ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ, ಭಾರತದಲ್ಲಿ ವಾಯುಮಾಲಿನ್ಯ ದುಷ್ಪರಿಣಾಮ ಹೆಚ್ಚು

Last Updated 30 ಸೆಪ್ಟೆಂಬರ್ 2016, 20:11 IST
ಅಕ್ಷರ ಗಾತ್ರ

ನವದೆಹಲಿ: ವಾಯು ಮಾಲಿನ್ಯದಿಂದಾಗಿ ಜಗತ್ತಿನಲ್ಲಿಯೇ ಚೀನಾದಲ್ಲಿ ಅತಿ ಹೆಚ್ಚು ಜನ ಅಂದರೆ ವರ್ಷಕ್ಕೆ 10.32 ಲಕ್ಷ ಜನ ಬಲಿಯಾಗುತ್ತಿದ್ದಾರೆ.
ಭಾರತ ಎರಡನೇ ಸ್ಥಾನದಲ್ಲಿದ್ದು, ಇಲ್ಲಿ ಸಾವಿನ ಸಂಖ್ಯೆ ವರ್ಷಕ್ಕೆ 6.20 ಲಕ್ಷ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ವಾಯು ಮಾಲಿನ್ಯದಿಂದ ರಷ್ಯಾದಲ್ಲಿ 1.40 ಲಕ್ಷ ಜನರು ಸಾಯುತ್ತಿದ್ದಾರೆ ಎಂಬುದನ್ನು ವರದಿ ಉಲ್ಲೇಖಿಸಿದೆ.

ಹೆಚ್ಚುತ್ತಿರುವ ಸಾವು ನೋವು
ತೀವ್ರ ವಾಯು ಮಾಲಿನ್ಯದಿಂದ ಭಾರತದಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚುತ್ತಿದೆ. ಪ್ರಮುಖವಾಗಿ ಹೃದಯ ಸಂಬಂಧಿ ಕಾಯಿಲೆಗಳು, ತೀವ್ರ ಉಸಿರಾಟದ ಸಮಸ್ಯೆ, ಪಾರ್ಶ್ವವಾಯು, ಶ್ವಾಸನಾಳದ ಸೋಂಕು ಮತ್ತು ಶ್ವಾಸಕೋಶದ ಕ್ಯಾನ್ಸರ್‌ ಹೆಚ್ಚುತ್ತಿವೆ.

‘ಸಂಭವಿಸುತ್ತಿರುವ ಸಾವುಗಳಲ್ಲಿ ಶೇ 94ರಷ್ಟು ಅಕಾಲಿಕ. ಅದಕ್ಕೆ ವಾಯು ಮಾಲಿನ್ಯವೇ ಪ್ರಮುಖ ಕಾರಣ.  ಮಲಿನಗೊಂಡಿರುವ ಗಾಳಿಯಿಂದಾಗಿ ಐದು ವರ್ಷದೊಳಗಿನ ಮಕ್ಕಳು ಉಸಿರಾಟಕ್ಕೆ ಸಂಬಂಧಿಸಿದ ಸೋಂಕಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ಡಬ್ಲ್ಯುಎಚ್‌ಒ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕ ಪೂನಂ ಖೇತ್ರಪಾಲ್‌ ಸಿಂಗ್‌ ಹೇಳಿದ್ದಾರೆ.

* ಆಗ್ನೇಯ ಏಷ್ಯಾದ 11 ದೇಶಗಳ ಪೈಕಿ ಭಾರತದಲ್ಲಿ ಅಶುದ್ಧ ಗಾಳಿ ಹೆಚ್ಚು.
* ಮಾಲ್ಡೀವ್ಸ್‌ ಮತ್ತು ಭೂತಾನ್‌ನಲ್ಲಿ ಶುದ್ಧ ಗಾಳಿಯ ಪ್ರಮಾಣ ಹೆಚ್ಚಿದ್ದು, ಅಲ್ಲಿ ಸಾವಿನ ಪ್ರಮಾಣವೂ ಕಡಿಮೆ.
* ವಾಯು ಮಾಲಿನ್ಯದಿಂದ ಆಗುತ್ತಿರುವ ಶೇ 90ರಷ್ಟು ಸಾವು, ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿಯೇ ಸಂಭವಿಸುತ್ತಿವೆ.
* ಪ್ರತಿ 3 ಸಾವುಗಳಲ್ಲಿ 2  ಸಾವು ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಪೆಸಿಫಿಕ್‌ ಪ್ರದೇಶದಲ್ಲಿ ಸಂಭವಿಸುತ್ತಿವೆ.
* ಕೆಟ್ಟ ವಾಯು ಸೇವನೆಯಿಂದ ಜಗತ್ತಿನಲ್ಲಿ ವರ್ಷಕ್ಕೆ 60 ಲಕ್ಷ  ಜನರು ಸಾವನ್ನಪ್ಪುತ್ತಿದ್ದಾರೆ.
* ಜಗತ್ತಿನ 3000 ಪ್ರದೇಶಗಳಲ್ಲಿ ದತ್ತಾಂಶ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದೆ.
* ವಾತಾವರಣದಲ್ಲಿರುವ 2.5 ಮೈಕ್ರೋಮೀಟರ್‌ಗಿಂತ  (ಪಿ.ಎಂ2.5- ಇಲ್ಲಿ ಪಿ.ಎಂ ಎಂದರೆ ಪಾರ್ಟಿಕ್ಯುಲೇಟ್‌ ಮ್ಯಾಟರ್‌. ಇವು ಭಿನ್ನ ರೂಪದಲ್ಲಿರುವ ಕಣಗಳು) ಕಡಿಮೆ ಗಾತ್ರದ ಅಪಾಯಕಾರಿ ಕಣಗಳನ್ನು ಗುರಿಯಾಗಿಸಿ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. 
* ಡಬ್ಲ್ಯುಎಚ್‌ಒ ಸಂಶೋಧಕರು ಮತ್ತು ಇಂಗ್ಲೆಂಡ್‌ನ ಬಾತ್‌ ವಿ ವಿ ತಜ್ಞರು ಈ ದತ್ತಾಂಶಗಳನ್ನು ವಿಶ್ಲೇಷಿಸಿ ವರದಿ ಸಿದ್ಧಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT