ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆರೆ ರೇ ರಾಮಾ...

Last Updated 20 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಕಣ್ಣು ಹಾಯಿಸಿದಷ್ಟು ಬಟಾಬಯಲು. ದೂರದಿಂದ ಗೋಚರಿಸುವ ಬೆಟ್ಟಗುಡ್ಡಗಳು. ಆ ಬಯಲಿನ ಕಚ್ಚಾ ದೂಳು ರಸ್ತೆಯಲ್ಲಿ ಒಬ್ಬ ವ್ಯಕ್ತಿ ಬದುಕು ಅರಸಿ ನಿಂತಿದ್ದಾನೆ. ಸಿಕ್ಕುಸಿಕ್ಕಾಗಿರುವ ತಲೆಕೂದಲು, ಬಾಯಿ ಮುಚ್ಚಿರುವ ಮೀಸೆ, ಎದೆ ತಾಕಿಸುವಷ್ಟು ಉದ್ದದ ಗಡ್ಡದ ಆ ವ್ಯಕ್ತಿ ಬಿರುಬಿಸಿಲಿನ ಆಗಸದತ್ತ ದಿಟ್ಟಿಸುತ್ತಿದ್ದಾನೆ...

‘ರಾಮಾ ರಾಮಾ ರೇ...’ ಚಿತ್ರದ ಟ್ರೇಲರ್‌ ವೀಕ್ಷಿಸಿದವರಲ್ಲಿ ಈ ಚಿತ್ರವನ್ನು ನೋಡಲೇಬೇಕು ಎಂಬ ನಿರೀಕ್ಷೆ ಹುಟ್ಟಿಸಿರುವಂತಿರುವ ದೃಶ್ಯ ಇದು. ಈ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ನಾಯಕ ನಟ ನಟರಾಜ್. ಕಡೂರಿನ ನಟರಾಜ್, ಪದವಿ ಓದುವಾಗಲೇ ಮಿಮಿಕ್ರಿ ಮಾಡಿ ನಗಿಸುವುದರಲ್ಲಿ ಸೈ ಎನಿಸಿಕೊಂಡಿದ್ದರು.

ಶಿಷ್ಯನಲ್ಲಿದ್ದ ಪ್ರತಿಭೆ ಗುರುತಿಸಿದ ಗುರು ರಮೇಶ್‌ಚಂದ್ರ ದತ್ತ, ರಂಗಭೂಮಿಯ ದೀಕ್ಷೆ ನೀಡಿದರು. ಕಾಲೇಜಿನಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನೀಡಿ, ನಟನೆಯನ್ನು ಒರೆಗೆ ಹಚ್ಚಿ ಪಾಲಿಶ್ ಮಾಡಿದರು.

‘ಓದಿದ್ದು ಕಾನೂನು. ಜೊತೆಗಿರಲಿ ಎಂದು ದೂರಶಿಕ್ಷಣದಲ್ಲಿ ಪತ್ರಿಕೋದ್ಯಮ ಮುಗಿಸಿದೆ. ಓದಿನೊಂದಿಗೆ ರಂಗಭೂಮಿಯ ನಂಟು ಬೆಳೆಯಿತು. ನಾಟಕಗಳಲ್ಲಿನ ಅಭಿನಯಕ್ಕಾಗಿ ಪ್ರಶಸ್ತಿ–ಮೆಚ್ಚುಗೆ ದೊರೆಯತೊಡಗಿತು. ಅಲ್ಲಿಯವರೆಗೆ ನಟನೆಯನ್ನು ಟೈಮ್‌ಪಾಸ್‌ನಂತೆ ಪರಿಗಣಿಸಿದ್ದ ನಾನು, ರಂಗಭೂಮಿಯನ್ನು ಗಂಭೀರವಾಗಿ ಪರಿಗಣಿಸಿದೆ. ಇದರಿಂದಾಗಿ ಹಲವು ರಂಗತಂಡಗಳ ಜತೆ ಕೆಲಸ ಮಾಡುವ ಭಾಗ್ಯ ಸಿಕ್ಕಿತಲ್ಲದೆ, ರಾಷ್ಟ್ರಮಟ್ಟದಲ್ಲೂ ನಾಟಕ ಪ್ರದರ್ಶನ ನೀಡುವ ಅವಕಾಶ ದೊರೆಯಿತು. ಆಗಲೇ ನನ್ನಲ್ಲಿ ಸಿನಿಮಾ ನಟನಾಗಬೇಕೆಂಬ ಆಸೆ ಚಿಗುರೊಡೆಯಿತು’ ಎನ್ನುತ್ತಾರೆ ನಟರಾಜ್.

ನಟನಾಗಬೇಕೆಂಬ ಕನಸು ಹೊತ್ತು ಬೆಂಗಳೂರು ಬಸ್ಸು ಹತ್ತಿದ ನಟರಾಜ್, ಗಾಂಧಿನಗರದಲ್ಲಿ ಸವೆಸದ ದಾರಿಗಳಿಲ್ಲ. ‘ನಿತ್ಯ ಜೇಬಲ್ಲಿ ಐವತ್ತು ರೂಪಾಯಿ ಇಟ್ಟುಕೊಂಡು ರೂಮು ಬಿಡುತ್ತಿದ್ದೆ. ಇಪ್ಪತ್ತೈದು ರೂಪಾಯಿ ದಿನದ ಬಸ್‌ ಪಾಸ್‌ಗಾದರೆ, ಇನ್ನುಳಿದದ್ದು ಹೊಟ್ಟೆ ತುಂಬಿಸಿಕೊಳ್ಳಲು. ಸಿಕ್ಕ ಸಿಕ್ಕ ನಿರ್ದೇಶಕರು, ನಿರ್ಮಾಪಕರೆಲ್ಲರಿಗೂ ಫೊಟೊಗಳನ್ನು ಕೊಟ್ಟು ಅವಕಾಶಗಳನ್ನು ಕೇಳಿದ್ದೇನೆ. ಕಡೆಗೆ, ಕೆಲವು ಧಾರಾವಾಹಿಗಳ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಆಗಲೂ ನನ್ನ ತುಡಿತವಿದ್ದದ್ದು ಮಾತ್ರ ನಟನೆಯತ್ತಲೇ’ ಎಂದು ತಾವು ಬಂದ ಹಾದಿಯನ್ನು ನೆನಪಿಸಿಕೊಳ್ಳುತ್ತಾರೆ.

ಅಡುಗೆ ಭಟ್ಟನ ಪಾತ್ರ
ನಟರಾಜ್‌ಗೆ ತಮ್ಮ ಪ್ರತಿಭೆ ತೋರಿಸಲು ಮೊದಲು ಅವಕಾಶ ಸಿಕ್ಕಿದ್ದು, ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ. ತಮ್ಮದೊಂದು ತಂಡ ಕಟ್ಟಿಕೊಂಡು ಷೋ ನಡೆಸಿಕೊಟ್ಟರು. ಇದೇ ವೇಳೆ ‘ಭಾಗ್ಯರಾಜ್’ ಚಿತ್ರದಲ್ಲಿ ಅಡುಗೆ ಭಟ್ಟನ ಪಾತ್ರ ಸಿಕ್ಕಿತು. ಆ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದರೂ ಹೆಚ್ಚಿನ ಅವಕಾಶಗಳೇನು ಸಿಗಲಿಲ್ಲ. ಪಿ. ಶೇಷಾದ್ರಿ ಅವರ ಜೊತೆ ಕೆಲವು ತಿಂಗಳು ಕೆಲಸ ಮಾಡಿ – ‘ಭಾರತ್ ಸ್ಟೋರ್’ ಹಾಗೂ ‘ಡಿಸೆಂಬರ್ 1’ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದರು.

‘ಏಳೆಂಟು ವರ್ಷಗಳ ರಂಗಭೂಮಿ ಹಾಗೂ ಬೆಂಗಳೂರು ನಂಟಿನಿಂದಾಗಿ ನಮ್ಮದೇ ಆದ ತಂಡ ಬೆಳೆದಿತ್ತು. ಎಲ್ಲರೂ ಸಿನಿಮಾಸಕ್ತರೇ. ಎಲ್ಲರೂ ಭಿನ್ನ ನೆಲೆ ಹಾಗೂ ಓದಿನಿಂದ ಬಂದವರು. ಅದರಲ್ಲಿ ನಮ್ಮ ಚಿತ್ರದ ನಿರ್ದೇಶಕ ಸತ್ಯಪ್ರಕಾಶ್ ಕೂಡ ಒಬ್ಬರು. ತಮ್ಮ ತಲೆಯಲ್ಲಿ ಹೊಳೆದಿದ್ದ ‘ರಾಮಾ ರಾಮಾ ರೇ...’ ಚಿತ್ರದ ಕಥೆಯನ್ನು ಹಂಚಿಕೊಂಡ ಅವರು, ನಮ್ಮ ಬಳಗದವರನ್ನೇ ಹಾಕಿಕೊಂಡು ಸಿನಿಮಾ ಮಾಡಲು ಸಿನಿಮಾ ಮಾಡಲು ನಿರ್ಧರಿಸಿದರು’ ಎಂದು ನಟರಾಜ್ ಹೇಳುತ್ತಾರೆ.

ಬದುಕ ಅರಸಿದ ಪಯಣ
‘ಜೈಲಿನಿಂದ ತಪ್ಪಿಸಿಕೊಂಡ ಕೈದಿಯೊಬ್ಬ, ಬದುಕು ಹುಡುಕಿಕೊಂಡು ನಿರ್ಜನ ಪ್ರದೇಶದಲ್ಲಿ ನಡೆಸುವ ಪಯಣವೇ ಚಿತ್ರದ ಕಥೆ. ಆತನ ತಲೆಗೆ ಸರ್ಕಾರ ₹ 10 ಲಕ್ಷ ಘೋಷಿಸಿರುತ್ತದೆ. ದೀರ್ಘಕಾಲ ಜನರ ಒಡನಾಟ ಇಲ್ಲದಿದ್ದರಿಂದ ಆತ ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ದಿಕ್ಕಿಲ್ಲದ ದಾರಿಯಲ್ಲಿ ಹುಚ್ಚುಚ್ಚಾಗಿ ತಿರುಗುತ್ತಿರುತ್ತಾನೆ. ಬದುಕಿನ ಪಯಣದಲ್ಲಿ ವಯಸ್ಕನೊಬ್ಬ ಜೊತೆಯಾಗುತ್ತಾನೆ. ಅವರಿಬ್ಬರ ತವಕತಲ್ಲಣಗಳು ಪಾತ್ರಗಳ ರೂಪದಲ್ಲಿ ಎದುರಾಗುತ್ತಾ ಹೋಗುತ್ತವೆ. ಯಾವುದೇ ಚಿತ್ರಕ್ಕೂ ಹೋಲಿಸಲಾಗದ ಕಥೆ ಹಾಗೂ ನಿರೂಪಣೆ ಇಲ್ಲಿದೆ’ ಎನ್ನುತ್ತಾರೆ ನಟರಾಜ್.

‘ಚಿತ್ರದಲ್ಲಿ ಮುಖ್ಯವಾಗಿರುವುದು ಜೈಲಿನಿಂದ ತಪ್ಪಿಸಿಕೊಂಡ ಕೈದಿ ಹಾಗೂ ಪ್ರೇಮಿಯ ಪಾತ್ರ. ಪಾತ್ರಗಳಿಗಾಗಿ ಮತ್ತೊಬ್ಬ ನಟ ಧರ್ಮಣ್ಣ ಮತ್ತು ನಟರಾಜ್ ಮಧ್ಯೆ ಪೈಪೋಟಿ ಬಿದ್ದಿತ್ತು. ನನಗೆ ಪ್ರೇಮಿ ಪಾತ್ರಕ್ಕಿಂತ ಕೈದಿಯ ಪಾತ್ರದ ಮೇಲೆ ಒಲವಿತ್ತು. ‘ಭಾಗ್ಯರಾಜ್’ ಚಿತ್ರದಲ್ಲಿ 73 ಕೆ.ಜಿ ಇದ್ದ ನಾನು, ಪಾತ್ರಕ್ಕಾಗಿ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಇದಕ್ಕಾಗಿ ನಿರ್ದೇಶಕರು ಒಂಬತ್ತು ತಿಂಗಳ ಗಡುವು ನೀಡಿದ್ದರು’ ಎಂದು ಅವರು ಹೇಳುತ್ತಾರೆ.

ರೋಚಕ ತಯಾರಿ
ಪಾತ್ರಕ್ಕಾಗಿ ನಟರಾಜ್ ನಡೆಸಿದ ಪೂರ್ವ ತಯಾರಿ ರೋಚಕವಾಗಿದೆ. ‘ನಿತ್ಯ ಬೆಳಿಗ್ಗೆ ಎದ್ದು ಏಳೆಂಟು ಕಿಲೋಮೀಟರ್ ಓಡಿ ವರ್ಕೌಟ್ ಮಾಡುತ್ತಿದ್ದೆ. ಪ್ರತಿ ಹೊತ್ತು ಎರಡು ಚಪಾತಿ ಹಾಗೂ ಸೋರೆಕಾಯಿ ಜ್ಯೂಸ್ ನನ್ನ ಪಥ್ಯವಾಗಿತ್ತು. ಒಂಬತ್ತು ತಿಂಗಳು ಕೂದಲು, ಗಡ್ಡ, ಮೀಸೆ, ಉಗುರು ಕತ್ತರಿಸಿರಲಿಲ್ಲ. ನೋಡಲು ಒಂದು ರೀತಿಯಲ್ಲಿ ಸನ್ಯಾಸಿಯಂತೆ ಕಾಣುತ್ತಿದ್ದೆ. ವಕೀಲಿಕೆ ಪ್ರಾಕ್ಟಿಸ್ ಮಾಡುವಾಗ ಜೈಲಿಗೆ ಹೋಗಿಬಂದಿದ್ದೆ. ಆಗ ಅಲ್ಲಿದ್ದ ಕೈದಿಗಳಲ್ಲಿ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಮತ್ತಮ್ಮೆ ಮೆಲುಕು ಹಾಕಿದೆ. ಕೈದಿಗಳ ಕುರಿತು ಪುಸ್ತಕಗಳನ್ನು ಸಹ ಓದಿದೆ. ತೂಕವನ್ನು 72 ಕೆ.ಜಿ.ಯಿಂದ 52ಕ್ಕೆ ಇಳಿಸಿಕೊಂಡೆ. ಅಂತಿಮವಾಗಿ ನಾನೇ ಆ ಪಾತ್ರಕ್ಕೆ ಆಯ್ಕೆಯಾದೆ’ ಎಂದು ಪಾತ್ರಕ್ಕಾಗಿ ನಡೆಸಿದ ಪೂರ್ವತಯಾರಿಯನ್ನು ವಿವರಿಸುತ್ತಾರೆ.

‘ಪಾತ್ರಕ್ಕಾಗಿ ಧರಿಸಿದ್ದ ಹೊಸ ವೇಷ ಕಂಡು ಕುಟುಂಬದವರು ಮತ್ತು ಸ್ನೇಹಿತರು ನಕ್ಕಿದ್ದುಂಟು. ಆದರೆ, ನಾನ್‍ಯಾರಿಗೂ ಸಿನಿಮಾದ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಹಾಗಾಗಿ ಅವರ ಮನಸ್ಸಿಗೆ ಬಂದಂತೆ ಏನೇನೊ ಅಂದುಕೊಂಡು ಸುಮ್ಮನಾಗುತ್ತಿದ್ದರು. ನನ್ನ ಪಾತ್ರಕ್ಕಿರುವುದು ಕೇವಲ ಒಂದೂವರೆ ಪ್ಯಾರಾ ಡೈಲಾಗ್. ಭಾವಾಭಿನಯದ ಮೂಲಕವೇ ಎಲ್ಲವನ್ನೂ ಹೇಳಬೇಕಾದ ಸವಾಲಿತ್ತು. 42 ಡಿಗ್ರಿ ಉಷ್ಣಾಂಶವಿರುವ ವಿಜಯಪುರದಿಂದ 40 ಕಿಲೋಮೀಟರ್ ದೂರವಿರುವ ಬಟಾಬಯಲು ಪ್ರದೇಶದಲ್ಲಿ ನಡೆದ ಚಿತ್ರೀಕರಣವನ್ನು ನೆನೆಸಿಕೊಂಡರೆ, ಈಗಲೂ ಮೈ ಜುಮ್ಮೆನ್ನುತ್ತದೆ’ ಎಂದು ಚಿತ್ರೀಕರಣದ ದಿನಗಳನ್ನು ನಟರಾಜ್ ಮೆಲುಕು ಹಾಕುತ್ತಾರೆ.

‘ಚಿತ್ರದ ಕಥೆ, ಕಲಾವಿದರು, ಮೇಕಿಂಗ್ ಶೈಲಿ ಎಲ್ಲವೂ ವಿಭಿನ್ನವಾಗಿರುವುದು ನಮ್ಮ ಚಿತ್ರದ ಹೈಲೈಟ್. ಯಾವುದೇ ಸಿನಿಮಾದ ಕಥೆ ಹಾಗೂ ಪಾತ್ರದ ಹೋಲಿಕೆಯೂ ಇಲ್ಲಿಲ್ಲ. ಪ್ರೇಕ್ಷಕರನ್ನು ಕಾಡುವ ಕಥೆ ಇದಾಗಿದೆ. ಚಿತ್ರದಲ್ಲಿರುವ ಐದು ಹಾಡುಗಳ ಪೈಕಿ, ನಾಲ್ಕು ಹಿನ್ನೆಲೆಯಲ್ಲೇ ಬಂದುಹೋಗುತ್ತವೆ. ಕನ್ನಡ ಚಿತ್ರರಂಗದಲ್ಲಿ ಸದ್ಯ ಎದ್ದಿರುವ ಹೊಸ ಅಲೆಯ ಚಿತ್ರಗಳ ಸಾಲಿಗೆ ನಮ್ಮ ಸಿನಿಮಾವೂ ಸೇರುತ್ತದೆ ಎಂಬ ನಂಬಿಕೆ ಇದೆ’ ಎಂದು ನಟರಾಜ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT