ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಕೊಳ್ಳದಲ್ಲಿ ಅನಾವೃಷ್ಟಿ, ಬೆಳೆ ಒಣಗುವ ಆತಂಕದಲ್ಲಿ ರೈತರು

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕೃಷ್ಣರಾಜಸಾಗರ: ಮಳೆ ಕೊರತೆಯಿಂದ ಹೇಮಾವತಿ ಜಲಾಶಯದ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಉಳಿಸಿಕೊಳ್ಳಲಾಗಿದೆ. ನೀರು ಬರುತ್ತದೆ ಎಂಬ ಭರವಸೆಯಿಂದ ಬಿತ್ತನೆ ಮಾಡಿದ್ದ 7,900 ಎಕರೆಯಲ್ಲಿ ಬೆಳೆ  ಈಗ ಒಣಗಿ ಹೋಗುವ  ಆತಂಕ ರೈತರನ್ನು ಕಾಡುತ್ತಿದೆ.

ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಮತ್ತು ಅಚ್ಚುಕಟ್ಟು ಕುರಿತು ಪತ್ರಕರ್ತರ ಅಧ್ಯಯನ ತಂಡ ಸೋಮವಾರ ಹೇಮಾವತಿ ಮತ್ತು ಕೆಆರ್ಎಸ್ ಭಾಗದಲ್ಲಿ ಸಮೀಕ್ಷೆ ನಡೆಸಿತು.

ಕಾವೇರಿ ಉಪನದಿ ಹೇಮಾವತಿ ಪಶ್ಚಿಮ ಘಟ್ಟದಿಂದ ಹರಿದು ಬರುತ್ತದೆ. ಹಲವು ತಾಲ್ಲೂಕುಗಳಿಗೆ ಕುಡಿಯುವ ನೀರಿನ ಜೊತೆಗೆ ಅಚ್ಚುಕಟ್ಟು ಭಾಗದಲ್ಲಿ 7 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ.

ಈ ವರ್ಷ ಆ.12 ರಿಂದ ಸೆ.21ರವರೆಗೆ ಕಾಲುವೆಗಳಲ್ಲಿ ನೀರು ಹರಿಸಲಾಗಿತ್ತು. ಆದರೆ, ಇತ್ತೀಚೆಗೆ ವಿಧಾನಮಂಡಲ ಅಧಿವೇಶನದಲ್ಲಿ ಕಾವೇರಿ ನೀರನ್ನು ಕುಡಿಯುವುದಕ್ಕೆ ಹೊರತುಪಡಿಸಿ ಬೇರೆ ಯಾವ ಉದ್ದೇಶಕ್ಕೂ ಬಿಡುವುದಿಲ್ಲ ಎಂದು ನಿರ್ಣಯಿಸಲಾಗಿದೆ.

ಬೆಳೆಗೆ ನೀರು ಸಿಗುವುದಿಲ್ಲ ಎಂಬ ವಿಷಯ ಈ ಭಾಗದ ರೈತರನ್ನು ನಿದ್ದೆಗೆಡಿಸಿದೆ. ಹೇಮಾವತಿ ಬಲದಂಡೆ ಕಾಲುವೆ ಮೂಲಕ ಹೊಳೆನರಸೀಪುರ, ಅರಕಲಗೂಡು ತಾಲ್ಲೂಕಿನ 20 ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿತ್ತು.  ಈಗ 5,212 ಎಕರೆಯಲ್ಲಿ ಭತ್ತ, 938  ಎಕರೆ ರಾಗಿ, 3.02 ಎಕರೆಯಲ್ಲಿ ಮೆಕ್ಕೆಜೋಳ ಮತ್ತು 1,444 ಎಕರೆಯಲ್ಲಿ ಶುಂಠಿ ಬೆಳೆ ಇದೆ. ನೀರು ಇಲ್ಲದಿದ್ದರೆ ಇಷ್ಟೂ ಬೆಳೆ ಒಣಗಿ ಹೋಗುವ ಆತಂಕ ಎದುರಾಗಿದೆ.

ಹೇಮಾವತಿ ಬಲದಂಡೆ ಮೇಲು ಕಾಲುವೆ (ಹೈ ಲೆವೆಲ್ ಕೆನಾಲ್) ಮೂಲಕ ಅರಕಲಗೂಡು, ಹೊಳೆನರಸೀಪುರದ ಕೆಲ ಭಾಗಗಳು, ಕೆ.ಆರ್.ನಗರ  ಮತ್ತು ಕೆ.ಆರ್. ಪೇಟೆ ತಾಲ್ಲೂಕಿನ 53,360 ಎಕರೆ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ.

ಸದ್ಯ ಭತ್ತ, ರಾಗಿ, ಜೋಳ, ಶುಂಠಿ ಸೇರಿ 17,515 ಎಕರೆ ಪ್ರದೇಶದಲ್ಲಿ ಬೆಳೆ ಇದೆ. ಹೇಮಾವತಿ ಜಲಾಶಯದಲ್ಲಿ 2,280 ಅಡಿಗಿಂತ ಹೆಚ್ಚು ನೀರು ಇದ್ದರೆ ಈ ಕಾಲುವೆ ಮೂಲಕ ನೀರು ಹೊರಬಿಡಲಾಗುತ್ತದೆ.

ಆದರೆ, ಈಗ ಜಲಾಶಯದಲ್ಲಿ 2,275 ಅಡಿಗಿಂತ ಕೆಳಗೆ ಇರುವುದರಿಂದ ಈ ಕಾಲುವೆಗೆ ನೀರೆ ಹರಿಯುವುದಿಲ್ಲ. ಮುಂದಿನ ಮಳೆಗಾಲದವರೆಗೂ ಈ ಕಾಲುವೆ ಒಣಗಿರುವುದು ಖಚಿತ.

ಕೃಷಿಗೆ ನೀರು ಇಲ್ಲ: ಹೇಮಾವತಿ ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 37.10  ಟಿಎಂಸಿ ಅಡಿ ಇದೆ. ಅದರಲ್ಲಿ 31.72 ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯ ಇದೆ. ಆದರೆ ಸಧ್ಯ 7.67 ಟಿಎಂಸಿ ಅಡಿ ನೀರು ಲಭ್ಯ ಇದ್ದು, ಅದರಲ್ಲಿ 3.30 ಟಿಎಂಸಿ ಅಡಿ ಮಾತ್ರ ಬಳಸಬಹುದು.

‘ಮುಂದಿನ ಮೇ ಅಂತ್ಯದವರೆಗೆ ಕುಡಿಯುವುದಕ್ಕೆ ಮಾತ್ರ ಸಾಕಾಗಲಿದೆ.  ಕೃಷಿಗೆ ನೀರು ಒದಗಿಸುವಂತಹ ಯಾವುದೇ ಸಾಧ್ಯತೆಗಳೂ ಇಲ್ಲ’ ಎಂದು ಕಾವೇರಿ ನೀರಾವರಿ ನಿಗಮ ಹೇಮಾವತಿ ಜಲಾಶಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ವಿ. ಶ್ರೀನಾಥ್.

ಈ ಜಲಾಶಯದಿಂದ ಹಾಸನ ನಗರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ, ಕೆ.ಆರ್.ಪೇಟೆ ಪಟ್ಟಣಗಳು ಸೇರಿದಂತೆ ನೂರಾರು ಗ್ರಾಮಗಳಿಗೆ ನೀರು ಒದಗಿಸಬೇಕಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT