ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಡೆ ಮುದುರಿದ ಹಾವು!

Last Updated 14 ಅಕ್ಟೋಬರ್ 2016, 11:31 IST
ಅಕ್ಷರ ಗಾತ್ರ

ಚಿತ್ರ: ನಾಗರಹಾವು
ನಿರ್ಮಾಪಕರು: ಸಾಜಿದ್‌ ಖುರೇಷಿ, ಸೊಹೈಲ್‌ ಅನ್ಸಾರಿ ಮತ್ತು ಧವಳ್‌ ಗಡ
ನಿರ್ದೇಶಕ: ಕೋಡಿ ರಾಮಕೃಷ್ಣ
ತಾರಾಗಣ: ರಮ್ಯಾ, ದಿಗಂತ್‌, ರಾಜೇಶ್‌ ವಿವೇಕ್‌, ಸಾಯಿಕುಮಾರ್‌

ಗ್ರಹಣದ ಸಮಯದಲ್ಲಿ ದೇವತೆಗಳ ಶಕ್ತಿ ಕುಂದುತ್ತವೆ. ದುಷ್ಟಶಕ್ತಿಗಳು ಲೋಕವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಅದೇ ಸಮಯವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತವೆ. ಹೀಗಾಗಿ ದೇವತೆಗಳು ತಮ್ಮ ಶಕ್ತಿಯನ್ನು ಕಳಶವೊಂದರಲ್ಲಿ ಇರಿಸಿ ಅದನ್ನು ಕಾಪಿಡುತ್ತಾರೆ. ಈ ಕಳಶವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವುದು ದುಷ್ಟಶಕ್ತಿಗಳ ಗುರಿಯಾದರೆ, ಅದನ್ನು ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿರುವ ಕುಟುಂಬಕ್ಕೆ ಉಳಿಸಿಕೊಳ್ಳುವ ಸವಾಲು. ಪುರಾಣೇತಿಹಾಸದ ಕಾಲ ಕಳೆದು ಆಧುನಿಕ ಜಗತ್ತು ಬೆಳೆದಿದೆ.

ಆದರೂ ದುಷ್ಟರ ಗುರಿ ಈಡೇರಿಲ್ಲ. ಅವರೊಂದಿಗೆ ನವಯುಗದ ಖಳನೂ ಸೇರಿಕೊಂಡಿದ್ದಾನೆ. ಆ ಕಳಶವನ್ನು ಪಡೆಯುವ ಸಲುವಾಗಿಯೇ ದುಷ್ಟನೊಬ್ಬ ಹಲವು ಶಕ್ತಿಗಳನ್ನು ತಪಸ್ಸಿನಿಂದ ಪಡೆದುಕೊಂಡಿದ್ದಾನೆ. ಅದನ್ನು ಉಳಿಸಿಕೊಳ್ಳಲು ನಾಗಿಣಿಯೊಬ್ಬಳು ಮಾನವ ಜನ್ಮವೆತ್ತಿ ಬಂದಿದ್ದಾಳೆ. ಕೊನೆಯಲ್ಲಿ ಆಕೆಯನ್ನು ರಕ್ಷಿಸಲು ಹಿಂದಿನ ತಲೆಮಾರಿನ ‘ನಾಗರಹಾವು’ ಕೂಡ ಮರುಜನ್ಮ ತಾಳುತ್ತದೆ.

ತೆಲುಗಿನ ಕೋಡಿ ರಾಮಕೃಷ್ಣ ಅವರ ನಿರ್ದೇಶನದ ‘ನಾಗರಹಾವು’ ಅವರ ಎಂದಿನ ಶೈಲಿಯ ಸಿನಿಮಾಗಳ ಸಾಲಿಗೆ ಸೇರುವ, ದುರ್ಬಲ ಕಥೆಯ ಚಿತ್ರ. ಇಂತಹ ಫ್ಯಾಂಟಸಿ ಕಥೆಯೊಂದನ್ನು ಸೃಷ್ಟಿಸುವಾಗ, ಪುರಾಣ ಕಥನಗಳ ತಳಹದಿಯ ಸಮರ್ಪಕ ಬಳಕೆಯೂ ಮುಖ್ಯ. ಆದರೆ ಕಥೆಯ ಮೇಲೆ ಬಿಗಿಹಿಡಿತವಿಲ್ಲದ ನಿರ್ದೇಶಕರು ಫ್ಯಾಂಟಸಿಯ ಹೆಸರಿನಲ್ಲಿ ಚಿತ್ರದುದ್ದಕ್ಕೂ ಅಪಸವ್ಯಗಳನ್ನು ಸೃಷ್ಟಿಸಿದ್ದಾರೆ. ಗ್ರಾಫಿಕ್ಸ್‌ನಲ್ಲಿ ಕಾಣಿಸುವ ರೋಚಕತೆ ಕಥೆಯ ಮೂಲದಲ್ಲಿ ಕಾಣಸಿಗುವುದಿಲ್ಲ.

ಲೋಪಗಳಿಗೆ ತೇಪೆಹಚ್ಚಲು ತಾರಾನಟರ ವರ್ಚಸ್ಸನ್ನು ಬಳಸಿಕೊಳ್ಳಲಾಗಿದೆ. ಆರಂಭದಲ್ಲಿ  ನಟ ದರ್ಶನ್‌ ಹಾಡೊಂದರಲ್ಲಿ ಕುಣಿದಿರುವುದು ಚಿತ್ರಕ್ಕೆ ಲಾಭವೇನೂ ಆಗಿಲ್ಲ. ವಿಷ್ಣುವರ್ಧನ್‌ ಅವರ ಗ್ರಾಫಿಕ್‌ ಸೃಷ್ಟಿ ನಿರೀಕ್ಷೆ ಮೂಡಿಸಿದಷ್ಟು ಪರಿಣಾಮಕಾರಿಯಾಗಿಲ್ಲ. ‘ಅರುಂಧತಿ’ ಮುಂತಾದ ಚಿತ್ರಗಳಲ್ಲಿ ಗ್ರಾಫಿಕ್ಸ್‌ ಅನ್ನು ಸಮರ್ಥವಾಗಿ ಬಳಸುವುದರ ಜತೆಗೆ, ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳುವ ಕಥೆ ಹೊಸೆದಿದ್ದ ರಾಮಕೃಷ್ಣ ಇಲ್ಲಿ ನಿರಾಸೆ ಮೂಡಿಸಿದ್ದಾರೆ.

ಆಧುನಿಕ ಜಗತ್ತಿನಲ್ಲಿ ಮಾನಸಾ ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳುವ ರಮ್ಯಾ ಅವರ ಪಾತ್ರಕ್ಕೆ ಹಿನ್ನೆಲೆಯೇ ಇಲ್ಲ. ಸಂಗೀತದಲ್ಲಿ ಸಾಧನೆ ಮಾಡುವ ಗುರಿಯುಳ್ಳ ಯುವಕನ ಪಾತ್ರಧಾರಿ ದಿಗಂತ್, ರಮ್ಯಾ ಪ್ರಭೆಯ ನಡುವೆ ಕಳೆದುಹೋಗುತ್ತಾರೆ. ಸಿನಿಮಾ ನಿರ್ದಿಷ್ಟ ಓಘವಿಲ್ಲದೆ ಅಡ್ಡಾದಿಡ್ಡಿಯಾಗಿ ಚಲಿಸುತ್ತದೆ. ನಡುವೆ ಹಾಸ್ಯದ ನೆಪದಲ್ಲಿ ಅತಿರೇಕದ ಅಸಂಬದ್ಧ ಸನ್ನಿವೇಶಗಳೂ ಎರಗುತ್ತವೆ. ನಾಗಕನ್ನಿಕೆ ಬೆಲ್ಲಿ ನೃತ್ಯ ಮಾಡುವುದು, ಶಿವನ ಕೊರಳಿನಿಂದ ಇಳಿದು ಬಂದ ಬೃಹದಾಕಾರದ ಸರ್ಪ ಮನುಷ್ಯ ರೂಪ ತಾಳಿದಾಗ (ವಿಷ್ಣುವರ್ಧನ್‌ ಪ್ರತಿರೂಪ), ‘ನೀನು ಯಾರು’ ಎಂಬ ಪ್ರಶ್ನೆಗೆ – ‘ಸಿಂಹ! ಸಾಹಸಸಿಂಹ’ ಎಂದು ಪ್ರತಿಕ್ರಿಯಿಸುವುದು, ಸಂಗೀತ ಸ್ಪರ್ಧೆಯಲ್ಲಿ ಗೆಲ್ಲುವ ತಂಡಕ್ಕೆ ಪುರಾತನ ಕಾಲದ ಅಮೂಲ್ಯ ಕಳಶವನ್ನು ಟ್ರೋಫಿಯಾಗಿ ನೀಡುವುದು... ಹೀಗೆ ತಮಾಷೆಯೆಂದು ಪರಿಗಣಿಸಬಹುದಾದ ಅಂಶಗಳು ಸಾಕಷ್ಟಿವೆ.

ರಮ್ಯಾ ಇಡೀ ಸಿನಿಮಾವನ್ನು ಆವರಿಸಿಕೊಳ್ಳುತ್ತಾರೆ. ಮಾನಸಾ–ನಾಗನಿಕಾ ಪಾತ್ರಗಳಲ್ಲಿ ಅವರು ಕೆಂಡಸಂಪಿಗೆ. ರಾಜೇಶ್‌ ವಿವೇಕ್‌, ಮುಕುಲ್‌ ದೇವ್‌ ಮುಂತಾದ ಪರಭಾಷಿಕ ನಟರ ತೆಲುಗು ಭಾಷೆಯ ತುಟಿಚಲನೆಗೆ ಕನ್ನಡದ ಸಂಭಾಷಣೆ ಹೊಂದಾಣಿಕೆಯಾಗಿಲ್ಲ. ಸಂಗೀತ ನಿರ್ದೇಶಕ ಗುರುಕಿರಣ್‌ ತಮ್ಮದೇ ಹಳೆಯ ಸಂಗೀತವನ್ನು ಮರುಸೃಷ್ಟಿಸಿದ್ದಾರೆ. ವೇಣು ಛಾಯಾಗ್ರಹಣದ ಶ್ರಮ ಗ್ರಾಫಿಕ್ಸ್‌ ಚಿತ್ತಾರದ ನಡುವೆ ಮರೆಯಾಗಿದೆ. ವಿಷ್ಣುವರ್ಧನ್‌ ಅವರ 201ನೇ ಸಿನಿಮಾ ಇದು ಎಂಬುದನ್ನು ಪ್ರಚಾರ ತಂತ್ರವಾಗಿ ಉಪಯೋಗಿಸಿರುವ ಚಿತ್ರತಂಡ, ಅವರ ವರ್ಚಸ್ಸನ್ನು ದುರ್ಬಲ ಕೃತಕ ಪಾತ್ರದ ಮೂಲಕ ಕ್ಷೀಣಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT