ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಪ್ರವೇಶಕ್ಕೆ ಕೆಪಿಎಲ್‌ ಹೆಬ್ಬಾಗಿಲು

Last Updated 25 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಅಪರೂಪದ ಬೌಲಿಂಗ್ ಶೈಲಿ ಮೂಲಕ ಗಮನ ಸೆಳೆಯುತ್ತಿದ್ದಾರೆ ಶಿವಿಲ್ ಕೌಶಿಕ್‌. ಚೈನಾಮನ್ ಎಂದು ಕರೆಯಲಾಗುವ ಈ ಶೈಲಿಯಲ್ಲಿ ಬೌಲಿಂಗ್ ಮಾಡುವವರು ಕೆಪಿಎಲ್‌ನಲ್ಲಿ ಇಬ್ಬರೇ ಇದ್ದಾರೆ. ಒಬ್ಬರು ಕೌಶಿಕ್‌, ಇನ್ನೊಬ್ಬರು ಸರ್ಫರಾಜ್‌ (ಇಬ್ಬರೂ ಹುಬ್ಬಳ್ಳಿ ಟೈಗರ್ಸ್‌).

ಶಿವಿಲ್ ಬೌಲಿಂಗ್ ಶೈಲಿ ಅಪರೂಪದ್ದು. ದೇಹವನ್ನು ಬಳುಕಿಸಿ, ಕತ್ತು ತಿರುಗಿಸಿ, ಮುಷ್ಠಿಯನ್ನು ತಲೆಗೆ ಸುತ್ತು ಹಾಕಿ ಚೆಂಡು ಎಸೆಯುವ ಅವರನ್ನು ನೋಡಿದರೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಪಾಲ್ ಆಡಮ್ಸ್ ನೆನಪಾಗದೇ ಇರದು. ವಿಶಿಷ್ಟವಾದ ಶೈಲಿಯಿಂದ ಗಮನ ಸೆಳೆದ ಶಿವಿಲ್‌ ಐಪಿಎಲ್‌ನಲ್ಲೂ ಅವಕಾಶ ಪಡೆದುಕೊಂಡಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆಯಲ್ಲಿ ಕೆಪಿಎಲ್ ಮತ್ತು ಭವಿಷ್ಯದ ಕ್ರಿಕೆಟ್ ಬಗ್ಗೆ ಶಿವಿಲ್‌ ವಿವರಿಸಿದ್ದಾರೆ.

* ಕೆ.ಪಿ.ಎಲ್‌ ಬಗ್ಗೆ ನಿಮ್ಮ ಅನಿಸಿಕೆ ಏನು?
ಇದು ಅತ್ಯುತ್ತಮ ಟೂರ್ನಿ. ಯುವ ಆಟಗಾರರಿಗಂತೂ ಸಣ್ಣ ವಯಸ್ಸಿನಲ್ಲೇ ಕ್ರಿಕೆಟ್ ಲೋಕದ ಗಮನ ಸೆಳೆಯಲು ಇದಕ್ಕಿಂತ ಒಳ್ಳೆಯ ಅವಕಾಶ ಬೇರೆ ಇರಲಾರದು. ಖ್ಯಾತ ಆಟಗಾರರ ಜೊತೆ ಆಡಲು ಇಲ್ಲಿ ಅವಕಾಶವಿದೆ. ಟಿವಿಯಲ್ಲಿ ನೇರ ಪ್ರಸಾರ ಇರುತ್ತದೆ. ಹೊನಲು ಬೆಳಕಿನಲ್ಲಿ, ನೂರಾರು, ಒಮ್ಮೊಮ್ಮೆ ಸಾವಿರಾರು ಪ್ರೇಕ್ಷಕರ ನಡುವೆ ಆಡುವುದು ಯಾವುದೇ ಆಟಗಾರನ ಮನೋಸ್ಥೈರ್ಯ ಹೆಚ್ಚಿಸಲು ನೆರವಾಗಲಿದೆ.

* ನೀವು ಐಪಿಎಲ್ ಆಡಿದ್ದೀರಿ. ಇದಕ್ಕೆ ಕೆಪಿಎಲ್‌ನಲ್ಲಿ ಆಡಿದ್ದೇ ಕಾರಣ ಎಂದು ಅನಿಸುತ್ತಿದೆಯೇ?
ಕೆಪಿಎಲ್ ಮೂಲಕವೇ ನನಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಕ್ಕಿದ್ದು ಎಂದು ಹೇಳಬಲ್ಲೆ. ಐಪಿಎಲ್‌ನಂಥ ದೊಡ್ಡ ಟೂರ್ನಿಗಳಲ್ಲಿ ಆಡಲು ಕೆಪಿಎಲ್ ಹೆಬ್ಬಾಗಿಲು ಎಂಬುದಕ್ಕೆ ನಾನೇ ಉದಾಹರಣೆ.

* ಕಳೆದ ಬಾರಿಯೂ ಕೆಪಿಎಲ್‌ನಲ್ಲಿ ಆಡಿದ್ದೀರಿ. ಈಗಲೂ ಟೈಗರ್ಸ್ ತಂಡದಲ್ಲಿದ್ದೀರಿ. ಈ ಬಾರಿ ಏನಾದರೂ ವ್ಯತ್ಯಾಸ ಅನುಭವವಾಗುತ್ತಿದೆಯೇ?
ವ್ಯತ್ಯಾಸವೇನೂ ಇಲ್ಲ. ಪ್ರತಿಯೊಬ್ಬರಿಗೂ ಭರವಸೆ ಹೆಚ್ಚಾಗಿದೆ. ನನ್ನ ಮಟ್ಟಿಗೆ ಹೇಳುವುದಾದರೆ ಹೆಚ್ಚು  ಪರಿಣಾಮಕಾರಿ ಬೌಲಿಂಗ್  ಮಾಡಲು  ಸಾಧ್ಯವಾಗಿದೆ.  ಈ ಬಾರಿ  ಇಲ್ಲಿಯ  ವರೆಗೆ ಆಡಿದ ಪಂದ್ಯಗಳಲ್ಲಿ ತೃಪ್ತಿಕರ ಬೌಲಿಂಗ್‌ ಮಾಡಿದ್ದೇನೆ.

* ಕೆಪಿಎಲ್‌ನಲ್ಲಿ ಅಪರೂಪದ ಬೌಲರ್‌ಗಳಲ್ಲಿ ನೀವೂ ಒಬ್ಬರು. ಚೈನಾಮನ್ ಬೌಲಿಂಗ್‌ ಶೈಲಿ ಬಗ್ಗೆ ಏನು ಹೇಳುತ್ತೀರಿ?
ಇದು ವಿಶಿಷ್ಟ ಶೈಲಿಯ ಬೌಲಿಂಗ್‌. ಇದನ್ನು ನಾನು ರೂಢಿಸಿಕೊಂಡಿದ್ದೇನೆ. ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಇದು ಸಹಕಾರಿಯಾಗುತ್ತಿದೆ.

* ಸಾಂಪ್ರದಾಯಿಕ ಎಡಗೈ ಸ್ಪಿನ್‌ ಬೌಲಿಂಗ್‌ ಮೀರಿ ನಿಲ್ಲುವಂಥದ್ದು ಚೈನಾಮನ್‌. ನೀವು ಈ ಶೈಲಿ ಮೂಲಕ ಪಿಚ್‌ನಲ್ಲಿ ಏನು ನಿರೀಕ್ಷೆ ಮಾಡುತ್ತೀರಿ?
ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್‌ ಗಳಿಸಬಾರದು ಮತ್ತು ಅವರ ವಿಕೆಟ್ ಪಡೆಯಬೇಕು ಎಂಬುದಷ್ಟೇ ನನ್ನ ಉದ್ದೇಶ. ಆದ್ದರಿಂದ ಲೈನ್ ಮತ್ತು ಲೆಂಗ್ತ್‌ನಲ್ಲಿ ನಿಖರತೆ ಕಾಪಾಡಿಕೊಳ್ಳಲು ಶ್ರಮಿಸುತ್ತಿರುತ್ತೇನೆ.

* ನಿಮ್ಮ ಬೌಲಿಂಗ್ ಶೈಲಿ ಗಮನಿಸಿದಾಗ ಚೆಂಡು ವೇಗವಾಗಿ ನುಗ್ಗುವುದು ಗಮನಕ್ಕೆ ಬರುತ್ತದೆ. ವಿಶೇಷ ಶೈಲಿ, ವೇಗವಾಗಿ ಚೆಂಡು ಎಸೆಯುವ ಮೂಲಕ ಬ್ಯಾಟ್ಸ್‌ಮನ್‌ನನ್ನು ಗಲಿಬಿಲಿಗೊಳಿಸಲು ಸಾಧ್ಯ ಎಂದೆನಿಸುತ್ತಿದೆಯೇ?
ಅದು ನನಗೆ ಗೊತ್ತಿಲ್ಲ. ಈ ಪ್ರಶ್ನೆಯನ್ನು ನನ್ನ ಎಸೆತಗಳನ್ನು ಎದುರಿಸಿದ ಬ್ಯಾಟ್ಸಮನ್‌ಗೇ ಕೇಳಬೇಕು.

* ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಾಡಿದಂತೆ, ನಾಲ್ಕು–ಐದು ದಿನಗಳ ಪಂದ್ಯಗಳಲ್ಲಿ ಚೈನಾಮನ್ ಬೌಲಿಂಗ್ ಮಾಡಿ ಪರಿಣಾಮ ಬೀರಬಹುದು ಎಂದೆನಿಸುತ್ತಿದೆಯೇ?
ಕ್ರಿಕೆಟ್‌ನ ಮಾದರಿ ಯಾವುದೇ ಆಗಿರಲಿ, ಚೈನಾಮನ್ ಬೌಲಿಂಗ್‌ ಮೂಲಕ ಪರಿಣಾಮ ಬೀರಬಹುದು ಎಂದು ನನ್ನ ಅನಿಸಿಕೆ. ನಾಲ್ಕು–ಐದು ದಿನಗಳ ಪಂದ್ಯಗಳಲ್ಲೂ ಲೈನ್ ಮತ್ತು ಲೆಂಗ್ತ್‌ ಉಳಿಸಿಕೊಳ್ಳುವುದಕ್ಕೂ ಅಭ್ಯಾಸ ನಡೆಯುತ್ತಿದೆ.

* ಇತರ ಸ್ಪಿನ್ನರ್‌ಗಳಿಗೆ ಹೋಲಿಸಿದರೆ ನಿಮ್ಮ ವಿಕೆಟ್ ಗಳಿಕೆ ಪ್ರಮಾಣ ಕಡಿಮೆ ಎಂದು ಅನಿಸುವುದಿಲ್ಲವೇ?
ಹಾಗೇನಿಲ್ಲ. ಪಂದ್ಯಗಳಲ್ಲಿ ನನ್ನ ಗುರಿ ಬೇರೆಯೇ ಇರುತ್ತದೆ. ಸಂದರ್ಭಕ್ಕೆ ತಕ್ಕಂತೆ ತಂಡ ಏನು ಬಯಸುತ್ತದೆಯೋ ಅದನ್ನು ಮಾಡುವುದು ನನ್ನ ಉದ್ದೇಶ.ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿ ರನ್‌ ಗಳಿಕೆಗೆ ಕಡಿವಾಣ ಹಾಕುವುದು ನನ್ನ ಮೊದಲ ಆದ್ಯತೆ.

* ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ‘ಮೈನರ್ ಕೌಂಟಿ’ಯಲ್ಲಿ ಆಡಿದ್ದೀರಿ. ಅಲ್ಲಿನ ಅನುಭವದ ಬಗ್ಗೆ ಹೇಳಿ?
ಇಂಗ್ಲೆಂಡ್‌ನಲ್ಲಿ ಗಳಿಸಿದ ಅನುಭವ ವಿಶೇಷವಾದದ್ದು. ವಿಭಿನ್ನ ಹವಾಮಾನದಲ್ಲಿ, ಭಿನ್ನ ಸನ್ನಿವೇಶದಲ್ಲಿ ಆಡಲು ಅವಕಾಶ ಲಭಿಸಿತು. ಅಲ್ಲಿ ಮೈದಾನ ಮತ್ತು ಚೆಂಡು ಸದಾ ಕೊಂಚ ನವೆಯಿಂದ ಕೂಡಿರುತ್ತದೆ. ಆದ್ದರಿಂದ ಅಲ್ಲಿ ಆಡುವಾಗ ಪರಿಸ್ಥಿತಿಯೇ ಭಿನ್ನವಾಗಿರುತ್ತದೆ. ಕೆಪಿಎಲ್‌, ಐಪಿಎಲ್‌ ಮುಂತಾದ ಟೂರ್ನಿಗಳಲ್ಲಿ ಆಡಿದ್ದರಿಂದ ಅಲ್ಲಿ ಆಡುವುದು ಸುಲಭವಾಯಿತು.

* ಮುಂದಿನ ಕೆಪಿಎಲ್‌ ಮತ್ತು ಭವಿಷ್ಯದಕ್ರಿಕೆಟ್‌ ಬಗ್ಗೆ ನಿಮ್ಮ ಗುರಿ ಏನು?
ಮುಂದೆಯೂ ಕೆಪಿಎಲ್ ಆಡಬೇಕು. ಉತ್ತಮ ಪ್ರದರ್ಶನ ನೀಡಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂಬುದು ನನ್ನ ಮಹತ್ವದ ಗುರಿ.

ಸ್ಪಿನ್‌ ಮೋಡಿಗಾರ ಕೌಶಿಕ್‌ ಬಗ್ಗೆ...
ಶಿವಿಲ್‌ ಕೌಶಿಕ್‌ ಅವರ ಮೂಲ ಪಂಜಾಬ್‌ನ ಗುರುದಾಸಪುರ. ಬೆಂಗಳೂರಿನ ಸೇಂಟ್ ಜೋಸೆಫ್‌ ವಾಣಿಜ್ಯ ಕಾಲೇಜಿನಲ್ಲಿ ಓದಿದ ಅವರಿಗೆ ಈಗ 21ರ ಹರೆಯ. ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದು ಏಳು ಪಂದ್ಯಗಳಿಂದ ಆರು ವಿಕೆಟ್ ಗಳಿಸಿದ್ದಾರೆ.

ಚೈನಾಮನ್ ಎಂದರೇನು?
ಎಡಗೈ ಸ್ಪಿನ್ನರ್‌ ಅಸಹಜ ಶೈಲಿಯಲ್ಲಿ ಬೌಲಿಂಗ್ ಮಾಡಿದರೆ ಅದನ್ನು ಚೈನಾಮನ್ ಎನ್ನಲಾಗುತ್ತದೆ. ಸಾಮಾನ್ಯವಾಗಿ ಎಡಗೈ ಸ್ಪಿನ್ನರ್ ಹಾಕಿದ ಎಸೆತ ಪಿಚ್‌ ಆದ ನಂತರ ಎಡದಿಂದ ಬಲಕ್ಕೆ ತಿರುವು ಪಡೆದುಕೊಳ್ಳುತ್ತದೆ (ಆಫ್‌ ಸ್ಪಿನ್ನರ್ ಹಾಕಿದ ಎಸೆತಕ್ಕೆ ಸಮ). 

ಆದರೆ ಚೈನಾಮನ್ ಶೈಲಿಯ ಎಸೆತ ಬಲದಿಂದ ಎಡಕ್ಕೆ ತಿರುವು ಪಡೆಯುತ್ತದೆ. ಲೆಗ್ ಸ್ಪಿನ್ನರ್ ಆಫ್ ಸ್ಪಿನ್ ಮಾಡಿದರೆ ಗೂಗ್ಲಿ ಎಂದು ಹೇಳುವಂತೆ ಚೈನಾಮನ್ ಬೌಲಿಂಗ್‌ ಅನ್ನು ಕೂಡ ಗೂಗ್ಲಿ ಎಂದು ಕರೆಯಲಾಗುತ್ತದೆ. ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಬ್ರಾಡ್ ಹಾಗ್ ಈ ಶೈಲಿಯ ಬೌಲಿಂಗ್ ಮಾಡುವುದರಲ್ಲಿ ನಿಪುಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT