ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೇಕಪ್‌ ಮೇನಿಯಾ’ದ ನಡುವೆ ಮರೆತ ಸಂಗತಿಗಳು

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬಾಲಿವುಡ್‌ ನಟ– ನಟಿಯರಿಗೆ, ಕ್ರೀಡಾ ತಾರೆಗಳಿಗೆ ಮತ್ತು ಪ್ರಮುಖ ಜಾಹೀರಾತು ಪ್ರಾಜೆಕ್ಟ್‌ಗಳಿಗೆ ಮೇಕಪ್‌ ಕಲಾವಿದೆಯಾಗಿ ಕೆಲಸ ಮಾಡಿರುವ ಗೌರಿ ಕಪೂರ್‌, ಬೆಂಗಳೂರಿನವರು.

ದುಬಾರಿ ಪ್ರಸಾಧನಗಳನ್ನು ಹಚ್ಚಿಕೊಳ್ಳುವುದೇ ಮೇಕಪ್‌ ಅಲ್ಲ. ಅದನ್ನು ಅರಿತು ಮಾಡಬೇಕು ಮತ್ತು ಅದು ಎಲ್ಲರೂ ಒಪ್ಪುವಂತಿರಬೇಕು. ಓತಪ್ರೋತವಾಗಿ ಮಾಡುವ ಮೇಕಪ್‌ ಲಯ ತಪ್ಪಿದ ಸಂಗೀತದಂತೆ ಎಂಬುದು ಅವರ ಪ್ರತಿಪಾದನೆ.

ವೃತ್ತಿನಿಮಿತ್ತ ದೇಶ ವಿದೇಶ ಪ್ರವಾಸದಲ್ಲಿ ಸದಾ ಬ್ಯುಸಿಯಾಗಿರುವ ಗೌರಿ ಕಳೆದ ವಾರ ಸೇಂಟ್‌ ಮಾರ್ಕ್ಸ್‌ ರಸ್ತೆಯ ಆರ್ಟ್‌ ವಿಲೇಜ್‌ನಲ್ಲಿ ನಡೆದ ‘ಬ್ಯೂಟಿ ಬಿಯಾಂಡ್‌ ಬೇಸಿಕ್ಸ್‌’ ಕಾರ್ಯಾಗಾರ ನಡೆಸಿಕೊಟ್ಟಿದ್ದರು. ಈ ಸಂದರ್ಭ ‘ಮೆಟ್ರೊ’ ಜತೆಗೆ ನಡೆಸಿದ ಸಂವಾದದ ಅಕ್ಷರ ರೂಪ ಇಲ್ಲಿದೆ.

* ಬೆಂಗಳೂರಿನವರಾದ ನೀವು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಮ್ಮದೇ ಛಾಪು ಮೂಡಿಸಲು ಹೇಗೆ ಸಾಧ್ಯವಾಯ್ತು?
ಯಾವುದೇ ಕ್ಷೇತ್ರದಲ್ಲಿ ನಮ್ಮ ಛಾಪು ಮೂಡಿಸಲು ಅನುಭವ ಜನ್ಯ ಪರಿಣಿತಿ ಅಗತ್ಯ. ಮೇಕಪ್‌ ಆರ್ಟ್‌ಗೆ ಈಗ ಬಹಳ ಬೇಡಿಕೆಯಿದೆ. ಪರಿಪೂರ್ಣತೆಯ ನೋಟ ಮತ್ತು ಸಂತೃಪ್ತ ಭಾವ ಕಟ್ಟಿಕೊಡುವುದು, ನೋಡುಗರಲ್ಲಿ ಹೆಮ್ಮೆ ಮೂಡಿಸುವುದು ಸಾಧ್ಯವಾದಲ್ಲಿ  ಮೇಕಪ್‌ ಯಶಸ್ವಿಯಾದಂತೆ. ನನ್ನ ಗೆಲುವಿಗೆ ಇದೇ ಕಾರಣ.

* ಬಾಲಿವುಡ್‌ನಲ್ಲಿ ಯಾವ್ಯಾವ ಸೆಲೆಬ್ರಿಟಿಗಳ ಜತೆ ಕೆಲಸ ಮಾಡಿದ್ದೀರಿ?
ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್‌, ಲೀಸಾ ರೇ, ನೇಹಾ ಧೂಪಿಯಾ, ಸೊನಾಲಿ ಬೇಂದ್ರೆ, ಯಾನಾ ಗುಪ್ತಾ, ಪೂಜಾ ಬೇಡಿ ಅವರಿಗೆ ಮೇಕಪ್‌ ಆರ್ಟಿಸ್ಟ್‌ ಆಗಿ ಕೆಲಸ ಮಾಡಿದ್ದೇನೆ. ಅವರು ಸಿನಿಮಾ ಶೂಟಿಂಗ್ ಮಾತ್ರವಲ್ಲ, ಇತರ ಸಮಾರಂಭಗಳಲ್ಲಿ ಪಾಲ್ಗೊಳ್ಳುವಾಗಲೂ ಅವರು ನನ್ನನ್ನು ಕರೆಸಿಕೊಳ್ಳುತ್ತಾರೆ.

* ಜಾಹೀರಾತು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವ ಅನುಭವ ಹೇಗಿರುತ್ತದೆ?
ಕಿಂಗ್‌ಫಿಷರ್‌, ತನಿಷ್ಕ್‌, ರಾಯಲ್‌ ಚಾಲೆಂಜರ್ಸ್‌, ನೈಕ್‌ನ ಜಾಹೀರಾತು ಪ್ರಾಜೆಕ್ಟ್‌ಗಳಿಗೆ ಕೆಲಸ ಮಾಡಿದ್ದೇನೆ. ಇವುಗಳಿಗೆ ಪ್ರಶಸ್ತಿಗಳೂ ಬಂದಿವೆ. ಜಾಹೀರಾತಿನಲ್ಲಿ ಮಾಡೆಲ್‌ಗಳಿಗೆ ಮೇಕಪ್‌ ಮಾಡುವುದು ಕಷ್ಟದ ಕೆಲಸ. ತನಿಷ್ಕ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡ ರೂಪದರ್ಶಿಯೊಬ್ಬಳಿಗೆ ಮೇಕಪ್ ಮಾಡಲು ಒಂದು ಇಡೀ ದಿನ ಶ್ರಮಿಸಬೇಕಾಯಿತು. ಆದರೆ ಬ್ರ್ಯಾಂಡ್‌ಗೆ ಪ್ರಶಸ್ತಿ ಬಂದಾಗ ಅಷ್ಟೇ ಖುಷಿಯಾಯ್ತು.

ಜಾಹೀರಾತುಗಳು ಒಂದೇ ನೋಟಕ್ಕೆ ಕಣ್ಸೆಳೆಯುವಂತಿರಬೇಕು. ಇದಕ್ಕಾಗಿ ಕ್ಯಾಮೆರಾ, ಬೆಳಕು, ಸನ್ನಿವೇಶ, ಸಂದೇಶ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮೇಕಪ್‌ ಮಾಡಬೇಕಾಗುತ್ತದೆ. ಇದರಲ್ಲಿ ಪರಿಪೂರ್ಣತೆ ಸಾಧಿಸುವುದು ದೊಡ್ಡ ಸವಾಲು.

* ಪುರುಷ ಕ್ರೀಡಾಪಟುಗಳಿಗೆ ಮೇಕಪ್‌ ಮಾಡಿದ ಅನುಭವ?
ಪುರುಷರಿಗೆ ಮೇಕಪ್ ಮಾಡುವುದು ಮಹಿಳಾ ಸೆಲೆಬ್ರಿಟಿಗಳಿಗೆ ಮೇಕಪ್ ಮಾಡುವುದಕ್ಕಿಂತ ಸುಲಭ. ಕ್ರಿಕೆಟ್‌ ಪಟುಗಳಾದ ರಾಹುಲ್‌ ದ್ರಾವಿಡ್‌, ಶ್ರೀಶಾಂತ್‌, ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಕೆಎಸ್‌ಡಿಎಲ್‌ ಜಾಹೀರಾತಿಗಾಗಿ ಮೇಕಪ್‌ ಮಾಡಿದ್ದೆ.

* ಮೇಕಪ್‌ ಕಿಟ್ ಹೇಗಿರಬೇಕು ಎಂದು ಹೇಳುತ್ತೀರಿ?
ಇದು ಅಗತ್ಯವಾಗಿ ತಿಳಿದುಕೊಂಡಿರಬೇಕಾದ ಸಂಗತಿ. ಕಿಟ್‌ನಲ್ಲಿ ಯಾವ ಐಟಂ ಎಷ್ಟು ದುಬಾರಿ ಎಂಬುದರಿಂದ ಮೇಕಪ್‌ನ ಗುಣಮಟ್ಟವನ್ನು ನಿರ್ಧರಿಸಲಾಗದು. ಮಾಡಿರುವ ಮೇಕಪ್‌ನಿಂದ ನೀವು ಹೇಗೆ ಕಾಣಿಸುತ್ತೀರಿ ಎಂಬುದಷ್ಟೇ ಅಂತಿಮ ಫಲಿತಾಂಶ.  ಹಾಗಾಗಿ ಬೆಲೆಗಿಂತ ಗುಣಮಟ್ಟ ಮತ್ತು ಅದರ ಅವಶ್ಯಕತೆಗೆ ಆದ್ಯತೆ ಕೊಟ್ಟು ಮೇಕಪ್‌ ಕಿಟ್‌ ಭರ್ತಿ ಮಾಡಿಕೊಳ್ಳಿ ಎಂದು ಹೇಳಲು ಬಯಸುತ್ತೇನೆ.

* ಹಾಗಿದ್ದರೆ ಮೇಕಪ್‌ ಹೇಗಿರಬೇಕು?
ಒಂದಾದ ಮೇಲೊಂದು  ಪ್ರಸಾಧನ ಮೆತ್ತಿಕೊಳ್ಳುವುದೇ ಮೇಕಪ್‌ ಅನ್ನುವ ಭಾವನೆ ಬಹುತೇಕ ಜನರಲ್ಲಿದೆ. ಬ್ರೈಡಲ್‌ ಪ್ಯಾಕೇಜ್‌ ಹೆಸರಿನಲ್ಲಿ ಎಷ್ಟೋ ಬ್ಯೂಟಿಪಾರ್ಲರ್‌ಗಳೂ ಇದೇ ಕೆಲಸ ಮಾಡುತ್ತವೆ. ಆದರೆ ಮದುಮಗಳಿಗೆ ಗಂಟೆಗಟ್ಟಲೆ ಮೇಕಪ್‌ ಮಾಡಿದರೂ ಕಣ್ಣಿನ ಕೆಳಗಿನ ಕಪ್ಪು,  ಮೊಡವೆಗಳ ಕಲೆ, ಸನ್‌ ಟ್ಯಾನ್‌ನ ಗುರುತು ಉಳಿದಿದ್ದರೆ ಮದುಮಗಳು ಕಳೆಗುಂದಿದಂತೆಯೇ. ಈ ನ್ಯೂನತೆಗಳು ಮುಚ್ಚಿಹೋಗಿ ಇಡೀ ಮುಖ ಮತ್ತು ಕತ್ತು ಒಂದು ಫ್ರೇಮ್‌ನಂತೆ ಮಾಡುವುದೇ ಎಕ್ಸ್‌ಪರ್ಟ್‌ ಕೈಗಳ ಕೌಶಲ.

* ‘ಬಿಬಿ ಕ್ರೀಂ’ ಮೇಕಪ್‌ನಲ್ಲಿ ಎಷ್ಟು ಮುಖ್ಯ?
‘ಬಿಬಿ ಕ್ರೀಂ’ಗಳು ಮುಖದಲ್ಲಿನ ಕಪ್ಪು/ಕಂದು ಕಲೆಗಳನ್ನು ಹಾಗೂ ಕಣ್ಣಿನ ಕೆಳಗಿನ ಕಪ್ಪು ವರ್ತುಲ ಮತ್ತು ಮೂಗು/ತುಟಿಯ ಬಳಿ ಕಾಣಿಸಿಕೊಳ್ಳುವ  ಕಪ್ಪು ಕಲೆಗಳನ್ನು ಮುಚ್ಚಿಹಾಕುತ್ತವೆ.

* ನಿಮ್ಮ ಅಕಾಡೆಮಿ ಬಗ್ಗೆ ಹೇಳಿ?
ಗೌರಿ ಕಪೂರ್‌ ಅಕಾಡೆಮಿ  ಫ್ರೇಜರ್‌ ಟೌನ್‌ನಲ್ಲಿದೆ. ವರ್ಷಕ್ಕೆರಡು ಬಾರಿ ಕಾರ್ಯಾಗಾರ ನಡೆಸುತ್ತೇನೆ. ನಾನು ಬಹುತೇಕ ಪ್ರವಾಸದಲ್ಲಿರುವ ಕಾರಣ ಅಕಾಡೆಮಿಯಲ್ಲಿ ಪೂರ್ಣಕಾಲಿಕವಾಗಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಆದರೆ ನಿಜವಾದ ವೃತ್ತಿಪರರು ಮತ್ತು ಮೇಕಪ್‌ ಆರ್ಟ್‌ ಬಗ್ಗೆ ಗಂಭೀರವಾಗಿ ಕಲಿಯಬೇಕು ಎಂದು ಬಯಸುವವರಿಗೆ ತರಬೇತಿ ನೀಡಲು ನಾನು ಸದಾ ಸಿದ್ಧ.
ಗೌರಿ ಕಪೂರ್‌ ಸಂಪರ್ಕಕ್ಕೆ: ಮೊ– 98441 10132.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT