ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋಡಿ’ ಆಟ ಮುಗಿಸಿದ ಗಂಗಾಧರಪ್ಪ

ಹಬ್ಬಗಳಲ್ಲಿ ವಿಸ್ಮಯದ ಮೂಲಕ ಜನರನ್ನು ಆಕರ್ಷಿಸುತ್ತಿದ್ದರು
Last Updated 28 ಸೆಪ್ಟೆಂಬರ್ 2016, 11:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಪ್ರತಿ ಗಣಪತಿ ಹಬ್ಬದಲ್ಲಿಯೂ ಗಂಗಮ್ಮಗುಡಿ ರಸ್ತೆಯಲ್ಲಿ ಒಂದಿಲ್ಲೊಂದು ಮೋಡಿ ವಿಸ್ಮಯಗಳು ಜನರನ್ನು ಆಕರ್ಷಿಸುತ್ತಿದ್ದವು. ಆದರೆ ಇನ್ನು ಮುಂದೆ ಜನರಿಗೆ ಈ ಮೋಡಿ ಆಟದ ದರ್ಶನವಾಗುವುದಿಲ್ಲ. ಏಕೆಂದರೆ ಹಲವು ಮೋಡಿಗಳನ್ನು ಮಾಡಿ ಸ್ಥಳೀಯರ ಬಾಯಲ್ಲಿ ಪವಾಡ ಪುರುಷ ಎಂದು ಕರೆಸಿಕೊಳ್ಳುತ್ತಿದ್ದ ಬಿ.ವಿ. ಗಂಗಾಧರಪ್ಪ ಇನ್ನಿಲ್ಲ.

ಗಂಗಮ್ಮಗುಡಿ ರಸ್ತೆಯ ಜಾಲಾರಿ ಗಂಗಮಾಂಭ ದೇವಾಲಯದಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ದರ್ಶನ ಪಡೆಯುತ್ತಿದ್ದ ಪ್ರತಿಯೊಬ್ಬರೂ ದೇವಾಲಯದ ಪ್ರಧಾನ ಅರ್ಚಕ ಬಿ.ವಿ.ಗಂಗಾಧರಪ್ಪ ಅವರು ದೇಗುಲದ ಬಳಿಯಲ್ಲಿಯೇ ಪ್ರತಿ ವರ್ಷ ಪ್ರದರ್ಶಿಸುತ್ತಿದ್ದ ಬಗೆಬಗೆಯ ಮೋಡಿಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದರು. ವಿಸ್ಮಯಗೊಳ್ಳುತ್ತಿದ್ದರು.

ಇತ್ತೀಚೆಗೆ ತೊಡೆಯ ಮೇಲೆ ರಾಗಿ ಬೀಸುವ ಕಲ್ಲನ್ನು ಇಟ್ಟಿಕೊಂಡಿರುವ ಸುಮಾರು 60 ಕೆ.ಜಿ ತೂಕದ ಗಣಪತಿ ಮೂರ್ತಿಯನ್ನು ಕೇವಲ ಮೂಲಂಗಿ ಹಾಗೂ ಪೆನ್‌ ಬಳಸಿ ನೇತು ಹಾಕಿ ಜನರನ್ನು ಚಕಿತಗೊಳಿಸಿದ್ದರು. ಜತೆಗೆ ಆ ಮೂರ್ತಿ ತನ್ನ ಮುಂದಿರುವ ಡಬ್ಬಕ್ಕೆ ಕಾಣಿಕೆ ಹಾಕಿದರೆ ಉದರದಿಂದ ಸಂಗೀತ ಹೊಮ್ಮಿಸಿ, ಬಲ ಹಸ್ತದಿಂದ ಆರ್ಶೀವಾದ ಕೂಡ ಮಾಡುತ್ತಿತ್ತು. ಮತ್ತೊಂದೆಡೆ  ತೆಂಗಿನ ಕಾಯಿ ಜುಟ್ಟಿಗೆ 50 ಕೆ.ಜಿ ತೂಕದ ಕಲ್ಲನ್ನು ನೇತು ಹಾಕಿದ್ದರು.

ಗಂಗಾಧರಪ್ಪ ಅವರು ಇತ್ತೀಚೆಗೆ ತಮ್ಮ ರಹಸ್ಯ ವಿದ್ಯೆ ಕುರಿತು ಪ್ರತಿಕ್ರಿಯಿಸುತ್ತ, ‘ಇದು ತುಂಬಾ ಪ್ರಾಚೀನ ವಿದ್ಯೆ. ಇದೀಗ ಇಂತಹ ವಿದ್ಯೆ ಪ್ರಯೋಗ ಮಾಡುವವರು ವಿರಳವಾಗಿದ್ದಾರೆ. ನಮ್ಮ ಹಿರಿಯರಿಂದ ಈ ವಿದ್ಯೆ ಕಲಿತಿದ್ದೆ’ ಎಂದು ನಕ್ಕು ಹೇಳಿದ್ದರು.

ರಾಗಿ ರೊಟ್ಟಿಗೆ ರಾಗಿ ಬೀಸುವ ಕಲ್ಲು ನೇತು ಹಾಕುವುದು, ತೆಂಗಿನ ಕಾಯಿ ಜುಟ್ಟಿಗೆ ಬೈಕ್‌ ಕಟ್ಟಿ ನೇತಾಡಿಸುವುದು, ಚಕ್ಕುಲಿಯ ಸಹಾಯದಿಂದ ಗಣಪತಿ ಮೂರ್ತಿ ತೂಗು ಹಾಕುವುದು, ಸೋರೆಕಾಯಿಗೆ ತಕ್ಕಡಿ ಕಟ್ಟಿ ಅದರಲ್ಲಿ ಮಗುವನ್ನು ಕೂಡಿಸುವುದು, ಬಾಳೆಹಣ್ಣಿಗೆ ಭಾರಿ ತೂಕದ ಕಲ್ಲು ನೇತು ಹಾಕುವುದು, ವಿದ್ಯುತ್‌ ಪ್ರವಹಿಸುತ್ತಿರುವ ವೈರ್‌ಗಳನ್ನು ಬರಿಗೈಲಿ ಹಿಡಿದು ತೋರಿಸುವುದು... ಇಂತಹ ಹಲವು ಚಮತ್ಕಾರಗಳನ್ನು ಗಂಗಾಧರಪ್ಪ ಅವರು ಸಾರ್ವಜನಿಕವಾಗಿ ಪ್ರದರ್ಶಿಸಿದ್ದರು.

ತಂದೆ ವೆಂಕಟನರಸಿಂಹಯ್ಯ ಅವರಿಂದ ಬಳುವಳಿಯಾಗಿ ಬಂದ ಜಾಲಾರಿ ಗಂಗಮಾಂಭ ದೇವಾಲಯ ಅರ್ಚಕ ವೃತ್ತಿಯ ಜತೆಗೆ ಗಂಗಾಧರಪ್ಪ ಅವರು ಬಾಲಗ್ರಹ ಪೀಡಿತ ಮಕ್ಕಳಿಗೆ ತಾಯತ ಕಟ್ಟುವ ಕೆಲಸ  ಮಾಡುತ್ತಿದ್ದರು. ಶಿಡ್ಲಘಟ್ಟ, ಹೊಸಕೋಟೆ, ಬಾಗೇಪಲ್ಲಿ ಸೇರಿದಂತೆ ಜಿಲ್ಲೆಯ ಅನೇಕ ಭಾಗಗಳಿಂದ ಜನರು ಚಿಕ್ಕ ಮಕ್ಕಳನ್ನು ಕರೆದುಕೊಂಡು ಇವರ ಬಳಿ ಬರುತ್ತಿದ್ದರು.

‘ನಾನು ಅರ್ಚಕ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದಂತೆ ತಮ್ಮ ಬಿಡುವಿನ ವೇಳೆಯಲ್ಲಿ ಮಾವನವರು ಮೋಡಿಗಳನ್ನು ಪ್ರದರ್ಶಿಸುವ ಜತೆಗೆ ಬಾಲಗ್ರಹಕ್ಕೆ ತಾಯತ ಕಟ್ಟುತ್ತ ಬರುತ್ತಿದ್ದರು. ಅದನ್ನು ನಾನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಆದರೆ ಅವರಲ್ಲಿದ್ದ  ಮೋಡಿ ಕಲೆಯನ್ನು ಅವರು ಯಾರಿಗೂ ಹೇಳಿಕೊಟ್ಟಿಲ್ಲ.
ಸದ್ಯ ನಗರದಲ್ಲಿ ಅಂತಹ ಮೋಡಿ ಮಾಡುವವರು ಯಾರು ಇಲ್ಲ’ ಎಂದು ಗಂಗಾಧರಪ್ಪ ಅವರ ಅಳಿಯ ರಮೇಶ್ ತಿಳಿಸಿದರು.

‘ನನ್ನದು ಮತ್ತು ಗಂಗಾಧರಪ್ಪ ಅವರದು ಚಿಕ್ಕಂದಿನ ನಂಟು. ಆತ ಚಿಕ್ಕವನಿರುವಾಗಲೇ ಸ್ಮಶಾನಕ್ಕೆ ಹೋಗಿ ಸಾಧಕರನ್ನು ನೋಡಿಕೊಂಡು ಬರುತ್ತಿದ್ದ. ಜತೆಗೆ ಕ್ಷುದ್ರಶಕ್ತಿಗಳ ಉಪಾಸನೆ ಮಾಡುತ್ತಿದ್ದ.  ಚಿಕ್ಕವಯಸ್ಸಿನಲ್ಲಿಯೇ ಪಾತ್ರೆಯಲ್ಲಿ ಅಕ್ಕಿ, ನೀರು ಹಾಕಿ ಬೆಂಕಿಯ ಸಹಾಯವಿಲ್ಲದೆ ಅನ್ನ ಮಾಡಿ ತೋರಿಸಿದ್ದರು.

ಉತ್ತಮ ಈಜುಪಟು ಆಗಿದ್ದ ಆತ ಬಾವಿಯ ಆಳಕ್ಕೆ ಹೋಗಿ ಮಣ್ಣು ಎತ್ತಿಕೊಂಡು ಬರುವ ಸಾಹಸ ಮಾಡಿ ತೋರುತ್ತಿದ್ದ’ ಎಂದು ಅವರ ಒಡನಾಟವನ್ನು ಗಂಗಮ್ಮನಗುಡಿ ರಸ್ತೆ ನಿವಾಸಿ ನಾಗರಾಜ್ ಸ್ಮರಿಸಿಕೊಂಡರು.

ಅರ್ಚಕ ಬಿ.ವಿ.ಗಂಗಾಧರಪ್ಪ ನಿಧನ
ಚಿಕ್ಕಬಳ್ಳಾಪುರದ ಗಂಗಮ್ಮಗುಡಿ ರಸ್ತೆಯ ಜಾಲಾರಿ ಗಂಗಮಾಂಭ ದೇವಾಲಯದ ಪ್ರಧಾನ ಅರ್ಚಕ ಬಿ.ವಿ.ಗಂಗಾಧರಪ್ಪ (67) ಅವರು ಸೋಮವಾರ ರಾತ್ರಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗಂಗಮ್ಮಗುಡಿ ರಸ್ತೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಮೃತರಿಗೆ ಒಬ್ಬ ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT