ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.88 ಲಕ್ಷ ಎಕರೆ ಬೆಳೆ ನಷ್ಟ: ಸಿದ್ದರಾಮಯ್ಯ

Last Updated 3 ಅಕ್ಟೋಬರ್ 2016, 19:36 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ಅಭಾವ ಹಾಗೂ ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಹರಿಸದಿರುವ ಕಾರಣ 1.88 ಲಕ್ಷ  ಎಕರೆ ಬೆಳೆ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

18.85 ಲಕ್ಷ ಎಕರೆ ಬೆಳೆ ಬೆಳೆಯಲು ಕಾವೇರಿ ನ್ಯಾಯಮಂಡಳಿ ಐತೀರ್ಪಿನಲ್ಲಿಯೇ ಅವಕಾಶ ನೀಡಲಾಗಿದೆ. ಆದರೆ, ಮಳೆ ಆಗದಿರುವುದರಿಂದ ನೀರಾವರಿ ಬೆಳೆ ಬೆಳೆಯಬೇಡಿ ಎಂದು ರೈತರಿಗೆ ಮನವಿ ಮಾಡಲಾಗಿತ್ತು. ಆದರೂ 6.15 ಲಕ್ಷ ಎಕರೆಯಲ್ಲಿ ರೈತರು ಬೆಳೆ ಬೆಳೆದಿದ್ದರು. ಆರಂಭದಲ್ಲಿ ನೀರು ಕೊಡಲು ಸಾಧ್ಯವಾಗದಿರುವುದರಿಂದ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ ಎಂದು ಸೋಮವಾರ ವಿಧಾನಸಭೆಯಲ್ಲಿ ವಿವರಿಸಿದರು.

ಉಳಿದ 4.76 ಲಕ್ಷ ಎಕರೆ ಬೆಳೆಗೆ ಸೆ.17ರಂದು ನೀರು ಹರಿಸಿದ್ದೇ ಕೊನೆ. ಈಗ ಆ ಬೆಳೆ ಉಳಿಯಬೇಕಾದರೆ ಮತ್ತೆ ನೀರು ಕೊಡುವುದು ಅಗತ್ಯವಿದೆ ಎಂದು ಹೇಳಿದರು.ಪರಿಹಾರ ನೀಡುವ ಬಗ್ಗೆ ಸಮೀಕ್ಷೆ: ಕಾವೇರಿ ಜಲಾನಯನ ಪ್ರದೇಶದಲ್ಲಿ ಎಷ್ಟು ಬೆಳೆ ಇದೆ? ಎಷ್ಟು ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು? ಖಾಲಿ ಜಮೀನು ಎಷ್ಟಿದೆ? ರೈತರಿಗೆ ಆದ ನಷ್ಟ ಎಷ್ಟು? ಎಂಬುದರ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಆಗ ಮಧ್ಯಪ್ರವೇಶಿಸಿದ ಶಾಸಕ ಗೋವಿಂದ ಕಾರಜೋಳ, ‘ಕೇವಲ ಕಾವೇರಿ ಪ್ರದೇಶದ ಬೆಳೆ ಬಗ್ಗೆ ಮಾತನಾಡುತ್ತೀರಿ. ಉತ್ತರ ಕರ್ನಾಟಕ ಭಾಗದಲ್ಲಿಯೂ ಸಾಕಷ್ಟು ಬೆಳೆ ನಾಶ ಆಗಿದೆ. ನೀರು ಇಲ್ಲದೆ ಕಬ್ಬು ಒಣಗಿದ್ದು, ಅಲ್ಲಿನ ರೈತರೂ  ನಷ್ಟ ಅನುಭವಿಸಿದ್ದಾರೆ. ಆ ಬಗ್ಗೆಯೂ ಸಮೀಕ್ಷೆ ನಡೆಸಿ’ ಎಂದು ಆಗ್ರಹಿಸಿದರು.

ಆಗ ಸಿದ್ದರಾಮಯ್ಯ, ‘ನಾವು ಅಖಂಡ ಕರ್ನಾಟಕದ ಬಗ್ಗೆ ಮಾತನಾಡಬೇಕು. ನಮಗೆ ಯಾವುದೇ ಭೇದ–ಭಾವ ಇಲ್ಲ. ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ನಷ್ಟ ಆದಾಗಲೂ ಪರಿಹಾರ ನೀಡಿದ್ದೇವೆ’ ಎಂದು ಹೇಳಿದರು. ಇದಕ್ಕೂ ಮುನ್ನ ಜಗದೀಶ ಶೆಟ್ಟರ್‌ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು ಕಾವೇರಿ ಭಾಗದ ರೈತರಿಗೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದರು.

ರೈತರಿಗೆ ಪರಿಹಾರಕ್ಕೆ ಆಗ್ರಹ
ಬೆಂಗಳೂರು: ‘ಮಳೆ ಕೊರತೆಯಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅಪಾರ ಹಾನಿಯಾಗಿದ್ದು, ಅವರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ವಿಧಾನ ಪರಿಷತ್ತಿನಲ್ಲಿ ಸೋಮವಾರ ಹಲವು ಸದಸ್ಯರು ಆಗ್ರಹಿಸಿದರು.

ಜೆಡಿಎಸ್‌ನ ಪುಟ್ಟಣ್ಣ ಮಾತನಾಡಿ, ‘ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ 4 ಲಕ್ಷ ಹೆಕ್ಟೇರ್‌ಗಳಲ್ಲಿ ಬೆಳೆ ಇದೆ. ಒಣಗುತ್ತಿರುವ ಬೆಳೆಗೆ ರಾಜ್ಯ ಸರ್ಕಾರ ನೀರು ಹರಿಸಬೇಕು. ಜತೆಗೆ ರೈತರ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿಯ ರಾಮಚಂದ್ರೇಗೌಡ ಮಾತನಾಡಿ, ‘ನೀರಿಲ್ಲದ ಕಾರಣ ಬೆಳೆ ನಾಶ ಉಂಟಾಗಿದೆ. ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಗೋಪಾಲಸ್ವಾಮಿ, ‘ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಬೆಳೆಗಳು ಒಣಗಿವೆ. ಈ ಜಿಲ್ಲೆಗಳಿಗೆ ಪ್ರತಿದಿನ 3 ಸಾವಿರ ಕ್ಯುಸೆಕ್‌ ನೀರು ಬಿಡಬೇಕು. ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT