ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ವಿಮೆ: ವಿಳಂಬ ಸಲ್ಲದು

Last Updated 20 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಜೀವ ವಿಮೆ ಪ್ರತಿಯೊಬ್ಬರಿಗೂ ಆರ್ಥಿಕ ಭದ್ರತೆ ಒದಗಿಸಲು ನೆರವಾಗುತ್ತದೆ. ಹೀಗಾಗಿ, ಜೀವ ವಿಮೆ ವ್ಯಾಪ್ತಿಗೆ ಒಳಗಾಗುವ ಮುನ್ನ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಜೀವ ವಿಮೆಗೆ ಸಂಬಂಧಿಸಿದಂತೆ ಜನಸಾಮಾನ್ಯರು ಮಾಡುವ ಸಾಮಾನ್ಯ ತಪ್ಪುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಮಹತ್ವದ್ದು ಅಲ್ಲ ಎನ್ನುವ ಮನೋಭಾವ
ಕೆಲವು ಜನರು ಜೀವ ವಿಮೆ ದುಬಾರಿ ಎಂದೇ ಭಾವಿಸುತ್ತಾರೆ. ಮತ್ತೆ ಕೆಲವರು ಇದು ಅಗತ್ಯವೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿರುತ್ತಾರೆ. ಈಗಾಗಲೇ ಸಾಕಷ್ಟು ಉಳಿತಾಯ ಮಾಡಿದ್ದೇವೆ ಅಥವಾ ಭವಿಷ್ಯದಲ್ಲಿ ಅಹಿತಕರ ಘಟನೆ ನಡೆಯುತ್ತದೆ ಎನ್ನುವ ವಿಚಾರ ಮಾಡುವುದು ವಿಹಿತವಲ್ಲ ಎಂದು ಇವರು ಭಾವಿಸಿರುತ್ತಾರೆ. ಜೀವಕ್ಕೆ ಯಾವುದೇ ರೀತಿಯ ಅಪಾಯವೇ ಇಲ್ಲ ಎಂದು ಭಾವಿಸಿ ವಿಮೆ ವ್ಯಾಪ್ತಿಗೆ ಒಳಪಡದಿರುವುದು ತಪ್ಪು. ಆದಷ್ಟು ಶೀಘ್ರ ಜೀವ ವಿಮೆ ವ್ಯಾಪ್ತಿಗೆ ಒಳಗಾದರೆ ಕುಟುಂಬಕ್ಕೂ ಅನುಕೂಲ.

ಉದ್ಯೋಗದಾತರ ಮೇಲೆ ಅವಲಂಬನೆ
ಗುಂಪು ಜೀವ ವಿಮೆ ಒದಗಿಸಲು ಉದ್ಯೋಗದಾತರು ಅನುಕೂಲ ಕಲ್ಪಿಸಿರಬಹುದು. ಆದರೆ, ಕೇವಲ ಇದೊಂದೇ ವಿಮೆ ಮೇಲೆ ಅವಲಂಬನೆಯಾಗಬಾರದು. ಕೆಲವೊಮ್ಮೆ ಕಂಪೆನಿ ಅಥವಾ ಸಂಸ್ಥೆಗಳನ್ನು ಬದಲಾಯಿಸಿದಾಗ ವಿಮೆ ಸಮಸ್ಯೆಯಾಗುತ್ತದೆ. ಹೊಸ ಕಂಪೆನಿಯು ವಿಮಾ ಸೌಲಭ್ಯ ಕಲ್ಪಿಸದೇ ಇರಬಹುದು. ಇನ್ನು ಕೆಲವು ಕಂಪೆನಿಗಳು ದೊಡ್ಡ ಮೊತ್ತದ ವಿಮಾ ಸೌಲಭ್ಯ ನೀಡದೇ ಇರಬಹುದು. ಹೀಗಾಗಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಜೀವ ವಿಮೆ ಪಾಲಿಸಿಗಳನ್ನು ಖರೀದಿಸುವುದು ಉತ್ತಮ.

ಧೂಮಪಾನ ಇತ್ಯಾದಿ ದುಶ್ಚಟಗಳಿಗೆ ಒಳಗಾಗಿದ್ದರೆ  ಅಥವಾ ಅತಿ ಹೆಚ್ಚು ರಕ್ತದೊತ್ತಡ ಮತ್ತು ಮಧುಮೇಹದಿಂದಾಗಿ ವಿಮಾ ಕಂಪೆನಿ ನಿಮ್ಮ ಜೀವ ವಿಮಾ ಅರ್ಜಿಯನ್ನು ಪರಿಗಣಿಸದೆ ತಿರಸ್ಕರಿಸುವ ಸಾಧ್ಯತೆಗಳಿರುತ್ತವೆ ಎಂದು ಭಾವಿಸುವುದು ತಪ್ಪು. ಇಂತಹ ಮಾಹಿತಿಯನ್ನು ಬಹಿರಂಗಪಡಿಸಿದರೆ ಜೀವ ವಿಮೆ ವ್ಯಾಪ್ತಿಗೆ ಒಳಪಡುವುದರಿಂದ ತಿರಸ್ಕಾರಕ್ಕೆ ಒಳಗಾಗುತ್ತಾರೆ ಎನ್ನುವುದೂ ತಪ್ಪು.

ವಿಮಾ ಕಂಪೆನಿ ಜತೆ ಚರ್ಚಿಸಿ ಪ್ರಸ್ತುತ ಆರೋಗ್ಯ ಸ್ಥಿತಿ ಆಧಾರದ ಮೇಲೆ ವಿಮಾ ಪಾಲಿಸಿಗಳನ್ನು ಖರೀದಿಸಬಹುದು. ಯಾವಾಗಲು ವೈದ್ಯಕೀಯ ಪರೀಕ್ಷೆಗೆ ಒಳಗಾದ ನಂತರ ಅದಕ್ಕೆ ಸಂಬಂಧಿಸಿದ ಪಾಲಿಸಿಯನ್ನು ಖರೀದಿಸಿ. ಇದರಿಂದ, ಮಾಹಿತಿ ಬಚ್ಚಿಟ್ಟ ಕಾರಣಕ್ಕೆ ವಿಮಾ ಮೊತ್ತ ಪಡೆಯುವುದು ತಿರಸ್ಕಾರಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.

ವಿಮಾ ಮೊತ್ತ
ಬಹಳಷ್ಟು ಜನರು ಪ್ರೀಮಿಯಂ ಆಧಾರಿತ ವಿಮೆ ಪಾಲಿಸಿಗಳನ್ನು ಖರೀದಿಸುತ್ತಾರೆ. ಪ್ರೀಮಿಯಂ ಎಷ್ಟು ಪಾವತಿಸಲು ಸಾಧ್ಯವೋ ಎನ್ನುವುದನ್ನೇ ಲೆಕ್ಕಾಚಾರ ಹಾಕುತ್ತಾರೆ. ವಿಮಾ ಪಾಲಿಸಿ ಅಗತ್ಯಕ್ಕೆ ತಕ್ಕಂತೆ ಯೋಜನಾ ಬದ್ಧವಾಗಿರಬೇಕು ಮತ್ತು ಜೀವನ ಕ್ರಮ ಆಧಾರಿತವಾಗಿರಬೇಕು. ವಾರ್ಷಿಕ ಆದಾಯದ ಕನಿಷ್ಠ 10ರಿಂದ 12 ಪಟ್ಟು ವಿಮಾ ಮೊತ್ತ ಇರಬೇಕು. ಮನೆ ಸಾಲ, ಕಾರು ಸಾಲ ಮುಂತಾದವುಗಳನ್ನು ತೀರಿಸಲು ಪ್ರತ್ಯೇಕ ವಿಮಾ ಯೋಜನೆಗಳು ಅಗತ್ಯವಾಗಬಹುದು. ಇದಕ್ಕಾಗಿ ನೀವು ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವುದು ಉತ್ತಮ.

ವಿಳಂಬ ಸಲ್ಲದು
ನಿರಂತರವಾಗಿ ವಿಳಂಬ ಮಾಡುವುದರಿಂದ ದುಬಾರಿಯೂ ಆಗುತ್ತದೆ. ವಯಸ್ಸಾದಂತೆ ವಿಮಾ ಪ್ರೀಮಿಯಂ ಅನ್ನು ಸಹ ಹೆಚ್ಚು ಪಾವತಿಸಬೇಕಾಗುತ್ತದೆ. ಉದಾಹರಣೆಗೆ 30ನೇ ವಯಸ್ಸಿನಲ್ಲಿ ಜೀವ ವಿಮೆ ಪಾಲಿಸಿ ಖರೀದಿಸಿದರೆ ಕಡಿಮೆ ಪ್ರೀಮಿಯಂ ಪಾವತಿಸಿ ಹೆಚ್ಚು ಲಾಭ ಪಡೆದುಕೊಳ್ಳಬಹುದು. ಆದರೆ, 40ನೇ ವಯಸ್ಸಿನಲ್ಲಿ ಜೀವ ವಿಮೆ ಪಾಲಿಸಿ ಖರೀದಿಸಿದರೆ ಅತಿ ಹೆಚ್ಚು ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಕೆಲವು ಜನರು ಜೀವ ವಿಮಾ ಪಾಲಿಸಿಗಳನ್ನು ಖರೀದಿಸಲು ವಿಳಂಬ ಮಾಡುತ್ತಾರೆ. ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಇನ್ನೂ ಕೆಲವರು ಹಿಂಜರಿಯುತ್ತಾರೆ. ಇನ್ನು ಕೆಲವರು ತಾವು ಈಗಲೂ ಯುವಕರಾಗಿದ್ದೇವೆ ಎಂದು ಭಾವಿಸಿಕೊಳ್ಳುತ್ತಾರೆ. ಇದು ಸಂಪೂರ್ಣ ತಪ್ಪು ಗ್ರಹಿಕೆ. ವಿಳಂಬ ಮಾಡದೆ ಜೀವ ವಿಮೆ ಪಾಲಿಸಿ ಖರೀದಿಸಿ ಆರ್ಥಿಕ ಭದ್ರತೆಯ ಜೀವನ ಹೊಂದುವುದು ಮುಖ್ಯ.

ಸಮರ್ಪಕ ಮಾಹಿತಿ
ವಿಮಾ ಕಂಪೆನಿಗಳಿಗೆ ನಿರಂತರವಾಗಿ ಸಮರ್ಪಕ ಮಾಹಿತಿ ನೀಡಬೇಕು. ವಿಳಾಸ ಬದಲಾದರೆ ತಕ್ಷಣವೇ ಮಾಹಿತಿ ತಲುಪಿಸಬೇಕು. ಜತೆಗೆ ಕೌಟುಂಬಿಕ ಕಾರಣಗಳಿಗೆ ನಾಮನಿರ್ದೇಶನವನ್ನು ಬದಲಾಯಿಸುವುದಿದ್ದರೆ ಎಲ್ಲ ವಿವರಗಳನ್ನು ನೀಡಬೇಕು. ಆಕಸ್ಮಿಕವಾಗಿ ಸಾವು ಸಂಭವಿಸಿದರೆ ಸಮರ್ಪಕ ಮಾಹಿತಿ ಇಲ್ಲದಿದ್ದರೆ ಜೀವ ವಿಮಾ ಮೊತ್ತವನ್ನು ನೀಡುವಾಗ ಸಮಸ್ಯೆಗಳಾಗುತ್ತವೆ.

ಸಮಯಾವಕಾಶ ತೆಗೆದುಕೊಂಡು ಅಗತ್ಯವಾದ ಜೀವ ವಿಮೆ ಪಾಲಿಸಿಗಳನ್ನು ಖರೀದಿಸುವ ಬಗ್ಗೆ ಚಿಂತನೆ ಮಾಡುವುದು ಉತ್ತಮ. ಹೀಗೆ ಮಾಡುವುದರಿಂದ ನಿಮ್ಮನ್ನು ಅವಲಂಬಿಸಿದವರು ಸದಾ ಸ್ಮರಿಸುತ್ತಾರೆ. ನೀವು ಒಂದು ವೇಳೆ ಸಂಪೂರ್ಣವಾಗಿ ಜೀವ ವಿಮೆ ವ್ಯಾಪ್ತಿಗೆ ಒಳಪಡದಿದ್ದರೆ ತಕ್ಷಣವೇ ನಿಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳಿ.
  -ಪ್ರದೀಪ್‌ ಪಾಂಡೆ
(ಫ್ಯೂಚರ್‌ ಜನರಲ್‌ ಲೈಫ್‌ ಇನ್ಶುರನ್ಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ)

***

ಎಲ್‌ಐಸಿ: ಹೊಸ ಮನಿಬ್ಯಾಕ್‌ ಪಾಲಿಸಿ
ಜೀವವಿಮೆ  ವಲಯದ ದೈತ್ಯ ಸಂಸ್ಥೆಯಾಗಿರುವ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ), ತನ್ನ ವಜ್ರ ಮಹೋತ್ಸವ ಆಚರಣೆಯ ಅಂಗವಾಗಿ ಹೊಸ ಮನಿಬ್ಯಾಕ್‌ ಯೋಜನೆ ಪರಿಚಯಿಸಿದೆ.

‘ಬೀಮಾ ಡೈಮಂಡ್‌’ ಹೆಸರಿನ ಈ ಯೋಜನೆಯು, ಮುಂದಿನ ವರ್ಷದ ಆಗಸ್ಟ್‌ 31ರವರೆಗೆ ಮುಕ್ತವಾಗಿರಲಿದೆ. ಸೀಮಿತ ಪ್ರೀಮಿಯಂ ಪಾವತಿಯ, ಮನಿ ಬ್ಯಾಕ್‌   ಪಾಲಿಸಿಯ ಅವಧಿಯು 16, 20 ಅಥವಾ 24 ವರ್ಷಗಳನ್ನು ಒಳಗೊಂಡಿದೆ. ಪ್ರೀಮಿಯಂ ಪಾವತಿ ವರ್ಷಗಳು ಕ್ರಮವಾಗಿ 10, 12 ಮತ್ತು 15 ಆಗಿರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT