ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಸದ್ಬಳಕೆಗೆ ಸರಳ ಸೂತ್ರಗಳು

Last Updated 11 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಈಗ ಸಾಲ ತುಂಬ ಸುಲಭವಾಗಿ ದೊರೆಯುವುದರಿಂದ ವೈಯಕ್ತಿಕ ಹಣಕಾಸು ನಿರ್ವಹಣೆ ವಿಷಯದಲ್ಲಿ  ಮಹತ್ವದ ಪಾತ್ರ ನಿರ್ವಹಿಸುತ್ತದೆ. ವಿವಿಧ ಮೂಲಗಳಿಂದ ಬೇರೆ, ಬೇರೆ ಉದ್ದೇಶಗಳಿಗೆ ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿದರೆ ಮಾತ್ರ  ಹಣಕಾಸು ಜವಾಬ್ದಾರಿಗಳನ್ನು ಅಥವಾ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸಾಧ್ಯವಾಗಲಿದೆ.

ಸಾಲದ ನೆರವಿನಿಂದ ವೈಯಕ್ತಿಕ ಸಂಪತ್ತು ವೃದ್ಧಿಗೊಳಿಸಲೂ ನೆರವಾಗಲಿದೆ. ಇದರಿಂದ ಜೀವನ ನಿರ್ವಹಣೆಯೂ ಸುಗಮವಾಗಲಿದೆ. ಸಾಲದ ಹಣವನ್ನು ಸರಿಯಾಗಿ ನಿಭಾಯಿಸದೇ ಹೋದರೆ ಸುಸ್ತಿದಾರರಾಗಿ ಮನಶಾಂತಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಈ ಮೊದಲು  ಸಾಲ ಪಡೆಯಲು  ಬಹಳ ಕಷ್ಟವಿತ್ತು.  ಹೀಗಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಬಂದರೆ ತಮಗೆ ಪರಿಚಯವಿರುವ ಸಾಲ ನೀಡುವವರ ಬಳಿ ಅಥವಾ ಲೇವಾದೇವಿದಾರರಲ್ಲಿ ಚಿನ್ನಾಭರಣ ಅಡವಿಟ್ಟು ಪಡೆಯುವುದು ಸಾಮಾನ್ಯವಾಗಿತ್ತು. ಈಗ ಸರ್ಕಾರಿ  ಸ್ವಾಮ್ಯದ, ಖಾಸಗಿ ವಲಯದ ಬ್ಯಾಂಕ್‌ಗಳಲ್ಲದೇ  ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳೂ ಸಾಲ ನೀಡಲು ಪೈಪೋಟಿಗಿಗೆ ಇಳಿದಿವೆ.  ಈ ಪೈಪೋಟಿ ಫಲವಾಗಿ  ಸುಲಭವಾಗಿ ಸಾಲ ದೊರೆಯುತ್ತಿದೆ.

ಮೊಬೈಲ್‌ ಮೂಲಕವೇ ಸಾಲ ನೀಡುವ ಕೊಡುಗೆ ನೀಡಲು ಹಣಕಾಸು ಸಂಸ್ಥೆಗಳು ಸಾಲುಗಟ್ಟಿ ನಿಂತಿವೆ.  ಜೀವನದಲ್ಲಿ ಕೆಲ ಅಗತ್ಯಗಳನ್ನು  ಈಡೇರಿಸಿಕೊಳ್ಳಲು,  ಗುರಿಗಳನ್ನು ತಲುಪಲು ಸಾಲದ ಅವಶ್ಯಕತೆ ಇದೆ. ವಹಿವಾಟಿನ ಉದ್ದೇಶಕ್ಕೆ ಪಡೆದ ಸಾಲವನ್ನು   ಉತ್ಪಾದನೆ ಮತ್ತು ತಯಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿದರೆ  ಸಾಲದ ಹಣವು ವ್ಯರ್ಥವಾಗುವುದಿಲ್ಲ.

ಗೃಹ ಸಾಲ
ಆಧುನಿಕ ಜೀವನದಲ್ಲಿ ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬ ವ್ಯಕ್ತಿ ಹಾಗೂ ಕುಟುಂಬದ ಮುಖ್ಯ ಉದ್ದೇಶವಾಗಿರುತ್ತದೆ. ಇಂತಹ ಮಹತ್ವಾಕಾಂಕ್ಷಿ ಯೋಜನೆಯು ಸಾಕಾರಗೊಳ್ಳಬೇಕಾದರೆ ಉಳಿತಾಯದ ಹಣದ ಜೊತೆಗೆ ಸುಲಭವಾಗಿ ದೊರೆಯುವ ಗೃಹ ಸಾಲ  ಪಡೆಯುವುದು ಅವಶ್ಯ.

ಒಂದಕ್ಕಿಂತ ಹೆಚ್ಚು ಮನೆ ಅಥವಾ ವಾಣಿಜ್ಯ ಉದ್ದೇಶಗಳಿಗಿದ್ದರೆ ಒಳ್ಳೆಯದೆ. ಏಕೆಂದರೆ ಇಂತಹ ಸಾಲವು ಹೂಡಿಕೆಯಾಗುವುದರಿಂದ ಭವಿಷ್ಯದಲ್ಲಿ ಆಸ್ತಿಯ ಮೌಲ್ಯವು ಹೆಚ್ಚಾಗಿ ಉತ್ತಮ ಗಳಿಕೆ ನೀಡುತ್ತದೆ. ಹಾಗೆಯೇ ಆದಾಯ ತೆರಿಗೆ ವಿನಾಯ್ತಿಯಲ್ಲಿಯೂ ಭಾರಿ  ರಿಯಾಯಿತಿ ಪಡೆಯಬಹುದು.

ಗೃಹ ಸಾಲವು ಇಂದು ಮಾರುಕಟ್ಟೆಯಲ್ಲಿ ವಾರ್ಷಿಕ ಶೇ 9.3ರಿಂದ ಶೇ 10.5ರ ಬಡ್ಡಿ ದರದಲ್ಲಿ ದೊರೆಯುತ್ತಿದೆ. ಇದು ಪಡೆಯುವ  ಸಾಲದ ಮೇಲೆ ನಿರ್ಧಾರವಾಗಲಿದೆ. ಸಾಲ ಮರುಪಾವತಿಗೆ 20 ವರ್ಷಗಳಷ್ಟು ದೀರ್ಘ ಅವಧಿಯನ್ನೂ  ಒದಗಿಸಲಾಗುತ್ತಿದೆ. ಅವಧಿಗೆ ಮುಂಚಿತವಾಗಿ ಸಾಲ ಮರುಪಾವತಿಸಿದರೆ  ಈ ಮೊದಲಿನಂತೆ ದಂಡ  ವಿಧಿಸುತ್ತಿಲ್ಲ.

ಶೈಕ್ಷಣಿಕ ಸಾಲ
ಪಾಲಕರು ತಮ್ಮ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಕೊಡಿಸಲು ಆರ್ಥಿಕವಾಗಿ ಸಶಕ್ತರಾಗಿರದಿದ್ದರೆ ಅಥವಾ ವಿದೇಶದಲ್ಲಿ ಓದುವ ಹಂಬಲವಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ವೆಚ್ಚ ಭರಿಸಲು ಶೈಕ್ಷಣಿಕ ಸಾಲ ಪಡೆಯುವುದು ಅನಿವಾರ್ಯ.  ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳು ಉನ್ನತ   ಶಿಕ್ಷಣ ಪಡೆಯುವುದರಿಂದ ಅವರ ಜೀವನ ಮಟ್ಟವು ಸುಧಾರಿಸುತ್ತದೆ.

ವ್ಯವಹಾರಿಕ ಸಾಲ
ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಉದ್ದಿಮೆ ವ್ಯವಹಾರ ಮಾಡಬೇಕಾದರೆ ದೊಡ್ಡ ಮೊತ್ತದ ಬಂಡವಾಳದ ಅವಶ್ಯಕತೆ ಇದೆ. ಹೀಗೆ ವ್ಯವಹಾರಕ್ಕಾಗಿ ಮಾಡುವ ಸಾಲವು ಹೂಡಿಕೆಯಾಗುವುದರಿಂದ ಹಾಗೂ ವ್ಯವಹಾರದಲ್ಲಿ ಲಾಭದ ಪ್ರಮಾಣವೂ ಇರುತ್ತದೆ.   ಸಾಲ ಮರು ಪಾವತಿಯೂ ಸುಲಭವಾಗಲಿದೆ.

ವಾಹನ ಸಾಲ
ವಾಣಿಜ್ಯ ಉದ್ದೇಶಗಳಿಗೆ ಹೊರತುಪಡಿಸಿ, ವೈಯಕ್ತಿಕ ಬಳಕೆಗೆ  ಕಾರು ಖರೀದಿಸಲು ಪಡೆಯುವ ವಾಹನ ಸಾಲವು ಆದಾಯ ತರದ ಸಾಲವಾಗುತ್ತದೆ. ಇಂದು ಎಲ್ಲರಿಗೂ ಸ್ವಂತ ಮನೆಯ ಜೊತೆಗೆ ಸ್ವಂತ ವಾಹನ ಹೊಂದುವ ಬಯಕೆ ಬಹಳಷ್ಟು ಜನರಲ್ಲಿ ಕಂಡು ಬರುತ್ತದೆ. 

ಗ್ರಾಹಕರು ಮುಂಗಡವಾಗಿ ಕೆಲ ಸಾವಿರದಷ್ಟು ಹಣ ಪಾವತಿಸಿದರೆ ಉಳಿದ ಮೊತ್ತಕ್ಕೆ  ವಾಹನ ಸಾಲ ನೀಡುವ ಸಾಕಷ್ಟು ಹಣಕಾಸು ಸಂಸ್ಥೆಗಳಿವೆ. ಹೀಗಾಗಿ ತಕ್ಷಣಕ್ಕೆ ಕಾರ್‌ ಖರೀದಿಸುವ  ಕನಸು ನನಸಾಗುತ್ತದೆ. ಸಾಲದ ಮರು ಪಾವತಿ ಜತೆಗೆ ಕಾರ್‌ನ  ನಿರ್ವಹಣೆ ವೆಚ್ಚವೂ ಇರುವುದರಿಂದ ಎಚ್ಚರವಹಿಸುವುದು ಅವಶ್ಯ.

ಪ್ರಾರಂಭದಲ್ಲಿ ಕಡಿಮೆ ದರದ ಬಡ್ಡಿ ದರ ವಿಧಿಸುವ  ಕಂಪನಿಗಳು, ಸಾಲ ಪಡೆದವರು ಸುಸ್ತಿದಾರರಾದಾಗ ವಿಧಿಸುವ ಬಡ್ದಿ ದರವೇ ಬೇರೆಯಾಗಿರುತ್ತದೆ. ಹೀಗಾಗಿ ಅವಶ್ಯಕತೆ ಅರಿತು ವಾಹನ ಸಾಲ ಪಡೆಯುವುದು ಒಳ್ಳೆಯದು.

ವೈಯಕ್ತಿಕ ಸಾಲ
ವೈಯಕ್ತಿಕ ಸಾಲ ನೀಡುವ ನಿಯಮಗಳು ಬಹಳಷ್ಟು ಸರಳಗೊಂಡಿವೆ.  ಇಂತಹ ಸಾಲಗಳ ಪ್ರಾರಂಭಿಕ ಬಡ್ಡಿ ದರವು  ಇತರ ಸಾಲಗಳಿಗೆ ಹೋಲಿಸಿದರೆ ದುಬಾರಿಯಾಗಿರುತ್ತದೆ. ಇಂತಹ ಸಾಲ ಪಡೆಯಲು ಯಾವುದೇ ನಿರ್ದಿಷ್ಟ  ಕಾರಣಗಳೇ ಇಲ್ಲದಿರುವುದರಿಂದ  ಈ ರೀತಿ ಪಡೆದ ಸಾಲವು ಯಾವ ಉದ್ದೇಶಕ್ಕೆ ಪಡೆಯಲಾಗಿದೆ ಎನ್ನುವುದು  ಅರಿವಿಗೆ ಬರುವ ಮೊದಲೇ ಪಡೆದ ಸಾಲದ ಹಣವು ಖರ್ಚಾಗಿ ಹೋಗಿರುತ್ತದೆ. ಹೀಗಾಗಿ ಸಾಲ ಮರು ಪಾವತಿ ಕಷ್ಟವೆನಿಸುವುದು.

ಕ್ರೆಡಿಟ್ ಕಾರ್ಡ್‌ ಸಾಲ
ವ್ಯಕ್ತಿಯ ಆದಾಯ ಆಧರಿಸಿ   ಬ್ಯಾಂಕ್‌ಗಳು  ಸ್ಪರ್ಧೆಗೆ ಬಿದ್ದು ಕ್ರೆಡಿಟ್ ಕಾರ್ಡ್‌ ನೀಡುತ್ತಿವೆ. ಈ ಕ್ರೆಡಿಟ್ ಕಾರ್ಡಗಳ ಬಳಕೆಯು ಸಮರ್ಪಕ ರೀತಿಯಲ್ಲಿ ನಿರ್ವಹಿಸಿದರೆ ಮಾತ್ರ ಲಾಭದಾಯಕ. ಇಲ್ಲದೇ ಹೋದರೆ ದುಬಾರಿಯಾದ ಬಡ್ಡಿ ದರವನ್ನು ತೆರಬೇಕಾಗುತ್ತದೆ.

ಅಂತರ್ಜಾಲ ತಾಣದಲ್ಲಿ ಆನ್ ಲೈನ್ ಶಾಪಿಂಗ್ ಬಹಳ ಜನಪ್ರಿಯವಾಗಿದೆ. ಕಾರಣ ಯಾವುದೇ ವಸ್ತು ಖರೀದಿಸಬೇಕಾದರೆ ಕ್ರೆಡಿಟ್ ಕಾರ್ಡ ಅಥವಾ ಡೆಬಿಟ್ ಕಾರ್ಡ್ ಬಳಸುವುದು ಅನಿವಾರ್ಯ.  

ಆನ್ ಲೈನ್ ಶಾಪಿಂಗ್‌ನಲ್ಲಿ ವಸ್ತುವಿನ ಮಾಟಾಟ ಬೆಲೆಗಿಂತ, ತಿಂಗಳ ಕಂತುಗಳ (ಇಎಂಐ) ದರವು  ಬಹಳ ಆಕರ್ಷಕವಾಗಿ ಕಾಣುವ ಕಾರಣದಿಂದಾಗಿ ಗ್ರಾಹಕರು ಕ್ರೆಡಿಟ್‌ ಕಾರ್ಡ್‌ಗಳ ಆಮಿಷಕ್ಕೆ  ಸುಲಭವಾಗಿ  ಬೀಳುತ್ತಾರೆ.  ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ ಖರೀದಿಸುವುದರಿಂದ, ನಗದು ಹಣ ನೀಡಿದ ಅನುಭವವಾಗುವುದಿಲ್ಲದ ಕಾರಣ ಬಹಳ ಖುಷಿಯಿಂದ ಖರೀದಿ ಮಾಡುತ್ತಾರೆ.

ಕ್ರೆಡಿಟ್ ಕಾರ್ಡ್‌ನಿಂದ ಪಡೆದ ಸಾಲವನ್ನು ವಾಯಿದೆಯೊಳಗೆ ಪಾವತಿಸಿದರೆ ಪರವಾಗಿಲ್ಲ. ಇಲ್ಲದೇ ಹೋದರೆ ದುಬಾರಿಯಾದ ಬಡ್ಡಿ ದರ ಪಾವತಿಸಬೇಕಾಗುತ್ತದೆ. ಕ್ರೆಡಿಟ್‌ ಕಾರ್ಡ್‌ಗಳು  ವಾರ್ಷಿಕ ಸುಮಾರು ಶೇ24ರಿಂದ ಶೇ 40 ರಷ್ಟು ಬಡ್ಡಿದರ ವಿಧಿಸುತ್ತವೆ. ಇಂತಹ ಸಾಲವು ಹೆಚ್ಚಾಗಿ ಆಧುನಿಕ ಜೀವನ ಶೈಲಿಗಾಗಿ ಉಪಯೋಗವಾಗುವುದರಿಂದ ದುಬಾರಿ ಸಾಲವಾಗಲಿದೆ. ಹೆಚ್ಚಿನ ಬಡ್ಡಿ ದರ ಇರುವುದರಿಂದ ಸಾಲ ಮರು ಪಾವತಿಯು ಹೆಚ್ಚಿನ ಹೊರೆಯಾಗಿ ಪರಿಣಮಿಸಲಿದೆ.

ಸಾಲಗಳ ಸುಲಭ ನಿರ್ವಹಣೆ
ಯಾವುದೇ ರೀತಿಯ ಸಾಲ ಪಡೆದರೂ ತಿಂಗಳ ಕಂತು (ಇಎಂಐ) ಆದಾಯದ ಶೇ 65 ರಷ್ಟು ಮೀರದಂತೆ ನೋಡಿಕೊಳ್ಳಬೇಕು. ಉಳಿದ ಶೇ  35ರಷ್ಟು ಆದಾಯವು ದಿನನಿತ್ಯದ ಜೀವನ ನಿರ್ವಹಣೆಗೆ ಅವಶ್ಯವಿರುವುದರಿಂದ ಈ ರೀತಿಯ ನಿರ್ಬಂಧವನ್ನು  ಹಾಕಿಕೊಳ್ಳಲು ಮರೆಯಬಾರದು. ಸಾಲ ಪಡೆದ ಕರಾರಿನಂತೆ ಕಾಲ ಮಿತಿಯೊಳಗೆ ಬಡ್ಡಿ ಪಾವತಿ ಹಾಗೂ ಸಾಲ ಮರು ಪಾವತಿ ಮಾಡುವುದರಿಂದ, ಪಡೆದ ಸಾಲವು ಸಾರ್ಥಕವೆನಿಸುವುದು.

ಈಗ ಎಲ್ಲಾ ಬ್ಯಾಂಕ್‌ಗಳು ಉತ್ತಮ ಕ್ರೆಡಿಟ್ ರೇಟಿಂಗ್ ಇರುವ ಗ್ರಾಹಕರಿಗೆ ಸಾಲ ನೀಡಲು ಮುಂದಾಗಲಿರುವುದರಿಂದ  ಸಕಾಲಕ್ಕೆ ಸಾಲ ಮರುಪಾವತಿ ಮಾಡಲು ಮರೆಯಬಾರದು. ಪಡೆದ ಸಾಲಗಳನ್ನು ಅನಗತ್ಯ ಉದ್ದೇಶಕ್ಕೆ ವೆಚ್ಚ ಮಾಡದೆ ಸದುಪಯೋಗ ಮಾಡಿಕೊಂಡರೆ ಜೀವನದ ಅನೇಕ ಕನಸುಗಳು ಸಾಕಾರಗೊಳ್ಳುತ್ತವೆ.

ಹಂತ ಹಂತವಾಗಿ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಂಡು ಜೀವನದ ಸಂಧ್ಯಾಕಾಲದಲ್ಲಿ ಸಾಲವಿಲ್ಲದ ವಿಶ್ರಾಂತ ಜೀವನ ನಡೆಸಲು ವ್ಯವಸ್ಥಿತವಾಗಿ   ಕಾರ್ಯೋನ್ಮುಖ ವಾಗಬೇಕು. ಸಾಲದ ಸದ್ಬಳಕೆಯಾದರೆ ಜೀವನ ಮಟ್ಟ  ಸುಧಾರಿಸಲಿದೆ.  ಪಡೆದ ಸಾಲಗಳನ್ನು ಸಕಾಲಕ್ಕೆ ಮರು ಪಾವತಿ ಮಾಡಿದರೆ ದೇಶದ ಆರ್ಥಿಕತೆಗೆ ಸಹಕರಿಸಿದಂತೆ ಆಗುವುದು.

ಉತ್ತಮ ಉದ್ದೇಶಕ್ಕೆ  ಮಾಡುವ ಸಾಲಗಳು
*ಗೃಹ ಸಾಲ
*ಶೈಕ್ಷಣಿಕ ಸಾಲ
*ವ್ಯವಹಾರಿಕ ಸಾಲ
ಆದಾಯ ತಂದುಕೊಡದ ಸಾಲಗಳು
*ವಾಹನ ಸಾಲ
*ವೈಯಕ್ತಿಕ ಸಾಲ
*ಹೊಸ ಜೀವನ ಶೈಲಿಗಾಗಿ ಬಳಸುವ ಕ್ರೆಡಿಟ್ ಕಾರ್ಡ್ ಸಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT