ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟೆ ಕಾಳಗ ನಡೆಯೋದು ಹೀಗೆ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕೋಳಿ ಅಂಕ, ಟಗರಿನ ಜಗಳ, ಗೂಳಿ ಕಾಳಗದ ಸ್ಪರ್ಧೆಗಳ ಕುರಿತು ಕೇಳಿದ್ದೇವೆ. ಆದರೆ ಟರ್ಕಿಯಲ್ಲಿ ಇವೆಲ್ಲಕ್ಕಿಂತ ಭಿನ್ನವಾಗಿ ಒಂದು ಸ್ಪರ್ಧೆ ನಡೆಯುತ್ತದೆ. ಅದು ಒಂಟೆ ಕಾಳಗ. ಟರ್ಕಿಯ ಏಗಿಯನ್‌ ಎಂಬಲ್ಲಿ ಹಲವಾರು ವರ್ಷಗಳಿಂದ ಒಂಟೆ ಕಾಳಗವನ್ನು ಕ್ರೀಡೆಯಂತೆ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಈ ಕಾಳಗಕ್ಕೆಂದೇ ವಿಶೇಷವಾಗಿ ‘ಟುಲು’ ಎಂಬ ತಳಿಯ ಒಂಟೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ಒಂಟೆ ಕಾಳಗಕ್ಕೆ ಟರ್ಕಿಯಲ್ಲಿ 2400 ವರ್ಷಗಳ ಇತಿಹಾಸವೇ ಇದೆ.ಪ್ರಾಚೀನ ಟರ್ಕಿಯ ಬುಡಕಟ್ಟು ಜನಾಂಗಗಳು ಈ ಕಾಳಗವನ್ನು ಆರಂಭಿಸಿದ್ದು. 1850ರಲ್ಲಿ ಅಮೆರಿಕದ ಮಿಲಿಟರಿ ಅಧಿಕಾರಿಯೊಬ್ಬರು ಈ ಒಂಟೆ ಕಾಳಗದ ಪ್ರಸಿದ್ಧಿಯಿಂದ ಸ್ಫೂರ್ತಿ ಪಡೆದು, ಟೆಕ್ಸಾಸ್‌ನಲ್ಲೂ ಒಂಟೆ ಕಾಳಗದ ಟೂರ್ನಮೆಂಟ್‌ ಆರಂಭಿಸಿದರು. ಆದರೆ ಹಲವು ಕಾರಣಗಳಿಂದ ಅದು ಯಶಸ್ವಿಯಾಗಲಿಲ್ಲ.

1920ರಲ್ಲಿ ಟರ್ಕಿಷ್ ನ್ಯಾಷನಲ್ ಏವಿಯೇಷನ್ ಲೀಗ್, ಸರ್ಕಾರಕ್ಕೆ ವಿಮಾನಗಳನ್ನು ಖರೀದಿಸಲೆಂದು ಹಣ ಒಟ್ಟುಗೂಡಿಸಲು ಒಂಟೆ ಕಾಳಗವನ್ನು ಆಯೋಜಿಸಿತ್ತು. ನಂತರ ಅದರ ಪ್ರಸಿದ್ಧಿ ಕ್ಷೀಣಿಸುತ್ತಾ ಬಂತು.1980ರಲ್ಲಿ ಮತ್ತೆ ಟರ್ಕಿ ಸರ್ಕಾರ ಐತಿಹಾಸಿಕ ಸಂಸ್ಕೃತಿ ಎಂಬಂತೆ ಈ ಸ್ಪರ್ಧೆಯನ್ನು ಪ್ರೋತ್ಸಾಹಿಸಲು ಆರಂಭಿಸಿತು.

ಈ ಸ್ಪರ್ಧೆಯನ್ನು ವರ್ಷದ ಆರಂಭ, ಎಂದರೆ ಜನವರಿಯಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಇದು ಒಂಟೆಗಳ ಮಿಲನದ ಕಾಲವಾದ್ದರಿಂದ ಹೆಣ್ಣು ಒಂಟೆಯನ್ನು ಮುಂದೆ ಇಟ್ಟು ಎರಡು ಗಂಡು ಒಂಟೆಗಳನ್ನು  ಕಾಳಗಕ್ಕೆ ಬಿಡಲಾಗುತ್ತದೆ. ಇತ್ತೀಚೆಗೆ ಹೆಣ್ಣು ಒಂಟೆಯನ್ನು ನಿಲ್ಲಿಸುವುದನ್ನು ಕೈಬಿಡಲಾಗಿದ್ದು, ಒಂಟೆಗಳಲ್ಲಿ ಆಕ್ರಮಣಶೀಲತೆಯನ್ನು ತುಂಬಲು ಅವುಗಳನ್ನು ಉಪವಾಸದಿಂದ ಇರಿಸಲಾಗುತ್ತದೆ. 

ಸಾಮಾನ್ಯವಾಗಿ ಹತ್ತನೇ ವಯಸ್ಸಿಗೆ ಒಂಟೆಗಳು ಕಾಳಗಕ್ಕೆ ಸಿದ್ಧವಾಗುತ್ತವೆ. ಒಂಟೆ ತನ್ನ ಕುತ್ತಿಗೆ ಬಳಸಿ ಜಗಳವಾಡುತ್ತ ವಿರೋಧಿಯನ್ನು ನೆಲಕ್ಕುರುಳಿಸುತ್ತದೆ. ಒಂಟೆ ನೆಲಕ್ಕುರುಳಿದರೆ ಅಥವಾ ಆ ಸ್ಥಳದಿಂದ ಓಡಿದರೆ ಅದು ಸೋತಂತೆ.

ಒಂಟೆಗಳನ್ನು ಜಗಳಕ್ಕೆ ಬಿಡುವ ಮುನ್ನ ಅವುಗಳನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಅಲಂಕೃತ ಚಾದರಗಳನ್ನು, ಗಂಟೆಗಳನ್ನು ಅವಕ್ಕೆ ತೊಡಿಸಲಾಗುತ್ತದೆ. ಕೊಳಲು, ಡ್ರಂ ನುಡಿಸುತ್ತಾ ಸಂಗೀತಗಾರರೂ ಒಂಟೆಗಳನ್ನು ಪ್ರೋತ್ಸಾಹಿಸುತ್ತಿರುತ್ತಾರೆ. ಇದರೊಂದಿಗೆ ಒಂಟೆಗಳ ಸೌಂದರ್ಯ ಸ್ಪರ್ಧೆಯನ್ನೂ ನಡೆಸಲಾಗುತ್ತದೆ. ಒಂಟೆ ಕಾಳಗ ಪ್ರವಾಸದ ಆಕರ್ಷಣೆ ಆಗಿದೆ.

2011ರ ವರದಿಯ ಪ್ರಕಾರ ಇದುವರೆಗೂ ಸುಮಾರು ಎರಡು ಸಾವಿರ ಟುಲು ಒಂಟೆಗಳನ್ನು ಕಾಳಗಕ್ಕೆಂದೇ ಅಭಿವೃದ್ಧಿಗೊಳಿಸಲಾಗಿದೆ. ಆದರೆ ಪ್ರಾಣಿ ದಯಾ ಸಂಸ್ಥೆಗಳು ಈ ಕಾಳಗವನ್ನು ವಿರೋಧಿಸಿರುವ ಕಾರಣ ಇತ್ತೀಚೆಗೆ ಇದರ ಪ್ರಾಮುಖ್ಯ ಕಡಿಮೆಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT