ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಲೆ ಮತ್ತಷ್ಟು ಕುಸಿತದ ಭೀತಿ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಳಗಾವಿ: ಈಗಾಗಲೇ ಕುಸಿದಿರುವ ಈರುಳ್ಳಿ ದರ ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಜಿಲ್ಲೆ ಸೇರಿದಂತೆ ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದಲೂ ಇಲ್ಲಿನ ಎಪಿಎಂಸಿಗೆ ಈರುಳ್ಳಿ ಆವಕ ಆಗುತ್ತದೆ. ರಾಜ್ಯದಲ್ಲಿ ಬೆಳೆಯಲಾಗುವ ಕೆಂಪು ಬಣ್ಣದ ತಳಿಗೆ ವಿದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಎಲ್ಲೂ ಈ ತಳಿಗೆ ಬೇಡಿಕೆಯಿಲ್ಲ. ಈ ಬಾರಿ ಬಹುತೇಕ ಎಲ್ಲ ರಾಜ್ಯಗಳಲ್ಲಿ ಉತ್ತಮ ಫಸಲು ಬಂದಿದೆ.

ಆಯಾ ರಾಜ್ಯಗಳ ಬೇಡಿಕೆ ಸ್ಥಳೀಯವಾಗಿ ಪೂರೈಕೆ ಆಗುತ್ತಿರುವುದರಿಂದ ಕರ್ನಾಟಕದ ಈರುಳ್ಳಿಗೆ ಬೇಡಿಕೆ ಇಲ್ಲ. ಹೀಗಾಗಿ ಧಾರಣೆ ಮತ್ತಷ್ಟು ಕುಸಿಯುವ ಸಂಭವವಿದೆ ಎಂದು ವ್ಯಾಪಾರಿ ಚೇತನ ಎ. ಪಾಟೀಲ ಹೇಳುತ್ತಾರೆ.

‘ಇಲ್ಲಿನ ಎಪಿಎಂಸಿಯಲ್ಲಿ ಕೆಂಪು ಈರುಳ್ಳಿಗೆ ಕ್ವಿಂಟಲ್‌ಗೆ ₹ 300 ರಿಂದ ₹ 900ರವರೆಗೆ ದರ ಇದೆ. ಗುಲಾಬಿ ಬಣ್ಣದ ಈರುಳ್ಳಿಗೆ ₹ 200ರಿಂದ ₹ 700ವರೆಗೆ ದರವಿದೆ. ಪ್ರಸಕ್ತ ಸಾಲಿನಲ್ಲಿ ಈಗಷ್ಟೇ ಕಟಾವು ಆರಂಭವಾಗಿದ್ದು, ಈಗ ನಿತ್ಯ 80 ಸಾವಿರದಿಂದ 1 ಲಕ್ಷ ಚೀಲ (60 ಕೆ.ಜಿ ಚೀಲ) ಬರುತ್ತಿದೆ. ಕಟಾವು ಅವಧಿ ಇನ್ನೂ ಮೂರು ತಿಂಗಳು ಇದ್ದು, ದಿನಕಳೆದಂತೆ ಆವಕ ಹೆಚ್ಚಾಗುತ್ತದೆ. ಆಗ ಸ್ಥಿತಿ ಇನ್ನಷ್ಟು ಚಿಂತಾಜಕವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರದ ಪ್ರಭಾವ: ‘ಮಹಾರಾಷ್ಟ್ರದಲ್ಲಿ ಕಳೆದ ಅವಧಿಯ ಶೇ 70ರಷ್ಟು ದಾಸ್ತಾನು ವರ್ತಕರ ಬಳಿ ಇನ್ನೂ ಉಳಿದಿದೆ. ಆದರೆ ಇದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲ. ಹೀಗಾಗಿ ಅವರು ದಾಸ್ತಾನನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು  ಪ್ರಯತ್ನಿಸುತ್ತಿದ್ದಾರೆ. ಆದಷ್ಟು ಬೇಗ ಇದನ್ನು ವಿಲೇವಾರಿ ಮಾಡಲು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೊಲ್ಹಾಪುರದಲ್ಲಿ ಗುಲಾಬಿ ಬಣ್ಣದ ಈರುಳ್ಳಿ ದರ ಕ್ವಿಂಟಲ್‌ಗೆ ₹ 100 ರಿಂದ ₹ 600 ವರೆಗೆ ಇದೆ’ ಎಂದೂ ಅವರು ಮಾಹಿತಿ ನೀಡುತ್ತಾರೆ.

ದಾಸ್ತಾನು ಮಾಡಲಾಗದು: ‘ಮಹಾರಾಷ್ಟ್ರದ ಈರುಳ್ಳಿಯನ್ನು ಸಂಗ್ರಹ ಮಾಡಿದಂತೆ ಕರ್ನಾಟಕದ ಫಸಲನ್ನು ದಾಸ್ತಾನು ಮಾಡಲು ಸಾಧ್ಯವಾಗುವುದಿಲ್ಲ. ಇದರಲ್ಲಿ ತೇವಾಂಶ ಹೆಚ್ಚಿರುವ ಕಾರಣ, ಸ್ವಲ್ಪ ದಿನಗಳ ನಂತರ ಮೊಳಕೆಯೊಡೆಯುತ್ತದೆ. ಹೀಗಾಗಿ ಕಟಾವು ಮಾಡಿದ ನಂತರ ಸಾಧ್ಯವಾದಷ್ಟು ಬೇಗನೇ ಮಾರಾಟ ಮಾಡಬೇಕಾದ ಒತ್ತಡಕ್ಕೆ ರೈತರು ಸಿಲುಕುತ್ತಾರೆ’ ಎಂದು ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT