ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಭಿಮಾನದ ದಾರಿಯಲ್ಲಿ ನಡೆಯುತ್ತ...

Last Updated 9 ಅಕ್ಟೋಬರ್ 2016, 8:51 IST
ಅಕ್ಷರ ಗಾತ್ರ

ಈ ಹೊತ್ತಿನ ಭಾರತವು ಒಂದು ಬಗೆಯ ಭ್ರಮೆ ಮತ್ತು ಉನ್ಮಾದಗಳಲ್ಲಿ ನರಳುತ್ತಿದೆ. ಹಲವು ರೀತಿಯ ಭ್ರಾಮಕಗಳನ್ನು ದೇಶದ ತುಂಬಾ ತೇಲಿ ಬಿಟ್ಟು, ದೇಶದ ಜನರನ್ನು ಹಿಂದೆಂದೂ ಕಂಡಿರದ ರೀತಿಯಲ್ಲಿ ವ್ಯವಸ್ಥಿತವಾಗಿ ವಂಚಿಸಲಾಗುತ್ತಿದೆ. ಇದರಿಂದ ದೇಶದ ವಾಸ್ತವ ಸಮಸ್ಯೆಗಳು ತೆರೆಮರೆಗೆ ಸರಿದಿವೆ. ನಾಡಿನಾದ್ಯಂತ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ.  ಬಡವ ಮತ್ತು ಶ್ರೀಮಂತರ ನಡುವಣ ವ್ಯತ್ಯಾಸ ಇನ್ನಷ್ಟು ಹೆಚ್ಚಾಗಿ, ಅಪಾಯದ ಅಂಚಿಗೆ ತಲುಪಿದೆ.

ಸುಳ್ಳು ಕಾರಣಗಳನ್ನು ನೀಡುತ್ತಾ ಕೋಮುವಾದದ ದಳ್ಳುರಿಯನ್ನು ಎಲ್ಲೆಡೆಯೂ ಹಬ್ಬಿಸಲಾಗಿದೆ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಮಾಧ್ಯಮಗಳು ಸತ್ಯ ಹೇಳಲು ಅಂಜುತ್ತಿವೆ. ಭಾರತದ ಇತಿಹಾಸ ಮತ್ತು ವರ್ತಮಾನಗಳ ಬಗೆಗೆ ತಿಳಿವಳಿಕೆ ಇಲ್ಲದವರು ಅದರ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ವೈಜ್ಞಾನಿಕ ಸಮ್ಮೇಳನಗಳಲ್ಲಿ ಶಂಖ ಊದುವ, ದನದ ಉಚ್ಚೆಯಲ್ಲಿ ವಜ್ರ ಇದೆಯೆಂದು ನಂಬುವ, ತಿನ್ನುವ ಅನ್ನಕ್ಕೆ ಸಂಶಯಪಡುವ ಜನರನ್ನು ಕಟ್ಟಿಕೊಂಡು ಭಾರತವು ವಿಶ್ವನಾಯಕನಾಗುವ ಕನಸು ಕಾಣುತ್ತಿದೆ. ಈ ನಡುವೆ ದೇಶದ ತುಂಬಾ ಹಬ್ಬಿರುವ ಮದೋನ್ಮತ್ತರ ನಡುವೆ ಸತ್ಯ ಹೇಳುವುದೂ ಅಸಾಧ್ಯವಾಗಿದೆ.

ಈ ಉನ್ಮತ್ತ ಭಾರತಕ್ಕೆ ಕಾರಣಗಳಿಲ್ಲದಿಲ್ಲ. ಸ್ವಾತಂತ್ರ್ಯಾನಂತರದ ಭಾರತವು ಸಾಧಿಸಬಯಸಿದ ಕನಸುಗಳೇ ಅದಕ್ಕಿಂದು ಶಾಪವಾದಂತೆ ತೋರುತ್ತಿದೆ. ಗಾಂಧಿಯನ್ನು ಕೊಂದುದಾಯಿತು, ನೆಹರೂವನ್ನು ಅವಹೇಳನ ಮಾಡಿದ್ದಾಯಿತು, ಸಂವಿಧಾನದ ಬಗ್ಗೆ ಅಪನಂಬಿಕೆಯನ್ನು ಪ್ರಕಟಿಸಿದ್ದಾಯಿತು, ದಲಿತರನ್ನು ಕಟ್ಟಿಹಾಕಿ ಸಾರ್ವಜನಿಕವಾಗಿಯೇ ಥಳಿಸಿದ್ದಾಯಿತು, ಮಹಿಳೆಯರನ್ನು ಅವಮಾನಿಸಿದ್ದಾಯಿತು – ಇದೆಲ್ಲಾ ಆದಮೇಲೆ ಸಾಧಿಸಿದ್ದಾರೂ ಏನು? ಹಾಗೆ ನೋಡಿದರೆ ಇದು ಇಂದುನಿನ್ನಿನ ಕತೆಯಲ್ಲ. ಎಷ್ಟೋ ಸಾವಿರ ವರ್ಷಗಳಿಂದ ಬಹಿರಂಗವಾಗಿಯೇ ನಡೆಯುತ್ತಾ ಬಂದದ್ದು. ಈ ದೇಶದಲ್ಲಿ ಜಾತಿಯ ಶ್ರೇಣೀಕರಣ ಬಹಳ ವ್ಯವಸ್ಥಿತವಾಗಿಯೇ ಕೆಲಸ ಮಾಡುತ್ತಾ ಬಂದಿದೆ.

ಹುಟ್ಟಿನಿಂದಲೇ ಒಬ್ಬ ವ್ಯಕ್ತಿಯ ಸ್ಥಾನಮಾನವನ್ನು ಅಳೆಯುವ ಜಾತಿಪದ್ಧತಿ ಅತ್ಯಂತ ಹೇಯವಾಗಿದ್ದು, ಅದು ಮಾನವನ ಘನತೆಯನ್ನು ತೀವ್ರವಾಗಿ ಕುಂದಿಸಿದೆ. ಶ್ರೇಣೀಕರಣದ ಮೇಲ್ತುದಿಯ ಜನರಿಗೆ ಎಲ್ಲವನ್ನೂ ಕೊಡುವ ಈ ಪದ್ಧತಿಯು ಕೆಳಗಿನವರಿಗೆ ಎಲ್ಲವನ್ನೂ ನಿರಾಕರಿಸುತ್ತಾ, ಅವರನ್ನು ಊರ ಹೊರಗಿಡಲು ಕರೆಕೊಡುವುದಲ್ಲದೆ, ಹೇಲು ಹೊರಲು ಒತ್ತಾಯ ಮಾಡುತ್ತದೆ. ಇಂಥ ಅಮಾನುಷತೆಯನ್ನು  ಸಮರ್ಥಿಸಲು ಬಗೆಬಗೆಯ ವಾದಗಳನ್ನೂ ಶಾಸ್ತ್ರಕೃತಿಗಳನ್ನೂ ಮಠಗಳನ್ನೂ ದೇವಳಗಳನ್ನೂ ನಾವು ನಿರ್ಮಾಣ ಮಾಡುತ್ತಾ ಬಂದೆವು. ಇವೆಲ್ಲ ಹಿಂದುಳಿದವರು ಒಂದು ಒಳ್ಳೆಯ ಹೆಸರನ್ನೂ ಇಟ್ಟುಕೊಳ್ಳಲೂ ಬಿಟ್ಟಿಲ್ಲ. ಶೂದ್ರರು ಜುಗುಪ್ಸೆ ತರುವ ಹೆಸರನ್ನು ಇಟ್ಟುಕೊಳ್ಳಬೇಕೆಂದು ‘ಮನುಸ್ಮೃತಿ’ ಹೇಳುತ್ತದೆ.

ಇವನ್ನೆಲ್ಲಾ ಗಮನಿಸಿದ ಕೆಲವು ಮಹನೀಯರು ಇಂಥ ಅಸಮಾನತೆಗಳ ವಿರುದ್ಧ ಆಗಾಗ ಬಂಡೇಳುತ್ತಲೇ ಬಂದಿದ್ದಾರೆ. ಬುದ್ಧ, ಮಹಾವೀರ, ಬಸವ, ಕಬೀರ, ಗಾಂಧಿ, ನಾರಾಯಣಗುರು ಮೊದಲಾದವರು ತಮ್ಮ ಕಾಲದ ಅನ್ಯಾಯಗಳನ್ನು ಖಂಡಿಸುತ್ತಲೇ ಈ ದೇಶದ ಪ್ರಜ್ಞೆಯನ್ನು ಜೀವಂತವಾಗಿರಿಸಲು ಹೆಣಗಿದವರು. ಶಂಕರಾಚಾರ್ಯರಂಥವರ ಮನಸು ಕೂಡಾ ದೇಶದ ಕೊಳಕುಗಳಿಗೆ ಕೊಂಚ ಅಳುಕಿತ್ತು. ಅಂಬೇಡ್ಕರ್ ಅವರು ಭಾರತದ ಇತಿಹಾಸ, ಪುರಾಣ ಮತ್ತು ವರ್ತಮಾನಗಳನ್ನು ತಲಸ್ಪರ್ಶಿಯಾಗಿ ಅಭ್ಯಸಿಸಿ, ಅಸಮಾನತೆಯ ಮೂಲನೆಲೆಗಳ ಮೇಲೆ ದಾಳಿ ಮಾಡಿ, ಹೊಸ ಭಾರತದ ನಿರ್ಮಾಣಕ್ಕೆ ಬೇಕಾದ ತಳಹದಿಯೊಂದನ್ನು ನಿರ್ಮಿಸಿಕೊಟ್ಟರು. ಆ ತಳಹದಿಯ ಮೇಲೆ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕೊಡಲು ಕರೆ ಕೊಡುವ ಸಂವಿಧಾನವನ್ನು ಭಾರತ ಅಂಗೀಕರಿಸಿಕೊಂಡಿತು.

ಸಂವಿಧಾನದ ಮೂಲ ಆಶಯಕ್ಕೆ ಭಂಗಬಾರದಂತೆ ಸಮಾನತೆಯನ್ನು ತರಲು ಸ್ವಾತಂತ್ರ್ಯಾನಂತರದ ಭಾರತ ಶ್ರಮಿಸುತ್ತಾ ಬಂತು. ಅದರಲ್ಲಿ ಸಾಕಷ್ಟು ಏಳುಬೀಳುಗಳಿದ್ದರೂ ಒಟ್ಟಾರೆಯಾಗಿ ನಡೆದುಬಂದ ಹಾದಿ ಅಷ್ಟೇನೂ ಕೆಟ್ಟದ್ದಾಗಿರಲಿಲ್ಲ. ಆದರೆ ರಾಜಕೀಯ ಪಕ್ಷಗಳ ಅತಿಯಾದ ಭ್ರಷ್ಟಾಚಾರ, ಜಾತಿ ಆಧಾರಿತ ಚುನಾವಣಾ ರಾಜಕೀಯ ಮೊದಲಾದ ಅಂಶಗಳಿಂದ ನಿರೀಕ್ಷಿತ ಪ್ರಗತಿ ಸಾಧ್ಯವಾಗಲಿಲ್ಲ. ಹಿಂದುಳಿದವರ, ಅದರಲ್ಲೂ ದಲಿತರ ಬಾಳಿನಲ್ಲಿ ಹೊಸಬೆಳಕು ಮೂಡಲೇ ಇಲ್ಲ.

ಈ ನಡುವೆ ಇನ್ನೊಂದು ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ. ಅದೆಂದರೆ, ಯಾವುದು ಈ ದೇಶವನ್ನು ಇದುವರೆಗೆ ಹಿಂದುಳಿದಿರುವಂತೆ ಮಾಡಿತೋ ಅದನ್ನೇ ಮತ್ತೆ ಸಂರಕ್ಷಿಸುವ ಕೆಲಸ ಶುರು ಆಗುತ್ತಿರುವುದು. ಇದರ ಮೊದಲ ಭಾಗವೇ ಸಮಾನತೆಗೆ ತುಡಿಯುವ ಸಂವಿಧಾನದ ಬಗ್ಗೆ ಅಪನಂಬಿಕೆ ಹುಟ್ಟಿಸುವುದು. ಇದನ್ನು ಆರಂಭ ಮಾಡಿದವರು ಚುನಾಯಿತ ಪ್ರತಿನಿಧಿಗಳಲ್ಲ, ಬದಲು ಚುನಾಯಿತ ಪ್ರತಿನಿಧಿಗಳನ್ನು ನಿಯಂತ್ರಿಸುವ ಕೆಲವು ಹೊರಗಿನ ಶಕ್ತಿಗಳು. ಇದೊಂದು ವಿಚಿತ್ರ ಪರಿಸ್ಥಿತಿ ಭಾರತಕ್ಕೆ. ತುರ್ತು ಪರಿಸ್ಥಿತಿಯನ್ನು ಹೇರಿದ ಇಂದಿರಾ ಗಾಂಧಿಯವರನ್ನು ಭಾರತದ ಪ್ರಜೆಗಳು ಅಧಿಕಾರದಿಂದ ಕೆಳಗಿಳಿಸಿದರು. ಅನೇಕ ಮಿತಿಗಳ ನಡುವೆ ಪ್ರಜಾಪ್ರಭುತ್ವಕ್ಕೆ ಅಂಥ ಒಂದು ಶಕ್ತಿ ಇದೆ.

ಆದರೆ ಚುನಾವಣಾ ಕಣಕ್ಕಿಳಿಯದೇ ದೇಶವನ್ನು ನಿಯಂತ್ರಿಸಲು ಹೊರಟ ಶಕ್ತಿಗಳನ್ನು ಇದಿರಿಸುವುದು ಹೇಗೆ? ಭಾರತ ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಬೇಕಾದ ಪರಿಸ್ಥಿತಿ ಈಗ ಒದಗಿ ಬಂದಿದೆ. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯನ್ನು ಆಧರಿಸಿ, ಅದರ ಮೇಲೆಯೇ ತಮ್ಮ ಬದುಕನ್ನು ಕಟ್ಟಿಕೊಂಡವರಿಗೆ ಸಂವಿಧಾನವೇ ಒಂದು ತೊಡಕಾದಂತೆ ಕಂಡರೆ ಅಚ್ಚರಿಯೇನಿಲ್ಲ.

ಈ ಬಗೆಯ ಸಂವಿಧಾನೇತರ ಶಕ್ತಿಗಳು ಧಾರ್ಮಿಕ ತಳಹದಿಯ ಮೇಲೆ ದೇಶವನ್ನು ಕಟ್ಟಲು ಹೊರಟಿದ್ದು ಅದು ಈಗಾಗಲೇ ವಿಪರೀತ ಪರಿಣಾಮವನ್ನು ಬೀರಲು ಆರಂಭಿಸಿವೆ. 19ನೇ ಶತಮಾನದ ಮುಖ್ಯ ಚಿಂತಕರಾದ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ದಯಾನಂದ ಸರಸ್ವತಿ, ರಾಜಾರಾಮ ಮೋಹನ ರಾಯ್ ಮೊದಲಾದವರು ಭಾರತೀಯ ಧರ್ಮಗಳ ಬಗೆಗೆ, ಶಾಸ್ತ್ರಗಳ ಬಗೆಗೆ ತುಂಬಾ ವಿಮರ್ಶಾತ್ಮಕವಾದ ಒಂದು ಧೋರಣೆಯನ್ನು ಹೊಂದಿದ್ದರು.

ಹಾಗಾಗಿ ಧಾರ್ಮಿಕ ನಂಬಿಕೆಗಳನ್ನು ಪರಿಷ್ಕರಿಸುವ ಕೆಲಸವನ್ನು ಮಾಡಲು ಆಗ ಸಾಧ್ಯವಿತ್ತು. ಆದರೆ ಈಗ ಭಾರತದಲ್ಲಿ ಅಂಥ ವಿಮರ್ಶಾತ್ಮಕ ಧೋರಣೆಗಳನ್ನು ಹೊಂದುವುದು ಸಾಧ್ಯವಿಲ್ಲವಾಗಿದೆ. ಒಂದು ರಾಜಕೀಯ ಪಕ್ಷವನ್ನು ದೇಶದೊಂದಿಗೆ ಸಮೀಕರಿಸಿ, ವ್ಯಕ್ತಿಗಳನ್ನು ರಾಷ್ಟ್ರೀಯತೆಯೊಂದಿಗೆ ಜೋಡಿಸಿ ಮಾತಾಡುವವರ ನಡುವೆ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ.

ವಿಮರ್ಶೆ ಇಲ್ಲಿ ರಾಷ್ಟ್ರದ್ರೋಹದ ಹಾಗೆ ಕಾಣಲಾರಂಭಿಸುತ್ತದೆ. ‘ಇಂದಿರಾ ಅಂದರೆ ಇಂಡಿಯಾ’ ಅಂತ ದೇವಕಾಂತ ಬರುವಾ ಹೇಳಿದಾಗ ಸಹಜವಾಗಿ ಮುಗಿಬಿದ್ದ ಜನರೇ ಈಗ ಅದೇ ಹಾದಿ ಹಿಡಿಯುತ್ತಿರುವುದು ಅವರೆಲ್ಲ ಇತಿಹಾಸದಿಂದ ಪಾಠ ಕಲಿತಿಲ್ಲ ಎಂಬುದನ್ನು ಸೂಚಿಸುತ್ತದೆ, ಜೊತೆಗೆ ನಾವು ಅವರಿಂದ ತುಂಬಾ ಬೇರೆಯೇನೂ ಅಲ್ಲ ಎಂಬುದನ್ನೂ ಹೇಳುತ್ತಾ ಹೋಗುತ್ತಿದ್ದಾರೆ. ಇಂಥವನ್ನು ಸಮರ್ಥಿಸಲು ಸಹಜವಾಗಿ ಕೆಲವು ಚಿಂತಕರು ಹುಟ್ಟಿಕೊಳ್ಳುತ್ತಾರೆ. ಅವರು ಈ ದೇಶದಲ್ಲಿ ಜಾತಿ ಇರಲಿಲ್ಲ, ಇಲ್ಲಿನ ಮಂಗಗಳಿಗೆ ಸೇತುವೆ ಕಟ್ಟುವಷ್ಟು ಬುದ್ಧಿ ಇತ್ತು, 5000 ವರ್ಷದಷ್ಟು ಹಿಂದೆಯೂ ನಮ್ಮಲ್ಲಿ ಅದಿತ್ತು– ಇದಿತ್ತು ಎಂದೆಲ್ಲಾ ಪ್ರವಚನ ಶುರು ಮಾಡುತ್ತಾರೆ.

ಎಲ್ಲವೂ ಇತ್ತೋ ಏನೋ? ಮಲ ವಿಸರ್ಜನೆ ಮಾಡಲು ಪಾಯಿಖಾನೆಗಳು ಮಾತ್ರ ಇರಲಿಲ್ಲ. ಅದಕ್ಕಾಗಿ ಒಂದು ಸಮುದಾಯವನ್ನು ಸೃಷ್ಟಿಮಾಡಿಕೊಳ್ಳಬೇಕಾಯಿತು. ಮಾನವನ ಘನತೆಗೆ ಕುಂದು ತರುವ ವಿಷಯಗಳ ಬಗ್ಗೆ ಕನಿಷ್ಠ ನಾಚಿಕೆಯೂ ಪಡದವರು, ಇದೀಗ ಅವುಗಳನ್ನು ಮಾನವನ ಘನತೆಯನ್ನು ಹೆಚ್ಚಿಸಲು ಬಳಸಿಕೊಳ್ಳುತ್ತಿರುವುದು ಇತಿಹಾಸದ ವ್ಯಂಗ್ಯವೇ ಸರಿ. ತಮಾಷೆ ಎಂದರೆ ಇದನ್ನು ಆಗು ಮಾಡಿಕೊಳ್ಳುತ್ತಿರುವವರು ಅವಮಾನಕ್ಕೆ ಒಳಗಾದವರೇ.

ಧಾರ್ಮಿಕ ಪಠ್ಯಗಳನ್ನು ಓದುವುದು ಬಿಡಿ, ಅದನ್ನು ಕಣ್ಣಿಂದಲೂ ನೋಡದವರು ಇದೀಗ ಅವುಗಳ ಬಗೆಗೆ ವಕಾಲತು ಆರಂಭಿಸಿದ್ದಾರೆ. ಪಠ್ಯಗಳ ಬಗೆಗೆ ಚರ್ಚೆಗಳು ಇಲ್ಲವಾಗಿ ಅವುಗಳ ಬಹಿಷ್ಕಾರಕ್ಕೆ ಒತ್ತಡಗಳನ್ನು ಹಾಕುತ್ತಿದ್ದಾರೆ. ಬಹುರೂಪೀ ಭಾರತಕ್ಕೆ ಏಕರೂಪವನ್ನು ಕೊಡುವ ಅವಸರದಲ್ಲಿ ಭಾರತದ ಆಂತರಿಕ ಸತ್ವ ಕಳೆಗುಂದುತ್ತಾ ಹೋಗುತ್ತಿದೆ. ಇದು ಹಿಂದುಳಿದವರು ಸಾಂಸ್ಕೃತಿಕವಾಗಿ ಮಾಡಿಕೊಳ್ಳುತ್ತಿರುವ ಆತ್ಮಹತ್ಯೆಯೇ ಸರಿ.

ಈ ಬೆಳವಣಿಗೆಗಳು ಭಾರತ ನಿಜವಾಗಿ ನಡೆಯಬೇಕಾದ ಹಾದಿಯ ದಿಕ್ಕನ್ನು ಸಮರ್ಥವಾಗಿ ಬದಲಾಯಿಸಿಬಿಟ್ಟಿದೆ. ಶತಮಾನದ ತಮ್ಮ ಬವಣೆಗಳ ಬಗ್ಗೆ ಮಾತಾಡಬೇಕಾಗಿದ್ದ, ಹೋರಾಡಬೇಕಾಗಿದ್ದ ದಲಿತರು ಮತ್ತು ಹಿಂದುಳಿದವರು ಇವತ್ತು ತಮ್ಮನ್ನು ಯಾರು ಶೋಷಿಸಿದರೋ ಅವರ ಪರವಾಗಿ ನಿಂತು ತಮ್ಮ ವೈರಿಗಳನ್ನು ತಪ್ಪಾಗಿ ಬೇರೆಡೆಗೆ ಗುರುತಿಸಿಕೊಂಡು, ಶೋಷಣೆ ನಿರಾತಂಕವಾಗಿ ನಡೆಯುವ ಹಾಗೆ ಮಾಡಿಕೊಂಡಿದ್ದಾರೆ. ದೇಶದಾದ್ಯಂತ ಹುಟ್ಟಿಕೊಂಡ ಲಕ್ಷಾಂತರ ಕಪಟ ಸನ್ಯಾಸಿಗಳು, ಜ್ಯೋತಿಷಿಗಳು ಇದಕ್ಕೆ ಒಳ್ಳೆಯ ಉದಾಹರಣೆ.

ಇದರ ಪೂರ್ಣ ಲಾಭ ಪಡೆಯುತ್ತಿರುವವರು ಬಂಡವಾಳಶಾಹಿಗಳು. 1930ರ ದಶಕದಲ್ಲಿ ಇಡೀ ದೇಶ ಬ್ರಿಟಿಷರು ಹೋದರೆ ತಮ್ಮ ಸಮಸ್ಯೆಗಳೆಲ್ಲ ಪರಿಹಾರವಾಗಿಬಿಡುತ್ತವೆ ಎಂದು ಭಾವಿಸಿಕೊಂಡಿ ರುವಾಗ, ಶಿವರಾಮ ಕಾರಂತರು ಪುತ್ತೂರಿನ ಮೂಲೆಯೊಂದರಲ್ಲಿ ಕುಳಿತು– ‘ಸಮಸ್ಯೆ ಇರುವುದು ನೆಲದ ಹಂಚಿಕೆಯಲ್ಲಿ’ ಅಂದುಕೊಂಡು, ‘ಚೋಮನ ದುಡಿ’ ಬರೆದರು. ಈ ಪ್ರಜ್ಞೆಯನ್ನು ಇಂದು ದೇಶ ಕಳೆದುಕೊಂಡಿದೆ. ಉನ್ಮತ್ತತೆಯೇ ಪ್ರಧಾನವಾಗಿರುವ ದೇಶಕ್ಕೆ ಇವನ್ನು ವಿವರಿಸುವುದೂ ಸುಲಭದ ಕೆಲವಲ್ಲ.

ಇಂಥ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಜನರನ್ನು ಮತ್ತು ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಜನಪರ ಸಂಘಟನೆಗಳು ಮಾಡುತ್ತಲೇ ಇರಬೇಕು. ಇಂದು ದೇಶದಾದ್ಯಂತ ಒಂದು ಬಗೆಯ ಅಸಹನೆ ಬೆಳೆಯುತ್ತಿದೆ. ಹರಿಯಾಣದಲ್ಲಿ ಜಾಟ್‌ಗಳು, ಗುಜರಾತಿನಲ್ಲಿ ಪಟೇಲರು, ಮಹಾರಾಷ್ಟ್ರದಲ್ಲಿ ಮರಾಠಿಯರು ಈಗಾಗಲೇ ಮೀಸಲಾತಿಗಾಗಿ ಹೋರಾಟ ಆರಂಭಿಸಿದ್ದಾರೆ. ಮೂಲತಃ ಇವರೆಲ್ಲ ಸ್ವಂತ ಭೂಮಿಯನ್ನು ಹೊಂದಿದ್ದ ಸಮುದಾಯಗಳೇ. 90ರ ದಶಕದಲ್ಲಿ ಕಾಂಗ್ರೆಸ್ ಸರಕಾರ ತಂದ ಆರ್ಥಿಕ ಉದಾರೀಕರಣದ ಫಲವಾಗಿ ಇವರ ಭೂಮಿಯೆಲ್ಲ ಬಹುರಾಷ್ಟ್ರೀಯ ಸಂಸ್ಥೆಗಳ ಪಾಲಾಯಿತು.

ಅವರು ಕೊಟ್ಟ ಹಣದಿಂದ ಒಂದಷ್ಟು ಕಾಲ ಬದುಕು ನಡೆಯಿತು. ಈಗ ಕೈಯಲ್ಲಿದ್ದ ಹಣ ಮುಗಿದಿದೆ, ಹಿರಿಯರಿಂದ ಬಂದ ಭೂಮಿ ಇಲ್ಲವಾಗಿದೆ. ಬದುಕಲು ಏನು ಮಾಡಬೇಕು? ಸರಕಾರದಿಂದ ಮೀಸಲಾತಿ ಕೇಳುವುದು ಇಲ್ಲವೇ ಮೀಸಲಾತಿಯನ್ನು ಪ್ರಶ್ನಿಸುವುದು. ಆದರೆ ಸರಕಾರಕ್ಕೆ ಉದ್ಯೋಗ ಸೃಷ್ಟಿ ಮಾಡಲಾಗುತ್ತಿಲ್ಲ. ಕೆಂಪು ಕಾರ್ಪೆಟ್ಟಿನ ಮೇಲೆ ನಡೆದುಬಂದವರು ಮೀಸಲಾತಿ ಕೊಡುತ್ತಿಲ್ಲ. ಇಂಥ ಸಮಸ್ಯೆಗಳನ್ನು ಹೆಚ್ಚು ಕಾಲ ಭ್ರಾಮಕಗಳಿಂದ ಮುಚ್ಚಿಡಲಾಡುವುದಿಲ್ಲವಾದ್ದರಿಂದ ಒಂದಲ್ಲ ಒಂದು ದಿನ ಸ್ಫೋಟಗೊಳ್ಳಲೇ ಬೇಕು. ಸರಕಾರಗಳು ಇವಕ್ಕೆ ಮುಖಾಮುಖಿಯಾಗಲೇ ಬೇಕು.

ಇಂಥ ಬಿಕ್ಕಟ್ಟಿನ ಸಮಯದಲ್ಲಿ ‘ಚಲೋ ಉಡುಪಿ’ಯಂಥ ಕಾರ್ಯಕ್ರಮ ನಡೆಯುವುದು ಬಹಳ ಅಗತ್ಯ. ಅದು ಶೋಷಿತರಲ್ಲಿ ಒಂದು ಬಗೆಯ ಜಾಗೃತಿ ಮೂಡಿಸುವುದರೊಂದಿಗೆ ಶೋಷಕ ವರ್ಗಕ್ಕೂ ಪರಿಸ್ಥಿತಿಯನ್ನು ತಿಳಿಸಿಹೇಳುತ್ತದೆ. ‘ಊನಾದ ಸಮಾವೇಶ’ ಗುಜರಾತಿನ ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸಿತು. ಗೋರಕ್ಷಣೆಯ ಹೆಸರಲ್ಲಿ ದಲಿತರನ್ನು ಕಟ್ಟಿಹಾಕಿ, ಕಬ್ಬಿಣದ ಸರಪಳಿಯಿಂದ ಬಂಧಿಸಿ, ಬೇಕಾದಂತೆ ಹೊಡೆದು ದರ್ಪ ಪ್ರದರ್ಶಿಸಿದವರೆಲ್ಲ ಸಮಾವೇಶದ ಆನಂತರ ಕಾಣೆಯಾದರು.

ಪರಿಸ್ಥಿತಿ ಜಿಗ್ನೇಶ್ ಮೇವಾನಿಯಂಥ ನಾಯಕರನ್ನು ಸೃಷ್ಟಿಸಿತು. ಅಲ್ಲಿನ ಸರಕಾರದಲ್ಲಿ ಕೂಡಾ ಬದಲಾವಣೆಗಳಾದುವು. ಗರ್ಭಿಣಿಯರಿಗೆ ಒದೆಯುವುದು, ಹೆಣ್ಣುಮಕ್ಕಳ ಮಾನಭಂಗ ಮಾಡುವುದು, ದಲಿತರನ್ನು ಬಹಿರಂಗವಾಗಿ ಸುಡುವುದು, ಅವರ ಮನೆಗಳನ್ನು ಕಿತ್ತೆಸೆಯುವುದು, ಶಿಕ್ಷಣವನ್ನು ಖಾಸಗೀಕರಣಗೊಳಿಸಿ ಅದು ಬಡವರಿಗೆ ದಕ್ಕದಂತೆ ಮಾಡುವುದು, ವೈದ್ಯಕೀಯ ವ್ಯವಸ್ಥೆಗೆ ಸಾಕಷ್ಟು ಹಣ ನೀಡದೆ, ಬಂಡವಾಳಶಾಹಿಗಳ ಅಗತ್ಯಗಳಿಗೆ ಮಾತ್ರ ಮನ್ನಣೆ ನೀಡುವುದು – ಇಂಥ ನೂರಾರು ಘಟನೆಗಳು ಕಣ್ಣೆದುರೇ ನಡೆಯುತ್ತಿರುವಾಗ ಅದನ್ನು ಕನಿಷ್ಠ ಖಂಡಿಸುವವರೂ ಇಲ್ಲದ ಈ ನಾಡಿನಲ್ಲಿ ದಲಿತವರು ಮತ್ತು ಹಿಂದುಳಿದವರು ತಮಗೆ ತಾವೇ ಹಾದಿಗಳನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ.

ಇಂಥ ದಯನೀಯ ಸಂದರ್ಭದಲ್ಲಿ ‘ಚಲೋ ಉಡುಪಿ’ಯಂಥ ಕಾರ್ಯಕ್ರಮಗಳು ಭಾರತದ ನಿಜಸ್ಥಿತಿಯನ್ನು ಮುನ್ನೆಲೆಗೆ ತರುವಲ್ಲಿ ಮತ್ತು ದಮನಿತರ ಸ್ವಾಭಿಮಾನವನ್ನು ಸಂವರ್ಧಿಸುವಲ್ಲಿ ಸಹಕರಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಅದೊಂದು ಸ್ವಾಭಿಮಾನದ ನಡಿಗೆ. ನನ್ನಂಥ ಸಾವಿರಾರು ಜನ ಅವರೊಂದಿಗೆ ನಡೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT