ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯವಂತ ಮರಗಳಿಗೇ ಕೊಡಲಿ ಪೆಟ್ಟು!

ವೃಕ್ಷಗಳು ಶಿಥಲಗೊಂಡಿವೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನೆಪ
Last Updated 25 ಸೆಪ್ಟೆಂಬರ್ 2016, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಯ ಎರಡು ಬದಿಗಳಲ್ಲೂ ಸಮೃದ್ಧವಾಗಿ ಬೆಳೆದ ಸಾಲು ಸಾಲು ಮರಗಳು. ಕತ್ತೆತ್ತಿ ನೋಡುವಂಥ ಹೆಮ್ಮರಗಳು. ಸುಮಾರು 40 ವರ್ಷಗಳಿಂದಲೂ ಬಗೆಬಗೆ ಪಕ್ಷಿಗಳಿಗೆ ಗೂಡು ಕಟ್ಟಿ ಸಂಸಾರ ನಡೆಸಲು ಆಸರೆಯಾಗಿವೆ. ಈ ಮರಗಳ ನೆರಳಲ್ಲಿ ಚಿಲ್ಲರೆ ಅಂಗಡಿಗಳನ್ನು ಹಾಕಿಕೊಂಡು ಜೀವನ ಬಂಡಿ ಸಾಗಿಸುತ್ತಿರುವ ಕುಟುಂಬಗಳೂ ಉಂಟು. ಇಂಥ ಆರೋಗ್ಯವಂತ ವೃಕ್ಷಗಳಿಗೆ ಕೊಡಲಿ ಏಟು ಹಾಕಲು ಮುಂದಾಗಿದೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ).

ಟೆಂಡರ್‌ ಶ್ಯೂರ್‌ ಕಾಮಗಾರಿಗಾಗಿ ನೃಪತುಂಗ ರಸ್ತೆಯಲ್ಲಿ ಮರಗಳ ಹನನಕ್ಕೆ ಮುಂದಾಗಿದ್ದ ಬಿಬಿಎಂಪಿ, ಪರಿಸರವಾದಿಗಳ ಪ್ರತಿಭಟನೆಗೆ ಮಣಿದು, 18 ಮರಗಳಿಗೆ ಬದಲಾಗಿ 5 ಮರಗಳನ್ನು ಕಡಿಯಲು ನಿರ್ಧರಿಸಿದೆ.  

ಮರಗಳು ಶಿಥಿಲಗೊಂಡಿವೆ ಎಂಬ ನೆಪವೊಡ್ಡಿ ಆರೋಗ್ಯವಂತ ಮರಗಳನ್ನು ಕತ್ತರಿಸಲು ತೀರ್ಮಾನಿಸಲಾಗಿದೆ.  ಒಂದು ಹುಣಸೆ ಹಾಗೂ ಮಾವಿನ ಮರದ ಬುಡದ ಬಳಿಯಷ್ಟೇ ಹುಳುಗಳು ತಿಂದಿವೆ. ಅವು  ಸಂಪೂರ್ಣ ಶಿಥಿಲಗೊಂಡಿಲ್ಲ. ಹಸಿರು ಇಲ್ಲದ ಒಂದು ಮರ ಸಹ ಕಾಣುವುದಿಲ್ಲ.  ವಾಹನಗಳ ದಟ್ಟಣೆ ಕಿರಿಕಿರಿಯಲ್ಲೂ, ಪಾದಚಾರಿಗಳು ಬಿಸಿಲಿನಿಂದ ರಕ್ಷಣೆ ಪಡೆಯಲು ಕ್ಷಣ ಕಾಲ ಮರದ ನೆರಳಲ್ಲಿ ನಿಲ್ಲಬೇಕು ಎನಿಸುತ್ತದೆ.
ಇಂಟರ್ನೆಟ್‌, ದೂರವಾಣಿ ಕೇಬಲ್‌ಗಳು, ನೀರಿನ ಪೈಪ್‌ಲೈನ್ ಸಹ ಫುಟ್‌ಪಾತ್‌ನ ಕೆಳಗೆ ಹಾದು ಹೋಗುತ್ತವೆ. ಗುಂಡಿಯ ತಳಪಾಯಕ್ಕೆ ಕಾಂಕ್ರೀಟ್‌  ಹಾಕುತ್ತಿರುವುದರಿಂದ ಮರಗಳ ಬೇರುಗಳಿಗೂ ತೊಂದರೆಯಾಗಲಿದೆ.

ರಸ್ತೆಯ ಸೊಬಗನ್ನು ಹೆಚ್ಚಿಸುತ್ತಿರುವ ಇಂಥ  ಮರಗಳ ನಾಶಕ್ಕೆ ಬಿಬಿಎಂಪಿ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ನೂರಾರು ವರ್ಷಗಳು ಬೆಳೆಯುತ್ತವೆ ‘ನಗರದಲ್ಲಿ ಇರುವ ಮರಗಳು ನೂರಾರು ವರ್ಷಗಳು ಬಾಳುತ್ತವೆ.  ಅವು ಮನುಷ್ಯರಂತೆ ಬೇಗ ಮುಪ್ಪಾಗುವುದಿಲ್ಲ. ಅರಳಿ, ಹುಣಸೆ, ಆಲದ ಮರಗಳು ಇದಕ್ಕೆ ಉದಾಹರಣೆ. ಎಲ್ಲೊ ಒಂದು ಮರಕ್ಕೆ ರೋಗ ತಗುಲಿದರೆ ಅಥವಾ ಬೇರು  ದುರ್ಬಲಗೊಂಡರೆ ಬೀಳಬಹುದು ಅಷ್ಟೇ. ಉಳಿದಂತೆ ಈಗಿರುವ ಮರಗಳು 300ಕ್ಕೂ ಹೆಚ್ಚು ವರ್ಷ ಬದುಕುತ್ತವೆ’ ಎನ್ನುತ್ತಾರೆ ನಿವೃತ್ತ ಅರಣ್ಯಾಧಿಕಾರಿ ಎಸ್‌.ಜಿ. ನೇಗಿನಹಾಳ.

‘1982ರಿಂದ 87ರ ಅವಧಿಯಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಹಾಕಿದ್ದೆವು. ಈಗ ಅವುಗಳೆಲ್ಲ ಬೆಳೆದು ಹೆಮ್ಮರವಾಗಿವೆ. ರಸ್ತೆ ಅಗಲೀಕರಣ, ಮೆಟ್ರೊ ಕಾಮಗಾರಿ ಸೇರಿದಂತೆ ಅಭಿವೃದ್ಧಿ ಹೆಸರಲ್ಲಿ ಶೇ 25 ರಷ್ಟು ಮರಗಳು ಬಲಿಯಾಗಿವೆ. ಶಿಥಿಲಾವಸ್ಥೆ ನೆಪವೊಡ್ಡಿ ಮರಗಳಿಗೆ ಕೊಡಲಿ ಏಟು ಹಾಕುತ್ತಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವ್ಯಾಪಾರಿಗಳಿಗೆ ನೆರಳಿಲ್ಲ! ಈ ರಸ್ತೆಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ  ಎದುರು ಕಳೆದ 40 ವರ್ಷಗಳಿಂದ ಚಿಲ್ಲರೆ ಅಂಗಡಿ, ಹೋಟೆಲ್‌ ನಡೆಸುವ  ವ್ಯಾಪಾರಿಗಳಿದ್ದಾರೆ. ಇವರಿಗೆಲ್ಲ ಇಲ್ಲಿನ ಸಾಲು ಮರಗಳೇ ಆಸರೆಯಾಗಿದ್ದವು.

ಆದರೀಗ ಮರ ಕಡಿಯುವುದರಿಂದ ನೆರಳಿನ ಆಸರೆಯಿಂದ ವಂಚಿತರಾಗುತ್ತೇವೆ ಎಂಬ ಆತಂಕದಲ್ಲಿದ್ದಾರೆ.

ನೇರ ಬೆಳೆಯುವ ಗಿಡಗಳಿರಲಿ: ನಗರ ಪ್ರದೇಶಗಳಿಗೆ ಎಂತಹ ಮರಗಳು ಸೂಕ್ತ ಎಂಬ ಬಗ್ಗೆ ಮರ ವಿಜ್ಞಾನಿ ಆಶುತೋಷ್‌ ಶ್ರೀವಾತ್ಸವ್‌ ಕೆಲ ಮಾಹಿತಿ ನೀಡಿದ್ದಾರೆ.

‘ವಿದೇಶಗಳಿಂದ ತಂದ ಮರಗಳು ನಮ್ಮ ಮಣ್ಣಿನ ಗುಣಕ್ಕೆ ಹೊಂದದೆ ಬೇಗ  ದುರ್ಬಲಗೊಳ್ಳುತ್ತವೆ. ಸಂಕೇಶ್ವರ, ಸಾರ್ಕೆಡ್‌ ಮರಗಳು ನೋಡಲು ಚೆನ್ನಾಗಿ ಕಂಡರೂ, ಒಳಗೆ ಹುಳು ತಿಂದು ಟೊಳ್ಳಾಗಿರುತ್ತವೆ. ಮಳೆ, ಗಾಳಿಗೆ ಬೀಳುವ ಸಂಭವವಿರುತ್ತದೆ’ ಎಂದು ಅವರು ಹೇಳಿದರು.

‘ವಿಸ್ತಾರವಾಗಿ ಹರಡುವ ಗಿಡಗಳನ್ನು ಹಾಕುವುದರಿಂದ ಕೊಂಬೆಗಳು ರಸ್ತೆಯ ಮೇಲೆ ಹರಡಿಕೊಳ್ಳುತ್ತವೆ. ಎರಡೂ ಬದಿಯ ಮರಗಳ ವಿಸ್ತರಣೆಯಿಂದಾಗಿ ಸುರಂಗದ ಆಕಾರ ಪಡೆಯುತ್ತದೆ.  ಇದರಿಂದ ರಸ್ತೆಯಲ್ಲಿ ಕಾರ್ಬನ್‌ ಡೈ ಆಕ್ಸೈಡ್‌ ಹಾಗೆಯೇ ಉಳಿದು
ಕೊಳ್ಳುತ್ತದೆ.  ಹಾಗಾಗಿ ನೇರವಾಗಿ ಬೆಳೆಯುವ ಅಶೋಕ, ಸಿಲ್ವರ್‌, ಕದಂಬದಂಥ ತಳಿಗಳನ್ನು ಹಾಕಿದರೆ ಒಳ್ಳೆಯದು’ ಎಂದು ಸಲಹೆ ನೀಡಿದರು.
ನೃಪತುಂಗ ರಸ್ತೆಯಲ್ಲಿ ಗುಲ್‌ಮೊಹರ್‌, ಹೊಂಗೆ,  ಜಂಬೊಸಾ, ಮಾವು, ನಾಗಲಿಂಗ ಹೂ,  ರೈನ್‌ ಟ್ರೀ, ಹುಣಸೆ ಮರಗಳು ಕಂಡುಬರುತ್ತವೆ.

ಮಂಗಳವಾರ ಪ್ರತಿಭಟನೆ
ಟೆಂಡರ್‌ ಶ್ಯೂರ್‌ ಯೋಜನೆಯಡಿ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಗ್ರೀನ್‌ ಬೆಂಗಳೂರು ಕ್ಯಾಂಪೇನ್‌, ‘ಹಸಿರು ಉಸಿರು’ ಹಾಗೂ ಫೋರಂ ಫಾರ್‌ ಅರ್ಬನ್‌ ಅಂಡ್‌ ಕಾಮನ್ಸ್ ಸಂಘಟನೆಗಳ ಕಾರ್ಯಕರ್ತರು  ಸೆಪ್ಟೆಂಬರ್‌ 27ರಂದು ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ.

‘ಟೆಂಡರ್‌ ಶ್ಯೂರ್‌ ಯೋಜನೆ ಹೆಸರಿನಲ್ಲಿ ಅನಗತ್ಯವಾಗಿ ರಸ್ತೆ ಬದಿ ಮರಗಳನ್ನು ಕಡಿಯುತ್ತಿದ್ದಾರೆ. ಪಾದಚಾರಿ ಮಾರ್ಗದ ಕಾಮಗಾರಿಗಾಗಿ ಗುಂಡಿ ತೋಡಿದ್ದರಿಂದ ಮರಗಳ ಬೇರಿಗೆ ಹಾನಿಯಾಗಿದೆ ಎಂದು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳುತ್ತಿದ್ದಾರೆ. ಸಾರ್ವಜನಿಕರು ಮರ ಕಡಿದರೆ ದಂಡ ವಿಧಿಸುತ್ತಾರೆ. ಕಾಮಗಾರಿ ಮಾಡುತ್ತಿರುವ ಕಂಪೆನಿಗೆ ಯಾಕೆ ದಂಡ ವಿಧಿಸುವುದಿಲ್ಲ’ ಎಂದು ಪ್ರಶ್ನೆ ಮಾಡುತ್ತಾರೆ ಗ್ರೀನ್‌ ಬೆಂಗಳೂರು ಕ್ಯಾಂಪೇನ್‌ ಕಾರ್ಯಕರ್ತ ಈಶ್ವರಪ್ಪ.

* ನಮ್ಮ ತಂದೆಯ ಕಾಲದಿಂದಲೂ ಈ ಮರದ ನೆರಳಿನಲ್ಲಿ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಜೋಳಿಗೆ ಕಟ್ಟಿ ನನ್ನ ಮಕ್ಕಳನ್ನು ಬೆಳೆಸಿದ್ದೇನೆ. ಬಿಸಿಲಿಗೆ ಆಸರೆಯಾಗಿದ್ದ, ಹಲವು ವರ್ಷಗಳಿಂದ ಬದುಕಿಗೆ ನೆರಳಾಗಿದ್ದ ಮರಕ್ಕೆ ಕುತ್ತು ಬಂದಿದೆ. ದಯವಿಟ್ಟು  ಮರಗಳನ್ನು ಉಳಿಸಿ.

-ಶಾಂತಮ್ಮ,ಅಂಗಡಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT