ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೇ ಧಾಟಿಯ ಆಟ

Last Updated 22 ಅಕ್ಟೋಬರ್ 2016, 11:59 IST
ಅಕ್ಷರ ಗಾತ್ರ

ಚಿತ್ರ: ಇಸಂ (ತೆಲುಗು)
ನಿರ್ಮಾಣ: ನಂದಮೂರಿ ಕಲ್ಯಾಣ್ ರಾಮ್

ನಿರ್ದೇಶನ: ಪೂರಿ ಜಗನ್ನಾಥ್
ತಾರಾಗಣ: ನಂದಮೂರಿ ಕಲ್ಯಾಣ್ ರಾಮ್, ಅದಿತಿ ಆರ್ಯ, ಜಗಪತಿ ಬಾಬು


ಚೌಕಟ್ಟಿನೊಳಗೇ ಆಟವಾಡುವ ಜಾಯಮಾನದ ನಿರ್ದೇಶಕ ಪೂರಿ ಜಗನ್ನಾಥ್ ತಮ್ಮ ವರಸೆಯನ್ನು ಮುಂದುವರಿಸಿದ್ದಾರೆ. ಪತ್ರಿಕೋದ್ಯಮದ ವಸ್ತುವಿಗೆ ಅವರು ರೋಚಕತೆಯ ಚಿಪ್ಪನ್ನು ಸುತ್ತಿಟ್ಟಿದ್ದಾರೆ. ವಿಕಿಲೀಕ್ಸ್ ಸದ್ದನ್ನು ಭಾರತೀಯ ಪ್ರೇಕ್ಷಕರ ಮನಸ್ಥಿತಿಗೆ ತಕ್ಕಂತೆ ಒಗ್ಗಿಸಿಕೊಂಡು ಹೆಣೆದಿರುವ ಕಥೆಗೆ ಸಂಭಾಷಣೆ ಬರೆದಿರುವವರೂ ಅವರೇ.

ಸತ್ಯ ಬರೆದು, ರೌಡಿಗಳು ಕೊಡುವ ಪೆಟ್ಟಿನಿಂದ ಎರಡೂ ಕಾಲುಗಳನ್ನು ಕಳೆದುಕೊಳ್ಳುವ ಪತ್ರಕರ್ತನ ಮಗ ಚಿತ್ರದ ನಾಯಕ. ಅವನು ಈ ಕಾಲದ ಪತ್ರಕರ್ತನಾಗುತ್ತಾನೆ. ತನ್ನದೇ ಸಾಮಾಜಿಕ ನವಮಾಧ್ಯಮದಲ್ಲಿ ತನಿಖಾ ಪತ್ರಿಕೋದ್ಯಮ ಬಿತ್ತರಿಸುವ ಧಾರ್ಷ್ಟ್ಯದ ವ್ಯಕ್ತಿತ್ವದವನು. ವಿದೇಶದಲ್ಲಿ ಅಡಗಿರುವ ಪರಮ ಪಾತಕಿಯ ನೆಲೆ ಪತ್ತೆಹಚ್ಚಿ, ಅದನ್ನೂ ಜಾಹೀರುಗೊಳಿಸುವ ಅವನು ಅದಕ್ಕಾಗಿ ಆ ಪಾತಕಿಯ ಮಗಳಿಗೇ ಪ್ರೇಮಪಾಶ ಹಾಕುತ್ತಾನೆ. ಪಾತಕಿಯ ಒಡೆತನದ ಬ್ಯಾಂಕ್‌ನಲ್ಲಿ ಭಾರತದ ರಾಜಕಾರಣಿಗಳು ಇಟ್ಟಿರುವ ಲಕ್ಷ –ಕೋಟಿಗಟ್ಟಲೆ ಹಣದ ವಿವರ ಬಯಲಿಗೆಳೆಯುವುದು ಕಥಾಸಾರ.

ಚಿತ್ರಕಥೆಯನ್ನು ಒಂದು ಆಟದಂತೆ ಹೆಣೆದು, ಅದರಲ್ಲಿ ಮನರಂಜನೆಗೆ ಏನೆಲ್ಲಾ ಬೇಕೋ ಎಲ್ಲವನ್ನೂ ಇಡುಕಿರಿಯುವ ಪೂರಿ ಜಗನ್ನಾಥ್  ತಂತ್ರ ಇಲ್ಲಿಯೂ ಇದೆ. ಆದರೆ, ಮೊದಲರ್ಧದ ಪ್ರಾರಂಭ ಅತಿ ಸಪ್ಪೆಯಾಗಿದ್ದು. ತಾಳ್ಮೆ ಪರೀಕ್ಷಿಸುತ್ತದೆ. ಕಥೆ ವಿಸ್ತರಿಸುತ್ತಾ ಹೋದಂತೆ ತಿರುವುಗಳು ಕಣ್ಣರಳುವಂತೆ ಮಾಡಿದರೂ ಪೂರಿ ಜಗನ್ನಾಥ್ ಹಳೆಯ ಫಾರ್ಮ್‌ಗೆ ಇದು ಸಾಟಿಯಾಗದು.

ಅನೇಕ ದೃಶ್ಯಗಳ ಚಿತ್ರೀಕರಣದಲ್ಲಿ ಬಜೆಟ್ ಉಳಿಸುವ ಉಮ್ಮೇದು ಕೂಡ ಕಾಣುತ್ತದೆ. ಆದ್ದರಿಂದಲೇ ಅವರು ಮೆಲೋಡ್ರಾಮಾ ಬಂದಾಗಲೆಲ್ಲಾ ಭಾಷಣದ ಶೈಲಿಯ ಸಂಭಾಷಣೆಯನ್ನು ನಾಯಕನಿಂದ ಹೇಳಿಸಿ, ರೋಚಕತೆ ಸೃಷ್ಟಿಸಲು ಹೆಣಗಾಡಿದ್ದಾರೆ. ಇಂಥ ರೋಚಕತೆ ಈ ಕಾಲದ ಮಟ್ಟಿಗೆ ಕ್ಲೀಷೆಯಂತೂ ಹೌದು. ಅದನ್ನು ಮೀರಿದ್ದರೆ ಸಿನಿಮಾ ಇನ್ನೂ ಒಂದು ಹಂತ ಮೇಲೇರುತ್ತಿತ್ತು. ಅವರದ್ದೇ ನಿರ್ದೇಶನದ ಈ ಹಿಂದಿನ ಚಿತ್ರಗಳಾದ ‘ಲೋಫರ್’, ‘ಟೆಂಪರ್’ಗಳಿಗೆ ಹೋಲಿಸಿ ನೋಡಿದರೂ ಇದು ಸ್ಪಷ್ಟವಾದೀತು.

ಜುನೈದ್ ಸಿದ್ದಿಕಿ ಸಂಕಲನ ಸಿನಿಮಾದ ಅವಧಿಯನ್ನು ಕಡಿಮೆ ಮಾಡಿದೆಯೇ ವಿನಾ ಕಥನ ಕುತೂಹಲದ ವೇಗವರ್ಧಕವಾಗಿ ಒದಗಿಬಂದಿಲ್ಲ. ಮುಕೇಶ್ ಜಿ. ಛಾಯಾಗ್ರಾಹಣದ ವೃತ್ತಿಪರತೆಯನ್ನು ಮೆಚ್ಚಿಕೊಳ್ಳಬೇಕು. ಅನೂಪ್ ರುಬೆನ್ಸ್ ಸಂಗೀತ ಚಿತ್ರದ ಗಮನ ಸೆಳೆಯುವ ಅಂಶ.

ಗೆಲುವಿಗಿಂತ ಸೋಲುಗಳನ್ನೇ ಹೆಚ್ಚಾಗಿ ಕಂಡಿರುವ ನಾಯಕ ಹಾಗೂ ನಿರ್ಮಾಪಕ ನಂದಮೂರಿ ಕಲ್ಯಾಣ್ ರಾಮ್ ಮೂವತ್ತೆಂಟರ ವಯಸ್ಸಿನಲ್ಲಿಯೂ ದೇಹಾಕಾರ ಕಾಪಾಡಿಕೊಂಡಿದ್ದಾರೆ. ಆದರೆ, ನಟನೆಯಲ್ಲಿ ಅವರ ಏಕೋಭಾವ ಅಸಹನೀಯ. ನಾಯಕಿ ಅದಿತಿ ಆರ್ಯ ಕೂಡ ಸಿಕ್ಕಿರುವ ಮೊದಲ ಅವಕಾಶದಲ್ಲಿ ಗಮನ ಸೆಳೆಯುವುದಿಲ್ಲ.

ಹದಿನಾರು ವರ್ಷಗಳಿಂದ ಸೂತ್ರಬದ್ಧತೆ ತೋರುತ್ತಿರುವ ಜನಪ್ರಿಯ ನಿರ್ದೇಶಕ ಪೂರಿ ಜಗನ್ನಾಥ್ ಹೆಸರು ಕೇಳಿದೊಡನೆ ಒಂದಿಷ್ಟು ನಿರೀಕ್ಷೆಗಳು ಮೂಡುತ್ತವೆ. ಅವುಗಳ ಭಾರಕ್ಕೆ ಈ ಸಿನಿಮಾ ನಲುಗಿರುವುದಂತೂ ದಿಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT