ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಸಿಎಂಡಿ ವಜಾ

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಪುಣೆ ಮೂಲದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಮಹಾರಾಷ್ಟ್ರದ ವ್ಯವಸ್ಥಾಪಕ ನಿರ್ದೇಶಕ  (ಸಿಎಂಡಿ) ಸುಶೀಲ್‌ ಮುಹನೋತ್‌ ಅವರನ್ನು ನಿವೃತ್ತಿಗೆ ನಾಲ್ಕು ದಿನಗಳು ಇರುವಂತೆಯೇ ಕೇಂದ್ರ ಸರ್ಕಾರ ವಜಾ ಮಾಡಿದೆ.

ದೇಶಿ ಬ್ಯಾಂಕಿಂಗ್‌ ಇತಿಹಾಸದಲ್ಲಿ ಇದೊಂದು ಅಪರೂಪದ ವಿದ್ಯಮಾನವಾಗಿದೆ. 2013ರಲ್ಲಿ ಬ್ಯಾಂಕ್‌ನ ಸಿಎಂಡಿಯಾಗಿ ನೇಮಕಗೊಂಡಿದ್ದ ಸುಶೀಲ್‌, ಇದೇ 30ರಂದು ಸೇವಾ ನಿವೃತ್ತರಾಗಲಿದ್ದರು. ರವೀಂದ್ರ ಮರಾಠೆ ಅವರನ್ನು ಹೊಸ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ವಜಾ ಆದೇಶವು ತಕ್ಷಣದಿಂದ ಜಾರಿಗೆ ಬಂದಿದೆ.  ಸುಶೀಲ್‌ ಅವರನ್ನು ವಜಾ ಮಾಡಿರುವುದಕ್ಕೆ ಸರ್ಕಾರವು ಯಾವುದೇ ಕಾರಣ ನೀಡಿಲ್ಲ.

ಸುಶೀಲ್‌ ಅವರು ಮುಂಬೈ ಮತ್ತು ಪುಣೆಗಳಲ್ಲಿ ಎರಡು ಮನೆಗಳನ್ನು ಹೊಂದಿದ್ದರು. ಇದು ಸೇವಾ ನಿಯಮಗಳಿಗೆ ವಿರುದ್ಧವಾಗಿತ್ತು.  ಈ ಆರೋಪಗಳಿಗೆ ಸಂಬಂಧಿಸಿದಂತೆ ನಿಮ್ಮನ್ನು ಸೇವೆಯಿಂದ ವಜಾ ಮಾಡಬಾರದೇಕೆ ಎಂದು ಹಣಕಾಸು ಇಲಾಖೆಯು ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಿತ್ತು.

ಎಸ್‌ಬಿಐ: ₹2,500 ಕೋಟಿ ಸಂಗ್ರಹ
ನವದೆಹಲಿ: ವಹಿವಾಟು ವೃದ್ಧಿಗಾಗಿ ಬಾಂಡ್‌ಗಳನ್ನು ಮಾರಾಟ ಮಾಡುವ ಮೂಲಕ ₹2,500 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತಿಳಿಸಿದೆ.

ಪರಿವರ್ತಿಸಲಾಗದ, ಸುರಕ್ಷಿತವಲ್ಲದ  ₹10 ಲಕ್ಷ ಮುಖಬೆಲೆಯ  ಬಾಂಡ್‌ಗಳನ್ನು ಖಾಸಗಿ ವಿತರಣೆ ಮಾಡುವ ಮೂಲಕ ಈ ಪ್ರಮಾಣದ ಬಂಡವಾಳ ಸಂಗ್ರಹಿಸಿರುವುದಾಗಿ ಎಸ್‌ಬಿಐ ಷೇರುಪೇಟೆಗೆ ಮಂಗಳವಾರ ಮಾಹಿತಿ ನೀಡಿದೆ.

ರೂಪಾಯಿ ಮೌಲ್ಯ 2 ತಿಂಗಳ ಗರಿಷ್ಠ
ಮುಂಬೈ: ಡಾಲರ್‌ ಎದುರು ರೂಪಾಯಿ ಮೌಲ್ಯವು ಸತತ ನಾಲ್ಕನೇ ವಹಿವಾಟಿನ ದಿನವೂ ಏರಿಕೆ ಕಂಡಿದೆ. ಮಂಗಳವಾರ  11 ಪೈಸೆಗಳಷ್ಟು ಏರಿಕೆ ಕಂಡು, ಎರಡು ವಾರಗಳ ಗರಿಷ್ಠ ಮಟ್ಟವಾದ ₹66.50ರಂತೆ ವಿನಿಮಗೊಂಡಿತು. ರಫ್ತುದಾರರು ಮತ್ತು ಬ್ಯಾಂಕ್‌ಗಳು ಅಮೆರಿಕದ ಕರೆನ್ಸಿಯನ್ನು ಮಾರಾಟ ಮಾಡಿದ್ದರಿಂದ ರೂಪಾಯಿ ಮೌಲ್ಯ ಏರಿಕೆಯಾಗಿದೆ.

ಮಾರಾಟದ ಒತ್ತಡ  ಸೂಚ್ಯಂಕ ಇಳಿಕೆ
ಮುಂಬೈ: ಯುರೋಪ್‌ ಮಾರುಕಟ್ಟೆಯು ಕುಸಿತ ಕಂಡಿದ್ದರಿಂದ ಭಾರತದ ಷೇರುಪೇಟೆಯು  ಮೂರನೇ ದಿನವೂ ಇಳಿಮುಖವಾಗಿಯೇ ವಹಿವಾಟು ಅಂತ್ಯಗೊಳಿಸಿತು.

ಮಂಗಳವಾರ 71 ಅಂಶಗಳ ಇಳಿಕೆಕಂಡು ಒಂದು ತಿಂಗಳ ಕನಿಷ್ಠ ಮಟ್ಟವಾದ 28,224 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ. ಕಚ್ಚಾ ತೈಲ ಬೆಲೆ ಏರಿಕೆ ಮಾಡಲು ಇರುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಲು ತೈಲ ಉತ್ಪಾದನಾ ರಾಷ್ಟ್ರಗಳು ಅಲ್ಜೀರಿಯಾದಲ್ಲಿ ಈ ವಾರ ಸಭೆ ನಡೆಸಲಿವೆ. ಈ ಸುದ್ದಿಯ ಜತೆಗೆ ಸರ್ಕಾರಿ ಸಾಲಪತ್ರಗಳ ಸೆಪ್ಟೆಂಬರ್‌ ತಿಂಗಳ ವಾಯಿದಾ ಅವಧಿ ಸಮೀಪಿಸುತ್ತಿರುವುದೂ ಸಹ ಸೂಚ್ಯಂಕದ ಇಳಿಮುಖ ವಹಿವಾಟಿಗೆ ಕಾರಣವಾಯಿತು.

ಕಳೆದ ಎರಡು ವಹಿವಾಟು ಅವಧಿಗಳಲ್ಲಿ ಸೂಚ್ಯಂಕವು 479 ಅಂಶಗಳಷ್ಟು ಇಳಿಕೆ ಕಂಡಿತ್ತು.  ದಿನದ ಆರಂಭದಲ್ಲಿ ಗರಿಷ್ಠ ಮಟ್ಟದಲ್ಲಿ ವಹಿವಾಟು ಆರಂಭವಾಗಿತ್ತು. ಆದರೆ, ಕೊನೆಯ ಅವಧಿಯಲ್ಲಿ ಲಾಭಗಳಿಕೆ ಉದ್ದೇಶದ ವಹಿವಾಟಿನಿಂದ ಮಾರಾಟದ ಒತ್ತಡ ಸೃಷ್ಟಿಯಾಯಿತು. ಇದು ಸೂಚ್ಯಂಕವನ್ನು ಕುಸಿಯುವಂತೆ ಮಾಡಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ಕೆಲವು ದಿನಗಳಿಂದ ಮಾರಾಟಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 17 ಅಂಶ ಇಳಿದು, 8,706 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ವರದಿ ಪರಾಮರ್ಶೆಗೆ ಸಮಿತಿ ರಚನೆ
ನವದೆಹಲಿ: ಹೊಸ ಚಿಂತನೆಗಳ ಜಾಗತಿಕ  ಸೂಚ್ಯಂಕ ವರದಿ ಪರಿಶೀಲಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಶೀಘ್ರದಲ್ಲಿಯೇ ಪರಿಣತರ ಸಮಿತಿ ರಚಿಸಲಿದೆ.

ವರದಿಯಲ್ಲಿ  ಉಲ್ಲೇಖಿಸಿದ ಸಂಗತಿಗಳನ್ನು ಪರಿಶೀಲಿಸಿ, ಭಾರತದ ಸ್ಥಾನಮಾನ (ರ‍್ಯಾಂಕ್‌ಕಿಂಗ್‌) ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ಸಮಿತಿ ವರದಿ ಸಲ್ಲಿಸಲಿದೆ.

‘ಈ ವರದಿಯ ಆಳವಾದ ಅಧ್ಯಯನ ಮಾಡಲು ನಾನು ಪರಿಣತರ ಸಮಿತಿಯೊಂದನ್ನು ರಚಿಸಲಿದ್ದೇನೆ.  ಸಮಿತಿಯು ಭಾರತದ  ದೌರ್ಬಲ್ಯಗಳು ಮತ್ತು ಸವಾಲುಗಳನ್ನೂ ಪಟ್ಟಿ ಮಾಡಲಿದೆ’ ಎಂದು ವಾಣಿಜ್ಯ ಸಚಿವೆ  ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT