ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆಯ ಸ್ಪರ್ಶ ನೀಡಿದ ಹೆಗ್ಗಳಿಕೆ

Last Updated 20 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ರಾಜ್ಯದ ಮುಂಚೂಣಿ ಮೂರು ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ, ಒಟ್ಟು ವಹಿವಾಟಿನಲ್ಲಿ ಮೊದಲ ಸ್ಥಾನದಲ್ಲಿ ಇರುವ, ದಿ. ಬೆಂಗಳೂರು ಸಿಟಿ ಕೋ–ಆಪರೇಟಿವ್‌  ಬ್ಯಾಂಕ್‌ನ ಅಧ್ಯಕ್ಷ ಆವಲಹಳ್ಳಿ ಚಂದ್ರಪ್ಪ ಆರ್‌. ಅವರು ಸತತ ಮೂರನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರೆದಿರುವುದು ಅವರ ಕತೃತ್ವಶಕ್ತಿಗೆ ಹಿಡಿದ ಕನ್ನಡಿಯಾಗಿದೆ.

ಠೇವಣಿ ಸಂಗ್ರಹ ವಿಷಯದಲ್ಲಿ 3ನೇ ಸ್ಥಾನದಲ್ಲಿ ಇದ್ದರೂ, ಸಾಲ ಮತ್ತು ಠೇವಣಿಯ ಒಟ್ಟು ವಹಿವಾಟಿನಲ್ಲಿ  ಮೊದಲ ಸ್ಥಾನದಲ್ಲಿ ಇದೆ. ಇದಕ್ಕೆ ಚಂದ್ರಪ್ಪ ಅವರ ಸಮರ್ಥ ನಾಯಕತ್ವ, ನಿರ್ದೇಶಕ ಮಂಡಳಿಯ ಮಾರ್ಗದರ್ಶನ ಸಿಬ್ಬಂದಿಯ ದಕ್ಷ ಕಾರ್ಯನಿರ್ವಹಣೆ ಮತ್ತು ಗ್ರಾಹಕರ ಬೆಂಬಲ ಕಾರಣವಾಗಿವೆ.

1978  ರಿಂದ 1982ರವರೆಗೆ  ಕತ್ರಿಗುಪ್ಪೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದ ಚಂದ್ರಪ್ಪ ಅವರು 1990–91ರಲ್ಲಿ  ಈ ಸಹಕಾರಿ ಬ್ಯಾಂಕ್‌ನ  ನಿರ್ದೇಶಕರಾಗಿ ಮೊದಲ ಬಾರಿಗೆ ಸಹಕಾರಿ ವಲಯಕ್ಕೆ ಕಾಲಿಟ್ಟರು. 

ಆರಂಭದಲ್ಲಿ ನಿರ್ದೇಶಕರಾಗಿ ಬಂದಾಗ ಬ್ಯಾಂಕ್‌ನ ಬ್ಯಾಂಕ್‌ನ ಆಡಳಿತ ಮತ್ತು ವಹಿವಾಟನ್ನು ನಿರ್ದಿಷ್ಟ ಕುಟುಂಬದ ನಿಯಂತ್ರಣಕ್ಕೆ  ಪಡೆಯುವ ಹುನ್ನಾರಗಳೆಲ್ಲ ನಡೆಯುತ್ತಿದ್ದವು. ಸ್ಥಾಪಿತ ಹಿತಾಸಕ್ತಿಗಳ ತೀವ್ರ ವಿರೋಧದ ಮಧ್ಯೆಯೂ ಸ್ವಚ್ಛಗೊಳಿಸುವ ಪ್ರಕ್ರಿಯೆ ಆರಂಭಿಸಿದ ಇವರು ನಂತರದ ದಿನಗಳಲ್ಲಿ ತಮ್ಮ ಉದ್ದೇಶ ಸಾಧನೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ.

ರಾಮಸ್ವಾಮಿ ಅಯ್ಯಂಗಾರ್‌  ಅವರು ಕಟ್ಟಿ ಬೆಳೆಸಿದ್ದ ಬ್ಯಾಂಕ್‌, 1960ರ ವರೆಗೆ ದಕ್ಷ ಆಡಳಿತಗಾರರ ಸುಪರ್ದಿಯಲ್ಲಿ ಚೆನ್ನಾಗಿಯೇ ನಡೆಯುತ್ತಿತ್ತು. ನಂತರದ ದಿನಗಳಲ್ಲಿ ಇಲ್ಲಿಯ ವಾತಾವರಣ ಬದಲಾಗಿತ್ತು.

ಚಂದ್ರಪ್ಪ ಅವರು 2002ರಲ್ಲಿ ಮೊದಲ ಬಾರಿಗೆ ಉಪಾಧ್ಯಕ್ಷರಾದರು. 2005ರಲ್ಲಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡರು.  ಸತತ ಮೂರನೆ ಬಾರಿಗೂ ಅಧ್ಯಕ್ಷರಾಗಿ  ಮುಂದುವರೆದಿರುವ ಇವರು ಬ್ಯಾಂಕ್‌ನ ಹಣಕಾಸಿನ ಚಹರೆಯನ್ನು ಆಮೂಲಾಗ್ರವಾಗಿ ಬದಲಾಯಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.

ಈ ಬ್ಯಾಂಕ್‌ನ ಸದಸ್ಯತ್ವವು ಸಮಾಜದ ಎಲ್ಲ ವರ್ಗದವರಿಗೆ ಮುಕ್ತವಾಗಿದೆ. ಹೀಗಾಗಿ ಸದಸ್ಯರ ಸಂಖ್ಯೆ 68 ಸಾವಿರಕ್ಕೆ ತಲುಪಿದೆ. ಸಹಕಾರ ತತ್ವವನ್ನು ಅಕ್ಷರಶಃ ಇಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ.

ಚಂದ್ರಪ್ಪ ಅವರ ಬಣದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕೆಟ್ಟ ಹೆಸರು ತರಲು ಹೊರಟವರು ಚುನಾವಣೆಯಲ್ಲಿ ಮೂಲೆಗುಂಪಾದರು.   ಬ್ಯಾಂಕ್‌ನ ಗ್ರಾಹಕರು ಚಂದ್ರಪ್ಪ ಅವರ ಬೆನ್ನಿಗೆ ನಿಂತು ವಿರೋಧಿಗಳ ಸಂಚು ವಿಫಲಗೊಳಿಸಿದರು. ಅವರ ಜತೆ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.

* ನೀವು ಕೈಗೊಂಡ ಹೊಸ ಕಾರ್ಯಕ್ರಮಗಳು ಯಾವವು?
‘ಪ್ರತಿಯೊಂದು ಶಾಖೆಯಲ್ಲಿ ಅತ್ಯುತ್ತಮ ಗ್ರಾಹಕರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಗುತ್ತಿದೆ.  ಈ ಪರಿಪಾಠದ ಯಶಸ್ಸು ಕಂಡು ಇತರ ಅನೇಕ ಸಹಕಾರ ಸಂಘಗಳು ಅಳವಡಿಸಿಕೊಂಡಿವೆ. ಸದಸ್ಯರು ಮತ್ತು  ಸಿಬ್ಬಂದಿಯ ಪ್ರತಿಭಾನ್ವಿತ ಮಕ್ಕಳನ್ನೂ ಸನ್ಮಾನಿಸಲಾಗುತ್ತಿದೆ’.

* ನಿಮ್ಮ ಈ ಯಶಸ್ಸಿನ ಹಿಂದಿನ ಕಾರಣ ಏನು?
‘ಸಹಕಾರ ಇಲಾಖೆಯಲ್ಲಿ ಹೆಚ್ಚುವರಿ ರಿಜಿಸ್ಟ್ರಾರ್‌ ಆಗಿದ್ದ,  ಕರ್ನಾಟಕ ರಾಜ್ಯ ಸರ್ಕಾರ ಆರಂಭಿಸಿದ್ದ ‘ಸಹಕಾರ ರತ್ನ’ ಪ್ರಶಸ್ತಿಯ ಮೊದಲ  ಪುರಸ್ಕೃತರಾಗಿದ್ದ ದಿವಂಗತ ಎಂ. ಹನುಮಯ್ಯ ಅವರ  ನಿಷ್ಪೃಹ ವ್ಯಕ್ತಿತ್ವದ ಒಡನಾಟದಿಂದ ನಾನು ಹೆಚ್ಚು ಪ್ರಭಾವಿತನಾಗಿರುವುದೇ ಇದಕ್ಕೆ ಕಾರಣ’. 

* ಆಧುನಿಕತೆಗೆ ಕೈಗೊಂಡ ಕ್ರಮಗಳು ಯಾವವು?
‘ಬ್ಯಾಂಕ್‌ ಕಟ್ಟಡಗಳ ನವೀಕರಣ ಮತ್ತು ಶಾಖೆಗಳ ಒಳಾಂಗಣ ವಿನ್ಯಾಸವನ್ನು  ಗ್ರಾಹಕರಲ್ಲಿ ವಿಶ್ವಾಸ ಮೂಡಿಸುವ ಬಗೆಯಲ್ಲಿ  ಮಾಡಲಾಗಿದೆ. ಬರೀ ಬಾಹ್ಯನೋಟವನ್ನಷ್ಟೇ ಬದಲಾಯಿಸಿಲ್ಲ.  ಬ್ಯಾಂಕಿಂಗ್‌ ವಹಿವಾಟಿನಲ್ಲಿ ತಂತ್ರಜ್ಞಾನ, ಆಧುನಿಕತೆ ಅಳವಡಿಸಿಕೊಳ್ಳಲಾಗಿದೆ.  ‘ಹೊಸ ತಲೆಮಾರಿನ  (ಯುವ ಜನಾಂಗದ) ಗ್ರಾಹಕರನ್ನು ಸೆಳೆಯಲು ಅಗತ್ಯವಾದ ಕ್ರಮಗಳನ್ನೆಲ್ಲ ಕೈಗೊಳ್ಳಲಾಗಿದೆ’.

* ವಸೂಲಾಗದ ಸಾಲದ ಪ್ರಮಾಣ ಎಷ್ಟು ಇದೆ?
‘ಬ್ಯಾಂಕ್‌ನ  ವಸೂಲಾಗದ ಸಾಲದ ಪ್ರಮಾಣ  (ಎನ್‌ಪಿಎ), ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿದ ಶೇ 3 ಕ್ಕಿಂತ ಕಡಿಮೆ (ಶೇ 2.9 ಇದೆ). ಇದು ಬ್ಯಾಂಕ್‌ನ ಆರ್ಥಿಕ ಸದೃಢತೆಗೆ ಸಾಕ್ಷಿಯಾಗಿದೆ’. 

* ಶಾಖೆಗಳು ಎಷ್ಟು ಇವೆ?
‘ಸದ್ಯಕ್ಕೆ 20   ಶಾಖೆಗಳಿವೆ. ಬೆಂಗಳೂರಿನಲ್ಲಿ 18, ರಾಮನಗರ ಮತ್ತು ಮೈಸೂರಿನಲ್ಲಿ ತಲಾ 1 ಶಾಖೆಗಳಿವೆ.  ಬೆಂಗಳೂರಿನ ಅಂಜನಾನಗರ (ಮಾಗಡಿ ರಸ್ತೆ) ಮತ್ತು ಕನಕಪುರ ರಸ್ತೆಯಲ್ಲಿ ಶೀಘ್ರದಲ್ಲಿಯೇ ಎರಡು ಶಾಖೆಗಳನ್ನು ಆರಂಭಿಸಲಾಗುವುದು. ಮಂಡ್ಯದಲ್ಲಿ 1 ಮತ್ತು ಮೈಸೂರಿನಲ್ಲಿ ಇನ್ನೊಂದು ಶಾಖೆ ಆರಂಭಿಸುವ ಆಲೋಚನೆ ಇದೆ.

2020ರ ಒಳಗೆ ಶಾಖೆಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಸಿಬ್ಬಂದಿ 215 ಇದೆ’. ‘ಸಿಬ್ಬಂದಿಗೆ  ಉತ್ತಮ ಸಂಬಳ ಕೊಡಲಾಗುತ್ತಿದ್ದು,  ಭವಿಷ್ಯ ನಿಧಿ ಜತೆಗೆ ಪಿಂಚಣಿ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಸಿಬ್ಬಂದಿ ಕುಟುಂಬ ಸದಸ್ಯರಿಗೆ  ₹ 2 ಲಕ್ಷದವರೆಗೆ ಉಚಿತವಾಗಿ ಗುಂಪು ವಿಮೆ ಸೌಲಭ್ಯ  ಒದಗಿಸಲಾಗಿದೆ’.

* ಬಡ್ಡಿ ದರ ಯಾವ ಮಟ್ಟದಲ್ಲಿ ಇದೆ?
‘ಕನಿಷ್ಠ  ಬಡ್ಡಿ ದರ ಶೇ 10 ರಷ್ಟಿದೆ. ₹ 70 ಲಕ್ಷದವರೆಗೆ ಗೃಹ ನಿರ್ಮಾಣ ಸಾಲ (ಶೇ 12.5)  ನೀಡಲಾಗುವುದು.  ಉದ್ಯಮ ವಹಿವಾಟಿಗೆ ₹ 10 ಕೋಟಿಗಳಷ್ಟು ಸಾಲ ನೀಡಲು ಅವಕಾಶ ಇದೆ. ವಿವಿಧ ಬಗೆಯ ಸಾಲಗಳಿಗೆ ಶೇ 12.5 ರಿಂದ ಶೇ 15ರವರೆಗೆ ಬಡ್ಡಿ ದರ ಇದೆ. ‘ಠೇವಣಿಗಳಿಗೆ ಶೇ 8.75   ಮತ್ತು ಹಿರಿಯ ನಾಗರಿಕರಿಗೆ  ಶೇ 9.25 ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ’.

* ನಿರ್ದೇಶಕ ಮಂಡಳಿಯಲ್ಲಿ 16 ಸ್ಥಾನಗಳನ್ನೂ ನಿಮ್ಮ ಬಣವೇ ಗೆದ್ದಿರುವುದು ಸರ್ವಾಧಿಕಾರಿ ಧೋರಣೆಗೆ ಕಾರಣವಾಗಿದೆಯೇ?
‘ಖಂಡಿತವಾಗಿಯೂ ಇಲ್ಲ. ಬ್ಯಾಂಕ್‌ನ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಇದು ಸಾಕ್ಷಿಯಾಗಿದೆ. ನಿರ್ದೇಶಕ ಮಂಡಳಿಗೆ ಸರ್ವ ಸದಸ್ಯರ ಮಹಾಸಭೆಯೇ ಮುಖ್ಯ.

ಅಲ್ಲಿ ನಮ್ಮನ್ನು ಕೇಳುವವರೂ ಇದ್ದಾರೆ. ಅಲ್ಲಿ ತಲೆ ತಗ್ಗಿಸುವಂತಾಗಬಾರದು ಎನ್ನುವುದೇ ನಮ್ಮ ಪ್ರಮುಖ ಕಾಳಜಿಯಾಗಿದೆ. ಮಹಾಸಭೆ ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಯಾವತ್ತೂ ದ್ರೋಹ ಬಗೆಯುವುದಿಲ್ಲ’ ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.

‘ಜನರಲ್‌ ಮ್ಯಾನೇಜರ್‌ಗೆ ₹ 15 ಲಕ್ಷದವರೆಗೆ ಸಾಲ ಮಂಜೂರಾತಿ ಅಧಿಕಾರ ನೀಡಲಾಗಿದೆ. ಸಾಲದ ಅರ್ಜಿಗಳನ್ನು ಆಧರಿಸಿ ಅಗತ್ಯ ಬಿದ್ದರೆ ನಿರ್ದೇಶಕ ಮಂಡಳಿ ಸಭೆಯನ್ನು ತಿಂಗಳ ಮಧ್ಯೆಯೂ ಕರೆಯಲಾಗುವುದು. ಅಧ್ಯಕ್ಷರಿಗೆ ಸಾಲ ಮಂಜೂರು ಮಾಡವ ಅಧಿಕಾರ ಇಲ್ಲವೇ ಇಲ್ಲ. ನಿರ್ದೇಶಕ ಮಂಡಳಿ ನಿರ್ಧಾರವೇ ಅಂತಿಮ’ ಎನ್ನುತ್ತಾರೆ ಅವರು.

1978ರಲ್ಲಿ  ಪಂಚಾಯ್ತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ  ಸರ್ಕಾರಿ ಶಾಲೆಗೆ ತಮ್ಮ ಸ್ವಂತ ಜಾಗೆಯನ್ನು ದಾನ ನೀಡಿದ ಉದಾರಿಯೂ ಇವರಾಗಿದ್ದಾರೆ. ‘ಗ್ರಾಮ ಪಂಚಾಯಿ ಅಧ್ಯಕ್ಷ ಹುದ್ದೆ  ಆಡಳಿತದ ಅನುಭವವೇ ಇಲ್ಲಿ ಪ್ರಯೋಜನಕ್ಕೆ ಬರುತ್ತಿದೆ’ ಎಂದೂ ಚಂದ್ರಪ್ಪ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT