ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಯಸ್ಸಿನ ಕನಸು ಕನವರಿಕೆಗಳು

Last Updated 20 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಪೂರ್ಣಚಂದ್ರನ ಅಳತೆಗಿಟ್ಟುಕೊಂಡು ಕಡೆದಂಥ ದುಂಡು ಮೊಗ, ಹೊಳೆಯುವ ತುಂಬುಗೆನ್ನೆಗಳು, ಸಂಪಿಗೆಯ ಮೊಗ್ಗಿನ ಬಣ್ಣವನ್ನಷ್ಟು ತಿಳಿಗೊಳಿಸಿ ಇರಿಸಿದಂಥ ಮೂಗು, ಕರಾರುವಾಕ್‌ ಆಗಿ ಯೋಜಿಸಿ ಜೋಡಿಸಿದಂಥ ದಂತಪಂಕ್ತಿ, ಮನದ ಮುಗ್ಧತೆಯನ್ನೆಲ್ಲ ತುಳುಕಿಸುತ್ತಿರುವ ಕಂಗಳ ಬಟ್ಟಲುಗಳು...

ಶ್ರೇಯಾ ಈಗ ಬಿ.ಕಾಂ. ಅವರನ್ನು ನೋಡಿದರೆ ಮೊದಲ ವರ್ಷದ ವಿದ್ಯಾರ್ಥಿನಿ ಎಂದರೆ ನಂಬುವುದು ಕಷ್ಟ. ಹದಿನಾಲ್ಕು ವರ್ಷಗಳ ಹಿಂದೆ ಆರನೇ ವಯಸ್ಸಿನಲ್ಲಿ ‘ರೀ ಸ್ವಲ್ಪ ಬರ್ತೀರಾ?’ ಚಿತ್ರದ ಮೂಲಕ ನಟನಾ ಕ್ಷೇತ್ರದ ಅಂಗಳದಲ್ಲಿ ಅಂಬೆಗಾಲಿಕ್ಕುತ ಅಡಿಯಿಟ್ಟ ಅವರ ಮುಗ್ಧತೆಗೀಗ ಹರೆಯದ ಚೆಲುವೂ ಸೇರಿಕೊಂಡಿದೆ.

ಇದುವರೆಗೆ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿರುವ ಶ್ರೇಯಾ, ಈ ವಾರ ತೆರೆಕಾಣಲಿರುವ ಶರತ್‌ ನಿರ್ದೇಶನದ ‘ಸೀತಾನದಿ’ ಸಿನಿಮಾದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೆ ನಾಯಕ–ನಾಯಕಿಯ ತಂಗಿಯ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದ ಅವರಿಗೆ ‘ಸೀತಾನದಿ’ ಸಿನಿಮಾದ ಬಗೆಗೆ ಸಾಕಷ್ಟು ನಿರೀಕ್ಷೆಗಳಿವೆ.

‘ಸೀತಾನದಿ ಚಿತ್ರದಲ್ಲಿ ಶಾಲೆಗೆ ಹೋಗುವ ಹುಡುಗಿಯ ಪಾತ್ರದಲ್ಲಿಯೇ ನಟಿಸಿದ್ದೇನೆ. ಹಳ್ಳಿಯ ಮುಗ್ಧೆಯ ಪಾತ್ರ ಅದು. ತಂದೆ ಇಲ್ಲದ ಹುಡುಗಿ ಅವಳು’ ಎನ್ನುವ ಅವರು ‘ಈ ಚಿತ್ರದಲ್ಲಿ ನನ್ನ ಪಾತ್ರದಲ್ಲಿ ಸಾಕಷ್ಟು ಏರಿಳಿತಗಳು ಇವೆ. ಅದು ಹೇಗೆ ಎಂದು ಸಿನಿಮಾ ನೋಡಿದಾಗ ತಿಳಿಯುತ್ತದೆ’ ಎಂದು ಜಾಣತನದಿಂದ ಕುತೂಹಲದ ಬೀಜವನ್ನು ಬಿತ್ತುತ್ತಾರೆ.

‘ಹೆಣ್ಣಿನ ಬದುಕಿನ ಸಂಘರ್ಷಗಳ ಚಿತ್ರಣ ಮತ್ತು ಅವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಬದುಕು ಹೇಗೆ ಬದಲಾಗಬಹುದು ಎಂಬ ಸಂದೇಶವನ್ನು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ’ ಎಂದು ಹೇಳಿಕೊಳ್ಳುತ್ತಾರೆ ಶ್ರೇಯಾ.

‘ಸೀತಾನದಿ’ ಮಂಗಳೂರು ಭಾಗದಲ್ಲಿ ನಡೆಯುವ ಕಥೆ. ಹೆಬ್ರಿ, ಸೀತಾನದಿಯ ಆಸುಪಾಸಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಶ್ರೇಯಾ ಅವರು ಮಂಗಳೂರು ಮೂಲದವರೇ ಆಗಿದ್ದು ಈ ಪಾತ್ರದ ನಿರ್ವಹಣೆಗೆ ತುಂಬಾ ಸಹಾಯವಾಗಿದೆ.

‘ಸಿನಿಮಾದಲ್ಲಿಯೂ ಮಂಗಳೂರು ಭಾಷೆಯನ್ನೇ ಬಳಸಿಕೊಳ್ಳಲಾಗಿದೆ. ನನಗೂ ಮಂಗಳೂರು ಭಾಷೆ ಮರೆತು ಹೋಗಿತ್ತು. ಆದರೆ ತುಂಬ ಸುಲಭಕ್ಕೆ ಅದನ್ನು ಕಲಿತುಕೊಂಡೆ. ನನ್ನ ಸಹಕಲಾವಿದರಿಗೂ ಹೇಳಿಕೊಟ್ಟೆ. ಸಿನಿಮಾದಲ್ಲಿ ಎಲ್ಲಿಯೂ ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಬಿಟ್ಟುಕೊಟ್ಟಿಲ್ಲ’ ಎಂದು ಅವರು ಖುಷಿಯಿಂದಲೇ ಹೇಳುತ್ತಾರೆ.

ಪಾತ್ರವನ್ನು ನಾಯಕಿ–ಪೋಷಕಿ ಎಂದೆಲ್ಲ ವಿಭಾಗಿಸುವುದು ಶ್ರೇಯಾಗೆ ಇಷ್ಟವಿಲ್ಲ. ‘‘ನನಗೆ ‘ನಾಯಕಿ’ ಎಂಬ ಶಬ್ದಕ್ಕಿಂತ ‘ಪಾತ್ರ’ ಎಂಬ ಶಬ್ದವೇ ಇಷ್ಟ. ಈ ಸಿನಿಮಾದಲ್ಲಿಯೂ ನಾನು ನಾಯಕಿ ಅನ್ನುವುದಕ್ಕಿಂತ ಒಂದು ಪಾತ್ರದಲ್ಲಿ ನಟಿಸಿದ್ದೇನೆ ಎಂದೇ ಅಂದುಕೊಂಡಿದ್ದೇನೆ. ಯಾಕೆಂದರೆ ಎಷ್ಟೋ ನಟಿಯರು ನಾಯಕಿಯಾಗಿ ನಟಿಸಿಯೂ ಅವರನ್ನು ಜನರು ನೆನಪಿಟ್ಟುಕೊಂಡಿಲ್ಲ. ಆದರೆ ಇನ್ನು ಕೆಲವು ಪಾತ್ರಗಳು ನಾಯಕಿ ಅಲ್ಲದಿದ್ದರೂ ಜನರು ತುಂಬ ಮೆಚ್ಚಿಕೊಂಡಿದ್ದಾರೆ.

ಒಂದು ಪಾತ್ರ ಆ ನಟಿಯ ಬದುಕನ್ನು ಬದಲಿಸಿದ ಸಾಕಷ್ಟು ಉದಾಹರಣೆಗಳಿವೆ. ನಾನು ಅಂಥ ‘ಪಾತ್ರ’ಗಳನ್ನು ನಂಬುತ್ತೇನೆ. ಒಂದು ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಎಂಥ ಸ್ಥಾನವಿದೆ. ಜನರು ಆ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಮುಖ್ಯ’ ಎನ್ನುವ ಶ್ರೇಯಾ ಅವರಿಗೆ ಮುಂದೆ ನಾಯಕಿಯಾಗಿಯೇ ಮುಂದುವರಿಯಬೇಕು ಎಂಬ ಮಹತ್ವಾಕಾಂಕ್ಷೆಯೇನೂ ಇಲ್ಲ.

‘ಪಾತ್ರ ಚೆನ್ನಾಗಿದ್ದರೆ, ನಾಯಕಿಯಾದರೂ ಸರಿ, ಬೇರೆ ಪಾತ್ರವಾದರೂ ಸರಿ. ಸಿನಿಮಾ ಆದರೂ ಸರಿ, ಧಾರಾವಾಹಿಯಾದರೂ ಸರಿ, ಖುಷಿಯಿಂದಲೇ ನಟಿಸುತ್ತೇನೆ’ ಎಂಬ ಉದಾರ ಮನೋಭಾವ ಅವರದು.

ಈ ಮುದ್ದು ಮುಖದ ಹುಡುಗಿಗೆ ಕಿವುಡಿ, ಮೂಗಿ, ಕುರುಡಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಿದೆಯಂತೆ. ‘ನಾವು ಬರೀ ಹೊರಗಿನಿಂದ ನೋಡುವುದಕ್ಕಿಂತ ಆ ಪಾತ್ರವೇ ಆಗಿ ಅಭಿನಯಿಸಿದಾಗ ಅಂಥವರ ಬದುಕು ಹೇಗಿರುತ್ತದೆ ಎಂಬುದು ನಮ್ಮ ಅನುಭವಕ್ಕೆ ಬರುತ್ತದೆ’ ಎಂದು ತಮ್ಮ ಆಸೆಯ ಹಿಂದಿನ ಉದ್ದೇಶವನ್ನು ಅವರು ವಿವರಿಸುತ್ತಾರೆ.

‘‘ಚಿಕ್ಕವಳಾಗಿದ್ದಾಗ ‘ಕಿನ್ನರಬಾಲೆ’ ಸಿನಿಮಾದಲ್ಲಿ ಇಂಥದ್ದೊಂದು ಸವಾಲಿನ ಪಾತ್ರದಲ್ಲಿ ನಟಿಸಿದ್ದೆ. ಆದರೆ ಆಗ ಅಷ್ಟಾಗಿ ತಿಳಿವಳಿಕೆ ಇಲ್ಲದಿದ್ದುದರಿಂದ ನಿರ್ದೇಶಕರ ಸೂಚನೆಗಳನ್ನು ಪಾಲಿಸುವುದರಲ್ಲಿಯೇ ಮುಗಿದುಹೋಯಿತು. ಈಗ ಅಂಥ ಪಾತ್ರ ಸಿಕ್ಕರೆ ನಾನು ಪೂರ್ತಿಯಾಗಿ ಅನುಭವಿಸಿ ನಟಿಸುತ್ತೇನೆ’ ಎನ್ನುವ ಶ್ರೇಯಾ ಅವರಿಗೆ ನಟನೆಯೆಂಬುದು ಸಹಜ ಅಭಿವ್ಯಕ್ತಿ.

‘ನಾನು ಒಂದು ಪಾತ್ರವನ್ನು ಮಾಡುತ್ತಿರುವಾಗ ಯಾರಿಗೂ ಅದು ನಟನೆ ಅನ್ನಿಸಬಾರದು. ಬದಲಿಗೆ ವರ್ತನೆ ಅನ್ನಿಸಬೇಕು. ನಾನು ಹಾಗೆ ಯೋಚಿಸಿಯೇ ಯಾವುದೇ ಪಾತ್ರದಲ್ಲಿ ನಟಿಸುತ್ತೇನೆ’ ಎಂದು ತಮ್ಮ ನಟನಾಮೀಮಾಂಸೆಯನ್ನು ಅವರು ವಿವರಿಸುತ್ತಾರೆ.

ಸದ್ಯಕ್ಕೆ ಬಿ.ಕಾಂ. ಓದುತ್ತಿರುವ ಶ್ರೇಯಾ ಅವರಿಗೆ ಸಿ.ಎಸ್‌. ಮಾಡಬೇಕು ಎಂಬ ಗುರಿಯಿದೆ. ಹಾಗೆಂದು ನಟನೆಯನ್ನು ಬಿಟ್ಟು ವೃತ್ತಿಯಲ್ಲಿಯೇ ತೊಡಗಿಕೊಳ್ಳುವ ನಿರ್ಧಾರವನ್ನೇನೂ ಅವರು ಮಾಡಿಲ್ಲ. ವೃತ್ತಿಬದುಕಿನ ಜತೆಗೆ ಚಿತ್ರಬದುಕಿನಲ್ಲಿ ಭಿನ್ನ ಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಗುರ್ತಿಸಿಕೊಳ್ಳಬೇಕು ಎಂಬ ಕನಸೂ ಅವರಿಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT