ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಾಲ: ನಿಯಮಾವಳಿ ಸರಳೀಕರಿಸಿ

Last Updated 28 ಸೆಪ್ಟೆಂಬರ್ 2016, 9:14 IST
ಅಕ್ಷರ ಗಾತ್ರ

ಮಡಿಕೇರಿ:  ಕೃಷಿಗೆ ಸಾಲ ನೀಡಲು ಬ್ಯಾಂಕ್‌ ಅಧಿಕಾರಿಗಳು ರೈತರನ್ನು ಅಲೆದಾಡಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ನಿಯಮಾವಳಿಗಳನ್ನು ಸರಳೀಕರಿಸಿ ಸಕಾಲಕ್ಕೆ ಸಾಲ ವಿತರಣೆ ಮಾಡಿ ಎಂದು ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು.

ನಗರದ ಕಾಲೇಜು ರಸ್ತೆಯ ಲೀಡ್‌ ಬ್ಯಾಂಕ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಬ್ಯಾಂಕ್‌ ಅಧಿಕಾರಿಗಳು ಸಭೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ (ಏಪ್ರಿಲ್‌, ಮೇ, ಜೂನ್‌) ಕೃಷಿ ಸಾಲ ವಿತರಣೆಯಲ್ಲಿ ಶೇ 19ರಷ್ಟು ಸಾಧನೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಾಲಕ್ಕಾಗಿ ರೈತರು ಬ್ಯಾಂಕ್‌ಗೆ ಬಂದರೆ ಆರ್‌ಟಿಸಿ ಸೇರಿದಂತೆ ಹಲವು ದಾಖಲೆ ತನ್ನಿ ಎಂದರೆ ಎಲ್ಲಿಂದ ರೈತರು ಒದಗಿಸಲು ಸಾಧ್ಯ? ನಾನಾ ನಮೂನೆಯ ದಾಖಲೆ ಪಡೆಯದೇ ಅಗತ್ಯವಿರುವಷ್ಟು ದಾಖಲೆ ಪತ್ರಗಳನ್ನು ಮಾತ್ರ ಪಡೆದು ಕೃಷಿ ಸಾಲ ವಿತರಿಸಬೇಕು ಎಂದು ತಾಕೀತು ಮಾಡಿದರು.

ಕೊಡಗು ಜಿಲ್ಲೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಾಕಷ್ಟು ಅನುದಾನ ಹರಿದು ಬಂದಿದೆ. ಅನುದಾನದ ಪಟ್ಟಿ ಗಮನಿಸಿದರೆ ಜಿಲ್ಲೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಇರಬೇಕಿತ್ತು. ಆದರೆ, ವಾಸ್ತವ ಚಿತ್ರಣವೆ ಬೇರೆಯಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಸುಸ್ಥಿದಾರರ ಸಂಖ್ಯೆ ಕಡಿಮೆಯಿದೆ. ಆದರೂ ಬ್ಯಾಂಕ್‌ಗಳು ರೈತರಿಗೆ ತೊಂದರೆ ನೀಡುತ್ತಿರುವುದು ಸಲ್ಲದು ಎಂದು ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ದೇವಯ್ಯ, 1999– 2000ರಲ್ಲಿ ಕಾಫಿ ಧಾರಣೆ ಕುಸಿದಾಗ ಸಾಲ ಮರುಪಾವತಿಗೆ ತೊಂದರೆ ಉಂಟಾಗಿತ್ತು. ಸಾಕಷ್ಟು ಸುಸ್ಥಿದಾರರು ಜಿಲ್ಲೆಯಲ್ಲಿದ್ದರು.         ಇದೀಗ ಆ ಸಮಸ್ಯೆಯಿಲ್ಲ. ಡಿಸಿಸಿ ಬ್ಯಾಂಕ್‌ನಿಂದ ಶೇ 60ರಿಂದ 70ರಷ್ಟು ಸಾಲ ವಿತರಣೆ ಆಗಬೇಕು. ಯಾವ ಕಾರಣಕ್ಕೆ         ನಿರೀಕ್ಷಿತ ತಲುಪಲು ಸಾಧ್ಯವಾಗಿಲ್ಲ ಎಂಬುದಕ್ಕೆ ಬ್ಯಾಂಕ್‌ ಅಧಿಕಾರಿಗಳೇ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಸಕಾಲದಲ್ಲಿ ಸಾಲ ವಿತರಣೆ ಆಗುತ್ತಿಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಹ ರೈತರನ್ನು ಅಲೆಸುತ್ತಿವೆ. ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಳೆಗಾಲದಲ್ಲಿ ರಸಗೊಬ್ಬರ ಸೇರಿದಂತೆ ಕಾಫಿ ಕೆಲಸಗಳಿಗೆ ಅಗತ್ಯ ಹಣಬೇಕು. ಜೂನ್‌ 15ರಿಂದ ಜುಲೈ 15ರ ಒಳಗಾಗಿ ಪ್ರತಿವರ್ಷ ಕೃಷಿ ಸಾಲ ವಿತರಣೆ ಮಾಡಬೇಕು ಎಂದು ಸೂಚಿಸಿದರು.

ಕೇಂದ್ರ, ರಾಜ್ಯ ಸರ್ಕಾರ ಹಲವು ಯೋಜನೆಗಳಲ್ಲಿ ಹಿಂದೆ ಬಿದ್ದಿರುವ ಬ್ಯಾಂಕ್‌ ಅಧಿಕಾರಿಗಳನ್ನು  ಬೋಪಯ್ಯ ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರ್ಕಾರದ ಹೌಸಿಂಗ್‌ ಫಾರ್‌ ಆಲ್‌ ಯೋಜನೆ ಅಡಿ ಮಡಿಕೇರಿ ಸಿಎಂಸಿ, ವಿರಾಜಪೇಟೆ ಟಿಎಂಸಿ, ಸೋಮವಾರಪೇಟೆ ಟಿಎಂಸಿಯಲ್ಲಿ ಪ್ರಗತಿ ಕಾಣಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಹಿರಿಸಿ ಅರ್ಹರಿಗೆ ಯೋಜನೆಯ ಸೌಲಭ್ಯ ತಲುಪಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ಸಿಇಒ ಚಾರುಲತಾ ಸೋಮಲ್‌, ಅಧಿಕಾರಿಗಳಾದ ಎನ್‌.ಗೋಪಾಲ್‌, ಎಸ್‌.ರಾಂರಾವ್‌, ರಂಗಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT