ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜನ ಮಡದಿಗಿಲ್ಲ ಆನಂದ

ಕಲಾವಿದ ದಿ. ರಾಜಾನಂದ್ ಕುಟುಂಬಕ್ಕೆ ಬೇಕಿದೆ ನೆರವು
Last Updated 26 ಸೆಪ್ಟೆಂಬರ್ 2016, 9:39 IST
ಅಕ್ಷರ ಗಾತ್ರ

ತುಮಕೂರು: ಒಂದು ಅವಧಿಯಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿ ಮಿನುಗಿದ ಕೆಲವು ಕಲಾವಿದರು ತಮ್ಮ ಅಂತಿಮ ದಿನಗಳಲ್ಲಿ ಆರ್ಥಿಕ ಸಂಕಷ್ಟಗಳಿಂದ ಬಳಲಿದ್ದನ್ನು ಕಂಡಿದ್ದೇವೆ. ಕೆಲವು ಕಲಾವಿದರು ಮೃತಪಟ್ಟ ನಂತರ ಅವರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದನ್ನು ನೋಡಿದ್ದೇವೆ. ಈಗ ಈ ಪಟ್ಟಿಯಲ್ಲಿ ಕಾಣುತ್ತಿದೆ ಕಲಾವಿದ ರಾಜಾನಂದ್ ಕುಟುಂಬ. ರಾಜಾನಂದ್ ಅವರ ಪತ್ನಿ ವಿಮಲಮ್ಮ ತಮ್ಮ ಮುಪ್ಪಿನ ದಿನಗಳನ್ನು ದೂಡಲು ನೆರವು ಕೋರುತ್ತಿದ್ದಾರೆ.

  ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಹೀಗೆ ಕನ್ನಡದ ಮೇರು ನಟರ ಜೊತೆ ಪ್ರಮುಖ ಪೋಷಕ ಪಾತ್ರಗಳನ್ನು ಹಂಚಿಕೊಂಡ ಕಲಾವಿದ ರಾಜಾನಂದ್. ‘ಗುರುಶಿಷ್ಯರು’, ‘ಹುಲಿಹಾಲಿನ ಮೇವು’, ‘ದೇವ’, ‘ರಂಗನಾಯಕಿ’, ‘ಮಯೂರ’, ‘ಭಕ್ತ ಜ್ಞಾನದೇವ’ ಹೀಗೆ ನೂರಾರು ಸಿನಿಮಾಗಳಲ್ಲಿ ತಮ್ಮ ಕಂಚಿನ ಕಂಠದಿಂದ ಅಬ್ಬರಿಸಿ ಸಹೃದಯಿ ಪ್ರೇಕ್ಷಕರನ್ನು ಮೆಚ್ಚಿಸಿದ್ದರು.

ಅಲ್ಲದೆ ರಾಜಾನಂದ್‌, ‘ಜ್ಞಾನ ಬುತ್ತಿ’, ‘ವಚನ ರಸಾಯನ’, ‘ಕಬ್ಬಿಗ ದೈವಕ್ಕೆ ಕಬ್ಬಗಳ ಹಬ್ಬ’, ‘ಸಂಗೊಳ್ಳಿ ರಾಯಣ್ಣ’ ಸೇರಿದಂತೆ ಏಳು ಪುಸ್ತಕಗಳನ್ನು ಬರೆದಿದ್ದಾರೆ. ಇನ್ನೂ ಅಪ್ರಕಟಿತವಾಗಿ ಉಳಿದಿರುವ ಹಲವು ಕವನಗಳು, ನಾಟಕಗಳು ವಿಮಲಮ್ಮ ಅವರ ಬಳಿ ಇವೆ. ಪ್ರಕಾಶಕರು ನೆರವಿನ ಹಸ್ತಚಾಚಿದರೆ ಅವುಗಳನ್ನು ಪ್ರಕಟಿಸುವ ಆಸೆ ವಿಮಲಮ್ಮ ಅವರಿಗಿದೆ.

ಈ ಹಿರಿಯ ಕಲಾವಿದ 2004ರಲ್ಲಿ ಮೃತಪಟ್ಟ ನಂತರ ಅವರ ಪತ್ನಿ ವಿಮಲಮ್ಮ ಅವರ ಸ್ಥಿತಿಯೂ ದುರ್ಬರವಾಯಿತು. ಕೆಲವು ವರ್ಷಗಳ ಹಿಂದೆ ಮಗ ಮತ್ತು ಸೊಸೆಯೂ ತೀರಿಕೊಂಡರು. ಅವರಿಗೆ ಆರ್ಥಿಕ ಸಂಕಷ್ಟ ತೀವ್ರವಾಗಿಯೇ ತಟ್ಟಿದೆ. ಸದ್ಯ ಮೈಸೂರಿನಲ್ಲಿ ನೆಲೆಸಿರುವ ವಿಮಲಮ್ಮ ಅವರಿಗೆ ಮೊಮ್ಮಗನೇ ಆಸರೆ. ಪತಿ ಬರೆದ ಪುಸ್ತಕಗಳನ್ನು ಮಾರಾಟ ಮಾಡಿ ಬದುಕನ್ನು ಸಾಗಿಸಲು ಮುಂದಾದಾಗ ಕೆಲವು ವಂಚಕರಿಂದ ಹಣವನ್ನು ಕಳೆದುಕೊಂಡಿದ್ದಾರೆ.

‘ಮುದ್ರಣವಾಗಿ ಮನೆಯಲ್ಲಿರುವ ರಾಜಾನಂದ್‌ ಅವರ ಪುಸ್ತಕಗಳನ್ನು ಕೊಂಡುಕೊಂಡರೆ ಸಾಕು, ನನಗೆ ಯಾರೂ ಉಚಿತವಾಗಿ ಹಣ ನೀಡುವುದು ಬೇಡ’ ಎನ್ನುವಾಗ ವಿಮಲಮ್ಮ ಗದ್ಗದಿತರಾಗುವರು.

‘ಮೊಮ್ಮಗ ಒಂದು ಹೋಟೆಲ್‌ನಲ್ಲಿ ಕೆಲಸ ಮಾಡುವನು. ತಿಂಗಳಿಗೆ ₹ 6 ಸಾವಿರ ಸಂಬಳ ನೀಡುವರು. ಈ ಹಣದಿಂದಲೇ ನನ್ನ ಆರೋಗ್ಯ, ಮನೆ ನಡೆಯುತ್ತಿದೆ. ನಾನು ಆರೋಗ್ಯವಾಗಿದ್ದಾಗ ರಾಜಾನಂದ್ ಅವರು ಬರೆದ ಪುಸ್ತಕಗಳನ್ನು ಬಿಇಒ ಅವರಿಂದ ಅನುಮತಿ ಪಡೆದು ಶಾಲೆಗಳಲ್ಲಿ ಮಾರಾಟ ಮಾಡುತ್ತಿದ್ದೆ’ ಎಂದರು.
‘ವಿಜಯಪುರದಲ್ಲಿ ಹಿರೇಮಠ ಎಂಬುವ ವ್ಯಕ್ತಿಯೊಬ್ಬರು ಶಿಕ್ಷಣ ಇಲಾಖೆಯ ಆಯುಕ್ತರು ನನಗೆ ಪರಿಚಿತರು.

ನೇರವಾಗಿ ಶಿಕ್ಷಣ ಇಲಾಖೆಯಿಂದಲೇ ಪುಸ್ತಕಗಳನ್ನು ಕೊಳ್ಳುವಂತೆ ಮಾಡುತ್ತೇನೆ ಎಂದರು. ನನ್ನಿಂದ ₹ 25 ಸಾವಿರ ಹಣ ಪಡೆದರು. ಇದನ್ನು ನಂಬಿಕೊಂಡು ಆರೇಳು ಸಾವಿರ ಪುಸ್ತಕ  ಮುದ್ರಿಸಿದೆ. ಆದರೆ ಆ ವ್ಯಕ್ತಿಯಿಂದ ನಾನು ವಂಚನೆಗೆ ಒಳಗಾದೆ. ಸಾಲ ಮಾಡಿ ಈ ಪುಸ್ತಕಗಳನ್ನು ಮುದ್ರಿಸಿದ್ದೆ. ಇವು ಮಾರಾಟವಾದರೆ ಸಾಕು ನನ್ನ ಬದುಕಿಗೆ ಅನುಕೂಲವಾಗುತ್ತದೆ’ ಎಂದು ನೋವಿನಿಂದ ನುಡಿಯುವರು ವಿಮಲಮ್ಮ.

‘ನಮ್ಮ ಅಕ್ಕ ಬದುಕಿದ್ದಾಗ ಸಹಕಾರವಿತ್ತು. ಆಕೆ ತೀರಿದ ನಂತರ ಬದುಕು ಮತ್ತಷ್ಟು ಕಷ್ಟವಾಯಿತು. ನನಗೆ ಬೆನ್ನು, ಕಾಲು ನೋವು ಸೇರಿದಂತೆ ವಯೋ ಸಹಜ ರೋಗಗಳಿವೆ. ಚಿಕಿತ್ಸೆಗೂ ಕಷ್ಟವಾಗಿದೆ. ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಶಿವರಾಜ್‌ ಕುಮಾರ್ ನನ್ನನ್ನು ಕರೆಸಿದ್ದರು. ಚೆನ್ನಾಗಿ ಕಂಡರು’ ಎಂದು ದಾಂಪತ್ಯದ ಪುಟಗಳಲ್ಲಿನ ಕಷ್ಟದ ದಿನಗಳನ್ನು ನೆನಪು ಮಾಡಿಕೊಳ್ಳುವರು.

ಸಿದ್ದಗಂಗಾ ಮಠದಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿ ರಾಜಾನಂದ್ ಪಾತ್ರಗಳನ್ನು ಮಾಡುತ್ತಿದ್ದನ್ನು ನೆನಪಿಸಿಕೊಳ್ಳುವರು. ವಿಮಲಮ್ಮ ಅವರಿಗೆ ನೆರವು ನೀಡಬಯಸುವವರು ಅವರ ಮೊಬೈಲ್ ಸಂಖ್ಯೆ 9740708128 ಸಂಪರ್ಕಿಸಬಹುದು.

***
ಉಚಿತವಾಗಿ ಹಣ ನೀಡಿ ಎಂದು ಕೇಳುತ್ತಿಲ್ಲ. ರಾಜಾನಂದ್ ಅವರು ಬರೆದಿರುವ ಪುಸ್ತಕಗಳನ್ನು ಕೊಂಡುಕೊಂಡರೆ ಸಾಕು. ನನ್ನ ಬದುಕಿಗೆ ನೆರವಾಗುತ್ತದೆ.
-ವಿಮಲಮ್ಮ, ರಾಜಾನಂದ್ ಪತ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT