ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆಗೆ ತೊಡಕಾದ ಅವಿವಾಹಿತರು

ಸಂಗತ
Last Updated 19 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಲಿಯು ಜೆನ್ ಫೆಂಗ್ ತಮ್ಮ 25ನೇ ವಯಸ್ಸಿನಲ್ಲಿ ಮದುವೆಯಾಗಿದ್ದರು. ಆಮೇಲೆ ವೈವಾಹಿಕ ಬದುಕಿನ ಸಹಜ ಬಂಧನಗಳಿಗೆ ಒಳಪಟ್ಟರು– ಒಬ್ಬ ಮಗಳು, ಒಂದು ಮನೆ, ಪೀಠೋಪಕರಣ, ಆಟಿಕೆ ಹೀಗೆ. ಅವರ ಮಗಳು ಸೊಂಗ್ ಜೊಂಗ್ ಪಿ ಅವರಿಗೆ ಈಗ 28 ವರ್ಷ.

ತನ್ನ ತಾಯಿ ನಡೆದು ಬಂದ ದಾರಿಯನ್ನು ಅವರು ಒಪ್ಪುವುದಿಲ್ಲ. ಬೀಜಿಂಗ್‌ನಲ್ಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ಇನ್ನಿಬ್ಬರ ಜೊತೆ ಅವರು ಬಾಡಿಗೆ ಮನೆಯನ್ನು ಹಂಚಿಕೊಂಡಿದ್ದು, ತಮ್ಮ ವೃತ್ತಿ ಪ್ರಗತಿ ಹಾಗೂ ಹಣಕಾಸಿನ ಸ್ಥಿತಿ ಉತ್ತಮಪಡಿಸಿಕೊಳ್ಳುವುದರ  ಕುರಿತು ಯೋಚಿಸುತ್ತಿದ್ದಾರೆ. ಮದುವೆಯಾಗಿ, ತಾಯಿ ಆಗುವ ಯೋಚನೆಯಿಂದ ಸದ್ಯಕ್ಕೆ ಅವರು ದೂರ.

ಚೀನಾದಲ್ಲಿ ಕೆಲವರಷ್ಟೇ ಮದುವೆಯಾಗುತ್ತಿದ್ದಾರೆ. ಚೀನಾದ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗೂ ಈ ಸ್ಥಿತ್ಯಂತರಕ್ಕೂ ಗಾಢ ಸಂಬಂಧವಿದೆ. ಮದುವೆಯ ಪ್ರಮಾಣ ಕಡಿಮೆ ಎಂದರೆ ಹುಟ್ಟುವ ಮಕ್ಕಳೂ ಕಡಿಮೆಯಾಗಲಿವೆ ಎಂದರ್ಥ.

ಇದರಿಂದ ಮನೆಗಳಿಗೆ ಹಾಗೂ ಗೃಹೋಪಯೋಗಿ ವಸ್ತುಗಳ ಮೇಲೆ ಮಾಡುವ ಖರ್ಚೂ ಕಡಿಮೆಯಾಗುತ್ತದೆ. ಚೀನಾದ ಆರ್ಥಿಕ ಅಭಿವೃದ್ಧಿಗೆ ಇಂಥ ಖರ್ಚು ಹೆಚ್ಚಾಗಬೇಕಿದೆ. ಆದರೆ, ಪರಿಸ್ಥಿತಿ ಮಾತ್ರ ಅದಕ್ಕೆ ಪೂರಕವಾಗಿಲ್ಲ.

ಎಷ್ಟೋ ವ್ಯಾಪಾರಿಗಳು ಒಂಟಿಯಾಗಿ ಬದುಕುತ್ತಿರುವ ಗ್ರಾಹಕರನ್ನು ಸೆಳೆಯುವ ತಂತ್ರಗಳನ್ನು ಅನುಸರಿಸಲಾರಂಭಿಸಿದ್ದಾರೆ. ಒಡವೆ ತಯಾರಿಕಾ ಮಳಿಗೆಯೊಂದು ಮದುವೆ ಆಗದ ಸಹೃದಯರಿಗೆಂದೇ ಕಡಿಮೆ ಬೆಲೆಗೆ ಆಭರಣ ಮಾರಲು ಮುಂದಾಗಿದೆ.

ಗೃಹೋಪಯೋಗಿ ವಸ್ತುಗಳ ಕಂಪೆನಿಯೊಂದು ಸಣ್ಣ ರೈಸ್ ಕುಕ್ಕರ್‌ಗಳನ್ನು ಹೆಚ್ಚಾಗಿ ಮಾರುತ್ತಿದೆ. ಸಂತಾನಕ್ಕೆ ಚಿಕಿತ್ಸೆ ನೀಡುವ ವಿದೇಶಿ ಕಂಪೆನಿಗಳು ಚೀನಾದ ಮಹಿಳೆಯರಿಗೆ ತಮ್ಮ ಅಂಡಾಣುಗಳನ್ನು ಶೀತಾವರಣದಲ್ಲಿಟ್ಟು ರಕ್ಷಿಸುವ ಅವಕಾಶ ಒದಗಿಸುವಂಥ ಜಾಹೀರಾತುಗಳನ್ನು ಪ್ರಕಟಿಸುತ್ತಿವೆ.

ಅಂಡಾಣುಗಳನ್ನು ಈ ರೀತಿ ಸಂರಕ್ಷಿಸಿ ಇಟ್ಟು, ಆಮೇಲೆ ಇಚ್ಛೆಪಟ್ಟಾಗ ಸಂತಾನ ಪಡೆಯುವ ಅವಕಾಶವಿದೆ. ಚೀನಾದಲ್ಲಿ ಅವಿವಾಹಿತ ಮಹಿಳೆ ಹೀಗೆ ಮಾಡುವುದನ್ನು ನಿಷೇಧಿಸಲಾಗಿದೆ. ಅದರ ಲಾಭ ಪಡೆಯಲು ಈ ವಿದೇಶಿ ಕಂಪೆನಿಗಳು ತುಡಿಯುತ್ತಿವೆ.

ಮಾಧ್ಯಮಗಳು ವೈವಾಹಿಕ ಬದುಕೇ ಉತ್ತಮ ಎಂದು ಬಿಂಬಿಸುತ್ತಿವೆ. ‘ಮಿಸ್ಟರ್ ರೈಟ್‌ಗಾಗಿ (ಪರಮ ಸಜ್ಜನ) ಕಾಯುತ್ತಾ ಕೂರಬೇಡಿ’ ಎಂದು ಮಹಿಳೆಯರಿಗೆ ಕರೆ ನೀಡುತ್ತಿವೆ. ಆದರೆ  ಬದಲಾಗುತ್ತಿರುವ ಸಾಮಾಜಿಕ ಅಗತ್ಯಗಳು ಈ ಪ್ರಲೋಭನೆಯ ಕಡೆ ಮಹಿಳೆಯರನ್ನು ತಿರುಗಿ ನೋಡದಂತೆ ಮಾಡಿವೆ.

ಕಳೆದ ವರ್ಷ 1.20 ಕೋಟಿ ದಂಪತಿಗಳು ಚೀನಾದಲ್ಲಿ ವಿವಾಹ ನೋಂದಣಿ ಮಾಡಿಸಿದರು. ಸತತ ಎರಡನೇ ವರ್ಷ ಮದುವೆಗಳ ಸಂಖ್ಯೆ ಇಳಿಮುಖವಾಗಿರುವುದಕ್ಕೆ ಇದು ಸಾಕ್ಷಿ. ವಿವಾಹ ವಿಚ್ಛೇದನಗಳ ಸಂಖ್ಯೆ ಏರುತ್ತಿದ್ದು, ಕಳೆದ ವರ್ಷ 38 ಲಕ್ಷ ಜೋಡಿಗಳು ವಿವಾಹ ಬಂಧನದಿಂದ ಬಿಡಿಸಿಕೊಂಡವು. ಒಂದು ದಶಕದ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈ ಸಂಖ್ಯೆ ದುಪ್ಪಟ್ಟಾಗಿದೆ.

ಕುಟುಂಬವೊಂದಕ್ಕೆ ‘ಒಂದೇ ಮಗು ಸಾಕು’ ಎಂಬ ಚೀನಾದ ನಿಯಮವೂ ವಿವಾಹಗಳ ಪ್ರಮಾಣ ಕಡಿಮೆ ಆಗಲು ಪ್ರಮುಖ ಕಾರಣವಾಗಿದೆ. ಚೀನಾದ ಜನನ ಪ್ರಮಾಣದ ಮೇಲೆ ನಿಯಂತ್ರಣ ಹೇರಲು ತೆಗೆದುಕೊಂಡ ಈ ನಿರ್ಧಾರದ ಪರಿಣಾಮವಾಗಿ ದೇಶದ 20ರಿಂದ 29 ವರ್ಷ ವಯೋಮಾನದವರು ಜನಸಂಖ್ಯೆ ಕಡಿಮೆ ಮಾಡಲು ಹೆಚ್ಚು ಕಾಣಿಕೆ ನೀಡಲಾರಂಭಿಸಿದ್ದಾರೆ ಅರ್ಥಾತ್ ಅವಿವಾಹಿತರಾಗಿಯೇ ಉಳಿದು, ಮಕ್ಕಳನ್ನು ಪಡೆಯದವರ ಸಂಖ್ಯೆ ಹೆಚ್ಚಾಗಿದೆ.

ಎರಡು ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಇದನ್ನು ದೊಡ್ಡ ಸ್ಥಿತ್ಯಂತರ ಎನ್ನಬಹುದು. ಬಹುತೇಕ ಕುಟುಂಬಗಳು ಹಿಂದಿನಿಂದ ಗಂಡು ಮಕ್ಕಳನ್ನೇ ಬಯಸಿದ ಪರಿಣಾಮವಾಗಿ ಪುರುಷರ ಸಂಖ್ಯೆಯು ಮಹಿಳೆಯರಿಗಿಂತ ಹೆಚ್ಚಾಗಿದೆ. ವಿವಾಹದ ಸಾಧ್ಯತೆಯನ್ನು ಇದು ಇನ್ನಷ್ಟು ಸಂಕೀರ್ಣಗೊಳಿಸಿರುವುದೂ ನಿಜ.

ಒಂಟಿಯಾಗಿ ಇರುವವರು ಸಾಮಾನ್ಯವಾಗಿ ಮನೆ ಕೊಳ್ಳುವುದು ಕಡಿಮೆ. ಮದುವೆ ಆದವರಂತೆ ಅವರಿಗೆ ಮಕ್ಕಳನ್ನು ಸಾಕುವ ಉಸಾಬರಿ ಇರುವುದಿಲ್ಲ. ಕಡಿಮೆ ವಸ್ತುಗಳನ್ನು ಕೊಳ್ಳುತ್ತಾರೆ. ಆಟಿಕೆಗಳಂತೂ ಬೇಡವೇ ಬೇಡ.

ವಿವಾಹಿತರಷ್ಟು ಗ್ಯಾಡ್ಜೆಟ್‌ಗಳನ್ನೂ ಅವರು ಖರೀದಿಸುವುದಿಲ್ಲ. ಇದರಿಂದಾಗಿ ತನ್ನ ಪರಂಪರಾಗತವಾದ ದೊಡ್ಡ ಜನಸಂಖ್ಯೆಯನ್ನು ಅಮೆರಿಕ ಶೈಲಿಯ ಕೊಳ್ಳುಬಾಕರನ್ನಾಗಿಸುವ ಆರ್ಥಿಕ ಪ್ರಕ್ರಿಯೆ ಚೀನಾದಲ್ಲಿ ಸಂಕೀರ್ಣವಾಗಿಬಿಟ್ಟಿದೆ. ರಫ್ತು ಹಾಗೂ ಸರ್ಕಾರದ ದೊಡ್ಡ ಯೋಜನೆಗಳ ಮೇಲೆಯೇ ಅವಲಂಬಿತವಾಗಿರುವ ಚೀನಾಕ್ಕೆ ತನ್ನ ಹಳೆಯ ಆರ್ಥಿಕತೆಯಿಂದ ಹೊರಬರಲು ಜನ ಕೊಳ್ಳುಬಾಕರಾಗುವುದು ಅವಶ್ಯಕವಾಗಿದೆ.

ವ್ಯಾಪಾರಿಗಳೆಲ್ಲಾ ಸ್ಥಿತ್ಯಂತರಕ್ಕೆ ಸಿದ್ಧವಾಗುತ್ತಿದ್ದಾರೆ. ಒಡವೆ ಮಾರಾಟ ಪ್ರಮಾಣದ ಏರಿಕೆ ಎಂದಿನಂತೆ ಇರಲಾರದು ಎನ್ನುವ ನಿರೀಕ್ಷೆ ಇದೆ. ಹರಳುಗಳಿರುವ ಒಡವೆಗಳನ್ನು ಕಡಿಮೆ ಬೆಲೆಗೆ ಮಾರುವ ಮೂಲಕ ಡೇಟಿಂಗ್ ಇಷ್ಟಪಡುವ ಜೋಡಿಗಳನ್ನು ಆಕರ್ಷಿಸುವ ತಂತ್ರವನ್ನು ಕೆಲವು ಒಡವೆ ಮಳಿಗೆಗಳು ಅನುಸರಿಸುತ್ತಿವೆ.

ಹಾಂಕಾಂಗ್ ಮೂಲದ ಸೆ ಸ್ಯು ಲ್ಯುಯೆನ್ ಒಡವೆ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕಿ ಆ್ಯನಿ ಯಾ ಸೆ ಅವರ ಪ್ರಕಾರ, ಒಂಟಿಯಾಗಿದ್ದರೂ ಜನರಿಗೆ ಒಡನಾಡಿಗಳು ಬೇಕಿರುತ್ತಾರೆ. ಸಂಗಾತಿ ಇಲ್ಲದೆ ಪ್ರೀತಿ ಸಾಧ್ಯವಿಲ್ಲ; ಪ್ರೀತಿಯಿಲ್ಲದೆ ಯಾರು ಇರಲು ಸಾಧ್ಯ?

ಆನ್‌ಲೈನ್‌ನಲ್ಲಿ ನಿವೇಶನ, ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡುವ ಏಜೆಂಟ್ ಜಿಯಾಜಿಯಾಶುನ್, ಅವಿವಾಹಿತ ಗ್ರಾಹಕರಿಗೆಂದೇ ಚಿಕ್ಕ ಮನೆಗಳನ್ನು ಹೆಚ್ಚಾಗಿ ಮಾರುವ ಯೋಜನೆ ಪ್ರಾರಂಭಿಸುವುದರಲ್ಲಿದ್ದಾರೆ.

ಮದುವೆ ಆಗಲು ಹಿಂದುಮುಂದು ನೋಡುತ್ತಿರುವವರ ಸಂಖ್ಯೆ ಏರುತ್ತಿರುವುದು ಚೀನೀ ಕುಟುಂಬಗಳಲ್ಲಿ ಬಾಂಧವ್ಯ ಹಾಗೂ ಅಪ್ಪ-ಅಮ್ಮನನ್ನು ಮಕ್ಕಳು ನೋಡಿಕೊಳ್ಳಬೇಕಾದ ಜವಾಬ್ದಾರಿ ಕುರಿತ ಸಿಕ್ಕುಗಳನ್ನು ಹೆಚ್ಚುಮಾಡಿದೆ. ಉದಾಹರಣೆಗೆ, ಚೀನಾದಲ್ಲಿ ಮದುವೆಯಾದ ಬಹುತೇಕರು ವಯಸ್ಸಾದ ತಮ್ಮ ಅಪ್ಪ-ಅಮ್ಮನನ್ನು ನೋಡಿಕೊಳ್ಳುತ್ತಾರೆ.

29 ವರ್ಷದ ವು ಜಿಂಗ್‌ಜಿಂಗ್‌ಗೆ ತನ್ನ ತಲೆಮಾರಿನವರಿಗೆ ಅಪ್ಪ-ಅಮ್ಮನನ್ನು ಸಾಕುವುದು ಕೂಡ ಹೊರೆಯಾಗುವ ಸಾಧ್ಯತೆಯ ಅರಿವಿದೆ. ‘ಸಮಾಜದ ನಡುಪದರದಲ್ಲಿ ಇರುವ ಗುಂಪಿನ ಜನರಿಗೆ ಇಕ್ಕಳದಲ್ಲಿ ಸಿಲುಕಿದಂಥ ಸ್ಥಿತಿ ಇದೆ. ಮನೆಗೆ ಆಧಾರಸ್ತಂಭ ಆಗಬೇಕು, ಮಕ್ಕಳನ್ನೂ ಹೆತ್ತವರನ್ನೂ ನೋಡಿಕೊಳ್ಳಬೇಕು. ಇದು ಕಷ್ಟ’ ಎನ್ನುವ ಜಿಂಗ್‌ಜಿಂಗ್, ಇಂಟರ್‌ನೆಟ್‌ ಕಂಪೆನಿಯೊಂದರ ಉದ್ಯೋಗಿ.

ಅವರ ತಾಯಿಗೆ ಮಗಳಿಗೆ ಇನ್ನೂ ಮದುವೆಯಾಗಲಿಲ್ಲವಲ್ಲ ಎಂಬ ಚಿಂತೆ. ಮುಂದೆ ಅವಳನ್ನು ಯಾರು ನೋಡಿಕೊಳ್ಳುತ್ತಾರೆಂಬ ಸಹಜ ಆತಂಕ. ‘ನಾವು ಅವಳನ್ನು ಈಗ ನೋಡಿಕೊಳ್ಳಲು ಕಷ್ಟವೇನೂ ಇಲ್ಲ.

ಆದರೆ ನಮ್ಮ ನಂತರ ಅವಳಿಗೆ ಯಾರು ದಿಕ್ಕು?’ ಎಂದು ಆತಂಕ ವ್ಯಕ್ತಪಡಿಸುತ್ತಾರೆ 53 ವರ್ಷದ ಜಯ್ ಲಿಪಿಂಗ್. ಮಗಳಿಗೆ ಬೇಗ ಒಳ್ಳೆಯ ವರ ಸಿಗಲಿ ಎನ್ನುವುದು ಅವರ ಹಾರೈಕೆ. ಸೂಕ್ತ ಪುರುಷ ಸಿಗುವವರೆಗೆ ಮದುವೆ ಸಾಧ್ಯವಿಲ್ಲ ಎನ್ನುವುದು ಜಿಂಗ್ ಜಿಂಗ್ ಪ್ರತಿಕ್ರಿಯೆ.
(ದಿ ನ್ಯೂಯಾರ್ಕ್ ಟೈಮ್ಸ್)
–ಆಮಿ ಸ್ಯಾಂಗ್/ ಜಾಂಗ್ ಟಿಯಾಂಟಿಯನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT