ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌ ದಂತಕತೆ ಪಾಮರ್‌ ನಿಧನ

ಒಟ್ಟು 95 ಪ್ರಶಸ್ತಿ ಗೆದ್ದಿದ್ದ ‘ದಿ ಕಿಂಗ್‌’ ಖ್ಯಾತಿಯ ಅಮೆರಿಕದ ಗಾಲ್ಫರ್‌
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಪಿಟ್ಸ್‌ಬರ್ಗ್‌, ಅಮೆರಿಕ (ಎಪಿ): ಅಮೆರಿಕದ ಗಾಲ್ಫ್‌ ದಂತಕತೆ ಅರ್ನಾಲ್ಡ್‌ ಪಾಮರ್‌ (87) ಅವರು ಭಾನುವಾರ ನಿಧನರಾಗಿದ್ದಾರೆ.

ಈ ವಿಷಯವನ್ನು ಅರ್ನಾಲ್ಡ್‌ ಪಾಮರ್‌ ಎಂಟರ್‌ಪ್ರೈಸಸ್‌ನ ಸಿಇಒ ಅಲಸ್ಟೇರ್‌ ಜಾನ್ಸನ್‌ ಖಚಿತಪಡಿಸಿದ್ದಾರೆ. ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿದ್ದ ಪಾಲ್ಮರ್‌ ಅವರು ಹೋದ ಗುರುವಾರ ಚಿಕಿತ್ಸೆಗಾಗಿ ಪಿಟ್ಸ್‌ಬರ್ಗ್‌ನ ಯುಪಿಎಂಸಿ ಪ್ರೆಸ್‌ಬೈಟೇರಿಯನ್‌ ಆಸ್ಪತ್ರೆಗೆ ದಾಖಲಾಗಿದ್ದರು.

ಪಾಮರ್‌ಅವರು  ಸಾರ್ವಕಾಲಿಕ ಶ್ರೇಷ್ಠ ಗಾಲ್ಫರ್‌ ಎನಿಸಿದ್ದರು. ಅವರು ಏಳು ಪ್ರಮುಖ ಚಾಂಪಿಯನ್‌ಷಿಪ್‌ಗಳು ಹಾಗೂ  62 ಪಿಜಿಎ ಟೂರ್‌ಗಳಲ್ಲಿ ಪ್ರಶಸ್ತಿ ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ.

‘ದಿ ಕಿಂಗ್‌’ ಎಂದೇ ಖ್ಯಾತಿ ಹೊಂದಿದ್ದ ಅವರು 1958, 1960, 1962 ಮತ್ತು 1964ರಲ್ಲಿ ಮಾಸ್ಟರ್ಸ್‌ ಟೂರ್ನಿ, 1961 ಮತ್ತು 1962ರಲ್ಲಿ ಬ್ರಿಟಿಷ್‌ ಓಪನ್‌ ಹಾಗೂ 1960ರಲ್ಲಿ ಅಮೆರಿಕ ಓಪನ್‌ ಗಾಲ್ಫ್‌ ಚಾಂಪಿಯನ್‌ ಷಿಪ್‌ಗಳಲ್ಲಿ ಪ್ರಶಸ್ತಿ ಜಯಿಸಿದ್ದರು.

1950ರ ದಶಕದಲ್ಲಿ ಗಾಲ್ಫ್‌ ಕ್ರೀಡೆ ಮೊದಲ ಬಾರಿಗೆ ಟಿ.ವಿಯಲ್ಲಿ ಪ್ರಸಾರವಾಗಿತ್ತು. ಆ ಕಾಲದಲ್ಲಿ ಪಾಮರ್‌ ಅವರು ಯಶಸ್ಸಿನ ಉತ್ತುಂಗದಲ್ಲಿದ್ದರು.
‘ಅರ್ನಾಲ್ಡ್‌ ಪಾಮರ್‌ ಅವರು ಇಲ್ಲದೆ ಹೋಗಿದ್ದರೆ ಗಾಲ್ಫ್‌ಗೆ ಇಂದು ಈ ಮಟ್ಟಿಗಿನ ಜನಮನ್ನಣೆ ಸಿಗುತ್ತಿರಲಿಲ್ಲ’ ಎಂದು 2004ರಲ್ಲಿ  ಅಮೆರಿಕದ ಗಾಲ್ಫರ್‌ ಟೈಗರ್‌ ವುಡ್ಸ್‌ ಹೇಳಿದ್ದರು.

ಗಾಲ್ಫ್‌ ಸೆಳೆತ: ಡಾರಿಸ್‌ ಮತ್ತು ಮಿಲ್‌ಫ್ರೆಡ್‌ ಜೆರೊಮ್‌ ಅವರ ಪುತ್ರನಾಗಿರುವ ಪಾಮರ್‌ ಅವರು ಎಳವೆಯಿಂದಲೇ ಗಾಲ್ಫ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಆರಂಭದಲ್ಲಿ ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಆಟದ ಪಾಠಗಳನ್ನು ಕಲಿತ ಅವರು 1954ರಲ್ಲಿ ಅಮೆರಿಕ ಅಮೆಚೂರ್‌ ಗಾಲ್ಫ್‌ನಲ್ಲಿ ಪ್ರಶಸ್ತಿ ಗೆದ್ದರು. ಅದೇ ವರ್ಷ ವೃತ್ತಿಪರ ಗಾಲ್ಫ್‌ಗೆ ಪದಾರ್ಪಣೆ ಮಾಡಿದ ಅವರು  ಹಲವು ಚಾಂಪಿಯನ್‌ಷಿಪ್‌ಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಟ್ವೀಟ್‌ಗಳು
ನಿಮ್ಮೊಂದಿಗಿನ ಒಡನಾಟದಿಂದ  ಹಲವು ವಿಷಯಗಳನ್ನು ಕಲಿತಿದ್ದೇನೆ. ನಿಮ್ಮ ಹೊರತಾಗಿ ಗಾಲ್ಫ್‌ ಕ್ರೀಡೆಯನ್ನು ಊಹಿಸಿಕೊಳ್ಳುವುದಕ್ಕೂ ಆಗುವುದಿಲ್ಲ. ನೀವು ನಿಜಕ್ಕೂ ಗಾಲ್ಫ್‌ನ ಕಿಂಗ್‌
-ಟೈಗರ್‌ ವುಡ್ಸ್‌
ಅಮೆರಿಕದ ಗಾಲ್ಫರ್‌

***
ಗಾಲ್ಫ್‌ ಲೋಕದ ಕೊಂಡಿಯೊಂದು ಕಳಚಿರುವುದು ದುಃಖ ತಂದಿದೆ. ಪಾಲ್ಮರ್‌  ಯುವ ಗಾಲ್ಫರ್‌ಗಳಿಗೆ ಆದರ್ಶವಾಗಿದ್ದರು
-ಬರಾಕ್‌ ಒಬಾಮ
ಅಮೆರಿಕ ಅಧ್ಯಕ್ಷ

***
ಪಾಮರ್‌ ಅವರು ಆಟದ ವೇಳೆ ಚೆಂಡನ್ನು ಬಾರಿಸಿದಾಗ ಭೂಮಿ ನಡುಗುತ್ತಿತ್ತು
-ಜೆನೆ ಲಿಟ್ಲರ್‌
ಅಮೆರಿಕದ ಗಾಲ್ಫರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT