ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಅನ್ಯಾಯ: ಸಿಎಂ ಬೇಸರ

Last Updated 1 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮೈಸೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠದಿಂದ ನ್ಯಾ. ಉದಯ್‌ ಯು. ಲಲಿತ್‌ ಅವರನ್ನು ಬದಲಿಸುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಉದಯ್ ಯು. ಲಲಿತ್‌ ವಕೀಲರಾಗಿದ್ದಾಗ ಜಯಲಲಿತಾ ಅವರ ಪರ ವಕಾಲತ್ತು ವಹಿಸಿದ್ದರು ಎನ್ನುವ ಕಾರಣಕ್ಕೆ ಅವರನ್ನು ಬದಲಾಯಿಸುವಂತೆ ಕೇಳುವುದಿಲ್ಲ ಎಂದು ಮುಖ್ಯಮಂತ್ರಿ ಇಲ್ಲಿಯ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಅಲ್ಲದೆ, ಈ ಹಂತದಲ್ಲಿ ವಿವಾದವನ್ನು ಸಾಂವಿಧಾನ ಪೀಠಕ್ಕೆ ವಹಿಸುವಂತೆಯೂ ಅರ್ಜಿ ಹಾಕುವುದಿಲ್ಲ ಎಂದೂ ಸಿದ್ದರಾಮಯ್ಯ ಹೇಳಿದರು.

ವಿರೋಧ ಪಕ್ಷದ ನಾಯಕನಾಗಿದ್ದಾಗ ನಾರಿಮನ್‌ ಅವರನ್ನು ಬದಲಿಸುವಂತೆ ಹೇಳಿಕೆ ನೀಡಿದ್ದೆ ಎಂಬುದನ್ನು ತಪ್ಪಾಗಿ ಅರ್ಥೈಸಲಾಗಿದೆ. ವಯಸ್ಸಿನ ಕಾರಣಕ್ಕೆ  ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ ನಾರಿಮನ್‌ ಬದಲಿಸುವುದು ಒಳಿತು ಎಂದಷ್ಟೇ ಸಲಹೆ ನೀಡಿದ್ದೆ ಎಂದರು.

ಚಾಮುಂಡೇಶ್ವರಿಗೆ ಸಿದ್ದರಾಮಯ್ಯ ಮೊರೆ
ರಾಜ್ಯದಲ್ಲಿ ತಲೆದೋರಿರುವ ಕಾವೇರಿ ಬಿಕ್ಕಟ್ಟು ಪರಿಹರಿಸುವಂತೆ ಹಾಗೂ ನ್ಯಾಯ ಒದಗಿಸುವಂತೆ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚಾಮುಂಡಿಬೆಟ್ಟದಲ್ಲಿ ಶನಿವಾರ ನಡೆದ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ದಸರಾ ಉತ್ಸವ ನಾಡಿನ ಸಾಂಸ್ಕೃತಿಕ ಬದುಕಿನ ಪ್ರತಿರೂಪ. ಇಂಥ ಸಂದರ್ಭದಲ್ಲಿ ಕನ್ನಡ ನಾಡಿನ ಅಭಿವೃದ್ಧಿಗೆ ಎಲ್ಲರೂ ಕಂಕಣ ತೊಡಬೇಕು. ನಾಡಿನ ಶ್ರೇಯಸ್ಸಿಗೆ ಬದ್ಧರಾಗಿರುವ ಬಗ್ಗೆ ಪ್ರತಿಜ್ಞೆ ಮಾಡಬೇಕು ಎಂದರು.

‘ಜಲನೀತಿ ಪ್ರಕಾರ ಕುಡಿಯಲು ಮೊದಲ ಆದ್ಯತೆ ನೀಡಬೇಕು. ಎರಡನೇ ಆದ್ಯತೆ ಕೃಷಿ. ಆದರೆ, ತಮಿಳುನಾಡಿನವರಿಗೆ ಕುಡಿಯಲು ನೀರು ಬೇಕಾಗಿಲ್ಲ, ಸಾಂಬಾ ಬೆಳೆಗೆ ಬೇಕಂತೆ. ನಮಗೆ ಕುಡಿಯಲು ಬೇಕು. ಇದು ಅವರಿಗೂ ನಮಗೂ ಇರುವ ವ್ಯತ್ಯಾಸ. ಡಿಸೆಂಬರ್‌ವರೆಗೂ ಆ ರಾಜ್ಯದಲ್ಲಿ ಮಳೆ ಬರುತ್ತದೆ, ಅಂತರ್ಜಲ ಇದೆ. ನಮ್ಮಲ್ಲಿ ಈಗ ಎರಡೂ ಇಲ್ಲ’ ಎಂದು ಬೇಸರದಿಂದ ನುಡಿದರು.

18 ಲಕ್ಷ ಹೆಕ್ಟೇರ್‌ ಜಮೀನಿನಲ್ಲಿ ಕೇವಲ 4 ಲಕ್ಷ ಹೆಕ್ಟೇರ್‌ನಲ್ಲಿ ರೈತರು ಬೆಳೆ ಬೆಳೆದಿದ್ದಾರೆ. ಆ ಬೆಳೆಗೂ ನೀರು ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಕುಡಿಯಲು ನೀರುಬೇಕು. ಇನ್ನು ಪ್ರಾಣಿ ಪಕ್ಷಿಗಳ ಗತಿಯೇನು ಎಂದು ಪ್ರಶ್ನಿಸಿದರು.

ರಾಜ್ಯದ ಜನರು ಕುಡಿಯುವ ನೀರಿಗಾಗಿ ಸಂಕಷ್ಟ ಅನುಭವಿಸುತ್ತಿದ್ದರೂ , ಈ ಬಗ್ಗೆ ಪದೇ ಪದೇ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಸರ್ಕಾರ ಮಾಡಿದ್ದರೂ ತಮಿಳುನಾಡಿಗೆ ಕೃಷಿ ಉದ್ದೇಶಕ್ಕಾಗಿ ನೀರು ಬಿಡುವಂತೆ ನ್ಯಾಯಾಲಯ ಆದೇಶ ನೀಡುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT