ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರದೆ ಮರೆಯ ಗಂಧರ್ವ

Last Updated 25 ಸೆಪ್ಟೆಂಬರ್ 2016, 8:48 IST
ಅಕ್ಷರ ಗಾತ್ರ

ರಂಗಭೂಮಿಯಲ್ಲಿ ಎರಡು ತರಹ ಮನೋಭಾವದ ಜನರು ಇರುತ್ತಾರೆ. ಗ್ರೀಕ್ ಪರಂಪರೆಯನ್ನು ಅನುಸರಿಸುತ್ತ ಅದೇ ದಾರಿಯಲ್ಲಿ ಸಾಗುವವರು ಒಂದು ವರ್ಗವಾದರೆ– ಕ್ರಿಯಾಶೀಲತೆ, ವಿನಯ, ವೃತ್ತಿಪರತೆ ತೋರುತ್ತ, ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುವ ಕಂಪೆನಿ ನಾಟಕಗಳ ಇನ್ನೊಂದು ವರ್ಗವಿದೆ. ವಿಷಯ ವಸ್ತುವಿನ ದೃಷ್ಟಿಯಿಂದ ಅಗಾಧ ಭಂಡಾರವಿದ್ದರೂ ತಾಂತ್ರಿಕತೆ ಇವರಿಗೆ ಸಿಗುವುದು ಕಡಿಮೆ. ಅದರಿಂದ ಒದ್ದಾಡಿದರೂ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತ ಹೋಗುತ್ತಾರೆ.

ರಂಗಕರ್ಮಿ, ಸಾಹಿತಿ, ಪತ್ರಕರ್ತ ಗೋಪಾಲ ವಾಜಪೇಯಿ ಅವರಿಗೆ ಎರಡನೇ ವರ್ಗದ ಮೇಲೆ ಹೆಚ್ಚು ಪ್ರೀತಿ. ಧಾರವಾಡದ ಪರಿಸರದಲ್ಲಿ ಇದ್ದುದರಿಂದ, ಆ ವರ್ಗದ ಜನರ ವಲಯವೇ ಅವರಿಗೆ ಹೆಚ್ಚು ಇಷ್ಟವಾಯಿತು. ಎಲೆಮರೆಯ ಕಾಯಿಯಂತೆ, ತಮ್ಮ ಪಾಡಿಗೆ ಕೆಲಸ ಮಾಡುತ್ತ ಹೋಗುವುದು ಅವರಿಗೆ ಆಪ್ತ ಅನಿಸಿತು. ಅವರ ಸ್ವಭಾವದ ಬಗ್ಗೆ ಹೆಚ್ಚು ಗೊತ್ತಿರುವ ನಾನು ಆ ಬಗ್ಗೆ ಖಚಿತವಾಗಿ ಹೇಳುತ್ತೇನೆ.

ಉತ್ತರ ಕರ್ನಾಟಕದ ಜವಾರಿ ಪ್ರತಿಭೆಗಳ ಪೈಕಿ ಗೋಪಾಲ ವಾಜಪೇಯಿ ಅವರದು ಅಗ್ರಮಾನ್ಯ ಹೆಸರು. ಬರೀ ಸುದ್ದಿಗಳಲ್ಲೇ ಅವರು ಮುಳುಗಿಹೋಗಲಿಲ್ಲ. ಅದರಾಚೆಯೂ ತಮ್ಮ ಪ್ರಭಾವಲಯ ಸೃಷ್ಟಿಸಿಕೊಂಡರು. ವಿಷಾದದ ಸಂಗತಿಯೆಂದರೆ, ಅವರ ಪ್ರತಿಭೆಯನ್ನು ಕನ್ನಡ ಚಿತ್ರರಂಗ ಸರಿಯಾಗಿ ಗುರುತಿಸಲಿಲ್ಲ. ಇನ್ನು ಪುರಸ್ಕರಿಸುವುದಂತೂ ದೂರದ ಮಾತೇ ಸೈ.

ಟಿ.ಎಸ್. ನಾಗಾಭರಣ ನಿರ್ದೇಶನದ ‘ನಾಗಮಂಡಲ’ ಚಿತ್ರದ ಹಾಡುಗಳು ಯಾರನ್ನು ತಾನೇ ಸೆಳೆದಿಲ್ಲ? ಒಂದಕ್ಕಿಂತ ಒಂದು ಮಾಧುರ್ಯಭರಿತ ಗೀತೆಗಳು ಅವು. ಆ ಹಾಡುಗಳು ಲಕ್ಷಾಂತರ ಪ್ರೇಕ್ಷಕನನ್ನು ಸಮ್ಮೋಹನಗೊಳಿಸಿದವು. ನಾನೊಮ್ಮೆ ಅವರನ್ನು ಕೇಳಿದ್ದೆ: ‘ನಾಗಮಂಡಲ’ದಂಥ ಯಶಸ್ವಿ ಚಿತ್ರದಲ್ಲಿ ಕೆಲಸ ಮಾಡಿದ ಮೇಲೆ ಮತ್ಯಾಕೆ ನೀವು ಉದ್ಯೋಗದ ಕಡೆಗೇ ಹೋದಿರಿ?

ಸ್ವಲ್ಪ ಹೊತ್ತು ಸುಮ್ಮನಿದ್ದು ಅವರು ಹೇಳಿದರು: ‘ಬಾಬು, ಮತ್ತೇನಿಲ್ಲ. ನನ್ನನ್ನು ನಂಬಿಕೊಂಡು ನಾಲ್ಕು ಜೀವಗಳಿವೆ. ತಾಯಿ, ಪತ್ನಿ, ಇಬ್ಬರು ಮಕ್ಕಳು. ಅವರಿಗಾಗಿ ನಾನು ಬದುಕಬೇಕಿತ್ತು. ಇದನ್ನೇ ನಂಬಿಕೊಂಡರೆ ಏನಾಗುತ್ತೋ ಎಂಬ ಭಯದಿಂದ ನಾನು ಉದ್ಯೋಗವನ್ನು ಬಿಡಲಿಲ್ಲ’.
ಪ್ರತಿಭೆಯ ಹಿಂದೆಯೂ ಗೋಚರಿಸುತ್ತಿದ್ದ ಆತಂಕವನ್ನು ನಾನು ಸ್ಪಷ್ಟವಾಗಿ ಗುರುತಿಸಿದೆ. ಅವರ ಒಳ್ಳೆಯತನವನ್ನು ತುಂಬಾ ಜನ ದುರುಪಯೋಗಪಡಿಸಿಕೊಂಡರು ಎಂಬುದು ಇನ್ನೊಂದು ವಿಷಾದದ ಸಂಗತಿ.

ಅವರು ಪತ್ರಕರ್ತನಾಗಿದ್ದ ಸಮಯದಲ್ಲಿ ಬೇರೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನಿವಾರ್ಯ ಕಾರಣಗಳಿಂದ ಆಗಿರಲಿಲ್ಲ. ಹಾಗೆಂದು ಅವರು ಅದರಿಂದೇನೂ ಸಂಪೂರ್ಣ ದೂರ ಉಳಿದಿರಲಿಲ್ಲ. ರಂಗಕರ್ಮಿಗಳ ಜತೆಗೆ ಸಾಕಷ್ಟು ಒಡನಾಟ ಇಟ್ಟುಕೊಂಡಿದ್ದರು. ಅದರಿಂದಲೇ ಅವರ ಬಳಗ ದೊಡ್ಡದೂ ಆಗಿ ಬೆಳೆಯುತ್ತಿತ್ತು. ಮುದೇನೂರು ಸಂಗಣ್ಣ ಅವರೊಂದಿಗೆ ವಾಜಪೇಯಿ ಅವರದು ವಿಶೇಷ ಒಡನಾಟ. ಒಮ್ಮೆ ಸಂಗಣ್ಣ ಜತೆ ಮಾತಾಡುತ್ತ ಕುಳಿತಿದ್ದಾಗ, ‘ದೊಡ್ಡಪ್ಪ’ ನಾಟಕದ ವಸ್ತು ಹೊಳೆಯಿತು. ಅದನ್ನು ಬರೆದೂಬಿಟ್ಟರು.

ಆಗೆಲ್ಲ ಹವ್ಯಾಸಿ ನಾಟಕ ತಂಡಗಳು ವರ್ಷದುದ್ದಕ್ಕೂ ನಡೆಯುತ್ತಿದ್ದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದವು. ಆ ಪೈಕಿ ‘ದೊಡ್ಡಪ್ಪ’ ದೊಡ್ಡ ಹೆಸರು ಮಾಡಿತು (ಈವರೆಗೆ ಅದರ 500ಕ್ಕೂ ಹೆಚ್ಚು ಪ್ರಯೋಗಗಳು ಆಗಿದ್ದು, ಈಗಲೂ ಕೆಲವು ತಂಡಗಳು ಪ್ರದರ್ಶಿಸುತ್ತಲೇ ಇವೆ). ‘ಸಂತ್ಯಾಗ ನಿಂತಾನ ಕಬೀರ’, ‘ನಂದಭೂಪತಿ’, ‘ಧರ್ಮಪುರಿಯ ಶ್ವೇತವೃತ್ತ’, ‘ಆಗಮನ’ ಮುಂತಾದ ಅವರ ಇತರ ಭಾಷಾ ಪ್ರಸಿದ್ಧ ರೂಪಾಂತರ ನಾಟಕಗಳು ‘ರಂಗಾಯಣ’, ‘ಶಿವಸಂಚಾರ’ ತಂಡಗಳಿಂದ ನೂರಾರು ಬಾರಿ ಪ್ರಯೋಗಗೊಂಡಿವೆ.

‘ಸಿರಿಸಂಪಿಗೆ’ ಹಾಗೂ ‘ನಾಗಮಂಡಲ’ ಎರಡೂ ಕಥೆಗಳು ಒಂದೇ. ‘ಸಂಕೇತ್’ ತಂಡದ ಶಂಕರನಾಗ್, ‘ನಾಗಮಂಡಲ’ವನ್ನು ಪ್ರದರ್ಶಿಸಲು ನಿರ್ಧರಿಸಿದರು. ಆ ಸಂದರ್ಭದಲ್ಲಿ ಅವರಿಗೆ ಈ ನಾಟಕದಲ್ಲಿ ನಾಲ್ಕೈದು ಹಾಡುಗಳಿದ್ದರೆ ಒಳ್ಳೆಯದು ಎಂದು ಅನಿಸಿತು. ಅದರಲ್ಲೂ ಗೋಪಾಲ ವಾಜಪೇಯಿ ಅವರೇ ಸಾಹಿತ್ಯ ಬರೆದರೆ ಒಳ್ಳೆಯದು ಎಂದುಕೊಂಡರು. ವಾಜಪೇಯಿ ಬರೆದ ಹಾಡುಗಳನ್ನು ಆಗ ಮೆಚ್ಚದೇ ಇರುವವರೇ ಇಲ್ಲ! ಪ್ರಚಲಿತ ವಸ್ತುವನ್ನು ಇಟ್ಟುಕೊಂಡು, ಪ್ರವರ್ಧಮಾನಕ್ಕೆ ಬಂದ ನಾಟಕ ‘ನಾಗಮಂಡಲ’. ಅದು ಅಷ್ಟು ಗಟ್ಟಿಯಾಗಿ ಹೆಜ್ಜೆ ಮೂಡಿಸಲು ಮೂಲ ಕಾರಣ ವಾಜಪೇಯಿ. ಬೇಂದ್ರೆ ಸಾಹಿತ್ಯದ ಸೊಗಡಿನ ನೆನಪು ಅವರ ಸಾಲುಗಳಲ್ಲಿತ್ತು.

ಸಿನಿಮಾಗಳಿಗೆ ಕೆಲಸ ಮಾಡುವುದರಲ್ಲೂ ವಾಜಪೇಯಿ ಹಿಂದೆ ಬೀಳಲಿಲ್ಲ. ಸುಂದರಕೃಷ್ಣ ಅರಸರ ‘ಸಂಗ್ಯಾ ಬಾಳ್ಯಾ’, ನಾಗಾಭರಣರ ‘ಸಂತ ಶಿಶುನಾಳ ಶರೀಫ’, ‘ಸಿಂಗಾರೆವ್ವ’ ಹಾಗೂ ಗಿರೀಶ ಕಾಸರವಳ್ಳಿಯವರ ‘ತಾಯಿಸಾಹೇಬ’ ಚಿತ್ರಗಳಿಗೆ ಅವರು ಸಂಭಾಷಣೆ ಬರೆದರು. ಹಲವು ಚಿತ್ರಗಳಿಗೆ ಅವರು ರಚಿಸಿದ ಹಾಡುಗಳು ಅಪಾರ ಜನಪ್ರಿಯತೆ ಗಳಿಸಿವೆ.


‘ಕಬೀರ’ನ ಸವಾಲು
ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರು ವಾಜಪೇಯಿ ಅವರ ಕಡೆಯಿಂದ ನಾಟಕವೊಂದನ್ನು ಬರೆಸಲು ನಿರ್ಧರಿಸಿದರು. ಆಗ ವಾಜಪೇಯಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಭೀಷ್ಮ ಸಾಹ್ನಿ ಅವರ ‘ಕಬೀರ ಖಡಾ ಬಾಜಾರ್ ಮೇ’ ಕೃತಿಯನ್ನು ‘ಸಂತ್ಯಾಗ ನಿಂತಾನ ಕಬೀರ’ ಎಂಬುದಾಗಿ ಭಾವಾನುವಾದ ಮಾಡಲು ವಾಜಪೇಯಿ ಮುಂದಾದರು. ಅವರು ಅದನ್ನು ಬರೆದಿದ್ದು ಬೆಳಕಿನ ಮುದ್ದಣ್ಣ ಅವರ ಮನೆಯಲ್ಲಿ. ಆ ವ್ಯವಸ್ಥೆಯನ್ನು ಬಸವಲಿಂಗಯ್ಯ ಅವರೇ ಮಾಡಿಕೊಟ್ಟಿದ್ದರು ಹಾಗೂ ಅವಾಗಿನ ಸಮಯದಲ್ಲೇ ಶಂಕರನಾಗ್ ಬಂದು ‘ನಾಗಮಂಡಲ’ ನಾಟಕಕ್ಕೆ ಹಾಡು ಬರೆದುಕೊಡಲು ವಾಜಪೇಯಿ ಅವರಿಗೆ ಮನವಿ ಮಾಡಿದ್ದು.

ನಾನು ರಂಗಭೂಮಿಯನ್ನು, ಅಲ್ಲಿನ ಪ್ರತಿಭಾವಂತರನ್ನು ತುಂಬ ಹತ್ತಿರದಿಂದ ಗಮನಿಸಿದ್ದೇನೆ. ವಾಜಪೇಯಿಯವರ ಅಗಾಧ ಸಾಮರ್ಥ್ಯ ನನಗೆ ತಿಳಿದಿತ್ತು. ಕಬೀರನ ಸಾಲುಗಳಿಗೆ ಜೀವ ಕೊಡುವವರು ಇವರು ಮಾತ್ರ ಎನ್ನುವುದು ನನ್ನ ನಂಬಿಕೆಯಾಗಿತ್ತು.

‘ಸಂತೆಯಲ್ಲಿ ನಿಂತ ಕಬೀರ’ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಯುವ ಮುನ್ನ ಅವರ ಮನೆಗೆ ಹೋದೆ (ಆ ಹೊತ್ತಿಗಾಗಲೇ ಅವರು ಖಾಸಗಿ ಟೀವಿ ಚಾನೆಲ್‌ನಲ್ಲಿ ಒಂದಷ್ಟು ದಿನ ಕೆಲಸ ಮಾಡಿ, ಅಲ್ಲೂ ಎದುರಾದ ‘ಕಲ್ಚರಲ್ ಪಾಲಿಟಿಕ್ಸ್’ನಿಂದ ನೋವುಂಡು ಬೆಂಗಳೂರಿಗೆ ಸ್ಥಳಾಂತರವಾಗಿದ್ದರು). ಅವರನ್ನು ಭೇಟಿ ಮಾಡಿ ಸಿನಿಮಾದ ಬಗ್ಗೆ ತಿಳಿಸಿ– ‘ಹಾಡುಗಳನ್ನು ನೀವೇ ಬರೆಯಬೇಕು’ ಎಂದೆ.

ತಕ್ಷಣವೇ ಅವರು ‘ಬರೀ ಹಾಡುಗಳಷ್ಟೇ ಏಕೆ?ಚಿತ್ರದ ಸಂಭಾಷಣೆಯನ್ನೂ ನಾನೇ ಬರೆಯುತ್ತೇನೆ’ ಎಂದರು. ಅವರ ಆರೋಗ್ಯ ಅದಾಗಲೇ ಸ್ವಲ್ಪ ಹದಗೆಟ್ಟಿದ್ದು ಕಾಣಿಸುತ್ತಿತ್ತು. ಆದರೆ ಅದರ ಬಗ್ಗೆ ಅವರೇನೂ ಹೆಚ್ಚು ಚಿಂತಿಸಿದಂತೆ ಕಾಣಲಿಲ್ಲ. ಅಷ್ಟಕ್ಕೂ ನಾನು ಆ ಬಗ್ಗೆ ಶಂಕೆಯಿಂದ ಕೇಳಿದಾಗ, ‘ನನ್ನ ಬಗ್ಗೆ ಆತ್ಮವಿಶ್ವಾಸ ಇಲ್ಲವೇ?’ ಎಂದು ಮರುಪ್ರಶ್ನೆ ಹಾಕಿದರು. ನಾನು ಒಪ್ಪಿದೆ.

ಅದಕ್ಕೆ ಮುನ್ನ ಅವರದೊಂದು ಷರತ್ತು. ‘ಒಂದು ಪ್ರತ್ಯೇಕ ಸ್ಥಳ ಗೊತ್ತು ಮಾಡಿ. ಇಬ್ಬರೂ ಕುಳಿತುಕೊಂಡು ಚರ್ಚೆ ಮಾಡೋಣ. ನಾನು ಬರೆಯುತ್ತೇನೆ’ ಎಂದರು. ಅದರಂತೆ ಬಾಡಿಗೆ ಮನೆ ಹಿಡಿದು, ಕೆಲಸ ಶುರು ಮಾಡಿದೆವು. ಸನ್ನಿವೇಶ ಕಟ್ಟುವ ಸಂದರ್ಭದಲ್ಲಿ ನಾನು ಏನಾದರೂ ಆಕ್ಷೇಪ ಮಾಡಿದರೆ ಮೊದಲು ಸುಮ್ಮನೇ ಇರುತ್ತಿದ್ದರು. ಆಮೇಲೆ ತಮ್ಮನ್ನು ತಾವು ಚಿಂತನೆಗೆ ಹಚ್ಚಿಕೊಳ್ಳುತ್ತಿದ್ದರು. ‘ಸ್ವಲ್ಪ ತುರ್ತಾಗಿ ಇದನ್ನು ಬರೆದುಬಿಡಿ’ ಎಂದು ನಾನು ಒತ್ತಾಯಿಸಿದಾಗ ಅವರು ಕಬೀರನ ದೋಹೆಯೊಂದನ್ನು ಹೇಳುತ್ತಿದ್ದರು.

‘ತಾಳು ಮನವೇ ತಾಳು, ಮೆಲ್ಲನೇ ಎಲ್ಲವೂ ಆಗುವುದು... ಬೀಜ ಬಿತ್ತಿದ ತಕ್ಷಣ ಮರ ಫಲ ನೀಡದು. ಅರ್ಜಂಟ್ ಯಾಕೆ?’ ಅನ್ನುತ್ತಿದ್ದರು. ಎಲ್ಲ ಸಿದ್ಧತೆ ಮಾಡಿಕೊಂಡು ಮುಂದಕ್ಕೆ ಸಾಗುತ್ತಿದ್ದರು. ಅವರಲ್ಲಿ ನಾನು ಆ ಸಮಯದಲ್ಲಿ ಕಾಣುತ್ತಿದ್ದುದು ಪಾತ್ರವೊಂದು ಸುಂದರವಾಗಿ ಅರಳುವ ಬಗೆ. ಅವರು ಅದರ ರೂಪಾಂತರದಲ್ಲಿ ಎಷ್ಟೊಂದು ಖುಷಿ ಕಾಣುತ್ತಿದ್ದರು!

ಸಾಹಿತಿಗಳ ವಿಚಾರದಲ್ಲಿ ನಮಗೆ ಅಪರೂಪ ಎನಿಸುವ ಒಂದು ಗುಣ ಗೋಪಾಲ ವಾಜಪೇಯಿ ಅವರಲ್ಲಿತ್ತು. ನಮಗೆ ಇಷ್ಟವಿಲ್ಲ ಎನಿಸುವ ಸಾಲುಗಳನ್ನು ಮತ್ತೆ ಮತ್ತೆ ಪರಿಷ್ಕರಿಸಿ, ಎಲ್ಲರೂ ಒಪ್ಪುವಂತೆ ಬರೆಯುತ್ತಿದ್ದರು. ನೇರ ಹಾಗೂ ನಿಷ್ಠುರ ಸ್ವಭಾವದ ಕಬೀರನನ್ನು ಭೀಷ್ಮ ಸಾಹ್ನಿ ಚೆನ್ನಾಗಿ ಕಟ್ಟಿಕೊಟ್ಟಿದ್ದರು. ಅದನ್ನು ಕನ್ನಡಕ್ಕೆ ತರುವುದು ದೊಡ್ಡ ಸವಾಲಾಗಿತ್ತು. ಆದರೆ ಕಬೀರನೇ ಕನ್ನಡದಲ್ಲಿ ಬರೆದರೆ ಹೇಗೆ ಇರಬಹುದೋ ಹಾಗೆ ‘ಕಬೀರ’ ಚಿತ್ರದ ಹಾಡುಗಳಿವೆ.

ಹೃದಯಕ್ಕೆ ಹತ್ತಿರವಾಗುವಂಥ ಆ ಹಾಡುಗಳು ಅಪಾರ ಜನಪ್ರಿಯತೆ ಪಡೆದ ಬಳಿಕ ನಾನೊಮ್ಮೆ ಅವರನ್ನು ಕಿಚಾಯಿಸಿದ್ದೆ: ‘ನಾಟಕವನ್ನು ನೀವು ಮನಸ್ಸಿಗೆ ಬಂದಂತೆ ಬರೆದುಕೊಳ್ಳುತ್ತಿದ್ದಿರಿ. ಆದರೆ ಕಬೀರದಲ್ಲಿ ನೋಡಿ! ಸಂಗೀತದ ಲಯಕ್ಕೆ ತಕ್ಕಂತೆ ಹಾಡು ಬರೆದಿದ್ದೀರಿ!’. ಈ ಮಾತು ಕೇಳಿದಾಗ ಅವರಿಗೆ ಖುಷಿಯೋ ಖುಷಿ. ‘ಹೌದಾ? ಸಿ. ಅಶ್ವತ್ಥ್ ಕೂಡ ನಿನ್ನ ಸಾಲುಗಳಲ್ಲಿ ಸಂಗೀತ ಅಡಗಿದೆ ಎಂದು ಹೇಳ್ತಿದ್ರು ಕಣ್ರೀ’ ಎಂದು ನೆನಪಿಸಿಕೊಂಡರು. ಅವರು ಅಷ್ಟು ಸಂತಸಪಡಲು ಕಾರಣ, ಈ ಹಿಂದೆ ಅವರು ಅನುಭವಿಸಿದ್ದ ಮತ್ತದೇ ‘ಕಲ್ಚರಲ್ ಪಾಲಿಟಿಕ್ಸ್’.

ಒಬ್ಬ ಖ್ಯಾತ ನಿರ್ದೇಶಕರು ತಮ್ಮ ಸಿನಿಮಾಕ್ಕೆ ಹಾಡು ಬರೆದುಕೊಡಲು ವಾಜಪೇಯಿ ಅವರಿಗೆ ಹೇಳಿದ್ದರು. ಅದರ ಸಂಗೀತ ಸಂಯೋಜನೆ ಮಾಡುತ್ತಿದ್ದುದು ದಕ್ಷಿಣಭಾರತ ಚಿತ್ರರಂಗದಲ್ಲಿ ಖ್ಯಾತಿ ಪಡೆದವರು. ನಿರ್ದೇಶಕರು ಹೇಳಿದಂತೆ ವಾಜಪೇಯಿ ಹಾಡು ಬರೆದಾಗ ಆ ನಿರ್ದೇಶಕರು ‘ಸಂಗೀತಕ್ಕೆ ತಕ್ಕಂತೆ ಹಾಡು ಬರೆದುಕೊಡಲು ನಿಮ್ಮಿಂದ ಆಗೋದಿಲ್ಲ’ ಎಂದು ಹೇಳಿದ್ದು ವಾಜಪೇಯಿ ಅವರಲ್ಲಿ ನೋವು ಮೂಡಿಸಿತ್ತು.

ಇನ್ನೊಬ್ಬ ಅಂತರರಾಷ್ಟ್ರೀಯ ಪ್ರಖ್ಯಾತಿಯ ನಿರ್ದೇಶಕರು ‘ನಿಮಗೆ ದೃಶ್ಯಗಳನ್ನು ಚೆನ್ನಾಗಿ ಬರೆಯಲು ಬರೋದಿಲ್ಲ’ ಎಂದಿದ್ದರಂತೆ! ಹಾಗಿದ್ದರೂ ಆ ಇಬ್ಬರೂ ನಿರ್ದೇಶಕರು ವಾಜಪೇಯಿ ಅವರಿಂದ ಕೆಲಸ ಮಾಡಿಸಿಕೊಂಡು, ಸೂಕ್ತ ಮನ್ನಣೆ ಕೊಡದೇ ಹೋಗಿದ್ದುದು ಅವರ ಮನಸ್ಸಿನಲ್ಲಿ ವಾಸಿಯಾಗದಂಥ ಗಾಯ ಮಾಡಿತ್ತು. ಇಷ್ಟೆಲ್ಲ ನೋವುಂಡಿದ್ದರೂ ಗೋಪಾಲ ವಾಜಪೇಯಿ ಯಾವತ್ತೂ ಅದನ್ನು ಬಹಿರಂಗವಾಗಿ ಹೇಳಿಕೊಂಡವರಲ್ಲ. ಈ ಎಲ್ಲ ಸಂಗತಿಗಳು ಗೊತ್ತಿರುವವರು ಅವರನ್ನು ಕೇಳಿದರೆ, ಮುಗುಳ್ನಗುತ್ತಿದ್ದರು, ಅಷ್ಟೇ.

ಈ ಸಂದರ್ಭದಲ್ಲಿ ಇನ್ನೊಂದು ಘಟನೆ ನೆನಪಾಗುತ್ತಿದೆ. ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ನಿರೂಪಣೆಯನ್ನು ಎಲ್ಲರೂ ಕೊಂಡಾಡುತ್ತಿದ್ದರು. ಒಮ್ಮೆ ಅವರು ಕಾರ್ಯಕ್ರಮದ ಮಧ್ಯೆಯೇ ಪ್ರಕಟಿಸಿದ್ದರು: ‘ನನ್ನ ಮಾತುಗಳು, ನಿರೂಪಣೆ ಎಲ್ಲವೂ ಗೋಪಾಲ ವಾಜಪೇಯಿ ಅವರದು’. ಅದನ್ನು ಕೇಳಿ ನಮಗಂತೂ ಹಿಡಿಸಲಾರದಷ್ಟು ಸಂತಸವಾಗಿತ್ತು.

ಪತ್ರಕರ್ತನಾಗಿ ದಶಕಗಳ ಕಾಲ ಅನುಭವ ಪಡೆದ ಗೋಪಾಲ ವಾಜಪೇಯಿ, ರಂಗಭೂಮಿ ಹಾಗೂ ಸಿನಿಮಾ ಇತಿಹಾಸದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಅದನ್ನು ಅವರು ಜನರಿಗೆ ತಿಳಿಸಲು ಸರಳವಾದ ಬರಹದ ದಾರಿ ಆಯ್ಕೆ ಮಾಡಿಕೊಂಡಿದ್ದರು.

ಸರಳವಾಗಿದ್ದರೂ ಮನಸ್ಸನ್ನು ತಾಕುವ ಶಕ್ತಿ ಅವರ ಲೇಖನಿಗೆ ಇತ್ತು. ಅದರಿಂದಾಗಿಯೇ ಅವರ ನಾಟಕ, ಜೀವನದ ಅನುಭವ ಕಥನಗಳು ಎಲ್ಲರ ಮನಸ್ಸನ್ನು ಗೆಲ್ಲುವಂತಿವೆ. ಅವರ ಬರವಣಿಗೆಯ ಶಕ್ತಿ ಗೊತ್ತಿದ್ದವರು ಆ ಪ್ರತಿಭೆಯನ್ನು ಬಳಸಿಕೊಂಡರೇ ಹೊರತೂ ಗುರುತಿಸಿ ಪುರಸ್ಕರಿಸಲು ಮುಂದಾಗಲಿಲ್ಲ. ಇದಕ್ಕೆ ಕಾರಣ ಲಾಭಕೋರತನದ ಆಸೆಯೇ ಹೊರತೂ ಮತ್ತೇನೂ ಇಲ್ಲ. ವಾಜಪೇಯಿ ಸಕ್ರಿಯವಾಗಿ ಎಲ್ಲದರಲ್ಲೂ ಛಾಪು ಮೂಡಿಸುತ್ತ ಹೋದರೆ ತಮಗೆಲ್ಲಿ ಸ್ಥಾನ ಸಿಗಲಾರದಂತೆ ಆಗುತ್ತದೋ ಎಂದು ಹೆದರಿದವರು ಹಲವರು.

ಇದೇ ಕಾರಣದಿಂದಾಗಿ ವಾಜಪೇಯಿ ಅವರಿಗೆ ಸಿಗಬೇಕಾದ ಮನ್ನಣೆ ದೂರವೇ ಉಳಿಯಿತು. ಚಿತ್ರರಂಗ, ಟೀವಿ ವಲಯದಲ್ಲಿ ಹೆಸರು ಮಾಡಿರುವ ದೊಡ್ಡ ದೊಡ್ಡ ವ್ಯಕ್ತಿಗಳಿಂದ– ಅದೂ ಆಪ್ತರಾದವರು, ಒಡನಾಟ ಹೊಂದಿದವರಿಂದ, ವಾಜಪೇಯಿ ಸಾಕಷ್ಟು ನೋವು ಅನುಭವಿಸಿದರು. ಅದನ್ನು ಅವರು ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ಒಂದೇ ಮಾತಿನಲ್ಲಿ ಬಣ್ಣಿಸಬಹುದಾದರೆ, ಅವರು ಬೆಂಕಿಯಲ್ಲಿ ಅರಳಿದ ಹೂವಿನಂತೆ.

ಹವ್ಯಾಸಿ ರಂಗಭೂಮಿಯಿಂದ ಬಂದು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು ನಮ್ಮ ನಡುವೆ ಇದ್ದಾರೆ. ತಮ್ಮವರನ್ನೆಲ್ಲ ಮುನ್ನಲೆಗೆ ತಂದು, ಅವರಿಗೊಂದು ಸುರಕ್ಷಿತ ತಾಣ ಮಾಡಿಕೊಟ್ಟು ತಾವೂ ಭದ್ರಕೋಟೆ ನಿರ್ಮಿಸಿಕೊಂಡಿದ್ದಾರೆ. ದಶಕಗಳಿಂದ ರಂಗಭೂಮಿ– ಚಿತ್ರರಂಗವನ್ನೂ ಇಲ್ಲಿನ ಎಲ್ಲ ಬಗೆಯ ಚಟುವಟಕೆಗಳನ್ನೂ ಕಂಡಿರುವ ನಾನು ಹೇಳುವುದಿಷ್ಟೇ, ಗೋಪಾಲ ವಾಜಪೇಯಿ ಅವರಿಗೆ ಎಷ್ಟರಮಟ್ಟಿಗೆ ನ್ಯಾಯ ಒದಗಿಸಿಕೊಟ್ಟಿದ್ದೇನೆ ಎಂಬುದನ್ನು ಇವರೆಲ್ಲ ತಮ್ಮ ಆತ್ಮ ಮುಟ್ಟಿಕೊಂಡು ಕೇಳಿಕೊಳ್ಳಬೇಕು.

‘ಕಬೀರ’ನ ಸಂದರ್ಭದಲ್ಲಿ ಒಮ್ಮೊಮ್ಮೆ ನಡೆಯುತ್ತಿದ್ದ ವಾಗ್ವಾದದಿಂದ ನಮಗೆಲ್ಲ ಬೇಸರ ಉಂಟಾದಾಗ, ಅವರು ನಾಟಕ ಕಂಪೆನಿಗಳ ಪ್ರಮುಖರ ಕುರಿತು ಹೇಳುತ್ತಿದ್ದ ರಸವತ್ತಾದ ಕಥೆಗಳು ನನ್ನ ಮನದಂಗಳದಲ್ಲಿ ಇನ್ನೂ ಹಸಿರಾಗಿವೆ. ಇದೇ ಸಮಯದಲ್ಲಿ ಅವರಿಗೆ ‘ರಾಜಾಸಾನಿ’ ಎಂಬಾಕೆಯ ಕಥೆಯನ್ನು ಸಿನಿಮಾರೂಪಕ್ಕೆ ತರುವ ಆಸೆಯೂ ಇತ್ತು. ನಾಟಕ ಕಂಪೆನಿ ನಡೆಸುತ್ತಿದ್ದ ಮಹಿಳೆ ರಾಜಾಸಾನಿ.

ಆಕೆಯ ಮಗಳೊಬ್ಬಳನ್ನು ಹುಬ್ಬಳ್ಳಿ ಸಮೀಪದ ಒಬ್ಬ ಪಾಳೇಗಾರ ಪ್ರೀತಿಸುತ್ತಾನೆ. ಆಗಿನ ಕಾಲದಲ್ಲೇ ಆತ ಮೂರು ಚೀಲ ಬೆಳ್ಳಿ ನಾಣ್ಯ ಒಯ್ದು ಕೊಟ್ಟಿರುತ್ತಾನಂತೆ! ಅದ್ಭುತ ಕಥೆ ಅದು. ‘ಆಕೆಯ ಸಾಧನೆಯನ್ನು ಸಿನಿಮಾ ಮಾಡಬೇಕು. ಯಾರಿಗೂ ಆ ಬಗ್ಗೆ ಈಗಲೇ ಹೇಳಬೇಡಿ. ಅದಕ್ಕೆ ಇಸ್ಮಾಯಿಲ್ ದರ್ಬಾರ್ ಸಂಗೀತ ಸಂಯೋಜಿಸಬೇಕು. ಈ ಎಲ್ಲದರ ಮೂಲಕ ರಂಗಭೂಮಿ ವೈಭವವನ್ನು ಮತ್ತೆ ತೆರೆಯ ಮೇಲೆ ತೋರಿಸಬಹುದು’ ಎಂದೆಲ್ಲ ಕನಸುಗಳನ್ನು ಹಂಚಿಕೊಂಡಿದ್ದರು.

ವಾಜಪೇಯಿಯವರು ನಿಧಾನವಾದ ಶೈಲಿಯಲ್ಲಿ ‘ರಾಜಾಸಾನಿ’ ಕಥೆ ಹೇಳುವುದನ್ನು ಕೇಳಿದಾಗಲೆಲ್ಲ ನಾನು ಅದನ್ನು ನಿರ್ದೇಶಿಸುವ ಕನಸು ಕಾಣುತ್ತಿದ್ದೆ. ಆದರೆ ಆ ಕನಸಿಗೆ ಅಡಿಪಾಯ ಹಾಕಿದ ವ್ಯಕ್ತಿ ನನ್ನಿಂದ ದೂರ ಹೋಗಿದ್ದನ್ನು ಅರಗಿಸಿಕೊಳ್ಳಲು ಇನ್ನೂ ಆಗುತ್ತಿಲ್ಲ.

ನಿರೂಪಣೆ: ಆನಂದತೀರ್ಥ ಪ್ಯಾಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT