ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಕೋರ್ಟ್‌ ಆದೇಶ ಖಂಡಿಸಿ ಪ್ರತಿಭಟನೆ

Last Updated 28 ಸೆಪ್ಟೆಂಬರ್ 2016, 9:37 IST
ಅಕ್ಷರ ಗಾತ್ರ

ಮೈಸೂರು: ಕಾವೇರಿ ವಿವಾದ ಕುರಿತು ಸುಪ್ರೀಂ ಕೋರ್ಟ್ ಆದೇಶ ಮಂಗಳವಾರ ಹೊರಬೀಳುತ್ತಿದ್ದಂತೆ ನಗರದಲ್ಲಿ ವಿವಿಧ  ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ನಾಗರಿಕರ ಹಿತರಕ್ಷಣಾ ವೇದಿಕೆ, ಕಾವೇರಿ ಕ್ರಿಯಾಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಇಲ್ಲಿನ ನ್ಯಾಯಾಲಯದ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿ ಮುಂದೆ ಮೋಂಬತ್ತಿ ಹೊತ್ತಿಸಿ ನ್ಯಾಯಾಲಯದ ಆದೇಶವನ್ನು ವಿರೋಧಿಸಿದರು.

ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಅವೈಜ್ಞಾನಿಕ. ರಾಜ್ಯದ ವಾದಕ್ಕೆ ಬೆಲೆಯೇ ಇಲ್ಲದಂತಾಗಿದೆ. ರಾಜ್ಯದ ಜನರಿಗೆ ಕುಡಿಯಲು ನೀರಿಲ್ಲದಿರುವಾಗ ನೀರು ಬಿಡಬೇಕು ಎಂದು ಹೇಳಿರುವುದು ಸರ್ವಥಾ ಸರಿಯಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದ ಅವರು ಕನ್ನಡಿಗರೆಲ್ಲರೂ ಈ ವಿಚಾರದಲ್ಲಿ ಒಗ್ಗಟ್ಟಾಗಿರಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಕನ್ನಡಪರ ಹೋರಾಟಗಾರರಾದ ಕೆ.ಎಸ್.ಶಿವರಾಂ, ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ, ಬಿ.ಎಂ.ರಾಮಚಂದ್ರ, ಮಡ್ಡೀಕೆರೆ ಗೋಪಾಲ್ ಇದ್ದರು.

ದಸರೆಯಲ್ಲಿ ತಮಿಳು ಕಲಾವಿದರಿಗೆ ಅವಕಾಶ; ಪ್ರತಿಭಟನೆ
ದಸರಾ ಮಹೋತ್ಸವದಲ್ಲಿ ತಮಿಳುನಾಡಿನ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರಿಗೆ ಅವಕಾಶ ನೀಡಿರುವುದರ ವಿರುದ್ಧ ಮೈಸೂರು ಕನ್ನಡ ವೇದಿಕೆ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.

ಕಾವೇರಿ ನೀರಿಗಾಗಿ ಹಟ ಹಿಡಿದಿರುವಾಗ ಅಲ್ಲಿನ ಕಲಾವಿದರಿಗೆ ಮಣೆ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವು ಕಾರ್ಯಕ್ರಮಗಳಿಗೆ ತಮಿಳು ಕಲಾವಿದರನ್ನು ನಿಗದಿಪಡಿಸಿದೆ ಎಂದು ಆರೋಪಿಸಿದರು. ಇಲಾಖೆ ತನ್ನ ನೀತಿಯನ್ನು ಬದಲಿಸಿಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ಪದಾಧಿಕಾರಿಗಳಾದ ನಾಲಾಬೀದಿ ರವಿ, ಅರವಿಂದ ಶರ್ಮಾ, ಮಹದೇವಸ್ವಾಮಿ ಹಾಜರಿದ್ದರು. ಅಲ್ಲದೆ, ಕರ್ನಾಟಕ ಕಾವಲು ಪಡೆ ನೇತೃತ್ವದಲ್ಲಿ ಗನ್‌ಹೌಸ್ ಬಳಿ, ಜಿಲ್ಲಾಧಿಕಾರಿ ಕಚೇರಿ ಬಳಿ ಕರುನಾಡ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆದವು.

ಬಿಎಸ್‌ಎನ್‌ಎಲ್‌; ಗುತ್ತಿಗೆ ನೌಕರರ ಪ್ರತಿಭಟನೆ: ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎನ್‌ಎನ್‌ ಎಲ್‌ನ ದಿನಗೂಲಿ ಹಾಗೂ ಗುತ್ತಿಗೆ ಕಾರ್ಮಿಕರ ಸಂಘಟನೆ ವತಿಯಿಂದ ಇಲ್ಲಿನ ಜಯಲಕ್ಷ್ಮಿಪುರಂನಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಯ ಮುಂಭಾಗ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕನಿಷ್ಠ ವೇತನ ತಿಂಗಳಿಗೆ ₹ 18 ಸಾವಿರ ವೇತನವನ್ನು ನಿಗದಿಪಡಿಸಬೇಕು ಎಂದು ಘೋಷಣೆಗಳನ್ನು ಕೂಗಿದ ಅವರು, ಕೆಲಸದಿಂದ ತೆಗೆದು ಹಾಕಿದ ದಿನಗೂಲಿ ನೌಕರರನ್ನು ಮರುನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಸಂಘಟನೆ ಪ್ರತಿಭಟನೆಗೆ ಬೆಂಬಲ ನೀಡಿತ್ತು. ಕೆಂಬಾವುಟಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಸರ್ಕಾರದ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT