ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಆಡದಿದ್ದರೇನು, ಸಾಮರ್ಥ್ಯವಿಲ್ಲವೇ?

Last Updated 25 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಭಾರತದ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಒಂದು ವಾರದಿಂದ ನಡೆಯುತ್ತಿರುವ ಬೆಳವಣಿಗೆಗಳು ಭಾರಿ ಚರ್ಚೆ ಹುಟ್ಟು ಹಾಕಿವೆ.  ಆಯ್ಕೆ ಸಮಿತಿಗೆ ಹೊಸದಾಗಿ ನೇಮಕವಾದ ಸದಸ್ಯರ ವಿಷಯವೂ ಇದರಲ್ಲೊಂದು. ಆಂಧ್ರಪ್ರದೇಶದ ಎಂ.ಎಸ್‌.ಕೆ ಪ್ರಸಾದ್ ಅವರು ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಗುಜರಾತ್‌ನ ದೇವಾಂಗ್‌ ಗಾಂಧಿ, ಪಂಜಾಬ್‌ನ ಶರಣದೀಪ್‌ ಸಿಂಗ್‌, ಮಹಾರಾಷ್ಟ್ರದ ಜತಿನ್‌ ಪರಾಂಜಪೆ ಮತ್ತು ರಾಜಸ್ತಾನದ ಗಗನ್‌ ಖೋಡಾ ಅವರು ಸದಸ್ಯರಾಗಿದ್ದಾರೆ.

ಇವರ ಆಯ್ಕೆಯನ್ನು ಬಿಸಿಸಿಐ ಖಚಿತಪಡಿಸುತ್ತಿದ್ದಂತೆಯೇ ಸಾಮಾಜಿಕ ಜಾಲ ತಾಣಗಳಲ್ಲಿ ಟೀಕಾ ಪ್ರಹಾರವೇ ಶುರುವಾಯಿತು. ‘ಒಂದೂ ಟೆಸ್ಟ್ ಆಡದ ಗಗನ್‌ ಖೋಡಾ ಮತ್ತು ಜತಿನ್‌ ಅವರಿಂದ ಉತ್ತಮ ಟೆಸ್ಟ್‌ ತಂಡದ  ಆಯ್ಕೆ ನಿರೀಕ್ಷೆ ಮಾಡುವುದಾದರೂ ಹೇಗೆ’ ಎನ್ನುವ ಪ್ರಶ್ನೆಗಳೂ ಉದ್ಭವವಾದವು.

ಆದರೆ ಮೊದಲೆಲ್ಲಾ ಇಂಥ ಟೀಕೆಗಳು ಕೇಳಿಬರುತ್ತಿರಲಿಲ್ಲ. ಏಕೆಂದರೆ ವಲಯವನ್ನು ಪ್ರತಿನಿಧಿಸುವ ಸದಸ್ಯರಿಗೆ ಒಂದೊಂದು ಅವಧಿಗೆ ಆಯ್ಕೆ ಸಮಿತಿಯಲ್ಲಿ  ಸ್ಥಾನ ಪಡೆಯಲು ಅವಕಾಶವಿತ್ತು. ಆದರೆ ಈಗ ಲೋಧಾ ಶಿಫಾರಸಿನಂತೆಯೇ ಎಲ್ಲಾ ಸಮಿತಿಗಳನ್ನು ನೇಮಕ ಮಾಡಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ.

ಸಮಿತಿಗೆ ಆಯ್ಕೆಯಾಗ ಬಯಸುವವರು 60 ವರ್ಷ ಮೇಲ್ಪಟ್ಟವ ರಾಗಿರಬಾರದು.  ಸ್ಪರ್ಧಾತ್ಮಕ  ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಕನಿಷ್ಠ ಐದು ವರ್ಷಗಳಾದರೂ ಆಗಿರಬೇಕು.ಐಪಿಎಲ್‌ ತಂಡದ ಜೊತೆ ನಂಟು ಹೊಂದಿರಬಾರದು. ಯಾವುದೇ ಕ್ರಿಕೆಟ್‌ ಅಕಾಡೆಮಿ ಮತ್ತು  ಕ್ಲಬ್‌ಗಳಲ್ಲಿ ಪಾಲುದಾರರಾಗಿರಬಾರದು ಎನ್ನುವ ಷರತ್ತುಗಳನ್ನು ಹಾಕಿಯೇ ಬಿಸಿಸಿಐ ಈ ಬಾರಿಯ ಆಯ್ಕೆ ಸಮಿತಿಗೆ ಅರ್ಜಿ ಕರೆದಿತ್ತು.

ಆಯ್ಕೆ ಸಮಿತಿ ಎಂದಾಕ್ಷಣ ಮೊದಲು ನೆನಪಾಗುವುದೇ ಮುಂಬೈ.  ಸಮಿತಿಯ ಮುಖ್ಯಸ್ಥ ಸ್ಥಾನ ಬಹುತೇಕ ಸಲ ‘ಕ್ರಿಕೆಟ್‌ ರಾಜಧಾನಿ’ ಎನಿಸಿರುವ ಮುಂಬೈ ಕೈಯಲ್ಲಿಯೇ ಇರುತ್ತಿತ್ತು. ಆದರೆ ಲೋಧಾ ಸಮಿತಿಯ ಷರತ್ತುಗಳನ್ನು ಒಪ್ಪಿಕೊಂಡು ಈಗ ಆಯ್ಕೆ ಸಮಿತಿಯಲ್ಲಿರಲು ಬಹುತೇಕ  ಕ್ರಿಕೆಟಿಗರಿಗೆ ಇಷ್ಟವಿಲ್ಲ. ಆದ್ದರಿಂದ ಈ ಬಾರಿ ಹೆಸರಾಂತ ಯಾವ ಕ್ರಿಕೆಟಿಗರೂ ಅರ್ಜಿ ಸಲ್ಲಿಸಿರಲಿಲ್ಲ. ಆದ್ದರಿಂದ ಬಿಸಿಸಿಐ ಅನಿವಾರ್ಯವಾಗಿ ಟೆಸ್ಟ್ ಆಡದವರಿಗೂ ಆಯ್ಕೆ ಸಮಿತಿಯಲ್ಲಿ ಮಣೆ ಹಾಕಿದೆ. ಇದೇ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಪ್ರತಿಭೆಯಿಲ್ಲವೇನು?
ಈಗಿನ ಆಯ್ಕೆ ಸಮಿತಿಯಲ್ಲಿ ಇರುವವರು ದುರ್ಬಲರು. ಅವರಲ್ಲಿ ಒಬ್ಬರೂ ಹತ್ತಕ್ಕಿಂತ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಿಯೇ ಇಲ್ಲ. ಹೆಚ್ಚು ಪಂದ್ಯಗಳಲ್ಲಿ ಆಡಿದವರಷ್ಟೇ ಉತ್ತಮ ತಂಡವನ್ನು ಆಯ್ಕೆ ಮಾಡಬಲ್ಲರು ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿವೆ. ಹಾಗಾದರೇ ಈಗಿನ ಆಯ್ಕೆ ಸಮಿತಿಯಲ್ಲಿರುವವರಿಗೆ ಪ್ರತಿಭೆಯಿಲ್ಲವೇ?
ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯಲ್ಲಿದ್ದ ರಾಜಸ್ತಾನದ ರಾಜ್‌ಸಿಂಗ್ ದುಂಗರ್‌ಪುರ್‌ ಅವರು ಸಚಿನ್‌ ತೆಂಡೂಲ್ಕರ್‌ ಅವರಂಥ ಮೇರು ಪ್ರತಿಭೆಯನ್ನು 16ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದ್ದರು. ಆಗ ರಾಜ್‌ಸಿಂಗ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದರು. ಅಚ್ಚರಿಯೆಂದರೆ ಅವರು ಒಂದೂ  ಅಂತರರಾಷ್ಟ್ರೀಯ ಪಂದ್ಯವಾಡಿಲ್ಲ! ರಾಜ್‌ ಸಿಂಗ್‌  ಆಡಿದ್ದು 86 ಪ್ರಥಮ ದರ್ಜೆ ಪಂದ್ಯಗಳನ್ನಷ್ಟೇ.

ಅಂತರರಾಷ್ಟ್ರೀಯ ಪಂದ್ಯವಾಡಿಲ್ಲ ಎನ್ನುವ ಕಾರಣಕ್ಕಾಗಿ ರಾಜ್‌ ಸಿಂಗ್‌ ಅವರನ್ನು ಬಿಸಿಸಿಐ ಕಡೆಗಣಿಸಲಿಲ್ಲ. ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನದಲ್ಲಿ ಕೂರಿಸದೇ ಹೋಗಿದ್ದರೆ ಸಚಿನ್ 16ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.

ಈಗ ಮುಖ್ಯಸ್ಥರಾಗಿರುವ ಎಂಎಸ್‌ಕೆ ಪ್ರಸಾದ್‌ ಆಡಿದ್ದು ಆರು ಟೆಸ್ಟ್‌. 17 ಏಕದಿನ, 96 ಪ್ರಥಮ ದರ್ಜೆ ಪಂದ್ಯಗಳು. ಇವರಿಗೆ ವಿವಿಧ ಅಕಾಡೆಮಿಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಯ  ಆಯ್ಕೆ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಭಾರತ ತಂಡದ ಈಗಿನ ಆಟಗಾರರ ಬಲ, ದೌರ್ಬಲ್ಯಗಳ ಬಗ್ಗೆ ಚೆನ್ನಾಗಿ ಅರಿವಿದೆ.

ಉತ್ತಮ ಫಾರ್ಮ್‌, ಸ್ಥಿರ ಪ್ರದರ್ಶನ ನೀಡುತ್ತಿದ್ದರೆ ಆ ಆಟಗಾರನನ್ನು ಕಿತ್ತು ಹಾಕಲು ಯಾವ ಆಯ್ಕೆ ಸಮಿತಿ ತಾನೆ ಇಷ್ಟಪಡುತ್ತದೆ. ಕೇವಲ ಒಂದು ಪ್ರಥಮ ದರ್ಜೆ ಪಂದ್ಯವಾಡಿದ್ದರೂ ಅದ್ಭುತ ಪ್ರತಿಭೆ ಹೊಂದಿದ್ದ ಮಾಲ್ಕಮ್‌ ಮಾರ್ಷಲ್‌  ವೆಸ್ಟ್‌ ಇಂಡೀಸ್ ತಂಡದಲ್ಲಿ ಸ್ಥಾನ ಗಳಿಸಲಿಲ್ಲವೇ?

ಹೆಚ್ಚು ಪಂದ್ಯಗಳನ್ನು ಆಡಿದವರು ಮಾತ್ರ ಉತ್ತಮ ತಂಡ ಆಯ್ಕೆ ಮಾಡಬಲ್ಲರು ಎನ್ನುವುದು ಎಲ್ಲಾ ಕಾಲಕ್ಕೂ ಒಪ್ಪುವಂಥದ್ದಲ್ಲ.  ಹೆಚ್ಚು ಪಂದ್ಯಗಳನ್ನು ಆಡಿದ ಅನುಭವಿಗಳು ಆಯ್ಕೆ ಸಮಿತಿಯಲ್ಲಿದ್ದಾಗಲೂ ಅದೆಷ್ಟೋ ಪ್ರತಿಭಾನ್ವಿತ ಕ್ರಿಕೆಟಿಗರಿಗೆ ಅನ್ಯಾಯವಾದ ಉದಾಹರಣೆಗಳೂ ಇವೆ.

ಹೈದಾರಾಬಾದ್‌ನ ಹೆಸರಾಂತ ಆಫ್‌ ಸ್ಪಿನ್ನರ್‌ ಗುಲಾಮ್‌ ಅಹ್ಮದ್‌ ನಿಮಗೆ ನೆನಪಿರಬೇಕಲ್ಲವೇ. ಇವರ ವಿಷಯದಲ್ಲಿ ಆಯ್ಕೆ ಸಮಿತಿ ನಡೆದುಕೊಂಡಿದ್ದಾದರೂ ಹೇಗೆ ಗೊತ್ತೇ?
1940ರ ದಶಕದಲ್ಲಿ ಟೆಸ್ಟ್ ಪಂದ್ಯಗಳು ನಡೆಯುತ್ತಿದ್ದದ್ದೇ ಕಡಿಮೆ. ಆಗ ರಣಜಿಯಂಥ ಪ್ರತಿಷ್ಠಿತ ದೇಶಿ ಟೂರ್ನಿಯಲ್ಲಿ ಸ್ಥಾನ ಪಡೆಯುವುದೇ ದೊಡ್ಡ ಸಾಧನೆಯಾಗಿರುತ್ತಿತ್ತು.

1942–43ರ ರಣಜಿ ಟೂರ್ನಿಯಲ್ಲಿ ಆಂಧ್ರಪ್ರದೇಶ ತಂಡದಲ್ಲಿ ಸ್ಥಾನ ಗಳಿಸಿ ಆ ಋತುವಿನಲ್ಲಿ ಹೆಚ್ಚು ವಿಕೆಟ್‌ ಪಡೆದ ಬೌಲರ್ ಎನ್ನುವ ಕೀರ್ತಿಗೆ ಅಹ್ಮದ್‌ ಪಾತ್ರರಾಗಿದ್ದರು.ಆದರೂ ನಂತರದ ನಾಲ್ಕು ವರ್ಷ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಲಭಿಸಲಿಲ್ಲ.

1946ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಅನುಭವಿ ಆಫ್‌ ಸ್ಪಿನ್ನರ್‌ ಒಬ್ಬರು ತಂಡಕ್ಕೆ ಬೇಕಾಗಿದ್ದರು. ಆದರೆ ಆಯ್ಕೆ ಸಮಿತಿ ಅಹ್ಮದ್ ಬದಲು ಚಂದು ಸರ್ವಾಟೆ  ಅವರಿಗೆ ಮಣೆ ಹಾಕಿತ್ತು. ನಂತರದ ವರ್ಷದಲ್ಲಿಯೇ ಲಾಲಾ ಅಮರನಾಥ್ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತು. ಆಗಲೂ ಅಹ್ಮದ್‌ಗೆ ಅವಕಾಶ ಲಭಿಸಲಿಲ್ಲ. ಆ ಸರಣಿಯಲ್ಲಿ ಆಸ್ಟ್ರೇಲಿಯಾದ ಆಫ್‌ ಸ್ಪಿನ್ನರ್‌ ಇಯಾನ್ ಜಾನ್ಸನ್‌ 16 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರಿಂದ ಆಸ್ಟ್ರೇಲಿಯಾ ಐದು ಪಂದ್ಯಗಳ ಸರಣಿಯನ್ನು 4–0ರಲ್ಲಿ ಗೆದ್ದುಕೊಂಡಿತ್ತು. ಇದರಿಂದ ಬಿಸಿಸಿಐ ಆಯ್ಕೆ ಸಮಿತಿ ಕೈಕೈ ಹಿಸುಕಿಕೊಳ್ಳುವಂತಾಗಿತ್ತು.

ಆಯ್ಕೆ ಸಮಿತಿಯೇ ಅಂತಿಮವಲ್ಲ
ಹೇಮು ರಾಮಚಂದ್ರ ಅಧಿಕಾರಿ ಭಾರತ ತಂಡದ ನಾಯಕರಾಗಿದ್ದ ಕಾಲವದು.ಹೇಮು ಒಂದು ಪಂದ್ಯಕ್ಕಷ್ಟೇ ತಂಡವನ್ನು ಮುನ್ನಡೆಸಿದ್ದರು. ನಂತರ ಅವರನ್ನು ಕಿತ್ತು ಹಾಕಿ ನಿವೃತ್ತಿಯಾಗಿದ್ದ ಅಹ್ಮದ್ ಅವರನ್ನು ಮತ್ತೆ ರಾಷ್ಟ್ರೀಯ ತಂಡಕ್ಕೆ ತರಲು ಆಗಿನ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಲಾಲಾ ಅಮರನಾಥ್‌ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು.

ಈ ವೇಳೆ ಮಧ್ಯಪ್ರವೇಶಿಸಿದ್ದ ಬಿಸಿಸಿಐ  ಅಮರನಾಥ್‌ ಅವರ ನಿರ್ಧಾರವನ್ನೂ ಧಿಕ್ಕರಿಸಿ  ದತ್ತಾಜಿರಾವ್ ಗಾಯಕವಾಡ್‌ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಿ ಅಚ್ಚರಿ ಮೂಡಿಸಿತ್ತು. ಅದು ದತ್ತಾಜಿರಾವ್‌ ಅವರಿಗೆ ಬಯಸದೇ ಬಂದ ಭಾಗ್ಯ.

ಇದರಲ್ಲಿ ಬಿಸಿಸಿಐ ಹಸ್ತಕ್ಷೇಪ ಇದ್ದದ್ದನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ದತ್ತಾಜಿರಾವ್‌ ಅವರು ಆಗಷ್ಟೇ ಆರು ಪಂದ್ಯಗಳನ್ನು ಆಡಿದ್ದರು.  ತಂಡದಲ್ಲಿ ಅವರ ಸ್ಥಾನವೇ ಅಭದ್ರವಾಗಿದ್ದಾಗ ನಾಯಕನಾದ ಅದೃಷ್ಟ ಅವರದ್ದು! ಆಗಿನ ತಂಡದಲ್ಲಿ ಅನುಭವಿ ಆಟಗಾರರಿದ್ದರೂ ಬರೋಡ ಮಹಾರಾಜರ ಶಿಫಾರಸಿನಂತೆ ಬರೋಡದವರೇ ಆದ ದತ್ತಾಜಿರಾವ್‌ ಅವರನ್ನು ನಾಯಕರನ್ನಾಗಿ ನೇಮಿಸಲಾಗಿತ್ತು ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.

ಈಗಿನ ಸಮಿತಿಯಲ್ಲಿಯೂ ಹೆಚ್ಚು ಬದಲಾವಣೆಯೇನೂ ಆಗಿಲ್ಲ.  ಬಲಿಷ್ಠ ಕ್ರಿಕೆಟಿಗರು ಫಾರ್ಮ್‌ ಕಳೆದುಕೊಂಡಾಗ ಅವರನ್ನು ತಂಡದಿಂದ ಕೈಬಿಡಲು ಹಿಂದೇಟು ಹಾಕಿದ ಉದಾಹರಣೆಗಳು ಸಾಕಷ್ಟಿವೆ. ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಹೋದ ವಾರ ನಿವೃತ್ತಿಯಾದ ಸಂದೀಪ್‌ ಪಾಟೀಲ್‌, ‘ಆಯ್ಕೆ ಸಮಿತಿಯಲ್ಲಿ ಕೆಲಸ ಮಾಡಿದ್ದಕ್ಕೆ ಸಂತೋಷವಿದೆ. ಆದರೆ ಈ ಕೆಲಸದಿಂದಾಗಿ ಹಲವರ ಸ್ನೇಹ ಕಳೆದುಕೊಂಡ ಬೇಸರವೇ ಹೆಚ್ಚಿದೆ’ ಎಂದ ಮಾತು ಇದಕ್ಕೊಂದು ನಿದರ್ಶನ.

ದಿಟ್ಟ ನಿರ್ಧಾರಕ್ಕೆ ಹಿಂದೇಟು ಬೇಡ
ಈಗಿನ ಆಯ್ಕೆ ಸಮಿತಿಯಲ್ಲಿರುವ ಸದಸ್ಯರೆಲ್ಲರೂ ಸೇರಿ ಆಡಿದ್ದು ಒಟ್ಟು 13 ಟೆಸ್ಟ್‌. 31 ಏಕದಿನ ಪಂದ್ಯಗಳಷ್ಟೇ. ಆದರೂ ಕಳಪೆ ಫಾರ್ಮ್ ಹೊಂದಿರುವ ಆಟಗಾರರನ್ನು ತಂಡದಿಂದ ಕಿತ್ತು ಹಾಕಲು ಈ ಯಾವ ಅಂಕಿಸಂಖ್ಯೆಯೂ ಅಡ್ಡಿಯಾಗುವುದಿಲ್ಲ. ತಂಡದ ಹಿತದೃಷ್ಟಿಯಿಂದ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೊಸ ಆಯ್ಕೆ ಸಮಿತಿ ಹಿಂದೇಟು ಹಾಕಬಾರದು.

ವಿವಿಧ ವಲಯಗಳ ಕ್ರಿಕೆಟ್ ಸಂಸ್ಥೆಗಳ ಒತ್ತಾಯ ಮತ್ತು ಬಿಸಿಸಿಐನ ಹಸ್ತಕ್ಷೇಪ ಎಲ್ಲವನ್ನೂ ಮೀರಿ ಆಯ್ಕೆ ಸಮಿತಿ ಕೆಲಸ ಮಾಡಲಿ. ಆದರೆ ಸಮಿತಿಯ ಸದಸ್ಯರ ನಡುವೇ ಒಡಕು ಮೂಡದಿರಲಿ. ಏಕೆಂದರೆ ಹಿಂದೆ ಆಯ್ಕೆ ಸಮಿತಿಯ ಸದಸ್ಯರ ನಡುವೆಯೇ ಭಿನ್ನಾಭಿಪ್ರಾಯ ಮೂಡಿ ಬೇರೆಯವರು ಲಾಭ ಮಾಡಿಕೊಂಡ ನಿದರ್ಶನಗಳೂ ಇವೆ.

1970–71ರಲ್ಲಿ ವೆಸ್ಟ್‌ ಇಂಡೀಸ್ ಪ್ರವಾಸಕ್ಕೆ ತೆರಳುವಾಗ ಭಾರತ ತಂಡಕ್ಕೆ ಯಾರನ್ನು ನಾಯಕರನ್ನಾಗಿ ಆಯ್ಕೆ ಮಾಡಬೇಕೆಂದು ಜೋರು ಚರ್ಚೆ ನಡೆದಿತ್ತು.ಆಗ ಆಯ್ಕೆ ಸಮಿತಿ ಸದಸ್ಯರ ನಡುವೆಯೇ ಒಮ್ಮತವಿರಲಿಲ್ಲ. ಆದ್ದರಿಂದ ನಾಯಕನ ಆಯ್ಕೆಗೆ ಸದಸ್ಯರ ನಡುವೆಯೇ ಚುನಾವಣೆ ನಡೆದಿತ್ತು. ಆದರೆ ಆಗಿನ ಸಮಿತಿಯಲ್ಲಿದ್ದ ದತ್ತಾ ರೇ ಅವರೇ ಅಂದಿನ ಸಭೆಗೆ ಗೈರಾಗಿ ಪರೋಕ್ಷ ಅಸಹಕಾರ ತೋರಿದ್ದರು.

ಈ ರೀತಿ ಆಗದಂತೆ ಈಗಿನ ಸಮಿತಿ ಎಚ್ಚರಿಕೆ ವಹಿಸಬೇಕು.ಒಬ್ಬ ಆಟಗಾರನ ಹಿತಕ್ಕಿಂತ ತಂಡದ ಯಶಸ್ಸು ಮುಖ್ಯ ಎಂಬುದನ್ನು ಅರಿತುಕೊಳ್ಳಲಿ. ಇದರಿಂದ ಆಯ್ಕೆ ಸಮಿತಿ ಮೇಲೆ ಜನರು ಇಟ್ಟಿರುವ ನಂಬಿಕೆ ಹೆಚ್ಚಾಗುತ್ತದೆ. ಸಮಿತಿಯ ಗೌರವವೂ ಇಮ್ಮಡಿಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT