಂಬುದರ ಕುರಿತು ತರಬೇತಿ ನೀಡಲಾಗುತ್ತದೆ. ಅವರು ಪಾಠ ಮಾಡಲು ಶಕ್ತರಾದ ನಂತರ ಶಾಲೆಗಳಿಗೆ ಕಳುಹಿಸಲಾಗುತ್ತದೆ. ಇವರು ಯಾವ ರೀತಿ ಪಾಠ ಮಾಡುತ್ತಾರೆ ಎಂಬುದನ್ನು ನೋಡಲು ಹಿರಿಯ ಅಧ್ಯಾಪಕರನ್ನು ಮೆಂಟರ್‌ ಆಗಿ ನೇಮಿಸಲಾಗುತ್ತದೆ.

ಸಾಮಾನ್ಯವಾಗಿ ಶಾಲೆಗಳಲ್ಲಿ ಅಧ್ಯಾಪಕರು ಪಾಠ ಮಾಡುತ್ತಿದ್ದರೆ ಮಕ್ಕಳು ಕೇಳುತ್ತಿರುತ್ತಾರೆ. ಇಲ್ಲಿ ಕೇವಲ ಒಬ್ಬ ವ್ಯಕ್ತಿಯ ಪಾಲ್ಗೊಳ್ಳುವಿಕೆ ಇರುತ್ತದೆ. ಕಲಿಕೆಯಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಮಾಡಿದರೆ ಮಾತ್ರವೇ ವಿಷಯದ ಕುರಿತು ಅವರಿಗೆ ಆಳವಾದ ಅರಿವು ಲಭಿಸಲು ಸಾಧ್ಯ. ಇಂತಹ ಒಂದು ಸಾಧ್ಯತೆಗೆ ಇಲ್ಲಿ ಮಹತ್ವ ನೀಡಲಾಗುತ್ತದೆ.

ಶಾಲೆಯಲ್ಲಿ ಹಿರಿಯ ಅಧ್ಯಾಪಕರು ಬೋಧನೆ ಮಾಡುವಾಗ ಇವರು ಅದನ್ನು ಗಮನಿಸಬೇಕು. ಮಕ್ಕಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ, ಶಿಕ್ಷಕರ ಮೀಟಿಂಗ್‌ ಹೇಗೆ ಆಗುತ್ತದೆ. ಪ್ರಶ್ನಾಪತ್ರಿಕೆಯನ್ನು ತಯಾರಿಸುವುದು ಹೇಗೆ, ಮಕ್ಕಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅವರನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಬೇಕು. ಮಧ್ಯಾಹ್ನದವರೆಗೆ ಶಾಲೆ ಇರುತ್ತದೆ.

ಮಕ್ಕಳಿಗೆ ಪಾಠ ಮಾಡಿದ ನಂತರ ಅದು ಎಷ್ಟರ ಮಟ್ಟಿಗೆ ಅವರನ್ನು ತಲುಪಿದೆ ಎಂಬ ಅವಲೋಕನ ಕೂಡ ಅಷ್ಟೇ ಮುಖ್ಯ. ಅದಕ್ಕೂ ಇಲ್ಲಿ ಪ್ರಾಧಾನ್ಯ ನೀಡಲಾಗಿದೆ.  ಬೋಧನೆ ಮುಗಿದ ನಂತರ ಮಕ್ಕಳಿಗೆ ಅರ್ಥವಾಗಿದೆಯೇ? ಅವರೊಂದಿಗೆ ಸಂವಹನ ಸೂಕ್ತವಾಗಿತ್ತೇ?  ಪ್ರಶ್ನೆ ಕೇಳಿದ್ದು ಅವರಿಗೆ ಅರ್ಥವಾಗಿದೆಯೇ? ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾಯಿತ? ಬೋಧಿಸಿದ್ದು ಮಕ್ಕಳಿಗೆ ಅರ್ಥವಾಯಿತೇ? – ಹೀಗೆ ವಿವಿಧ ಪ್ರಶ್ನೆಗಳನ್ನು ಇಲ್ಲಿ ಕಲಿಯುವವರು ಒಟ್ಟಿಗೆ ಕೂತು ಅದನ್ನು ಬಗೆಹರಿಸಿಕೊಳ್ಳುತ್ತಾರೆ. 

ಗುಂಪಾಗಿ ಕಲಿಯುವುದರಿಂದ ಜ್ಞಾನ ಹೆಚ್ಚುತ್ತದೆ. ಹಾಗಾಗಿ ಇಲ್ಲಿ ಒಬ್ಬರಿಂದ ಒಬ್ಬರು ಹೇಗೆ ಕಲಿಯಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತದೆ.
ಅಧ್ಯಾಪಕರಿಗಿಂತ ಮಕ್ಕಳ ಭಾಗವಹಿಸುವಿಕೆ ಹೆಚ್ಚಿರಬೇಕು ಎಂಬ ಉದ್ದೇಶವನ್ನು ಇಲ್ಲಿ ತರಬೇತಿ ಪಡೆಯುವವರಿಗೆ ತಿಳಿಸಲಾಗುತ್ತದೆ. ವಿವಿಧ ಮಾದರಿಗಳನ್ನು ಬಳಸಿ ಮಕ್ಕಳಿಗೆ ಬೋಧನೆ ಮಾಡಲು ತರಬೇತಿಯನ್ನು ಕೂಡ ನೀಡಲಾಗುತ್ತದೆ.

ಸಂಸ್ಥೆಯ ಅಧ್ಯಕ್ಷ ಗುರುರಾಜ ಕರ್ಜಗಿ ಅವರೇ ತಯಾರಿಸಿರುವ ಸುಮಾರು 120 ಮಾದರಿಗಳ ಮೂಲಕ ಮಕ್ಕಳಿಗೆ ಸೃಜನಾತ್ಮಕವಾಗಿ ಕಲಿಸಲಾಗುತ್ತದೆ. ಈ ಮಾದರಿಗಳು ಮಕ್ಕಳ ಮೆದುಳು ಚುರುಕು ಗೊಳಿಸುವುದರ ಜೊತೆಗೆ ಅವರು ಒಂದು ವಿಷಯವನ್ನು ಹಲವು ಆಯಾಮಗಳಲ್ಲಿ ಯೋಚಿಸುವಂತೆ ಮಾಡುತ್ತದೆ.

ಬೆಳಿಗ್ಗೆ 9.30ರಿಂದ ಸಂಜೆ 4ರವರೆಗೆ ತರಗತಿ ನಡೆಯುತ್ತದೆ. ಅದಾದ ನಂತರ ವಿಷಯದ ಬಗ್ಗೆ ಸಂದೇಹ ಇದ್ದರೆ ಅದನ್ನು ಬಗೆಹರಿಸಿಕೊಳ್ಳಲು 45 ನಿಮಿಷ ಮೀಸಲಿರಿಸಲಾಗಿದೆ. ಲ್ಯಾಬ್‌, ಲೈಬ್ರರಿ ಮತ್ತು ಮೆಂಟರ್‌ಗಳಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ.
ಕೋರ್ಸ್‌ ಶುಲ್ಕ: 4000
ವಿವರಕ್ಕೆ: 9448565329, 9036958685.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT