ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಓಣಂ ರಾಜಕೀಯ

ವಾಮನ ಜಯಂತಿ ವಿವಾದ ಕೇರಳದಲ್ಲಿ ಹೊಸ ರಾಜಕೀಯ ಧ್ರುವೀಕರಣಕ್ಕೆ ಎಡೆಮಾಡಿಕೊಡಬಹುದೇ?
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಮೊನ್ನೆ ಓಣಂ ಹಬ್ಬವನ್ನು ವಾಮನ ಜಯಂತಿಯೆಂದು ವ್ಯಾಖ್ಯಾನಿಸಿರುವುದು ಕೇರಳಿಗರಿಗೆ ದಿಗ್ಭ್ರಮೆ ಉಂಟುಮಾಡಿದ್ದು, ಹೊಸ ರಾಜಕೀಯ ವಿವಾದಕ್ಕೆ ಎಡೆಮಾಡಿದೆ.

ಮಲಯಾಳಿಗಳು ನಂಬುವಂತೆ ವಾಮನ ರಚಿತ ವ್ಯೂಹದಿಂದಾಗಿಯೇ ದೇಶಭ್ರಷ್ಟನಾಗಿದ್ದು, ಪ್ರತಿವರ್ಷ ಸ್ಥಳೀಯ ಕಾಲಮಾನದ ಪ್ರಕಾರ ‘ಚಿಂಗಂ’ ತಿಂಗಳಿನಂದು ತಾಯ್ನಾಡಿಗೆ ಆಗಮಿಸುವ ಬಲಿಯನ್ನು ಸ್ವಾಗತಿಸಲೆಂದೇ ಓಣಂ ಅನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಮಲಯಾಳಿ ಜನಪದ ಸಾಹಿತ್ಯದ ಪ್ರಕಾರ ಬಲಿಯ ಆಡಳಿತ ಮಲಬಾರ್‌ನ ಸುವರ್ಣಯುಗವಾಗಿತ್ತು. ಅವನ ರಾಜ್ಯದಲ್ಲಿ ಜಾತಿ, ಅಸಮಾನತೆ, ಬಡತನ ಇತ್ಯಾದಿ ಇರಲಿಲ್ಲವೆಂದು ಹಾಡುಗಬ್ಬಗಳ ಮೂಲಕ ಹೆಮ್ಮೆಪಟ್ಟುಕೊಳ್ಳುತ್ತಾರೆ.

ಸತ್ಯಸಂಧ, ನ್ಯಾಯಬೀರು ಮತ್ತು ಶಕ್ತಿಶಾಲಿ ರಾಜನಾಗಿದ್ದ ಬಲಿಯ ವಿರುದ್ಧ ಕುತಂತ್ರ ಮಾಡಲಾಯಿತೆಂಬುದು ಅವರ ನಂಬಿಕೆಯಾಗಿದೆ. ಬೆಂಗಳೂರಿನಲ್ಲಿ ದಿನಸಿ ಅಂಗಡಿಯಿಟ್ಟುಕೊಂಡಿರುವ ಮಲಯಾಳಿ ಯುವಕನೊಬ್ಬ ಹೇಳುವ ‘ಬಲಿಯ ರಾಜ್ಯದಲ್ಲಿ ಕಷ್ಟವೆಂಬುದೇ ಇರಲಿಲ್ಲ, ಹೀಗಾಗಿ, ಯಾರೂ ದೇವರನ್ನು ನೆನೆಯುತ್ತಿರಲಿಲ್ಲ! ಜನರು ತನ್ನನ್ನು ಪೂಜಿಸಬೇಕೆಂದೇ ದೇವರು ಬಲಿಯನ್ನು ಪಾತಾಳಕ್ಕೆ ಅಟ್ಟಿದನಂತೆ. ಆದರೆ, ತನ್ನ ಪ್ರಜೆಗಳ ಮೇಲಿನ ಪ್ರೀತಿಯಿಂದಾಗಿ ಬಲಿ ಓಣಂ ಹಬ್ಬದಲ್ಲಿ ನಾಡಿಗೆ ಬರುತ್ತಾನೆ. ಅವನನ್ನು ಸ್ವಾಗತಿಸಲೆಂದು ನಾವು ಹೂವುಗಳನ್ನು ಹರಡಿ, ರಂಗೋಲಿ ಹಾಕಿ ಓಣಂ ಆಚರಿಸುತ್ತೇವೆ’ ಎಂಬ ಮಾತುಗಳನ್ನು ಕೇಳಿದರೆ ರಾಜಕಾರಣಿಗಳು ತಮ್ಮ ನಿಗೂಢ ಕಾರ್ಯಸೂಚಿ ಜಾರಿಗೊಳಿಸುವ ಮುಂಚೆ ಒಮ್ಮೆಯಾದರೂ ಆತ್ಮವಿಮರ್ಶೆ ಮಾಡಿಕೊಳ್ಳಲೇಬೇಕು.

ಕೇಂದ್ರ ಸರ್ಕಾರವು ಓಣಂ, ಕೇರಳದ ರಾಷ್ಟ್ರೀಯ ಹಬ್ಬವೆಂದೇ ಘೋಷಿಸಿದೆ. ಮಲಯಾಳಿಗಳು ಜಾತಿ, ಮತ, ಪಂಥ ಭೇದವಿಲ್ಲದೆ ಓಣಂ ಆಚರಿಸುತ್ತಾರೆ. ಬಹುಶಃ ಓಣಂ, ದೇಶದಲ್ಲಿಯೇ ಸರ್ವಧರ್ಮೀಯರೂ ಸೇರಿ ಆಚರಿಸುವ ಏಕೈಕ ಸಾಂಸ್ಕೃತಿಕ ಹಬ್ಬವಾಗಿದೆ. ಮಲಯಾಳಿಗಳಿಗೆ ಸುಗ್ಗಿ ಹಬ್ಬವೂ ಆಗಿರುವ ಓಣಂನ ಮೊದಲ ದಿನ ‘ಅತ್ತಂ’ನಂದು ಜನ ತಮ್ಮ ಮನೆಯಂಗಳದಲ್ಲಿ ‘ಪೂಕಳಂ’ ಎಂಬ ವಿಶಿಷ್ಟ ಹೂಹಾಸಿನ ಕಲೆಯನ್ನು ಮೆರೆಯುತ್ತಾರೆ.

ಹಬ್ಬ ಮುಂದುವರೆದಂತೆ ನಿತ್ಯವೂ ವಿವಿಧ ಹೂಗಳ ಬಳಕೆಯನ್ನು ದ್ವಿಗುಣಗೊಳಿಸುತ್ತಾ ಬಲೀಂದ್ರ ಆಗಮಿಸುವ ಹತ್ತನೇ ದಿನ ‘ತಿರುಓಣಂ’ ಬರುತ್ತಿದ್ದಂತೆಯೇ ಹೂಗಳ ದಿಬ್ಬಣವೇ ಬಲಿರಾಜನಿಗಾಗಿ ಎದ್ದುನಿಲ್ಲುತ್ತದೆ! ಅಂದು ಪ್ರಾತಃಕಾಲದಲ್ಲಿಯೇ ಇಡೀ ಕೇರಳವೇ ಎಚ್ಚರಗೊಳ್ಳುವುದು. ಎಣ್ಣೆಸ್ನಾನ ಮಾಡಿ, ಹೊಸ ಬಟ್ಟೆಯುಟ್ಟು, ಬಲಿರಾಜನ ಪ್ರೀತ್ಯರ್ಥವಾಗಿ ಹಾಡುತ್ತಾ, ಅವನ ಸಂತೃಪ್ತಿಗಾಗಿ ‘ಓಣಂ ಭೋಜನ’ (ಓಣಸಧ್ಯ) ತಯಾರಿಸುವರು. ‘ಓಣಸಧ್ಯ’ ಎಂದರೆ ಕನಿಷ್ಠ 11-13 ಪದಾರ್ಥಗಳಾದರೂ ಇರಲೇಬೇಕು. ಈ ಸಂಪ್ರದಾಯದಿಂದಾಗಿ ಕೇರಳದಲ್ಲಿ ಸಾಲ ಮಾಡಿಯಾದರೂ ಓಣಂ ಭೋಜನ ಉಣ್ಣು ಎಂಬ ಮಾತು ಪ್ರಚಲಿತವಾಗಿದೆ.

ಓಣಂ ಕೇವಲ ಅಲಂಕಾರ ಮತ್ತು ಭೋಜನಗಳಿಗಷ್ಟೇ ಸೀಮಿತವಾಗಿಲ್ಲ. ಕಲೆ, ಕ್ರೀಡೆ ಮತ್ತು ಸಾಹಸ ಪ್ರದರ್ಶನಕ್ಕೆ ಅವಕಾಶವಿರುವ ಹಬ್ಬವಾಗಿದೆ. ಗ್ರಾಮೀಣರು ‘ಪುಲಿಕಳಿ’ಯೆಂಬ ಆಟ ಪ್ರದರ್ಶಿಸುತ್ತಾರೆ. ಚೆರುಥುರುತಿ ಎಂಬಲ್ಲಿ ಜರುಗುವ ಕಥಕ್ಕಳಿ ಪ್ರದರ್ಶನ, ಕೇರಳದ ಪ್ರತಿ ಹಳ್ಳಿಯಲ್ಲೂ ಹೆಂಗಳೆಯರ ‘ಕೈಚಪ್ಪಾಳೆ’ ವಿಶಿಷ್ಟವಾಗಿರುವ ‘ಕೈಕೊಟ್ಟಿಕಳಿ’ಯೆಂಬ ನೃತ್ಯ ಮತ್ತು ವಿವಿಧೆಡೆ ನಡೆಯುವ ‘ವಳ್ಳಂಕಳಿ’ ಎಂಬ ಹಾವುದೋಣಿ ಸ್ಪರ್ಧೆಗಳನ್ನು ನೋಡಲು ಜನ ವಿಶ್ವದ ಎಲ್ಲೆಡೆಯಿಂದ ಬರುತ್ತಾರೆ.

ಸಾಮೂಹಿಕವಾಗಿ ‘ಓಣಕಳಿ’ ಎಂದು ಕರೆಯಲಾಗುವ ಆಟೋಟಗಳಲ್ಲಿ ಧನುರ್ವಿದ್ಯೆಯಂತಹ ಸಾಹಸ ಕ್ರೀಡೆಗಳೂ ಇರುತ್ತವೆ. ಹೆಣ್ಣುಮಕ್ಕಳು ಹೂಗಳಿಂದ ಶೃಂಗರಿಸಿದ ಜೋಕಾಲಿ ಜೀಕುವುದು ನೋಡುವುದೇ ಕಣ್ಣಿಗೆ ಹಬ್ಬ! ಹೀಗೆ, ಇಡೀ ಕೇರಳದ ಚರಾಚರ ಜಗತ್ತು ಚೈತನ್ಯವೇ ಮೂರ್ತಿವೆತ್ತಂತೆ ಬಲಿಯ ಆಗಮನಕ್ಕಾಗಿ ಜಾಗೃತಗೊಳ್ಳುವುದು ಜಗತ್ತಿಗೇ ಗೊತ್ತಿದ್ದರೂ ರಾಜಕೀಯ ಮನಸ್ಸುಗಳು, ನಾಡಹಬ್ಬಕ್ಕೆ ರಾಜಕೀಯ ಬಣ್ಣ ಬಳಿಯುತ್ತಿರುವುದು ವಿಷಾದನೀಯ.

ಸಾಂಸ್ಕೃತಿಕ ಕಾರಣಗಳಿಂದಾಗಿಯೇ ಜನಪ್ರಿಯವಾಗಿರುವ ಓಣಂಗೆ ರಾಜಕೀಯದೊಂದಿಗೆ ಧಾರ್ಮಿಕ ಬಣ್ಣ ಬಳಿಯಲು ಕೆಲವರು ಪ್ರಯತ್ನಶೀಲರಾಗಿರುವುದು ಬದಲಾಗುತ್ತಿರುವ ಕೇರಳದ ಸಮಾಜೋ-ರಾಜಕೀಯ ವಿಪ್ಲವಗಳಿಗೆ ಹಿಡಿದ ಕೈಗನ್ನಡಿ. ಶಂಷುದ್ದೀನ್ ಫರೀದ್‌ನಂತಹ ಕೆಲ ಮುಸ್ಲಿಂ ಧಾರ್ಮಿಕ ನಾಯಕರು, ಮುಸ್ಲಿಮರು ಓಣಂ, ಕ್ರಿಸ್ಮಸ್ ಆಚರಿಸುವುದನ್ನು ಖಂಡಿಸುತ್ತಿದ್ದಾರೆ. ಇವೆರಡೂ ಹಬ್ಬಗಳು ಇಸ್ಲಾಂ ವಿರೋಧಿ ಆಚರಣೆಗಳಾಗಿವೆ ಎಂದು ಅವುಗಳನ್ನು ಈತ ‘ಹರಾಂ’ ಎಂದು ಕರೆದಿದ್ದಾನೆ.

ಓಣಂನ ವರ್ಣರಂಜಿತ ಭಿತ್ತಿಯ ಮೇಲೆ ಕಪ್ಪುಚುಕ್ಕೆಗಳನ್ನು ಎರಚುವುದರಲ್ಲಿ ಹಿಂದೂ ಸಂಘಟನೆಗಳು ರಾಜಕೀಯ ನಾಯಕರೊಂದಿಗೆ ಕೈಜೋಡಿಸಿವೆ. ಆರ್‌ಎಸ್‌ಎಸ್‌ನ ಮುಖವಾಣಿ ‘ಕೇಸರಿ’ಯಲ್ಲಿ ಓಣಂ  ಕುರಿತು ವಿಶೇಷ ಸಂಚಿಕೆ ಪ್ರಕಟವಾಗಿದ್ದು ‘ವಾಮನ ಜಯಂತಿ’ ಪರವಾಗಿ ವಾದ ಸರಣಿಯೊಂದನ್ನು ಕಟ್ಟುವ ಪ್ರಯತ್ನ ಮಾಡಲಾಗಿದೆ.

ಈ ಸಂಚಿಕೆಯ ಪ್ರಕಾರ ವಾಮನಾವತಾರದ ಸಮಯದಲ್ಲಿ ಕೇರಳ ಅಸ್ತಿತ್ವದಲ್ಲಿರಲೇ ಇಲ್ಲ! ಯಾಕೆಂದರೆ, ವಾಮನ ವಿಷ್ಣುವಿನ 5ನೇ ಅವತಾರವಾಗಿದ್ದು, 6ನೇ ಅವತಾರಿ ಪರಶುರಾಮನು ಸಮುದ್ರಗರ್ಭದಿಂದ ಕೇರಳವನ್ನು ಮೇಲಕ್ಕೆತ್ತಿದ ಸೃಷ್ಟಿಕರ್ತನು! ಈ ಲೇಖನದ ಪ್ರಕಾರ ಬಲಿ ಉತ್ತರ ಭಾರತದಲ್ಲೆಲ್ಲೋ ಆಳಿಕೊಂಡಿದ್ದು, ವಾಮನ ಅವನನ್ನು ಸ್ವರ್ಗಕ್ಕಿಂತಲೂ ಶ್ರೇಷ್ಠವಾದ ಲೋಕದಲ್ಲಿ ನೆಲೆಗೊಳಿಸಿದನು! ಕೇರಳದ ನಂಬೂದಿರಿ ಬ್ರಾಹ್ಮಣರು ಓಣಂ ಆಚರಣೆ ಪ್ರಾರಂಭಿಸಿದ್ದು, ಅದುವೇ ಇಂದು ಓಣಂ ಹಬ್ಬವಾಗಿದೆಯಂತೆ. ಆದ್ದರಿಂದ, ಹಿಂದೂ ದೇವತೆಗಳನ್ನು ಹೀಗಳೆಯುವುದನ್ನು ನಿಲ್ಲಿಸುವಂತೆ ತಾಕೀತು ಮಾಡಲಾಗಿದೆ.

‘ಕೇಸರಿ’ ಚಿಂತನೆಯನ್ನು ದಲಿತ ಸಂಘಟನೆಗಳು ಖಂಡಿಸಿದ್ದು,  ಜನಪದ ಇತಿಹಾಸವನ್ನು ವಿರೂಪಗೊಳಿಸಲು ಪ್ರಯತ್ನಿಸಲಾಗುತ್ತಿದೆಯೆಂದು ಪ್ರತಿಪಾದಿಸಿವೆ. ದಲಿತರು ಹೇಳುವಂತೆ ಬಲಿಯು ಮೂಲನಿವಾಸಿಗಳ ನಾಯಕನಾಗಿದ್ದು, ವರ್ಣವ್ಯವಸ್ಥೆಯ ವಿರೋಧಿಯಾಗಿದ್ದುದರಿಂದ ವೈದಿಕರು ಅವನನ್ನು ದೇಶಭ್ರಷ್ಟನನ್ನಾಗಿಸಿದರು. ಕೇರಳದ ಸಮಾಜೋ-ಸಾಂಸ್ಕೃತಿಕ ಇತಿಹಾಸ ಬಲ್ಲವರಿಗೆ ದಲಿತ ಸಂಘಟನೆಗಳ ವಾದದಲ್ಲಿ ತಿರುಳಿದೆ ಎನ್ನಿಸದೇ ಇರದು. ಓಣಂ ಲೋಕಗೀತೆಗಳನ್ನು ‘ಓಣಪಾಟ್ಟು’ ಎಂದು ಕರೆಯುತ್ತಾರೆ. ಓಣಂ ಗೀತೆಯೊಂದರ ಕನ್ನಡ ಭಾಷಾಂತರ ಈ ಕೆಳಗಿನಂತಿದೆ:

‘ಯಾವಾಗ್ಗೆ ಬಲಿರಾಜ
ಭುವಿಯನ್ನು ಆಳುತ್ತಿದ್ದನೋ,
ಎಲ್ಲ ಸಮುದಾಯಗಳು ಜಾತಿರಹಿತ ಒಂದೇ ಜನಾಂಗವಾಗಿದ್ದವು,
ಜನರೆಲ್ಲ ಖುಷಿಯಿಂದ ಬದುಕಿದ್ದರು,
ಅಲ್ಲಿ ಕಳವು, ಮೋಸವಿಲ್ಲ,
ಅಲ್ಲಿ ಸುಳ್ಳಿನ ಮಾತೇ ಇಲ್ಲ,
ಅಲ್ಲಿ ಅಳತೆ, ತೂಕ ನಿಖರವಾಗಿದ್ದವು,
ಅಲ್ಲಿ ಯಾರೂ ನೆರೆಯವರಿಗೆ ಕೇಡು ಬಗೆಯುತ್ತಿರಲಿಲ್ಲ
ಯಾವಾಗ್ಗೆ ಮಾವೇಲಿ ಭುವಿಯನ್ನು ಆಳುತ್ತಿದ್ದನೋ,
ಎಲ್ಲ ಸಮುದಾಯಗಳು ಜಾತಿರಹಿತ ಒಂದೇ ಜನಾಂಗವಾಗಿದ್ದವು’.


ಈ ಮೇಲಿನ ಭಾಷಾಂತರದಿಂದ ಬಲಿಯ ಆಡಳಿತದ ಹಿರಿಮೆ ವೇದ್ಯವಾಗುತ್ತದೆ. ಪುರಾಣಗಳು ಹೇಳುವಂತೆ ಬಲಿ ಅಸುರ ರಾಜನಾಗಿದ್ದನು. ಆರ್ಯರು ಭಾರತದ ಮೂಲನಿವಾಸಿಗಳನ್ನೇ ಅಸುರ... ಮುಂತಾಗಿ ವಿಕಾರವಾಗಿ ಚಿತ್ರಿಸಿರುವುದು ವೇದಗಳಲ್ಲಿ ಉಲ್ಲೇಖವಾಗಿದೆ. ಸಿಂಧೂ ಕೊಳ್ಳ ಸಂಸ್ಕೃತಿಯ ಪತನದ ನಂತರ ಆರ್ಯರು ಗಂಗಾ-ಯಮುನಾ ಬಯಲು ಪ್ರದೇಶದಲ್ಲಿ ಕುರು, ಪಾಂಚಾಲ ಇತ್ಯಾದಿ ಹೊಸ ರಾಜ್ಯಗಳನ್ನು ಕಟ್ಟಿದರು. ನಂತರದಲ್ಲಿ ವಿಂಧ್ಯಾವಳಿಯನ್ನು ದಾಟಿ ದಕ್ಷಿಣ ಪ್ರಸ್ಥಭೂಮಿಗೂ ಲಗ್ಗೆಯಿಟ್ಟರು. 

ಬಹುಶಃ, ರಾಮಾಯಣ ದಕ್ಷಿಣದತ್ತ ಆರ್ಯ ಸಂಸ್ಕೃತಿಯ ಪ್ರಸರಣದ ಕಥೆಯನ್ನೇ ಹೇಳುತ್ತದೆ. ಭರತ ಖಂಡದ ಆರ್ಯೀಕರಣಕ್ಕೆ ಶತಮಾನಗಳೇ ಬೇಕಾಗಿರಬಹುದು. ಈ ಅವಧಿ ಕೇವಲ ರಾಜಕೀಯ ಸಂಘರ್ಷವಾಗಿರದೆ, ಸಾಂಸ್ಕೃತಿಕ ಸಂಘರ್ಷವೂ ಆಗಿತ್ತು. ರಾವಣ, ಹಿರಣ್ಯಾಕ್ಷ, ಹಿರಣ್ಯಕಶಿಪು ಮುಂತಾದ ಅಸುರರಾಜರು ಶ್ರೇಷ್ಠ ಶಿವಭಕ್ತರಾಗಿದ್ದರು.

ಹಿರಣ್ಯಕಶಿಪು–ಪ್ರಹ್ಲಾದರ ಸಂಘರ್ಷ ಪುರಾಣಪ್ರಸಿದ್ಧವಾಗಿದೆ. ತನ್ನ ಜನಾಂಗ ಆದಿಕಾಲದಿಂದಲೂ ಬಾಳಿ ಬದುಕಿದ್ದ ನಂಬುಗೆಗಳನ್ನು ಬದಿಗೊತ್ತಿ ಪ್ರಹ್ಲಾದ ಉತ್ತರವೈದಿಕ ಕಾಲದ ಪ್ರಧಾನ ದೇವತೆ ವಿಷ್ಣುವನ್ನು ಅಪ್ಪಿಕೊಂಡಾಗ ಇಡೀ ಅಸುರ ಜನಾಂಗವೇ ಪ್ರತಿರೋಧ ವ್ಯಕ್ತಪಡಿಸುತ್ತದೆ. ನರಸಿಂಹಾವತಾರ ತಾಳುವ ವಿಷ್ಣು ತಂತ್ರಗಾರಿಕೆಯಿಂದಲೇ ಹಿರಣ್ಯಕಶಿಪುವಿನ ವಧೆ ಮಾಡಿದ ಕತೆ ಜನಜನಿತವಾಗಿದೆ.

ಈ ಹಿರಣ್ಯಕಶಿಪುವಿನ ಮರಿಮೊಮ್ಮಗನೇ ಬಲಿ ಚಕ್ರವರ್ತಿ! ತಂದೆ ವಧೆಯ ನಂತರ ರಾಜನಾದ ಪ್ರಹ್ಲಾದ ವೈದಿಕ ಧರ್ಮವನ್ನು ಒಪ್ಪಿಕೊಂಡರೂ, ಅದು ದಕ್ಷಿಣದಲ್ಲಿ ಗಟ್ಟಿಯಾಗಿ ಬೇರೂರಲಿಲ್ಲವೆಂಬುದಕ್ಕೆ ಬಲಿ ಚಕ್ರವರ್ತಿಯ ಕಥೆ ಸಾಕ್ಷಿ.  ಪುರಾಣಗಳು ಬಲಿಯು ವಿಷ್ಣುಭಕ್ತನೆಂಬಂತೆ ಚಿತ್ರಿಸಿದ್ದರೂ, ಜನಪದ ಸಾಹಿತ್ಯ ಪ್ರತಿಪಾದಿಸುವಂತೆ ಅವನು ಆರ್ಯ ಸಂಸ್ಕೃತಿ, ಧರ್ಮವನ್ನು ವಿರೋಧಿಸಿದ್ದನೆಂಬ ಸಂಗತಿಯೇ ಸತ್ಯಕ್ಕೆ ಸಮೀಪವಾಗಿದೆ. ಆದ್ದರಿಂದ, ಆರ್ಯರು ವಾಮನನ ನೇತೃತ್ವದಲ್ಲಿ ಬಲಿಯ ರಾಜ್ಯವನ್ನು ಆಕ್ರಮಿಸಿಕೊಂಡಿರಲು ಸಾಕು. ಇತಿಹಾಸಪೂರ್ವ ಕಾಲದಲ್ಲಿ ಆರ್ಯರ ದಾಳಿಗೆ ಬಲಿಯಾದ ಜನಾಂಗದ ಇತಿಹಾಸ ಇನ್ನೂ ಜನಮಾನಸದಲ್ಲಿ ಉಳಿದಿರುವುದಕ್ಕೆ ಓಣಂ, ಬಲಿಪಾಡ್ಯಗಳೇ ನಿದರ್ಶನ.

ಮಹಾರಾಷ್ಟ್ರ, ಕರ್ನಾಟಕ ಮತ್ತು ತುಳುನಾಡಿನವರೂ ಬಲಿಪಾಡ್ಯಮಿಯಂದು ಬಲೀಂದ್ರನನ್ನು ನೆನೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ ದೀಪಾವಳಿಯನ್ನು ‘ಹಟ್ಟಿಹಬ್ಬ’ವೆಂದೇ ಆಚರಿಸುವ ಕುರುಬರು, ಗೊಲ್ಲರು, ಗವಳಿಗಳು ಮತ್ತು ಒಕ್ಕಲಿಗರು ಸಗಣಿಯಿಂದ ಮಾಡಿದ ಬಲಿ ಮೂರ್ತಿಯನ್ನು ಕಾಡಿನ ಉತ್ಪನ್ನಗಳಿಂದ ಅಲಂಕರಿಸಿ, ಪೂಜಿಸುತ್ತಾರೆ. ಬಲಿಪಾಡ್ಯಮಿಯಂದು ನಡೆಯುವ ‘ಕುರಿ ಬೆದರಿಸುವುದು’ ಎಂಬ ಆಚರಣೆಯಲ್ಲಿ ಕುರುಬ ಗೌಡತಿಯರು ‘ಬಲ್ಲಾಳ ಬಲೀಂದ್ರ, ರಾಜ್ಯಕ್ಕೆಲ್ಲ ಸುರೀಂದ್ರ’ ಎಂದು ಹಾಡುತ್ತಾ ಬಲಿಯ ಗುಣಗಾನ ಮಾಡುತ್ತಾರೆ. ತುಳುವರು ದೀಪಾವಳಿಯ ರಾತ್ರಿಗಳಲ್ಲಿ ‘ಪೊಲಿ, ಪೊಲಿ ಬಲೀಂದ್ರ’ ಎಂದು ಖುಷಿಯಿಂದ ಹೇಳುವುದು ಸಾಮಾನ್ಯ ದೃಶ್ಯ.

ಛೋಟಾನಾಗಪುರದ ‘ಮುಂಡಾ’ ಎಂಬ ಆದಿವಾಸಿಗಳು ಬಲಿ ತಮ್ಮ ರಾಜನಾಗಿದ್ದನೆಂದು ಹೇಳುತ್ತಾರೆ. ‘ಬಲಿ’ ಎಂಬ ಹೆಸರು ಅವರಲ್ಲಿ ಇಂದಿಗೂ ಜನಪ್ರಿಯ ಹೆಸರಾಗಿದೆ. ಮಾನವಶಾಸ್ತ್ರಜ್ಞರು ಹೇಳುವಂತೆ, ಈ ‘ಮುಂಡಾ’ ಜನಾಂಗ ಇತಿಹಾಸಕಾಲದಲ್ಲಿ ದಕ್ಷಿಣ ಭಾರತದುದ್ದಕ್ಕೂ ವ್ಯಾಪಿಸಿತ್ತು. ಉತ್ತರದಲ್ಲಿ ಆರ್ಯರ ದಾಳಿಯಿಂದಾಗಿ ಸ್ಥಾನಪಲ್ಲಟಗೊಂಡವರು ದಕ್ಷಿಣದತ್ತ ವಲಸೆ ಬಂದ ನಂತರ ಕಾಲಾನುಕ್ರಮದಲ್ಲಿ ಈ ಮುಂಡರು ಅವರೊಂದಿಗೆ ಬೆರೆತು ಹೋಗಿದ್ದಾರೆ ಎಂಬುದು ತಜ್ಞರ ಅಭಿಮತ.

ಆದರೆ, ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಪ್ರದಿಪಾದಿಸುವ ಹಿಂದೂ ಸಂಘಟನೆಗಳು ದೇಶದ ಮೂಲ ನಿವಾಸಿಗಳು, ದಲಿತರು, ಹಿಂದುಳಿದ ಜಾತಿಗಳ ಇತಿಹಾಸ ಮತ್ತು ಸಂಸ್ಕೃತಿಯನ್ನು ತಮ್ಮ ರಾಷ್ಟ್ರೀಯತೆಯ ಪರಿಕಲ್ಪನೆಯಿಂದ ಹೊರಗಿಟ್ಟಿದ್ದಾರೆ ಎಂಬುದಕ್ಕೆ ‘ವಾಮನ ಜಯಂತಿ ವಿವಾದ’ವೇ ನಿದರ್ಶನ. ಈ ಸಂಘಟನೆಗಳು ತಮ್ಮ ರಾಷ್ಟ್ರೀಯತೆಯ ಪರಿಕಲ್ಪನೆಗೆ ಪ್ರೇರಣೆಯನ್ನು ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದಲ್ಲಿ ಮಾತ್ರ ಅರಸುತ್ತಾರೆ.

ಆದ್ದರಿಂದ, ಸಹಜವಾಗಿ ಮಧ್ಯಯುಗೀನ ಇಸ್ಲಾಂ ಮತ್ತು ಆಧುನಿಕ ಪಾಶ್ಚಿಮಾತ್ಯ ಸಂಸ್ಕೃತಿಯ ಅಂಶಗಳನ್ನು ಈ ಪರಿಕಲ್ಪನೆ ದೂರೀಕರಿಸುತ್ತದೆ.ಆದರೆ, ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆ ಕಟ್ಟಲು ಅಸುರರು, ದಸ್ಯುಗಳು ಮತ್ತು ರಾಕ್ಷಸರೂ ಕಲ್ಲು, ಮಣ್ಣು ಹೊತ್ತಿದ್ದಾರೆ ಎಂಬುದಕ್ಕೆ ರಾಮಾಯಣ, ಮಹಾಭಾರತ ಮತ್ತು ಪುರಾಣಗಳೇ ಜೀವಂತ ಸಾಕ್ಷಿಗಳಾಗಿವೆ.

ಇದೆಲ್ಲಾ ಗೊತ್ತಿದ್ದರೂ ಯಾಕೆ ಈ ತಪ್ಪು ಪದೇ, ಪದೇ ಘಟಿಸುತ್ತಿದೆ? ಬಹುಶಃ, ಬಹುಸಂಸ್ಕೃತಿಯ ನೆಲೆಗಟ್ಟಿನ ಮೇಲೆ ನಿಂತಿರುವ ಕೇರಳದ ಸಾಮಾಜಿಕ ಮತ್ತು ರಾಜಕೀಯ ಸ್ತರಗಳನ್ನು ಭೇದಿಸುವಲ್ಲಿ ಹಿಂದೂ ಸಂಘಟನೆಗಳು ವಿಫಲವಾಗಿರುವುದೇ ‘ವಾಮನ ಜಯಂತಿ’ಯಂತಹ ಏಕಮುಖಿ ಸಂಸ್ಕೃತಿಯನ್ನು ಪ್ರತಿಪಾದಿಸುವ ತಂತ್ರಗಾರಿಕೆಯಿರಬಹುದು. ಭಾರತದಂತಹ ದೇಶದಲ್ಲಿ ಇನ್ನೂ ‘ಗೋರಕ್ಷಣೆ’ಯಂತಹ ಭಾವನಾತ್ಮಕ ವಿಷಯಗಳೇ ವೋಟಿನ ಮಳೆ ಸುರಿಸುತ್ತವೆ ಎಂಬುದು ಅನುಭವದ ಮಾತು. ಹಾಗಾದರೆ, ವಾಮನ ಜಯಂತಿ ವಿವಾದ ಕೇರಳದಲ್ಲಿ ಹೊಸ ರಾಜಕೀಯ ಧ್ರುವೀಕರಣಕ್ಕೆ ಎಡೆ ಮಾಡಿಕೊಡಬಹುದೇ?
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT