ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್‌ ಸ್ಥಾನಕ್ಕೆ ತೀವ್ರ ಪೈಪೋಟಿ

ಕಾಂಗ್ರೆಸ್ - ಜೆಡಿಎಸ್ ಮಧ್ಯೆ ಮೈತ್ರಿ– ಆನಂದ್‌ ಉಪ ಮೇಯರ್‌
Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದೊಳಗೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ಮೈತ್ರಿ ಮುಂದುವರಿದಿರುವುದರಿಂದ, ಈ ಹಿಂದಿನ ಅವಧಿಯಂತೆ ಕ್ರಮವಾಗಿ ಉಭಯ ಪಕ್ಷಗಳು ಮೇಯರ್‌, ಉಪ ಮೇಯರ್‌ ಸ್ಥಾನ ಹಂಚಿಕೊಂಡಿವೆ.

ಮೇಯರ್‌ ಪಟ್ಟಕ್ಕೆ ಪ್ರಕಾಶ್‌ ನಗರದ ಕಾಂಗ್ರೆಸ್‌ ಸದಸ್ಯೆ ಜಿ. ಪದ್ಮಾವತಿ ಮತ್ತು ಶಾಂತಿನಗರದ ಸೌಮ್ಯಾ ಶಿವಕುಮಾರ್ ಮಧ್ಯೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. 

ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ಹಲವು ಆಕಾಂಕ್ಷಿಗಳಿದ್ದರೂ ರಾಧಾಕೃಷ್ಣ ನಗರದ ಸದಸ್ಯ ಎಂ. ಆನಂದ್‌ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಈಗಾಗಲೇ ನಿಗದಿಪಡಿಸಿದಂತೆ ಬುಧವಾರ ಬೆಳಿಗ್ಗೆ 8.30ರ ನಂತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. 11 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಗತ್ಯವಾದರೆ 11.30ಕ್ಕೆ ಚುನಾವಣೆ ನಡೆಯಲಿದೆ.

ಬಿಬಿಎಂಪಿಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಹೀಗಾಗಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಗಣೇಶ ಮಂದಿರ ವಾರ್ಡಿನ ಡಿ.ಎಚ್‌. ಲಕ್ಷ್ಮಿ ಮತ್ತು ಎಚ್‌ಎಸ್‌ಆರ್‌ ಲೇಔಟ್‌ನ ಗುರುಮೂರ್ತಿ ರೆಡ್ಡಿ ಕ್ರಮವಾಗಿ ಮೇಯರ್‌ ಮತ್ತು ಉಪಮೇಯರ್‌ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲಿದ್ದಾರೆ.

ಜಿ. ಪದ್ಮಾವತಿ ಅವರಿಗೆ ಮೇಯರ್‌ ಪಟ್ಟ ನೀಡುವುದಕ್ಕೆ ಜೆಡಿಎಸ್‌ನಲ್ಲಿ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ. ಕಾಂಗ್ರೆಸ್‌ನ ಬಹುತೇಕ ಶಾಸಕರು ಮತ್ತು ಪಾಲಿಕೆ ಸದಸ್ಯರು ಪದ್ಮಾವತಿ ಅವರ ಬೆನ್ನಿಗೆ ನಿಂತಿದ್ದರೂ, ಸೌಮ್ಯಾ ಅವರನ್ನು ಮೇಯರ್‌ ಮಾಡಲು ಜೆಡಿಎಸ್‌ ಆಸಕ್ತಿ ತೋರಿದೆ.
ಪಕ್ಷದ ಬೇಡಿಕೆಗಳಿಗೆ ಮನ್ನಣೆ ಸಿಗದೆ ಇದ್ದರೆ ಕಾಂಗ್ರೆಸ್‌ಗೆ ಹೊರಗಿನಿಂದ ಬೆಂಬಲ ನೀಡಲು ಜೆಡಿಎಸ್‌ ವಲಯದಲ್ಲಿ ಚರ್ಚೆ ನಡೆದಿದೆ ಎಂದೂ ಹೇಳಲಾಗಿದೆ.

‘ಪದ್ಮಾವತಿ ವಿರುದ್ಧ ಹಲವು ಆರೋಪಗಳಿವೆ. ಹೀಗಾಗಿ ಅವರನ್ನು ಮೇಯರ್‌ ಮಾಡುವುದಕ್ಕೆ ಪಕ್ಷದ ವಿರೋಧವಿದೆ’ ಎಂದು ಜೆಡಿಎಸ್‌ ವಕ್ತಾರ ರಮೇಶ್‌ ಬಾಬು ತಿಳಿಸಿದ್ದಾರೆ.

‘ಪದ್ಮಾವತಿ ಅವರ ಜಾತಿ ಪ್ರಮಾಣ ಪತ್ರದ ಬಗ್ಗೆ ಸಂದೇಹ ಇದೆ. ಅವರು ಒಕ್ಕಲಿಗ ಅಥವಾ ಬಲಿಜ ಸಮುದಾಯದವರೇ ಎನ್ನುವುದು ಗೊತ್ತಿಲ್ಲ.  ನಮ್ಮ ಪಕ್ಷದಲ್ಲಿದ್ದ ಅವರು ಬಳಿಕ ಕಾಂಗ್ರೆಸ್‌ ಸೇರಿದ್ದರು. ಅವರು ವಿಶ್ವಾಸಕ್ಕೆ ಅರ್ಹರಲ್ಲವೆಂದು ಈಗಾಗಲೇ ಕಾಂಗ್ರೆಸ್‌ ನಾಯಕರಿಗೆ ತಿಳಿಸಿದ್ದೇವೆ’ ಎಂದೂ ಹೇಳಿದ್ದಾರೆ. 

‘ಮೇಯರ್‌ ಯಾರಾಗಬೇಕು ಎಂದು ನಿರ್ಧರಿಸುವುದು ಕಾಂಗ್ರೆಸ್ಸಿನ ಆಂತರಿಕ ವಿಷಯ. ಇದರಲ್ಲಿ ಜೆಡಿಎಸ್‌ ಷರತ್ತು ಹಾಕುವಂತಿಲ್ಲ’ ಎಂದು ಕಾಂಗ್ರೆಸ್ಸಿನ ಕೆಲವು ಶಾಸಕರು ಮತ್ತು ಸದಸ್ಯರು ಈಗಾಗಲೇ ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ, ಮೇಲ್ಮನೆ ಸದಸ್ಯ ಪುಟ್ಟಣ್ಣ ಹಾಗೂ ಪಕ್ಷದಿಂದ ಅನರ್ಹಗೊಂಡ ಶಾಸಕರಾದ ಜಮೀರ್‌ ಅಹಮ್ಮದ್‌, ಗೋಪಾಲಯ್ಯ ಮತ್ತು ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಜೆಡಿಎಸ್‌ ವಿಪ್‌ ಜಾರಿಗೊಳಿಸಿದೆ. ವಿಪ್‌ ನೀಡುವ ಹೊಣೆಯನ್ನು ವಿಧಾನ ಪರಿಷತ್‌ ಸದಸ್ಯ ಸಿ.ಆರ್. ಮನೋಹರ್‌ಗೆ ಪಕ್ಷ ನೀಡಿದೆ.

ಮೇಯರ್‌ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ  ಮತ್ತು ಕೆಲವು ಶಾಸಕರು ಈ ಬಗ್ಗೆ ಸಭೆ ನಡೆಸಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಹೆಸರು ಅಂತಿಮಗೊಳಿಸಲು ಪ್ರಯತ್ನಿಸಲಾ ಯಿತಾದರೂ ಪ್ರಯೋಜನವಾಗಲಿಲ್ಲ.

ಬುಧವಾರ ಬೆಳಿಗ್ಗೆ ಸಿದ್ದರಾಮಯ್ಯ ಮತ್ತು ದೇವೇಗೌಡರು ಅಂತಿಮವಾಗಿ ಚರ್ಚೆ ನಡೆಸಿದ ಬಳಿಕ ಮೇಯರ್‌ ಅಭ್ಯರ್ಥಿ ಹೆಸರನ್ನು ಕಾಂಗ್ರೆಸ್‌ ಅಂತಿಮಗೊಳಿಸಲಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT