ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ ವಿಷ – ವಿಸ್ಮಯ, ವಿಶೇಷ

ವಿಜ್ಞಾನ ವಿಶೇಷ
Last Updated 24 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ವಿಷ’ – ಈ ಹೆಸರೇ ಹಾನಿಕಾರಕ, ಪ್ರಾಣಹಾರಕ ವಸ್ತುವಿಗೆ ಸಮನಾರ್ಥಕ ಹೌದಲ್ಲ? ಹಾಗಾದ್ದರಿಂದಲೇ ವಿಷ ಪ್ರಾಣಿಗಳದೇ ಒಂದು ಭಯಾನಕ ವಿಶೇಷ ವರ್ಗ. ಹಾಗೆಂದು ವಿಷಪ್ರಾಣಿಗಳದೇ ಒಂದು ಪ್ರತ್ಯೇಕ ಜೈವಿಕ ವರ್ಗ ಏನಿಲ್ಲ. ಏಕೆಂದರೆ ಪ್ರತಿಯೊಂದು ಪ್ರಾಣಿವರ್ಗದಲ್ಲೂ ಕೆಲ ಕೆಲವು ವಿಷ ಪ್ರಭೇದಗಳಿವೆ.

ಹುಳಗಳಲ್ಲಿ, ಕೀಟಗಳಲ್ಲಿ (ಚಿತ್ರ – 8, 9, 13), ಸಂಧಿಪದಿಗಳಲ್ಲಿ (ಚಿತ್ರ – 14), ಉರಗಗಳಲ್ಲಿ (ಚಿತ್ರ – 1, 2, 3, 4, 6, 7), ಉಭಯ ವಾಸಿಗಳಲ್ಲಿ (ಚಿತ್ರ – 5), ಸ್ನೈಡೇರಿಯನ್‌ಗಳಲ್ಲಿ (ಚಿತ್ರ – 10, 11), ಮತ್ಸ್ಯಗಳಲ್ಲಿ, ಮೃದ್ವಂಗಿಗಳಲ್ಲಿ, ಹಕ್ಕಿಗಳಲ್ಲಿ .... ಕಡೆಗೆ ಸ್ತನಿಗಳಲ್ಲೂ ಕೂಡ (ಚಿತ್ರ – 12) ವಿಷ ಪ್ರಭೇದಗಳಿವೆ. ವಾಸ್ತವ ಏನೆಂದರೆ ಈ ವರೆಗೆ ಗುರುತಿಸಲಾಗಿರುವ ಸಮೀಪ ಹದಿನಾಲ್ಕು ಲಕ್ಷ ಪ್ರಾಣಿ ಪ್ರಭೇದಗಳಲ್ಲಿ ವಿಷ ಪ್ರಾಣಿ ಪ್ರಭೇದಗಳ ಸಂಖ್ಯೆ ಸುಮಾರು ಒಂದು ಲಕ್ಷದಷ್ಟಿದೆ!

ಹಾಗೆ ಪತ್ತೆಯಾಗಿರುವ ವಿಷ ಪ್ರಾಣಿಗಳ ಅಂಕಿ – ಅಂಶ ವಿವರ ಕೂಡ ತುಂಬ ಕುತೂಹಲಕರ. ಒಟ್ಟು ಒಂದು ಲಕ್ಷ  ವಿಷ ಪ್ರಾಣಿ ಪ್ರಭೇದಗಳಲ್ಲಿ ಹಾವು – ಹಲ್ಲಿ ಪ್ರಭೇದಗಳು 1000; ಚೇಳುಗಳು 1000; ಮತ್ಸ್ಯಗಳು 1000; ಶತಪಥಿಗಳು 2000; ಸಾಗರ ಶಂಬುಕಗಳು 2000; ಹವಳ – ಜೆಲ್ಲಿ ಮೀನುಗಳು 6000; ಜೇಡಗಳು 20,000; ಕೀಟಗಳು 62,000, ಇತರೆ 2000.

ವಿಸ್ಮಯ ಏನೆಂದರೆ ವಿಷ ಪ್ರಾಣಿಗಳಲ್ಲಿ ಇಷ್ಟೆಲ್ಲ ವೈವಿಧ್ಯ ಇರುವಂತೆಯೇ ಪ್ರಾಣಿ ವಿಷಗಳಲ್ಲೂ ಹೇರಳ ವಿವಧತೆ ಇದೆ, ಹಾಗೆಂದರೆ ಸರ್ವ ವಿಷ ಪ್ರಾಣಿಗಳ ವಿಷಗಳದೂ ಒಂದೇ ಬಗೆಯ ಸ್ವರೂಪ – ಸಂಯೋಜನೆ ಅಲ್ಲ.

ಪ್ರತಿ ವಿಧ ಪ್ರಾಣಿ ವಿಷವೂ ವಿವಿಧ ನಿರ್ದಿಷ್ಟ ವಿಷ ದ್ರವ್ಯಗಳಿಂದ (ಟಾಕ್ಸಿನ್‌) ಸಂಯೋಜಿತ ಹಾಗೆಂದರೆ ಪ್ರತಿ ವಿಷ ಪ್ರಾಣಿ ಪ್ರಭೇದದ ವಿಷವೂ ಆಯಾ ಪ್ರಾಣಿಯ ಶರೀರದಲ್ಲೇ ಉತ್ಪಾದನೆಗೊಳ್ಳುವ ವಿಷಕರವಾದ ನಿರ್ದಿಷ್ಟ ಪೆಪ್ಟೆಡ್‌ಗಳು ಮತ್ತು ಪ್ರೋಟೀನ್‌ಗಳ ಸಂಯುಕ್ತ. ಆದ್ದರಿಂದಲೇ ಒಂದು ಲಕ್ಷ ವಿಧ ಪ್ರಾಣಿ ವಿಷಗಳಲ್ಲಿ ವಾಸ್ತವವಾಗಿ ಇಪ್ಪತ್ತು ದಶಲಕ್ಷ ಟಾಕ್ಸಿನ್‌ಗಳಿವೆ! ಹಾಗಿದ್ದರೂ ಈ ವರೆಗೆ ಆ ಪೈಕಿ ಹತ್ತು ಸಾವಿರ ವಿಷದ್ರವ್ಯಗಳ ಸ್ವರೂಪ ಮಾತ್ರ ಸ್ಪಷ್ಟವಾಗಿ ತಿಳಿದಿದೆ; ಒಂದು ಸಾವಿರ ಟಾಕ್ಸಿನ್‌ಗಳಷ್ಟೇ ವಿಸ್ತೃತವಾಗಿ ಅಧ್ಯಯನಗೊಂಡಿವೆ.

ಸಹಜವಾಗಿಯೇ ವಿಷ ಪ್ರಾಣಿಗಳ ಶರೀರದಲ್ಲಿ ವಿಷ ತಯಾರಿಸುವ, ಸಂಗ್ರಹಿಸುವ ಮತ್ತು ಉದ್ದೇಶಕ್ಕೆ ತಕ್ಕಂತೆ ಆ ವಿಷಗಳನ್ನು ಹೊರಹಾಕುವ ವ್ಯವಸ್ಥೆಗಳೂ ವಿಭಿನ್ನ ವಿಶಿಷ್ಟ ರೀತಿಗಳಲ್ಲಿವೆ. ವಿಶೇಷ ಚೀಲಗಳಲ್ಲಿ, ವಿಶೇಷ ಗ್ರಂಥಿಗಳಲ್ಲಿ ಅಥವಾ ಚರ್ಮದಲ್ಲಿ ಶೇಖರವಾಗುವ ವಿಷ ಸರ್ಪಗಳಲ್ಲಿ ಹಲ್ಲುಗಳಿಂದ, ಜೇನ್ನೊಣ, ಕಣಜಗಳಲ್ಲಿ ಮುಳ್ಳುಗಳಿಂದ, ಚೇಳು – ಜೇಡಗಳಲ್ಲಿ ಕುಟುಕುವ ಅಂಗಗಳಿಂದ .... ಹಾಗೆಲ್ಲ ಪ್ರತಿ ಪ್ರಾಣಿಯಲ್ಲೂ ಅದರದೇ ನಿರ್ದಿಷ್ಟ ರೀತಿಯಲ್ಲಿ ಪ್ರಯೋಗಿಸಲ್ಪಡುತ್ತದೆ. ಚರ್ಮದಲ್ಲಿ ಮೈಯಲ್ಲಿ ಉರಿ ಎಬ್ಬಿಸುವುದರಿಂದ ಕಡೆಗೆ ಪ್ರಾಣತೆಗೆವವರೆಗೂ ಪರಿಣಾಮ ಬೀರುತ್ತದೆ.

ಅದೆಲ್ಲ ಏನೇ ಇದ್ದರೂ ಪ್ರಾಣಿಗಳ ವಿಷದ ಉದ್ದೇಶಗಳದು ಮಾತ್ರ ಎರಡೇ ವಿಧ:  ‘ಆಹಾರಗಳಿಕೆ ಮತ್ತು ಸ್ವರಕ್ಷಣೆ’ ಸರ್ಪ, ಚೇಳು, ಜೇಡಗಳಂತಹ ವಿಷ ಪ್ರಾಣಿಗಳು ಆಹಾರಕ್ಕಾಗಿ ಬಲಿಪ್ರಾಣಿಗಳನ್ನು ನಿಶ್ಚೇಷ್ಟಿತಗೊಳಿಸಲು ವಿಷವನ್ನು ಚುಚ್ಚುತ್ತವೆ. ಜೇನ್ನೊಣ, ಕಣಜ, ಕದಿರಿಬ್ಬೆಗಳು ಶತ್ರುಗಳಿಂದ ರಕ್ಷಿಸಿಕೊಳ್ಳಲು, ಶತ್ರುಗಳನ್ನು ಹಿಮ್ಮೆಟ್ಟಿಸಲು ವಿಷ ಪ್ರಯೋಗಿಸುತ್ತವೆ.

ವಿಷ ಪ್ರಾಣಿಗಳ ಧಾಳಿಗೆ ಜಗದಾದ್ಯಂತ ಮನುಷ್ಯರೂ ಸಿಲುಕುತ್ತಿದ್ದಾರೆ; ಬಲಿಯಾಗುತ್ತಲೂ ಇದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಪ್ರತಿ ವರ್ಷ ಸರಾಸರಿ ಐದು ದಶಲಕ್ಷ ಜನ ವಿಷಪ್ರಾಣಿಗಳ ಧಾಳಿಗೆ ಗುರಿಯಾಗುತ್ತಿದ್ದಾರೆ; ಆ ಪೈಕಿ ಕನಿಷ್ಠ ಒಂದು ಲಕ್ಷ ಜನ ಸಾವನ್ನಪ್ಪತ್ತಿದ್ದಾರೆ.

ಆದರೆ ಪರಮ ವಿಸ್ಮಯದ ವಿಪರ್ಯಾಸ ಏನೆಂದರೆ ನೋವು ಬರಿ ಛಳಕು ತರುವ, ಪ್ರಾಣವನ್ನೂ ತೆಗೆವ ಪ್ರಾಣಿ ವಿಷಗಳು ದಿವ್ಯ ಔಷಧಗಳಾಗುವ ಸಾಮರ್ಥ್ಯವನ್ನು ಹೊಂದಿವೆ. ಪ್ರಾಣಿ ವಿಷಗಳು ಮತ್ತು ಆ ವಿಷಗಳಲ್ಲಿರುವ ನಿರ್ದಿಷ್ಟ ವಿಷ ದ್ರವ್ಯಗಳಿಂದ ವಿಷಗಳಿಗೆ ಪ್ರತಿವಿಷಗಳನ್ನು, ನೋವು ನಿವಾರಕಗಳನ್ನು, ರೋಗ ಶಮನಕಾರಿಗಳನ್ನು, ರೋಗಪತ್ತೆಯ ದ್ರವ್ಯಗಳನ್ನು ತಯಾರಿಸುವ ಪ್ರಯತ್ನಗಳು ನಡೆದಿವೆ; ಯಶಸ್ವಿಯೂ ಆಗಿವೆ. ಅಂತಹ ಕೆಲ ನಿದರ್ಶನಗಳು:

* ನಾಗರಹಾವು, ಮಂಡಲದ ಹಾವು, ಕಪ್ಪು ಮಾಂಬಾ, ಹಸಿರು ಮಾಂಬಾ ಇತ್ಯಾದಿ ಹತ್ತಾರು ವಿಧಗಳ ಸರ್ಪಗಳ ಅತ್ಯಂತ ಉಗ್ರ ವಿಷಗಳಿಂದ ಸುಮಾರು ಇಪ್ಪತ್ತು ಬಗೆಗಿನ ಔಷಧಗಳು ಸಿದ್ಧವಾಗಿವೆ. ವಿಷ ಸರ್ಪಗಳ ಕಡಿತಕ್ಕೆ ಸಿಲುಕಿದವರ ಜೀವ  ಉಳಿಸುವ ‘ಪ್ರತಿ ವಿಷ’ ಗಳು, ತೀವ್ರ ರಕ್ತದೊತ್ತಡ,  ಹೃದಯ ಬೇನೆ, ಕ್ಯಾನ್ಸರ್ ಇತ್ಯಾದಿ ಗಂಭೀರ ಜಾಡ್ಯಗಳಿಗೆ, ಮಧುಮೇಹಕ್ಕೆ, ನರಕ ಯಾತನೆಯ ನೋವುಗಳಿಗೆ ಈ ವರ್ಗದ ಔಷಧಿಗಳು ಅತ್ಯುತ್ತಮ ಪರಿಹಾರ ಒದಗಿಸುತ್ತಿವೆ.

* ವಿಷಕರ ಹಲ್ಲಿ ‘ಗೀಲಾ ಮಾನ್‌ಸ್ಟರ್‌’ನ ವಿಶೇಷ ಒಂದು ಘಟಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವನ್ನು ಅಸದೃಶ ರೀತಿಯಲ್ಲಿ ಪಡೆದಿದೆ.

* ಹಲವಾರು ಚೇಳುಗಳ ವಿಷದಲ್ಲಿರುವ ವಿಷದ್ರವ್ಯಗಳು ಹಲವಾರು ರೋಗಗಳ ಚಿಕಿತ್ಸೆಗಷ್ಟೇ ಅಲ್ಲದೆ ರೋಗ ಪತ್ತೆಗೂ ಅದ್ಭುತ ನೆರವು ನೀಡಬಲ್ಲವಾಗಿವೆ. ಶ್ವಾಸಕೋಶ, ಪ್ರಾಸ್ಟೇಟ್‌ ಗ್ರಂಥಿ, ಸ್ತನ, ಮೇಧೋಜೀರಕ ಮತ್ತು ಚರ್ಮಕ್ಯಾನ್ಸರ್‌ಗಳ ಪತ್ತೆಯಲ್ಲಿ ಮತ್ತು ಮೂರ್ಛೆರೋಗ ಹಾಗೂ ಮಲೇರಿಯಾಗಳ ಚಿಕಿತ್ಸೆಯಲ್ಲಿ ಜೇನುಗಳ ವಿಷದಿಂದ ಅದ್ಭುತ ಔಷಧಿಗಳು ತಯಾರಾಗಬಲ್ಲವಾಗಿವೆ.

* ಪ್ರಾಣಿಗಳ ನೆತ್ತರನ್ನು ಹೀರುವ ‘ವಾಂಪೈರ್‌ ಬಾವಲಿ’ಯ ಜೊಲ್ಲಿನಲ್ಲಿ ಬೆರೆತಿರುವ ಒಂದು ವಿಷ ದ್ರವ್ಯದಿಂದ ‘ಪಾರ್ಶ್ವವಾಯು’ ವಿಗೆ ಚಿಕಿತ್ಸೆ ನೀಡಬಲ್ಲ ಔಷಧ ತಯಾರಿ ಸಾಧ್ಯವಿದೆ. ಕಡಲಲ್ಲಿ ವಾಸಿಸುವ ಡವಳ ಜೀವಿ ವರ್ಗಕ್ಕೆ ಸೇರಿದ ‘ಆ್ಯನಿಲೋನೀ’ಗಳ ವಿಷ ಮಲ್ಟಿಪಲ್‌ ಸ್ಟೆಲಿರೋಸಿಸ್‌, ಸೋರಿಯಾಸಿಸ್‌ ಮತ್ತು ಸಂಧಿವಾತಗಳಂತಹ ಬೇನೆಗಳಿಗೆ ದಿವ್ಯ ಔಷಧಗಳ ಆಕರವಾಗುವ ಗುಣ ಹೊಂದಿದೆ.

* ಕೆಲವು ಪ್ರಭೇದಗಳ ಕಡಲ ಶಂಖುಗಳ ವಿಷದಲ್ಲಿ ಐವ್ವತ್ತಕ್ಕೂ ಅಧಿಕ ಸಂಖ್ಯೆಯ ಅತ್ಯಂತ ತೀಕ್ಷ್ಣವಾದ (ಸಯನೈಡ್‌ಗಿಂತ ಸಾವಿರ ಮಡಿ ಉಗ್ರವಾದ) ವಿಷದ್ರವ್ಯಗಳಿವೆ. ವಿಸ್ಮಯ ಏನೆಂದರೆ ‘ಕೋನೋಟಾಕ್ಸಿನ್‌’ ಗಳೆಂಬ ಈ ವಿಷ ವಸ್ತುಗಳು ಸರ್ವೊತ್ತಮ ನೋವು ನಿವಾರಕಗಳಾಗಬಲ್ಲವಷ್ಟೇ ಅಲ್ಲದೆ ಖಿನ್ನತೆ,  ಪಾರ್ಕಿನ್ಸನ್ಸ್, ಆಲ್‌ಜೈಪರ್‍ಸ್, ಅಪಸ್ಮಾರ ಇತ್ಯಾದಿ ಗಂಭೀರ ಸ್ವರೂಪದ, ಮಿದುಳಿನ ಖಾಯಿಲೆಗಳಿಗೆ ಅತ್ಯಂತ ಪ್ರಭಾವಯುತ ಔಷಧಗಳಿಗೆ ಮೂಲವಾಗಬಲ್ಲ ಶಕ್ತಿ ಪಡೆದಿವೆ.

* ರೋಗ ಪತ್ತೆ ಮತ್ತು ರೋಗ ಚಕಿತ್ಸೆಗಳಷ್ಟೇ ಅಲ್ಲದೆ ವೈದ್ಯಕೀಯ ಸಂಶೋಧನೆಗಳಿಗೂ ಪ್ರಾಣಿ ವಿಷಗಳು ನೆರವು ನೀಡುತ್ತಿವೆ. ಉದಾಹರಣೆಗೆ ಪಫರ್‌ ಮೀನಿನ ಘೋರ ವಿಷ ‘ಟೆಟ್ಟೊಡೋಟಾಕ್ಸಿನ್‌’ ಮನುಷ್ಯರಲ್ಲಿ ನರಜೀವಕೋಶಗಳ ಸಂಪರ್ಕ ವ್ಯವಸ್ಥೆಯ ಅಧ್ಯಯನಕ್ಕೆ ಅಭೂತಪೂರ್ವ ಸಾಧನವಾಗಿ ಬಳಕೆಯಾಗುತ್ತದೆ. ಎಷ್ಟೆಲ್ಲ ಅದ್ಭುತ! ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT