ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ, ಅನಿತಾ ವಿರುದ್ಧ ಲೋಕಾಯುಕ್ತ ವಿಚಾರಣೆ

ಸುಪ್ರೀಂಕೋರ್ಟ್ ಸೂಚನೆ
Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಜಂತಕಲ್ ಗಣಿ ಕಂಪೆನಿಯ ಗಣಿ ಪರವಾನಗಿಯನ್ನು ಅಕ್ರಮವಾಗಿ ನವೀಕರಿಸಲಾಗಿದೆ ಹಾಗೂ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನಿಯಮ ಉಲ್ಲಂಘಿಸಿ 80 ಎಕರೆ ಜಮೀನು ನೀಡಲಾಗಿದೆ ಎಂಬ ಆರೋಪಗಳ ಬಗ್ಗೆ ವಿಚಾರಣೆ ಎದುರಿಸುವಂತೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

‘ಹೋಗಿ, ವಿಚಾರಣೆ ಎದುರಿಸಿ’ ಎಂದು ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಮತ್ತು ಪಿ.ಸಿ. ಪಂತ್ ಅವರಿದ್ದ ವಿಭಾಗೀಯ ಪೀಠ, ಕುಮಾರಸ್ವಾಮಿ ಹಾಗೂ ಅನಿತಾ ಪರ ವಕೀಲ ವಿ. ಗಿರಿ ಅವರಿಗೆ ಸೂಚಿಸಿತು.

ಈ ಎರಡು ಪ್ರಕರಣಗಳನ್ನು ರಾಜಕೀಯ ಸೇಡಿನಿಂದ ದಾಖಲಿಸಲಾಗಿದೆ ಎಂಬ ವಾದವನ್ನು ಪೀಠ ಒಪ್ಪಲಿಲ್ಲ. ‘ನೀವು ರಾಜಕಾರಣದಲ್ಲಿ ಇರುವ ವ್ಯಕ್ತಿಗಳು. ಇಂಥ ವಾದವನ್ನು ನೀವು ಯಾವತ್ತೂ ಮುಂದಿಡುತ್ತೀರಿ. ಕುಮಾರಸ್ವಾಮಿ ಅವರು ಒಂದು ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದರು ಎಂಬ ಒಂದೇ ಕಾರಣಕ್ಕೆ, ವಿಚಾರಣೆ ಎದುರಿಸಬಾರದು ಎಂದೇನೂ ಇಲ್ಲ’ ಎಂದು ಪೀಠ ಹೇಳಿದೆ.

ಲೋಕಾಯುಕ್ತ ವಿಶೇಷ ನ್ಯಾಯಾಲಯವು ಕುಮಾರಸ್ವಾಮಿ ಹಾಗೂ ಅನಿತಾ ವಿರುದ್ಧ ಆರಂಭಿಸಿದ್ದ ವಿಚಾರಣೆಯನ್ನು ರಾಜ್ಯ ಹೈಕೋರ್ಟ್‌ 2011ರ ಅಕ್ಟೋಬರ್‌ನಲ್ಲಿ ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ ವಕೀಲ ಎಂ. ವಿನೋದ್ ಕುಮಾರ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್‌ ಆದೇಶವನ್ನು ರದ್ದು ಮಾಡಿರುವ ಸುಪ್ರೀಂ ಕೋರ್ಟ್‌, ‘ವಿಚಾರಣೆಯನ್ನು ಹೈಕೋರ್ಟ್‌ ರದ್ದು ಮಾಡಬಾರದಿತ್ತು. ಆರೋಪಗಳು ಎಷ್ಟು ಸತ್ಯ ಎಂಬುದು ವಿಚಾರಣೆಯಿಂದ ಗೊತ್ತಾಗಬೇಕಿತ್ತು’ ಎಂದು ಹೇಳಿದೆ.

ಗಣಿ ನವೀಕರಣದಲ್ಲಿ ಅಥವಾ ಸಂಘಕ್ಕೆ ಜಮೀನು ಮಂಜೂರು ಮಾಡುವಲ್ಲಿ ಕುಮಾರಸ್ವಾಮಿ ಹಾಗೂ ಅನಿತಾ ಅವರು ತಪ್ಪು ಮಾಡಿಲ್ಲ ಎಂದು ವಕೀಲ ಗಿರಿ ಅವರು ಮತ್ತೆ ಮತ್ತೆ ಹೇಳಿದರು.

ಆಗ ನ್ಯಾಯಪೀಠ, ‘ನನ್ನ ಸೂಚನೆ ಪಾಲಿಸದೆ ಇದ್ದರೆ ತೊಂದರೆಗೆ ಸಿಲುಕುತ್ತೀಯಾ’ ಎಂದು ಕುಮಾರಸ್ವಾಮಿ ಅವರು ಅಧಿಕಾರಿಯೊಬ್ಬರಿಗೆ ಎರಡು ತಾಸಿನ ಅವಧಿಯಲ್ಲಿ ಮೂರು ಬಾರಿ ಕರೆ ಮಾಡಿದ್ದರು ಎಂದು ಪತ್ರವೊಂದರಲ್ಲಿ ಉಲ್ಲೇಖವಾಗಿದೆ. ಈ ಅಂಶವನ್ನು ನಾವು ಆದೇಶದಲ್ಲಿ ಬರೆಸಬೇಕೇ ಎಂದು ಖಾರವಾಗಿ ಪ್ರಶ್ನಿಸಿತು.

‘ಜಂತಕಲ್ ವಿಚಾರದಲ್ಲಿ ದಯಾ ನಾಯಕ್‌ ಅವರು (ಎನ್‌ಕೌಂಟರ್‌ ಖ್ಯಾತಿಯ ಪೊಲೀಸ್‌ ಅಧಿಕಾರಿ) ದೊಡ್ಡ ಪಾತ್ರ ವಹಿಸಿದ್ದು ಹೇಗೆ’ ಎಂದೂ ಪೀಠ ಪ್ರಶ್ನಿಸಿತು.

‘ಆರೋಪದ ಸತ್ಯಾಸತ್ಯತೆಯ ಬಗ್ಗೆ ನಾವು ಯಾವುದೇ ಅಭಿಪ್ರಾಯ ನೀಡುತ್ತಿಲ್ಲ. ಆದರೆ ಈ ಪ್ರಕರಣವನ್ನು ರದ್ದು ಮಾಡಲು ಆಗದು’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಂತಕಲ್‌ ಕಂಪೆನಿಯ ಗಣಿ ಪರವಾನಗಿಯನ್ನು ಕಾನೂನು ಮೀರಿ ನವೀಕರಿಸಲಾಯಿತು ಎಂಬ ಆರೋಪ ಇದೆ. ಹಾಗೆಯೇ, ವಿಶ್ವಭಾರತಿ ಸಂಘಕ್ಕೆ ಕಾನೂನು ಮೀರಿ ಜಮೀನು ಮಂಜೂರು ಮಾಡಿದ್ದಕ್ಕೆ ಸಂಘವು ಅನಿತಾ ಅವರಿಗೆ ನಿವೇಶನ ನೀಡಿದೆ ಎಂಬ ಆರೋಪ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT